ಕತೆ : ಪರಿತ್ಯಕ್ತ ಬಂಗಲೆ

ಕೆ.ವಿ. ಶಶಿದರ.

ಹೆದರಿಕೆಯ ಬಂಗಲೆ, Scary Bungalow

‘ನೋಡಲು ಇಶ್ಟು ಹಾಳಾದ ಹಾಗೆ ಕಂಡರೂ, ಈ ಕಟ್ಟಡ ಅಶ್ಟು ಹಳೆಯದಲ್ಲ. ಇಪ್ಪತ್ತು ವರ‍್ಶಗಳ ಹಿಂದೆ ಪಂಚತಾರಾ ಹೋಟೆಲ್ ಆಗಿತ್ತು. ಡಾಲರ್ ಗಳ ಲೆಕ್ಕದಲ್ಲಿ ವಿದೇಶಿಗಳು ಬಾಡಿಗೆಗೆ …….’ ಸ್ತಳೀಯ ಮಾರ‍್ಗದರ‍್ಶಿ ಹೇಳುತ್ತಿದ್ದ. ಪ್ರವಾಸದಲ್ಲಿದ್ದ ಪಡ್ಡೆ ಹುಡುಗರು ‘ನೋಡಮ್ಮಾ … ಗೂಸ್ಲುಗಳು ಸಿಕ್ಕಿದ್ದಾರೆ ಅಂತ ತನ್ನ ಪಾಂಡಿತ್ಯ ಪ್ರದರ‍್ಶನ ಮಾಡ್ತಿದ್ದಾನೆ!!!’ ಎಂದು ಕುಹಕವಾಡುತ್ತಿರುವಂತೆ ಆತ ‘ಇದರಲ್ಲಿ ಈಗ ದೆವ್ವ ಬೂತ ಇದೆ ಅಂತ ಪ್ರತೀತಿ ಇದೆ. ಉಗ್ರವಾದಿಗಳ ಗುಂಡಿಗೆ ಬಲಿಯಾಗಿ ಸತ್ತ ಅಮಾಯಕರ ಆತ್ಮಗಳೇ ಬೂತಗಳಾಗಿವೆ. ನಾನಂತೂ ನೋಡಿಲ್ಲ. ಯಾಕೆಂದರೆ ನಾನು ಇದುವರೆಗೂ ಒಳಗೆ ಹೋಗಿಲ್ಲ. ನಾನೇ ಏನು? ಕತ್ತಲಾದ ನಂತ್ರ ಇದರೊಳಗೆ ಯಾರೂ ಹೋಗುವುದಿಲ್ಲ, ……’ ಇನ್ನು ಏನೇನೋ ಕೊರೆಯುತ್ತಿದ್ದ.

‘ಏನ್ ಚೋಡ್ತಾನಮ್ಮ ಇವ್ನು…. ಇದರಲ್ಲಿ ದೆವ್ವ ಬೂತ ಮನೆ ಮಾಡ್ಕೊಂಡು ಇದೆಯಂತೆ. ಹ್ಹಹ್ಹಹ್ಹ….. ಸತ್ತವರೇ ತಾನೆ ದೆವ್ವನೋ ಬೂತಾನೋ ಆಗೋದು? ಮನುಶ್ಯನ ಆಸೆ ಇನ್ನೂ ಹೋಗಿರಲ್ಲ ಅಲ್ವಾ? ಇಪ್ಪತ್ತ್ನಾಲ್ಕು ಗಂಟೆ ಅಲ್ಲೇ ಟಿಕಾಣಿ ಹೂಡಕ್ಕೆ ಅವಕ್ಕೆ ಬೇಜಾರಾಗಲ್ವ? ಎಂಟರ‍್ಟೈನ್ಮೆಂಟ್ ಬೇಡ್ವಾ? ಪಾಪ ನಿಶಾಚಾರಿಗಳು. ಹಗಲು ಹೊತ್ತು ಮಾಲ್ ಗೆ ಶಾಪಿಂಗ್ ಗೆ ಹೋಗದೆ ಇಲ್ಲೇ ಇರುತ್ವೆ?….ಸತ್ತ ಮೇಲೂ ಸುಕ ಇಲ್ಲ, ಮುಂಡೇವಕ್ಕೆ’ ಎನ್ನುತ್ತಾ ಅವರಲ್ಲೊಬ್ಬ ಬಯಂಕರ ಜೋಕ್ ಮಾಡಿದವನಂತೆ ಗಹಗಹಿಸಿ ನಕ್ಕ. ಅವ ಹುಚ್ಚನಂತೆ ನಗುವುದನ್ನು ನೋಡಿದ ಇತರರೂ ಅವನ ಜೊತೆ ನಗುತ್ತಾ ಸಾತ್ ನೀಡಿದರು.

ರಾತ್ರಿ ಇವರುಗಳ ಟಿಕಾಣಿ, ಈ ಪರಿತ್ಯಕ್ತ ಕಟ್ಟಡದ ಸಮಾನಾಂತರ ರಸ್ತೆಯಲ್ಲೇ. ಇರುಳು ಕವಿದ ನಂತರ ಈ ಪಡ್ಡೆ ಹುಡುಗರಿಗೆ ಆ ಕಟ್ಟಡದ ಬಗ್ಗೆ ತಣಿಯದ ಕುತೂಹಲ ಮೂಡಿತು. ತಮ್ಮ ತಮ್ಮಲ್ಲೇ ಸಣ್ಣದಾಗಿ ಆರಂಬವಾದ ಚರ‍್ಚೆ ಸಮಯ ಕಳೆಯುತ್ತಾ ತೀವ್ರ ಸ್ವರೂಪ ಪಡೆಯಿತು. ದೆವ್ವ, ಬೂತ ಇಲ್ಲವೆಂಬ ಗುಂಪು ಒಂದಾದರೆ ಅದರ ಅನುಬವ ಆಗಿದೆ, ಎಂಬ ಗುಂಪು ಮತ್ತೊಂದು. ಹೀಗೆ ಎರಡು ಗುಂಪಿನ ನಡುವೆ ನಡೆದ ಬಿಸಿಬಿಸಿ ಚರ‍್ಚೆ ಪಂತಹ್ವಾನಕ್ಕೆ ನಾಂದಿಯಾಯಿತು. ಮಾತಿಗೆ ಮಾತು ಬೆಳೆದು, ತೊಡೆ ತಟ್ಟುವ ಹಂತ ಮುಟ್ಟಿತು. ಕೊನೆಗೆ ಒಂದು ಇತ್ಯರ‍್ತಕ್ಕೆ ಬಂದು, ಐದು ಸಾವಿರ ಬಾಜಿ ಕಟ್ಟಿ, ‘ಆ ಕಟ್ಟಡದ ಕೊನೆಯ ಅಂತಸ್ತಿನವರೆಗೂ ಹತ್ತಿ, ಅಲ್ಲಿಂದ ಮೊಬೈಲ್ ಟಾರ‍್ಚ್ ಪ್ಲ್ಯಾಶ್ ಮಾಡಿ ಹಿಂದಿರುಗಬೇಕು’ ಎಂಬ ಶರತ್ತಿಗೆ ಒಪ್ಪಿಗೆ ಮುದ್ರೆ ಬಿತ್ತು.

ರಾತ್ರಿ ಹನ್ನೆರಡರ ನಂತರ ಕಾರ‍್ಯಾಚರಣೆಗೆ ಮುಹೂರ‍್ತ ಪಿಕ್ಸ್ ಆಯಿತು. ಅವರೆಲ್ಲರೂ ಕಟ್ಟಡವಿದ್ದ ಮುಂದಿನ ಬೀದಿಗೆ ಹೋದರು. ಅವರಲ್ಲೊಬ್ಬ ದೈರ‍್ಯಶಾಲಿ ತಾನೇ ಕಟ್ಟಡದ ಮೇಲಕ್ಕೆ ಹೋಗಿ, ಟೆರೇಸ್ ನಿಂದ ಮೊಬೈಲ್ ಟಾರ‍್ಚ್ ಪ್ಲ್ಯಾಶ್ ಮಾಡಲು ಮನಸ್ಸು ಮಾಡಿರುವುದಾಗಿ ಹೇಳಿ ಹೊರಟ. ಹೊರಟ ಕೆಲ ನಿಮಿಶಗಳಲ್ಲೇ ಒಂದು, ಎರಡು, ಮೂರು, …….. ಎಲ್ಲಾ ಅಂತಸ್ತುಗಳನ್ನು ಸರಾಗವಾಗಿ ಹತ್ತುತ್ತಾ, ಪ್ರತಿ ಅಂತಸ್ತಿನಲ್ಲೂ ಅಂತಸ್ತಿನ ಸಂಕ್ಯೆ ಮೆಸೇಜ್ ಮಾಡಿ ಮೊಬೈಲ್ ಟಾರ‍್ಚ್ ಪ್ಲ್ಯಾಶ್ ಮಾಡುತ್ತಾ ಸಾಗಿದ. ಹತ್ತು ನಿಮಿಶದಲ್ಲಿ ಮೂವತ್ತನೇ ಅಂತಸ್ತಿನಲ್ಲೂ ಕಾಣಿಸಿಕೊಂಡ. ಅವನ ಎದುರು ಗುಂಪಿನವರು ಚಿಂತೆಗೊಳಗಾದರು. ಆ ಮಾರ‍್ಗದರ‍್ಶಿ ಸುಳ್ಳು ಹೇಳಿರಬಹುದೇ? ಎಂಬ ಚಿಂತೆ ಕಾಡತೊಡಗಿತು. ಅನ್ಯಾಯವಾಗಿ ಹಣ ಕಳೆದುಕೊಳ್ಳುವ ಪರಿಸ್ತತಿಗೆ ತಂದಿಟ್ಟನಲ್ಲ ಎಂದು ಮರುಗಿದರು. ಹಣ ಹೋಗುವ ಚಿಂತೆ ಒಂದು ಕಡೆಯಾದರೆ, ಸೋಲನ್ನು ಒಪ್ಪಬೇಕಿರುವ ಚಿಂತೆ ಮತ್ತೊಂದು ಕಡೆ. ದೇವರ ಮೇಲೆ ಬಾರ ಹಾಕಿ ಕಾಯುವುದೊಂದೆ ಅವರಿಗೆ ಆ ಸಮಯದಲ್ಲಿ ಉಳಿದಿದ್ದ ದಾರಿ. ತಲೆಯ ಮೇಲೆ ಕೈಹೊತ್ತು ಕುಳಿತರು. ಯೋಚನಾಪರರಾಗಿದ್ದ ಅವರಿಗೆ ತಮ್ಮ ಎದುರು ಗುಂಪಿನಲ್ಲಿ ನಡೆದಿದ್ದ ಜೋರು ಚರ‍್ಚೆ ಬಡಿದೆಬ್ಬಿಸಿತು.

‘ಏ ಯಾಕೋ ಅವ ಮೇಲಕ್ಕೆ ಹತ್ತತಾನೇ ಇಲ್ಲ, ಅಲ್ಲೇ ಎಲ್ಲೋ ಸ್ಟಕ್ ಆದಂಗಿದೆ’ ಎಂದ ಅವರಲ್ಲೊಬ್ಬ. ಎಲ್ಲರ ದ್ರುಶ್ಟಿ ಆ ಕಡೆ ಕೇಂದ್ರೀಕ್ರುತವಾಯಿತು. ‘ಮೂವತ್ತೈದನೇ ಅಂತಸ್ತಿನಿಂದ ಮೇಲೆ ಹೋದರೆ ಟೆರೇಸ್. ಅಲ್ಲಿಗೆ ಗೆದ್ದ. ಇವ ಇನ್ನೂ ಮೂವತ್ತೊಂದರಲ್ಲೇ ಇದ್ದಾನೆ’ ಎನ್ನುತ್ತಾ ಅತ್ತ ನೋಡಿದರು. ಕಾಲ್ ಮಾಡಿ ವಿಚಾರಿಸಲು ಅವರುಗಳೇ ವಿದಿಸಿಕೊಂಡಿದ್ದ ಶರತ್ತುಗಳು, ಕಟ್ಟಲೆಗಳು ಅಡ್ಡಬಂದವು. ಅವನ ಮುಂದಿನ ನಡೆಗಾಗಿ ಕಾತುರದಿಂದ ಕಾದರು. ಕೊಂಚ ಸಮಯದ ನಂತರ ಮೂವತ್ತೆರೆಡು, ಮೂವತ್ಮೂರು ಅಂತಸ್ತಿನಿಂದ ಅಂತಸ್ತಿನ ಸಂಕ್ಯೆ ಮೆಸೇಜ್ ಮಾಡಿ ಟಾರ‍್ಚ್ ಪ್ಲ್ಯಾಶ್ ಮಾಡಿದ. ಇವರುಗಳಿಗೆ ಸ್ವಲ್ಪ ಸಮಾದಾನವಾಯಿತು. ಸುಸ್ತಾಗಿರಬೇಕು ಅದಕ್ಕೆ ನಿದಾನವಾಗಿ ಹತ್ತುತ್ತಿದ್ದಾನೆ ಎಂದುಕೊಂಡರು. ಇನ್ನೇನು ಮೂವತ್ನಾಲ್ಕು ಮೂವತ್ತೈದು ಅಲ್ಲಿಗೆ, ಐದು ಸಾವಿರ ಜೇಬಿಗೆ. ಕುಶಿಯಾಯಿತು ಅವರಿಗೆ. ಎದುರು ಗುಂಪಿನವರನ್ನು ಹಂಗಿಸುವಂತೆ ದುರುಗುಟ್ಟಿದರು.

ಮತ್ತೆ ಹತ್ತು ನಿಮಿಶ ಅವನಿಂದ ಮೌನ. ನಂತರ ಅವನಿಂದ ಮೆಸೇಜ್ ಬಂತು. ಅದರಲ್ಲಿ ಹನ್ನೊಂದರ ಸಂಕ್ಯೆ ಇತ್ತು. ಅವನ ಪಾರ‍್ಟಿಯವರಿಗೆ ಆತಂಕ ಶುರುವಾಯಿತು. ಮೆಸೇಜ್ ಹಾಕುವಾಗ ತಪ್ಪಾಗಿರಬೇಕು ಎಂದುಕೊಂಡರು. ಇರಲಿ ನೋಡುವ ಎಂದುಕೊಳ್ಳುತ್ತಾ ಅತ್ತ ಕಡೆಯೇ ಗಮನ ಕೇಂದ್ರೀಕರಿಸಿದರು. ಅವನಿಂದ ಬಂದ ಮೆಸೇಜ್ ನಲ್ಲಿ ಹನ್ನೆರೆಡು, ಹದಿಮೂರು ಅಂತ ಬಂದಾಗ ಕೊಂಚ ಗಾಬರಿಯಾಯಿತು. ನಂತರ ಬಯ ಆವರಿಸಿತು. ‘ಮತ್ತೇಕೆ ಇವ ಕೆಳಗಿಳಿದು ಮೇಲೆ ಹತ್ತುತ್ತಿದ್ದಾನೆ???’ ಏನಾದರಾಗಲಿ ಹತ್ತುತ್ತಿದ್ದಾನಲ್ಲ. ಹತ್ತಲಿ. ನೋಡೇ ಬಿಡುವ ಎನ್ನುತ್ತಾ ಕಾಯತೊಡಗಿದರು. ಆಸೆ ಚಿಗುರಿತ್ತು. ಮತ್ತೈದು ನಿಮಿಶ ಮೌನ. ಅವನಿಂದ ಯಾವುದೇ ಪ್ಲ್ಯಾಶ್ ಆಗಲಿ, ಮೆಸೇಜ್ ಆಗಲಿ ಇಲ್ಲ. ನಂತರ ಬಂದ ಮೆಸೇಜ್ ನಲ್ಲಿ ಮೂವತ್ನಾಲ್ಕನೇ ಅಂತಸ್ತಿನ ಸಂಕ್ಯೆ ಕಂಡಾಗ ಅವನ ಗುಂಪಿನವರು ಹುಚ್ಚೆದ್ದು ಕುಣಿದಾಡಿದರು. ‘ಇನ್ನು ಹತ್ತು ಹದಿನೈದು ಮೆಟ್ಟಿಲು ಹತ್ತಿದಲ್ಲಿ ಟಾಸ್ಕ್ ಪೂರ‍್ಣವಾಗುತ್ತೆ. ಐದು ಸಾವಿರ ಬರುತ್ತೆ’ ಎನ್ನುತ್ತಾ ಬೆರಗುಗಣ್ಣಿಂದ ಅತ್ತ ಕಡೆ ಗಮನವಿಟ್ಟರು.

ಇನ್ನೇನು ಹತ್ತೇ ಬಿಟ್ಟ!!!! ಅನ್ನುವಶ್ಟರಲ್ಲಿ ಮತ್ತೆ ಹನ್ನೊಂದು, ಹನ್ನೆರೆಡು, ಹದಿಮೂರು. ಮತ್ತೆ ಮತ್ತೆ ಅದೇ ಸಂಕ್ಯೆಗಳು. ಅವನ ಗುಂಪಿನವರಿಗೆ ಹತಾಶೆ ಆವರಿಸಿತು. ಮತ್ತೆ ಎರಡು ಮೂರು ಬಾರಿ ಇದೇ ಪುನರಾವರ‍್ತಿಸಿತು. ಯಾಕೆ ಹೀಗೆ? ನಿಜವಾಗಿಯೂ ದೆವ್ವವೋ ಬೂತವೋ ಅಮರಿಕೊಂಡಿದೆಯೇ? ‘ಚೆ…. ಅದು ಸಾದ್ಯವೇ ಇಲ್ಲ. ದೆವ್ವ ಬೂತ ಇದ್ದರೆ ತಾನೆ ಮೆಟ್ಟಿಕೊಳ್ಳಲು’ ಎನ್ನತ್ತಾ ತಮ್ಮನ್ನು ತಾವೇ ಸಮಾದಾನ ಪಡಿಸಿಕೊಂಡರು. ಅವನಿಂದ ಬಂದ ಸಂದೇಶದಲ್ಲಿ ಮೂವತ್ನಾಲ್ಕರ ಮಹಡಿ ಸಂಕ್ಯೆ ಮತ್ತೆ ಕಂಡ ಅವರಿಗೆ ಉಲ್ಲಾಸ ಪುಟಿದೆದ್ದಿತು. ಎಲ್ಲರಿಗೂ ಕುಶಿಯಾಯಿತು. ಇನ್ನೇನು ಮೂವತ್ತೈದನೇ ಅಂತಸ್ತಿಗೆ ಬರುತ್ತಾನೆ ಎಂದು ಕಣ್ಣರಳಿಸಿ ಅತ್ತ ಕಡೆಯೇ ಗಮನ ಹರಿಸಿ ಕಾದರು. ಅರ‍್ದ ಗಂಟೆಯ ಕಾಲ ಚಾತಕ ಪಕ್ಶಿಯಂತೆ ಕಾದರೂ ಅವನಿಂದ ಯಾವುದೇ ಪ್ಲ್ಯಾಶ್ ಆಗಲಿ, ಮೆಸೇಜ್ ಆಗಲಿ ಬರಲಿಲ್ಲ. ಇವರಲ್ಲಿ ಗಾಬರಿ ನುಸಳ ತೊಡಗಿತು. ಆತಂಕದ, ಬಯದ ವಾತಾವರಣ ಸ್ರುಶ್ಟಿಯಾಗಿತ್ತು. ಸಮಯ ಓಡುತ್ತಿತ್ತು. ತಾವೇ ಹಾಕಿಕೊಂಡಿದ್ದ ಕಟ್ಟಲೆಯನ್ನು ಮುರಿದು, ಅವನ ಮೊಬೈಲ್ ಗೆ ಕಾಲ್ ಮಾಡಿದರು. ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಎಲ್ಲರೂ ತಮ್ಮ ತಮ್ಮ ಮೊಬೈಲ್ ನಿಂದ ಮತ್ತೆ ಮತ್ತೆ ಕಾಲ್ ಮಾಡಿದರೂ ಅದೇ ಪರಿಸ್ತಿತಿ ಮುಂದುವರೆಯಿತು. ಮೊಬೈಲ್ ಕಾಲ್ ಮಾಡಿದಾಕ್ಶಣ ಅವನ ಎದುರು ಗುಂಪಿನವರು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಕಟ್ಟಳೆ ಮುರಿದ ಕಾರಣ ತಾವೇ ಗೆದ್ದ ಕುಶಿ ಅವರಲ್ಲಿ ಮನೆಮಾಡಿತ್ತು. ಕ್ಶಣ ಮಾತ್ರದಲ್ಲಿ ಪರಿಸ್ತತಿಯ ಗಂಬೀರತೆ ಅರಿತ ಅವರು, ತಮ್ಮ ಸಂಬ್ರಮಾಚರಣೆಯನ್ನು ಮೊಟುಕುಗೊಳಿಸಿ, ಚಿಂತಾಕ್ರಾಂತರಾದರು.

ಏನಾಗಿರಬಹುದು? ಮೆಟ್ಟಿಲು ಹತ್ತುವಾಗ ಕಾಲಿಗೆ ಏನಾದರೂ ಸಿಕ್ಕಿ ಎಡವಿ ಬಿದ್ದಿರಬಹುದೇ? ಇಲ್ಲ ಇದು ಸಾದ್ಯವಿಲ್ಲದ್ದು. ಈಗಾಗಲೇ ಅವ ಮೂವತ್ನಾಲ್ಕು ಅಂತಸ್ತು ಹತ್ತಿದ್ದಾನೆ. ಹಾಗಾಗಲು ಸಾದ್ಯವಿಲ್ಲ, ಎಂದು ತಮ್ಮನ್ನು ತಾವೇ ಸಮಾದಾನ ಪಡಿಸಿಕೊಂಡರು. ಹಾಗಾದರೆ ಏನಾಗಿರಬಹುದು? ಎಲ್ಲರಲ್ಲೂ ಇದೇ ಪ್ರಶ್ನೆ ಕೊರೆಯತೊಡಗಿತು. ಇವರುಗಳಲ್ಲಿ ಯಾರೊಬ್ಬರಿಗೂ ಒಬ್ಬಂಟಿಯಾಗಿ ಮೇಲೆ ಹೋಗಿ ಪರಿಶೀಲಿಸಲು ಹೆದರಿಕೆಯಾಗಿ ತಮ್ಮಲ್ಲೇ ಚರ‍್ಚಿಸಿದರು. ಅನ್ಯ ಮಾರ‍್ಗ ಕಾಣದೆ, ಸ್ತಳೀಯ ಪೊಲೀಸ್ ಟಾಣೆಗೆ ಪೋನಾಯಿಸಿದರು. ಪೋಲೀಸ್ ಟಾಣೆಯವರ ಉತ್ತರ ಅವರ ಬಯವನ್ನು ಮತ್ತಶ್ಟು ಹೆಚ್ಚು ಮಾಡಿತ್ತು. ಬೆಳಕಾದ ಮೇಲೆ ಬರುವುದಾಗಿ ಹೇಳಿದ ಅವರು, ಈಗ ಬರುವುದನ್ನು ಸಾರಾಸಗಟಾಗಿ ನಿರಾಕರಿಸಿದ್ದರು. ಅಲ್ಲಿಯವರೆಗೆ ಹೇಗೆ? ಕಾಯುವುದು. ಮುಂಜಾನೆ ಏಳು ಗಂಟೆಗೆ ಪ್ರವಾಸ ಮುಂದುವರೆಯಬೇಕು. ಅವರಿಗೆಲ್ಲಾ ತಲೆ ಕೆಟ್ಟು ಹೋಯಿತು. ಎಲ್ಲರೂ ಚರ‍್ಚಿಸಿ, ಒಟ್ಟಾಗಿ ಕಟ್ಟಡದ ಒಳಕ್ಕೆ ನುಗ್ಗುವ ತೀರ‍್ಮಾನಕ್ಕೆ ಬಂದು, ಮೊಬೈಲ್ ಟಾರ‍್ಚ್ ಬೆಳಕಲ್ಲಿ ಮೆಲ್ಲನೆ ತೂಕವಾಗಿ ಹೆಜ್ಜೆಯನ್ನಿಡುತ್ತಾ ಹೊರಟರು.

ಕಟ್ಟಡದ ಬಳಿ ಹೋಗುತ್ತಲೇ ಅವರಿಗೆ ಆಶ್ಚರ‍್ಯ ಕಾದಿತ್ತು!!! ಕಟ್ಟಡದ ಮುಂಬಾಗಿಲಿನ ಬಳಿಯೇ ಗೆಳೆಯ ಕುಸಿದು ಬಿದ್ದಿದ್ದ. ಮೊಬೈಲ್ ಬೆಳಕಿನಲ್ಲಿ ಅಕ್ಕಪಕ್ಕ, ಸುತ್ತಲೂ ಹುಡುಕಾಡಿದರೂ, ಅವನ ಈ ಸ್ತಿತಿಗೆ ಕಾರಣವಾದ ಯಾವುದೇ ಕುರುಹು ಕಾಣಲಿಲ್ಲ. ಅವನನ್ನು ಎಬ್ಬಿಸಲು ಪ್ರಯತ್ನಿಸಿದರು. ಪ್ರಗ್ನೆ ತಪ್ಪಿದ್ದ. ಅಲ್ಲಾಡಲಿಲ್ಲ. ಎಲ್ಲರ ಬಾಯಿ ಒಣಗಿತು. ಹೆದರಿಕೆಯಲ್ಲಿ ಮೈ ಬೆವತಿತು. ಅಲ್ಲಿಂದ ಕೊಂಚ ದೂರದಲ್ಲಿ, ಮೊಬೈಲ್ ಮಂದ ಬೆಳಕಿನಲ್ಲಿ ಅವನ ಮೊಬೈಲ್ ಕಾಣಿಸಿತು. ಅದರಲ್ಲಿನ ಬಿಡಿಬಾಗಗಳು ಚಲ್ಲಾಪಿಲ್ಲಿಯಾಗಿತ್ತು. ಅನಾಮತ್ತಾಗಿ ಅವನನ್ನು, ಅಲ್ಲಿ ಹರಡಿದ್ದ ಮೊಬೈಲಿನ ಬಿಡಿ ಬಾಗಗಳನ್ನು ಎತ್ತಿಕೊಂಡು ಕಟ್ಟಡದ ಕಾಂಪೌಂಡ್ ನಿಂದ ಹೊರ ಬಂದು, ರಸ್ತೆಯಲ್ಲಿ ಮಲಗಿಸಿದರು. ಅವನ ಮುಕಕ್ಕೆ ಅಲ್ಲೇ ಇದ್ದ ನೀರನ್ನು ಚುಮುಕಿಸಿದರು. ಕೂಡಲೇ ಅವ ಎಚ್ಚರಗೊಂಡ. ಹೋದ ಜೀವ ಬಂದಂತಾಯಿತು ಎಲ್ಲರಿಗೂ.

‘ನಿಮ್ಮೆಲ್ಲರನ್ನೂ ಬಿಟ್ಟು, ಕಟ್ಟಡದ ಬಾಗಿಲ ಬಳಿ ಹೋದೆ. ಇನ್ನೇನು ಬಾಗಿಲು ತೆಗೆದು, ಮೆಟ್ಟಿಲತ್ತ ಹೋಗಬೇಕು ಎನ್ನುವಶ್ಟರಲ್ಲಿ ಯಾರೂ ಬಲವಾಗಿ ತಲೆಗೆ ಗಟ್ಟಿ ವಸ್ತುವಿನಲ್ಲಿ ಹೊಡೆದಂತಾಯಿತು. ತಕ್ಶಣ ಹಿಂತಿರುಗಿ ನೋಡಿದೆ. ಆ ಗಾಡಾಂದಕಾರ ಕತ್ತಲಲ್ಲಿ ಮಬ್ಬು ಮಬ್ಬಾಗಿ ತಲೆಗೆ ಮಪ್ಲರ್ ಸುತ್ತಿಕೊಂಡಿದ್ದ ಆಜಾನುಬಾಹು ವ್ಯಕ್ತಿ ಕಂಡ. ಅವನು ಹೊಡೆದ ರಬಸಕ್ಕೆ ಕೈಲಿದ್ದ ಮೊಬೈಲ್ ನೆಲಕ್ಕೆ ಅಪ್ಪಳಿಸಿತ್ತು. ಅಶ್ಟರಲ್ಲಿ ತಲೆ ಸುತ್ತಿ ಬಂತು. ನಾನೂ ಬಿದ್ದೆ, ಅಶ್ಟೆ. ಈಗಲೇ ಎಚ್ಚರವಾಗ್ತಿರೋದು’ ಎಂದ.

ಹಾಗಾದರೆ ಪ್ರತಿ ಅಂತಸ್ತು ಹತ್ತಿದ ಕೂಡಲೇ ಮೆಸೇಜ್ ಕಳುಹಿಸುತ್ತಿದ್ದವರು ಯಾರು? ಮೊಬೈಲ್ ಟಾರ‍್ಚ್ ಪ್ಲ್ಯಾಶ್ ಮಾಡುತ್ತಿದ್ದವರು ಯಾರು? ಇವ ಒಂದೇ ಒಂದು ಮೆಟ್ಟಿಲು ಹತ್ತದಿದ್ದರೂ, ಸಹ ನಮ್ಮಲ್ಲಿ ನಡೆದ ಗುಪ್ತ ಚರ‍್ಚೆಯಂತೆ ಎಲ್ಲಾ ಟಾಕೋಟೀಕಾಗಿ ನಡೆದಿದ್ದು ಹೇಗೆ? ಅವರೇಕೆ ಮೇಲೆ ಕೆಳಗೆ ಹತ್ತುತ್ತಿದ್ದುದು? ನಮ್ಮನ್ನು ದಾರಿ ತಪ್ಪಿಸಲು ಮಾಡಿದ ಕುತಂತ್ರವೇ ಇದು? ಇದು ಹೇಗೆ ಸಾದ್ಯವಾಯಿತು? ಇದರ ಹಿಂದೆ ಯಾರ ಕೈವಾಡ ಇರಬಹುದು? ತಲೆ ಕೆಟ್ಟು ಮೊಸರಾಯಿತು. ಹಾಗಾದರೆ ಈ ಕಟ್ಟಡದಲ್ಲಿ ಅತಿಮಾನುಶ ಶಕ್ತಿ ಇರುವುದು ಸತ್ಯವೇ? ಉತ್ತರ ಮಾತ್ರ ನಿಗೂಡ. ನಿದಾನವಾಗಿ ಅವನನ್ನು ಎಬ್ಬಿಸಿಕೊಂಡು, ಇಬ್ಬರು ಆತನಿಗೆ ಆಸರೆಯಾಗಿ, ಆ ಕಟ್ಟಡದ ಮುಂದಿನ ರಸ್ತೆಯಲ್ಲಿದ್ದ ತಮ್ಮ ಟಿಕಾಣ ಸ್ತಳಕ್ಕೆ ಸಾವಕಾಶವಾಗಿ ಬಂದರು.

‘ಇಶ್ಟು ಹೊತ್ತಿನಲ್ಲಿ ಎಲ್ಲಿ ಹೋಗಿದ್ದಿರಿ? ಏನಾಯಿತು ಇವನಿಗೆ?’ ಎನ್ನುತ್ತಾ ಆ ಮಾರ‍್ಗದರ‍್ಶಿ ದುತ್ತೆಂದು ಎದುರಾದ. ಕಟ್ಟಡವನ್ನು ಹತ್ತಲು ಬಂಡ ದೈರ‍್ಯದಿಂದ ಹೋಗಿದ್ದ ಗೆಳೆಯ, ಮತ್ತೆ ಮತ್ತೆ ಅವನ ಮುಕವನ್ನೇ ದುರುಗುಟ್ಟಿ ನೋಡಿದ. ಕ್ಶೀಣ ದನಿಯಲ್ಲಿ ಏನನ್ನೋ ಉಸುರುತ್ತಾ, ಅವನತ್ತ ಕೈ ಬೆರಳು ತೋರಿಸುತ್ತಾ, ನಿಂತಲ್ಲೇ ಕುಸಿದುಹೋದ.

( ಚಿತ್ರ ಸೆಲೆ : valuewalk.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications