ತಿಳುವಳಿಕೆ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ.

ತಿಳುವಳಿಕೆ, Wisdom

ಬಾವನೆಗಳ ತೀವ್ರತೆ ನಮ್ಮ ಅಂದಾಜನ್ನು ಮೀರಿದ್ದು. ಯಾರ ಮೇಲೆ ಎಶ್ಟು ಪ್ರೀತಿ ಎನ್ನುವ ಲೆಕ್ಕವೇ ವ್ಯರ‍್ತ. ನಿಜ ಗೊತ್ತಿದ್ದರೂ ಬಾಯ್ಬಿಡದ ಆಟ. ನಮ್ಮೊಳಗೇ ನಾವೇ ಪರಾಮರ‍್ಶಿಸಲು ಹೆದರಿಕೆ. ನಿಂತ ಕಾಲಲ್ಲಿ ನಂಬಿದ ವ್ಯಕ್ತಿಯೋರ‍್ವ, ಆದರೆ ನಿಜವಾಗಿ ಒಲವಿನ ಸೆಳೆತವನ್ನು ಅತೀವವಾಗಿ ಹೊಂದಿರುವರಿನ್ನೊಬ್ಬ. ಹೌದು ಅವರವರ ಪ್ರಾಮುಕ್ಯತೆ ಅವರಿಗೆ. ಆದರೆ ಯಾರಿಗೆ ಇದರಿಂದ ಸಮಾದಾನ? ಆತ್ಮೀಯತೆಯ ಗಣನೆಯಾಗಿ ಗುರುತು ಪಡೆಯೋದು – ಅದು ಇನ್ನು ನಾಲ್ಕು ಜನರ ಮುಂದೆ ಹೆಮ್ಮೆಯ ಸಂಗತಿಯಾಗಿ ಬೆಳೆದಾಗ. ಇವರಿವರಿಗೆ ಇವರಿವರು ಇಂತಿಂತವರು, ಇದರಲ್ಲಿ ಸ್ಪಶ್ಟತೆ ಮುಕ್ಯ. ನೋಡುವ ಕಣ್ಣುಗಳು ಸರಿಗಿಂತ ತಪ್ಪು ಬಾಂದವ್ಯ ಕಲ್ಪಿಸುವದರಲ್ಲೇ ಕುಶಿ ಪಟ್ಟಿವೆ, ಅದು ಬೇರೆ ವಿಚಾರ – ಅದು ನೋಡುತ್ತಿರುವವವರ ಸಂಸ್ಕಾರ ಮತ್ತೆ ವಿಕ್ರುತಿಗಳನ್ನು ಗಣನೆಗೆ ತೆಗೆದುಕೊಂಡು ಗಮನಿಸಬೇಕಾದದ್ದು. ಮತ್ತೊಬ್ಬರ ಅರ‍್ಹತೆ ಹುಡುಕುವ ನಮ್ಮ ಮನಸಿಗೆ ತನ್ನ ಮಿತಿಯೊಂದು ಕಾಣುವುದೇ ಇಲ್ಲ. ಎಲ್ಲ ಅವರವರ ತಿಳುವಳಿಕೆಯಂತೆ. ಒಳ್ಳೆಯವರು ಎನಿಸಿಕೊಂಡವರು ಏನನ್ನೂ ಊಹಿಸದೇ, ಅನರ‍್ತ ಕಲ್ಪಿಸದೆ ನಿರ‍್ಲಿಪ್ತರಂತೆ ಉಳಿಯುತ್ತಾರೆ.

ಒಂದು ಸ್ತಾನ, ಒಂದು ಪದವಿ ಪ್ರತಿ ಸಂಬಂದದಲ್ಲೂ ನಮಗೆ ಗರ‍್ವವನ್ನು ತಂದಿರುತ್ತದೆ. ಎಶ್ಟೋ ದಿನಗಳವರೆಗೆ ಕಾಲದ ಪರಿಣಾಮವು ಅಲ್ಲಾಗದೇ ಹಾಗೆ ಅದೇ ಕುರ‍್ಚಿಯ ಮೇಲೆ ಕುಳಿತಿರುವ ಸಮಾದಾನ. ಮತ್ತಿನ್ಯಾರೋ ಬಂದರು ಅತವಾ ನಮಗೆ ತಿಳಿದದ್ದೇ ತಪ್ಪು ಅನ್ನಿಸುವ ಗಟನೆಯೊಂದು. ಅಲ್ಲಿಂದಲೇ ಕಿರಿಕಿರಿಯ ಆರಂಬ, ನಮ್ಮ ಅಸ್ತಿತ್ವದ ಪ್ರಶ್ನೆ. ನಮ್ಮ ಜಾಗ ಕಸಿದುಕೊಳ್ಳಲು ಬಂದವರ ಮೇಲೆ ಅಸೂಯೆ. ಅತವಾ ನಮ್ಮನ್ನು ಅಲ್ಲಿಂದ ಕೆಳಗಿಳಿಸಿದವರ ಮೇಲೆ ಸಿಟ್ಟು. ನಿಜಕ್ಕೂ ಅಲ್ಲಿ ಕುರ‍್ಚಿ ಇದ್ದಿತ್ತೆ? ಅತವಾ ಅದು ಕೇವಲ ನಮ್ಮ ಸ್ವಾರ‍್ತದ ಸಮಾದಾನಕ್ಕೆ ನಾವು ಮಾಡಿಕೊಂಡಿದ್ದ ಸ್ರುಶ್ಟಿಯೇ?

ನಿಜ, ಪ್ರತಿದಿನ ನಿಮ್ಮ ಮೇಲಿರುವ ಪ್ರೀತಿಯ ಪ್ರಮಾಣ ಇಶ್ಟು, ಗೌರವ ಇಶ್ಟು ನಿನ್ನೆ ಇಶ್ಟಿತ್ತು ಮೊನ್ನೆ ಅಶ್ಟಿತ್ತು ಎಂದು ಲೆಕ್ಕ ಅಸಾದ್ಯ. ಪ್ರತಿ ವಿಶಯದಲ್ಲೂ ನಮ್ಮದೇ ಮಹತ್ವ ಇರಬೇಕೆನ್ನೆವುದು ಎಶ್ಟರ ಮಟ್ಟಿಗೆ ಸರಿ? ನಾವು ಇನ್ನೊಬ್ಬರೊಂದಿಗೆ ಅದೇ ರೀತಿ ನಡೆದುಕೊಂಡಿದ್ದೇವೆಯೇ? ಪಡೆದುಕೊಳ್ಳುವದನ್ನು ಮರೆತು ಕೊಟ್ಟಿದ್ದು ಎಶ್ಟು? ಕೊಡುತ್ತಲೇ ಇದ್ದರೆ ಅದರಲ್ಲೂ ಒಂದು ಕುಶಿ ಇಲ್ಲವೇ? ನಿಸ್ವಾರ‍್ತ ದೊಡ್ಡ ಪದವಾಗಬಹುದು, ಆದರೆ ನಮ್ಮಿಂದ ಮತ್ತೊಬ್ಬರ ಮುಕದಲ್ಲಿ ಪುಟ್ಟ ನಗು ನೆಮ್ಮದಿ ಬಂದರೆ ಅದನ್ನು ನೋಡಿಯೂ ಕುಶಿ ಪಡುವ ಸ್ವಾರ‍್ತಕ್ಕೇನಾಗಿದೆ? ಬೋದನೆ ಸರಳ ಹೌದು, ಅದೇ ಆಚರಣೆಗೆ ಬಂದಾಗ ಕಟಿಣ. ಆದರೆ ಒಂದೊಂದೇ ಹೆಜ್ಜೆ ಈ ದಾರಿಯಲ್ಲಿ ಸಾಗುವ ಸಾದ್ಯತೆ ಎಶ್ಟಿದೆ? ಆಗಬಹುದೇನೋ, ಪ್ರಯತ್ನಿಸಿ ನೋಡಬೇಕಶ್ಟೆ ಇಲ್ಲವೇ ಎಲ್ಲ ಬಿಟ್ಟು ಒಂದು ಮೂಲೆ ಹಿಡಿದು ಕೇವಲ ನಮ್ಮ ಬಗ್ಗೆ ಯೋಚಿಸುವುದರಲ್ಲೇ ಮಗ್ನವಾಗಬೇಕು. ಆದರೆ ಅಲ್ಲೂ ತೊಂದರೆ, ನಮ್ಮನ್ನು ನಾವೇ ಕೂಡ ಚೆನ್ನಾಗಿ ನೋಡಿಕೊಂಡಿರುವ ಸಾದ್ಯತೆಗಳು ಕಡಿಮೆಯೇ. ಅಂದರೆ ನಮ್ಮ ಸ್ವಾರ‍್ತಕ್ಕೂ ನಾವು ಮರ‍್ಯಾದೆ ಅಶ್ಟೇನು ನೀಡಿಲ್ಲ. ಅರೋಗ್ಯ ಹದ ತಪ್ಪಿದೆ ದೇಹ ವಿಕಾರವಾಗಿ ಹಬ್ಬುತ್ತಲೇ ಇದೆ, ಮನಸ್ಸಂತೂ ಹೇಳುವದೇ ಬೇಡ. ಇಶ್ಟೆಲ್ಲಾ ಇದ್ದು ಇದನ್ನು ಸ್ವಚ್ಚಗೊಳಿಸುವದು ಇನ್ನ್ಯಾರ ಕೆಲಸ? ಬೇರಿನ್ನ್ಯಾರೋ ಬಂದು? ಬಹುಶಹ ಆಗದು. ಅವರಿಗೇನು ಗೊತ್ತು ನಮ್ಮ ವಿಚಾರಗಳ ಮೂಲೆ ಮೂಲೆಯಲ್ಲಿ ಕೊಳೆತು ನಾರುತ್ತಿರುವ ಕಸ. ದಿನಕ್ಕೆ ಇಶ್ಟಿಶ್ಟೇ ಸ್ವಾರ‍್ತಕ್ಕಾಗಿಯೇ – ಇನ್ನ್ಯಾವ ಉದ್ದಾರಕ್ಕೂ ಅಲ್ಲ, ಸ್ವಚ್ಚತೆ ಸಾದ್ಯವೇ?

ಆಗ ಬೇರೆಯವರ ಮೇಲಿನ ಅವಲಂಬನೆ ಕಡಿಮೆ. ಗಮನವೆಲ್ಲ ನಮ್ಮೆ ಮೇಲೆ ಹರಿದರೆ ಬೇರೆ ಪ್ರಶ್ನೆಗಳು ಚಿಂತೆಯನ್ನು ಹುಟ್ಟಿಸುವ ಅದಿಕಾರ ಕಳೆದುಕೊಳ್ಳುತ್ತವೆ. ಚಿಂತೆ ಕಡಿಮೆ ಆದಶ್ಟು ನೆಮ್ಮದಿ ತಾನಾಗಿಯೇ ಅದೆಲ್ಲಿಂದಲೋ ಬಂದೀತು, ಅದರ ಮೂಲವನ್ನು ಹುಡುಕುವ ಪ್ರಶ್ನೆ ಯಾಕೆ? ಅಲ್ಲದೆ ನಮ್ಮನ್ನು ನಾವು ಅಶ್ಟು ಕಟಿಣವಾಗಿ ನೋಡುವದು ಸಾದ್ಯವಿಲ್ಲ. ಎಂತಹ ತಪ್ಪೇ ಇದ್ದರೂ ಅದರ ಸಮಜಾಯಿಶಿ ಸೂಕ್ತವೆನಿಸದೆ ಇರದು. ಹೇಳಲಿಕ್ಕೆ ಇನ್ನೇನಿಲ್ಲ ಪ್ರತಿಯೊಂದಕ್ಕೂ ಅರ‍್ತ ಅನರ‍್ತಗಳಿವೆ. ಬೇರೆಯವರ ದ್ರುಶ್ಟಿಯಲ್ಲಿ ನಾವೇನು ಎಂಬುದೇ ಅಸಹ್ಯ. ನಾವು ಸಹಾಯ ಮಾಡಿದವರಿಗೆ , ನಮ್ಮಿಂದಲೇ ನಾಲ್ಕು ಹೆಜ್ಜೆ ನಡೆದವರು ತಿರುಗಿ ನಮ್ಮನ್ನು ಆಚೆ ದೂಡಿದರೂ ಅಶ್ಟೇನು ದೊಡ್ಡ ಮಾತಲ್ಲ. ಒಂದೋ ನಾವೇ ಬ್ರಮೆಯಲ್ಲಿರಬೇಕು, ಚಿಕ್ಕದನ್ನು ದೊಡ್ಡ ಮಹತ್ವ ನೀಡಿ ನೋಡಿದ್ದಕ್ಕೆ. ಇಲ್ಲವೇ ಅವರಿಗೆ ನಮ್ಮ ವ್ಯಕ್ತಿತ್ವದ ಬೆಲೆ ನೀಡಿ ಅವರೊಡನೆ ಉಳಿಸಿಕೊಳ್ಳಲು ಸಾದ್ಯವಿರದೆ ಹೋಗಿರಬಹುದು. ಸರಿ ತಪ್ಪುಗಳನ್ನು ಎರಡು ಕಣ್ಣುಗಳಿಂದ ನೋಡಿದರೆ ನಿರ‍್ದಾರದ ಒಮ್ಮತ ಹೇಳಲಾಗದು. ಹಾಗೆಯೆ ಅವರವರ ದ್ವನಿಯಲ್ಲಿ ಅವರವರ ಮಾತುಗಳು. ಅಂದಿದ್ದಿಶ್ಟು ಅನ್ನಿಸಿದ್ದಿಶ್ಟು ಅದಕ್ಕಿದ್ದ ನಿಜವಾದ ಅರ‍್ತವೊಂದಿಶ್ಟು, ಕಡೆಗೆ ಅದನ್ನ ಸ್ವೀಕರಿಸಿದಾಗ ಕಂಡಿದ್ದು ಮತ್ತೊಂದಿಶ್ಟು.

( ಚಿತ್ರಸೆಲೆ : knowledge.wharton.upenn.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: