ಸನ್ನಿವೇಶ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ.

ಸನ್ನಿವೇಶ, situation

ಹೌದು, ಇಲ್ಲೇ ಎಲ್ಲೋ ಇದೆ, ಇನ್ನೆಶ್ಟೊತ್ತು?  ಬಂದೀತು ಇನ್ನೇನು. ಹೆದರಿಕೆಯೇ? ಚೆ, ಚೆ ಅಂತ ಅಳುಕಿನ ಮನುಶ್ಯ ನಾನಲ್ಲ.ಕಾಲಿಟ್ಟಲ್ಲೆಲ್ಲ ನೆಲ ನನ್ನದೇ ಅನಿಸುತ್ತದೆ ಅದರಲ್ಲಿ ಎರಡು ಮಾತಿಲ್ಲ. ಜಂಬವಲ್ಲ ಆದರೆ ಅದೊಂದು ಸಹಜವಾದ ಗರ‍್ವ ಹಾಗೆ ಉಳಿದುಕೊಂಡು ಬಿಟ್ಟಿದೆ ನನ್ನೊಡನೆ. ಆಗೀಗ ತಪ್ಪು, ಹೌದು ನನಗೂ ಅರಿವಿದೆ ಆದರೆ ಬಹಳವಾಗಿ ಯಾರೂ ತೊಂದರೆಗೊಳಪಟ್ಟಿಲ್ಲ ನನ್ನಿಂದ. ಸದ್ಯಕ್ಕೆ ಕಾಯುತ್ತಿದ್ದಿದ್ದು ಅದೊಂದು ಮುಗಿದೋಗಲಿ ಅಂತ. ಅದು ತಲೆಯ ಒಳಗೆ ಹೊಕ್ಕಂದಿನಿಂದ ನೆಮ್ಮದಿ ನಿದ್ದೆ ಒಟ್ಟಿಗೆ ಓಡೋಗಿವೆ. ಕುಶಿಯೇ ನನಗೂನು, ಆದರೆ ಬಂದು ನನ್ನ ಮುಂದೆ ಆ ಸನ್ನಿವೇಶ ನಿಂತಾಗ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಯಂಕರ ಬಯ, ಪುಟ್ಟ ಕಾತರ ನನ್ನಲ್ಲೂ ಇದೆ.

ಎದುರಿಸಲು ಅದೇನು ನನ್ನ ವೈರಿಯಲ್ಲ. ಅಂದ ಹಾಗೆ ಸನ್ನಿವೇಶ ಅದಾಗದೆ ಬರುವಂತಹದ್ದು. ಅದರ ಬಗ್ಗೆ ಪ್ರೀತಿ ದ್ವೇಶಗಳಿಗೇನು ಅರ‍್ತ? ಬರುವುದು ತನ್ನ ಕಾರ‍್ಯ ನಿಬಾಯಿಸಿ ಯಾರನ್ನೇನು ಮಾತನಾಡಿಸದೆ ಹೊರಡುವುದು – ಅದೇ ಸನ್ನಿವೇಶದ ಕರ‍್ತವ್ಯ. ಆದರೆ, ಅದು ಬಿಟ್ಟು ಹೋಗುವ ಪರಿಣಾಮಗಳ ಯೋಚನೆ ಕೂಡ ಮಾಡುವುದು ಅಸಾದ್ಯ. ಗಾಯವಾದಾಗಿನ ನೋವಿಗಿಂತ ಅದು ಆರುವವರೆಗೂ ಕೊರೆದು ಕೊರೆದು ನೋವಾಗಿದ್ದೆ ಹೆಚ್ಚು. ಮನಸ್ಸು ಅಶ್ಟೆಯೇ,  ಇನ್ನೇನು ಆಗಲಿರುವ ಗಾಯದ ಸೂಚನೆ ಇದ್ದರೂ ಕಡೆ ಕ್ಶಣದ ಚಮತ್ಕಾರದಲ್ಲಿ ಅದೇನೋ ನಂಬಿಕೆ ಉಳಿದಿರುತ್ತದೆ. ಕಂಡಿತವಾಗಿ ಇನ್ನು ಮೇಲೆ ಇದೇ ನಿಜ ಎಂದು ತಿಳಿದಾಗ, ಅಳು ಎಲ್ಲೆಲ್ಲಿಂದ ಕಿತ್ತು ಬರುವುದು ಪ್ರವಾಹದಂತೆ. ನಾನು ಬಹುಶಹ ಅಳಲಿಕ್ಕಿಲ್ಲ, ಅದು ಹಾಗೆಯೇ. ನೋಡುವವರ ಕಣ್ಣುಗಳಿಂದ ತಪ್ಪಿಸಿಕೊಳ್ಳುವವರೆಗೂ ಸ್ವಲ್ಪ ಸಂಕೋಚ. ನಾನು ನನ್ನೊಡನೆ ಮಾತ್ರ ನಾನಾಗಿರಲು ಸಾದ್ಯ. ಇದೊಂದು ಸತ್ಯ  ದಿನಗಳ ಹಿಂದೆಯೇ ಅರಿವಾಗಿದ್ದರೆ ಅತವಾ ಅದರೊಡನೆ ಹೊಂದಾಣಿಕೆ ಮಾಡಿಕೊಳ್ಳದೆ ವಿದಿಯಿಲ್ಲ ಎಂದು ಅರಿತಿದ್ದರೆ ಒಳ್ಳೆಯದಿತ್ತು.

ತಪ್ಪುಗಳು ನಡೆದ ಮೇಲೆ ಸರಿಯಾದುದರ ಬೆಲೆ ಅರಿವಿಗೆ ಬರುವಂತಹದ್ದು. ಆಚೆಗೆ ನಿಂತೆ, ಕನಿಶ್ಟ ಪಕ್ಶ ನಿಂತಂತೆ ಇದ್ದೆ. ಒಪ್ಪಿಕೊಳ್ಳಲಿಲ್ಲ, ಮನಸಿನೊಡನೆ ಅಶ್ಟೊಂದು ಆಳದ ಬಂದನ ಬೇಕಿರಲಿಲ್ಲ. ಅದಾಗದೆ ಹುಟ್ಟಿಕೊಂಡಿತು. ಬಹುಶಹ ಅರಿವಿಲ್ಲದೆ ಮಲಗಿದಾಗ ಮನಸ್ಸು ಮೋಸ ಮಾಡಿ ಸಂಬಂದ ಬೆಳೆಸ ಹೊರಟಿತು. ಅದಕ್ಕೊಂದು ಹೆಸರು – ಅವರಿಟ್ಟರು ಅವರವರ ಕೆಟ್ಟ ಕೆಟ್ಟ ಬಾಯಿಂದ ಏನೇನೋ ಮಾತು ಬಂದವು. ಅವರು ಇಲ್ಲಿ ಅನುಮಾನದ ಮನೆ ಕಟ್ಟಿ ಸುಳ್ಳಿನಿಂದ ಶ್ರುಂಗಾರ ಮಾಡುತ್ತಿದ್ದರೆ, ಅದರರಿವಿರದ ನಾವು ಅಲ್ಲಿ ನೆನಪುಗಳ ಬುತ್ತಿ ಕಟ್ಟುತ್ತಿದ್ದೆವು. ಕೇಳುವ ಸಮಯ ಯಾರಿಗಿದೆ?  ಅಲ್ಲೂ ನಿರ‍್ಲಕ್ಶ್ಯ ಮಾಡಿದ್ದೆ. ಒಳ್ಳೆಯದೇ, ಬೇರೆಯವರ ಮಾತುಗಳು ನಿಮ್ಮ ಸ್ವಾಸ್ತ್ಯದ ಸ್ತಳ ಹೊಕ್ಕು ಅಲೆದಾಡಬಾರದು. ಅಶ್ಟೊಂದು ಆಚೆ ನಿಲ್ಲುವ ಅರಿವು ಇತ್ತು ಆಗ. ಪ್ರತಿ ಸನಿಹದ ಉಸಿರಿಗೆ, ಕಣ್ಣುಗಳ ಬೇಟಿಗೆ – ಎಲ್ಲದರ ನೆನಪುಗಳು ಇನ್ನು ಹಸಿರು. ಕೊನೆಯ ಬಗ್ಗೆ ಮಾತೇ ಇಲ್ಲ. ಸಾವೇ ಕೊನೆ ಎಂದು ಕಡೆಗಣನೆಯಾಯಿತೇ? ಇದೇ ಗೊಂದಲ ಆರಂಬಕ್ಕೂ ಅಂತ್ಯಕ್ಕೂ. ಮನಸ್ಸು ವಿವರಣೆ ನೀಡಲು ಇಚ್ಚಿಸುವದಿಲ್ಲ. ದ್ಯಾನ ಗೊತ್ತು, ಅಶ್ಟಿಶ್ಟು ನಿಯಂತ್ರಣವೂ ಇದೆ. ಆದರೆ ನನ್ನೊಂದಿಗೆ ಮನಸ್ಸು ಪೂರ‍್ತಿಯಾದ ನಿಜ ಬಿಚ್ಚಿಡಲು ಒಪ್ಪದು. ಅದಕ್ಕೂ ಗೊತ್ತೇನೋ ಪರಿಣಾಮದ ಬಗ್ಗೆ. ಹೌದು ಬಂದಿದೆ ಕೊನೆ ಇಲ್ಲೇ ಎಲ್ಲೋ – ಗಂಟೆಗಳ ಲೆಕ್ಕದಲ್ಲಿ ಇನ್ನೆರಡು.

ಆಚೆ ಮನಸಿನ ತಳಮಳಗಳ ವಿಚಾರವೇ ಬೇಡ. ನನ್ನ ನಾ ಸಂಬಾಳಿಸಿದರೆ ಸಾಕು. ಏನು ಮಾಡಬಹುದೆಂಬ ಪುಟ್ಟ ಊಹೆಯೂ ಬೇಡವಾಗಿದೆ. ಜೊತೆಗಿದ್ದಾಗ ಜಗತ್ತು ಜೀವನ ಪ್ರತಿ ಕ್ಶಣ ಜೀವ ತುಂಬಿಕೊಂಡಿತ್ತು. ದಡ ಮುಟ್ಟುವ ಮುಂಚೆಯೇ ಜಡ ಹರಡುತ್ತಿದೆ – ಹೆಜ್ಜೆ ಇಡಲಾಗದಶ್ಟು, ಕಾಲಿನ ಬಾರ ಎಳೆಯಲಾಗದಶ್ಟು. ನಿಂತಲ್ಲೇ ನಿಂತಿದ್ದು ಸದ್ಯಕ್ಕೆ ಸನ್ನಿವೇಶದ ಕಾಯುವಿಕೆಗಾಗಿ. ಅದು ಬಂದ ಮೇಲೆ ನನ್ನ ಎಳೆದು ಅಪ್ಪದೇ ಬಿಡದು. ನಾನದರ ಮದ್ಯದಲ್ಲಿ ಒಂದಿಶ್ಟು ಅರಿವಿಲ್ಲದೆ ಸುಮ್ಮನೆ ಕಣ್ಮುಚ್ಚಿ ಶರಣಾಗುವಂತೆ. ಹೌದು, ಸೋಲಿನ ಕಡೆಯ ಹೆಜ್ಜೆಯಲ್ಲೂ ಸಮಾದಾನವಿದೆ. ಗೆಲ್ಲಬೇಕೆಂಬ ಹಸಿವು ಅದನ್ನ ಮುಚ್ಚಿ ಹಾಕಿರುತ್ತದೆ. ಸಂಬಂದಗಳಲ್ಲಿ ಗೆಲುವೇನು ಸೋಲೇನು ಅಲ್ಲಿರುವದೇ ಮುಕ್ಯ. ಆಚೆ ನಿಲ್ಲಬೇಕಾದವನು ಮದ್ಯದ ಸುಳಿಯಲ್ಲಿ ಸಿಲುಕಿಕೊಂಡಂತೆ. ಬಂದಿದೆ, ಕಡೆಗೆ ಎಳೆದದ್ದೂ ಗೊತ್ತಾಗಿಲ್ಲ. ನಾನೀಗ ಅದರ ಮೂಲ ನೋಡ ಹೊರಟಂತೆ – ಅದು ಯಾವ ಯತ್ನವೂ ಇಲ್ಲದೆ. ಸೆಳೆತಕ್ಕೆ ಸಿಕ್ಕವನಿಗೆ ಸೆಳವು ಇಶ್ಟವಾಗಿದೆ. ಇದು ಮುಗಿದರೆ ಸಾಕು ಎನಿಸಿದೆ. ಇಶ್ಟು ದಿನ ಜೊತೆಗಿದ್ದು ಒಂದೇ ಉಸಿರಾದ ಆ ಮನಸು ಇನ್ನೊಂದು ಸುಳಿಯಲ್ಲಿ ಅದರದೇ ಕೊನೆಯಲ್ಲಿ. ನಮ್ಮ ನಮ್ಮ ಅಂತ್ಯಾರಂಬಗಳು ನಮ್ಮ ಪಾಲಿಗೆ. ಸದ್ಯಕ್ಕೆ ಸಾಕು ದೀರ‍್ಗ ಉಸಿರು. ಕಣ್ಮುಚ್ಚಿ ಕಂಡದ್ದನ್ನು ಕಾಣುವುದು, ಹಾಗೆಯೇ ಯೋಚನೆಗಳೂ ಕೂಡ ನನ್ನೊಡನೆ ಕರಗುವುದು.

( ಚಿತ್ರಸೆಲೆ : badabusiness.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: