ಯಾನಾರ್ ದಾಗ್‍ನ ನಿರಂತರ ಜ್ವಾಲೆ

– ಕೆ.ವಿ. ಶಶಿದರ.

ಯಾನರ್ ದಾಗ, Yanar Dag

ಅಜರ್‍ಬೈಜಾನ್‍ನಲ್ಲಿನ ಜ್ವಾಲಾಮುಕಿಗಳಲ್ಲಿ ‘ಬರ‍್ನಿಂಗ್ ಮೌಂಟೆನ್’ ಅತ್ಯಂತ ಪ್ರಸಿದ್ದ ತಾಣ. ಈ ಯಾನಾರ್ ದಾಗ್ ಪರ‍್ವತದಲ್ಲಿ ಒಂದೆಡೆ ಜ್ವಾಲೆ ನಿರಂತರವಾಗಿ ಉರಿಯುತ್ತಿದೆ. ಈ ಜ್ವಾಲೆ ಅನೇಕ ವರ‍್ಶಗಳಿಂದ ಉರಿಯುತ್ತಿರುವ ಕಾರಣ, ಇದನ್ನು ನಿರಂತರ ಜ್ವಾಲೆ ಎಂದು ಕರೆಯಲಾಗುತ್ತಿದೆ. ಉರಿಯುತ್ತಿರುವ ಈ ಜ್ವಾಲೆಯನ್ನು ಹಚ್ಚಿದ್ದು ಯಾರು? ಮೊದಲು ಕಂಡಿದ್ದು ಯಾರು? ಎಶ್ಟು ವರ‍್ಶಗಳಿಂದ ಇದು ಉರಿಯುತ್ತಿದೆ? ಎಂಬ ಬಗ್ಗೆ ಎಲ್ಲಿಯೂ ದಾಕಲೆಗಳು ಲಬ್ಯವಿಲ್ಲ. ಅಜರ್‍ಬೈಜಾನ್‍ನ ರಾಜದಾನಿ ಬಾಕೂ ನಗರದಿಂದ ಈಶಾನ್ಯದತ್ತ 25 ಕಿಮಿ ದೂರದಲ್ಲಿರುವ ಅಬ್ಸೆರಾನ್ ಪರ‍್ಯಾಯ ದ್ವೀಪದಲ್ಲಿನ ಯಾನಾರ್ ದಾಗ್ ಪರ‍್ವತ 116 ಮೀಟರ್ ಎತ್ತರವಿದೆ. ಇದರ ತುತ್ತತುದಿಯಲ್ಲಿ ನೈಸರ‍್ಗಿಕ ಅನಿಲದ ನಿದಿ ನಿಕ್ಶೇಪ ಇದೆ. ನಿರಂತರ ಉರಿಯುತ್ತಿರುವ ಜ್ವಾಲೆ ಇರುವುದು ಇಲ್ಲೇ. ಮರಳುಗಲ್ಲಿನ ಪದರಗಳಲ್ಲಿರುವ ರಂದ್ರಗಳಿಂದ, ಬೂಮಿಯಲ್ಲಿನ ನೈಸರ‍್ಗಿಕ ಅನಿಲ ರಬಸವಾಗಿ ಹೊರಕ್ಕೆ ಬರುತ್ತದೆ. ಇದಕ್ಕಂಟಿದ ಜ್ವಾಲೆಯೂ ಸಹ ಆ ರಬಸಕ್ಕೆ ಸರಿಸಾಟಿಯಾಗಿ ಅಂದಾಜು ಮೂರು ಮೀಟರ್ ಎತ್ತರ ಮುಟ್ಟುತ್ತದೆ.

ಅಜರ್‍ಬೈಜಾನ್‍ನಲ್ಲಿನ ಇತರೆ ಜ್ವಾಲಾಮುಕಿಗಳಿಗೆ ಹೋಲಿಸಿದರೆ ಅವುಗಳಲ್ಲಿದ್ದಂತೆ ಈ ಪ್ರದೇಶದಲ್ಲಿ ಹೆಚ್ಚು ಮಣ್ಣಿಲ್ಲ. ಇದರಿಂದ ಅನಿಲ ರಬಸದಿಂದ ಹೊರಬರಲು ಸಾದ್ಯವಾಗಿದೆ. ಜ್ವಾಲೆ ನಿರಂತವಾಗಿ ಉರಿಯಲು ಇದು ಪರೋಕ್ಶವಾಗಿ ಸಹಕಾರಿಯಾಗಿದೆ. ಬೆಟ್ಟದ ತುದಿಯಲ್ಲಿ 10 ಮೀಟರ್ ಎತ್ತರದ ಗೋಡೆಯಿದೆ. ಇದೂ ಸಹ ನಿರಂತರವಾಗಿ ಉರಿಯುತ್ತಿದೆ. ಇದರ ನೋಟ ಕತ್ತಲಲ್ಲಿ ಬಲು ಆಕರ‍್ಶಕ ಮತ್ತು ಅದ್ಬುತ. ಕಣ್ಣಿಗೆ ಹಬ್ಬ. ಈ ಜ್ವಾಲೆಯ ಸುತ್ತ ಮುತ್ತಲಿನ ಪ್ರದೇಶ ಸದಾಕಾಲ ಬೆಚ್ಚಗಿದ್ದು, ವಾತಾವರಣದಲ್ಲಿ ಹೊರ ಬರುವ ಅನಿಲದ ವಾಸನೆ ಇರುವುದನ್ನು ಉಸಿರಾಟದ ವೇಳೆ ಗ್ರಹಿಸಬಹುದು. ಯಾನಾರ್ ದಾಗ್ ಸುತ್ತ ಬೀಸುವ ಬಲವಾದ ಗಾಳಿ ಜ್ವಾಲೆಯಲ್ಲಿ ವಿವಿದ ಆಕಾರಗಳನ್ನು ಸ್ರುಶ್ಟಿ ಮಾಡಿ, ಮಾಂತ್ರಿಕ ವಾತಾವರಣ ನಿರ‍್ಮಿಸಲು ಕಾರಣವಾಗುತ್ತದೆ. ಎಲ್ಲೆಲ್ಲಿ ಅನಿಲ ಹೊರಬರಲು ಹಾದಿ ಇದೆಯೋ ಅಲ್ಲೆಲ್ಲಾ ಜ್ವಾಲೆಯಿದ್ದು, ಸುತ್ತ ಮುತ್ತಲಿರುವ ನದಿಗಳೂ ಇದಕ್ಕೆ ಹೊರತಾಗಿಲ್ಲ. ನದಿಯ ನೀರಿನಲ್ಲೂ ಜ್ವಾಲೆಯನ್ನು ಕಾಣಬಹುದು. ನದಿಯಲ್ಲಿ ಹೊರ ಹೊಮ್ಮಿರುವ ಜ್ವಾಲೆಯಿಂದ ಅದರ ಸುತ್ತಲಿನ ನೀರು ಸಹ ಬಿಸಿಯಾಗಿ, ಇದನ್ನು ‘ಯಾನಾರ್ ಬುಲಾಗ್ ಅತವಾ ಹಾಟ್ ಸ್ಟ್ರೀಮ್’ ಎಂದು ಕರೆಯಲಾಗುತ್ತದೆ.

ಯಾನಾರ್ ದಾಗ್ ಸುತ್ತಮುತ್ತಲಿರುವ ನದಿಯ ನೀರಿನಲ್ಲಿ ಗಂದಕದ ಸಾಂದ್ರತೆ ಹೆಚ್ಚಿರುವ ಕಾರಣ ಇದು ಸುಲುಬವಾಗಿ ಬೆಂಕಿ ಹತ್ತಿಕೊಳ್ಳುತ್ತದೆ. ಒಂದು ಬೆಂಕಿ ಕಡ್ಡಿ ಇದ್ದರೆ ಸಾಕು, ಇಲ್ಲಿಯ ನೀರಿಗೆ ಸುಲಬವಾಗಿ ಬೆಂಕಿ ಹಚ್ಚಬಹುದು. ಇಲ್ಲಿನ ಸ್ತಳೀಯರು ‘ಈ ನೀರು ಅನೇಕ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿದೆ’ ಎಂದು ನಂಬಿದ್ದಾರೆ. ಈ ಕಾರಣಕ್ಕಾಗಿ ಅವರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ ಹಾಗೂ ಪಾದಗಳನ್ನು ಯಾನಾರ್ ಬುಲಾಗ್ಸ್ ನಲ್ಲಿ ತೊಳೆಯುತ್ತಾರೆ. ಇಲ್ಲಿಂದ ಇನ್ನೂರು ಮೀಟರ್‍ಗಳಶ್ಟು ದೂರದಲ್ಲಿ ನಿಶ್ಕ್ರಿಯ ಜ್ವಾಲಾಮುಕಿಯೊಂದಿದೆ. ಮಣ್ಣು, ನೀರು ಮತ್ತು ಗಂದಕದ ಮಿಶ್ರಣವನ್ನು ಇದು ಹೊರಹಾಕುತ್ತದೆ. ‘ಈ ಮಿಶ್ರಣಕ್ಕೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಗುಣಗಳಿದೆ’ ಎಂದು ನಂಬಲಾಗಿದೆ. ಹಾಗಾಗಿ ಇದನ್ನು ಶೇಕರಿಸಿಡುವ ಪರಿಪಾಟ ಸ್ತಳೀಯರಲ್ಲಿದೆ. ಸ್ತಳೀಯರಿಗೆ ಈ ಪರ‍್ವತಗಳು ಪವಿತ್ರ ಸ್ತಳ. ಅವರ ನಂಬುಗೆಗೆ ಇಂಬುಕೊಡುವಂತೆ, ವಾತಾವರಣದಲ್ಲಿ ಏನೇ ಏರುಪೇರಾದರೂ ಇಲ್ಲಿನ ಜ್ವಾಲೆ ಮಾತ್ರ ನಂದಿಹೋಗದೆ ನಿರಂತರವಾಗಿ ಉರಿಯುತ್ತಿದೆ. ಇಲ್ಲಿ ನೀರು ಮತ್ತು ಬೆಂಕಿ ಪವಿತ್ರೀಕರಣದ ಮಾದ್ಯಮ ಎಂದು ಅವರುಗಳು ಪರಿಗಣಿಸಿದ್ದಾರೆ. ಬಾರತೀಯ ಹಾಗೂ ಇರಾನಿನ ವಿದೇಶಿಯರಿಗೆ ಇದು ಯಾತ್ರಾ ಸ್ತಳವಾಗಿದೆ.

ಕೆಲವು ವದಂತಿಗಳ ಪ್ರಕಾರ ತಮ್ಮ ಕನಸಿನಲ್ಲಿ ಈ ಪರ‍್ವತವನ್ನು ಕಂಡ ಬಹಳಶ್ಟು ರೋಗಿಗಳು, ಆನಂತರ ಅಲ್ಲಿಗೆ ಹೋದಲ್ಲಿ ಅವರು ನರಳುತ್ತಿರುವ ಕಾಯಿಲೆಯಿಂದ ಗುಣಮುಕರಾದ ನಿದರ‍್ಶನಗಳು ಇದೆಯಂತೆ. ಕುಡಿದು ಬರುವ ಪ್ರವಾಸಿಗರ ಆರೋಗ್ಯ ತೀವ್ರವಾಗಿ ಕುಸಿಯುತ್ತದೆ ಎಂದ ವದಂತಿ ಸಹ ಇಲ್ಲಿ ಹರಿದಾಡುತ್ತಿದೆ. ವೈಜ್ನಾನಿಕವಾಗಿ ಇದನ್ನು ಪರಿಶೀಲಿಸಿದರೆ, ಅಜೆರ‍್ಬೈಜಾನ್ ಬ್ರುಹತ್ ತೈಲ ಮತ್ತು ಅನಿಲ ನಿಕ್ಶೇಪದ ದೇಶ. ಇಲ್ಲಿರುವ ಯಾನಾರ್ ದಾಗ್ ಇದಕ್ಕೆ ಅಪವಾದವೇನಲ್ಲ. ಬೂಮಿಯ ಮೇಲ್ಮೈನಲ್ಲಿ ಎಲ್ಲಿ ಅನಿಲ ಹೊರಬರಲು ಸ್ತಳಾವಕಾಶವಿದೆಯೋ ಅಲ್ಲೆಲ್ಲಾ ಅದು ಹೊರಹೊಮ್ಮಿ ಬೆಂಕಿಯ ಕಿಡಿಯೊಂದಿಗೆ ಸಂಪರ‍್ಕಕ್ಕೆ ಬಂದಾಗ, ಜ್ವಾಲೆಯಾಗಿದೆ. ಇದು ಆಗಿದ್ದಾದ್ದರೂ ಯಾವಾಗ, ಹೇಗೆ ಎಂಬುದಕ್ಕೆ ಸಾಕ್ಶಿಗಳು, ಪುರಾವೆಗಳು ಇಲ್ಲದ ಕಾರಣ ನಿಗೂಡವಾಗಿದೆ. 13ನೇ ಶತಮಾನದಲ್ಲಿ ಮಾರ‍್ಕೋಪೋಲೊ ಅಬ್ಸೇರಾನ್ ಪರ‍್ಯಾಯ ದ್ವೀಪದಲ್ಲಿ ಪ್ರತಿಯೊಂದು ಮೂಲೆಯಲ್ಲೂ ಉರಿಯುತ್ತಿರುವ ಜ್ವಾಲೆಗಳನ್ನು ಕಂಡಿರುವುದಾಗಿ ಉಲ್ಲೇಕಿಸಿದ್ದಾನೆ. ಇಲ್ಲಿಂದ ಐದು ಶತಮಾನಗಳ ನಂತರ ಅಲೆಕ್ಸಾಂಡ್ರೆ ಡ್ಯೂಮಾಸ್, ಜೊರೋಸ್ಟ್ರಿಯನ್ ದೇವಾಲಯಗಳಲ್ಲಿ ನಿರಂತರ ಜ್ವಾಲೆಯನ್ನು ಕಂಡಿರುವುದಾಗಿ ದಾಕಲಿಸಿದ್ದಾನೆ. ಇಂದಿಗೂ ಇಲ್ಲಿನ ಜ್ವಾಲೆಗಳು ಸ್ತಳೀಯರನ್ನು, ಪ್ರವಾಸಿಗರನ್ನು ಮತ್ತು ವಿಜ್ನಾನಿಗಳನ್ನು ವಿಸ್ಮಯಗೊಳಿಸುತ್ತಲೇ ಇದೆ. ಪುರಾತತ್ವ ಶಾಸ್ತ್ರದವರಿಂದ ಅವಿರತ ಸಂಶೋದನೆ ನಡೆಯುತ್ತಿರುವ ಕಾರಣ ಇದು ಸುರಕ್ಶಿತ ತಾಣವಾಗಿದೆ.

(ಚಿತ್ರ ಸೆಲೆ: wiki )

(ಮಾಹಿತಿ ಸೆಲೆ: odditycentral.com, theculturetrip)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications