ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

–  ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ತನುವ ಗೆಲಲರಿಯದೆ
ಮನವ ಗೆಲಲರಿಯದೆ
ಧನವ ಗೆಲಲರಿಯದೆ
ಭ್ರಮೆಗೊಂಡಿತ್ತು ಲೋಕವೆಲ್ಲವು. (1217-250)

( ತನು=ಮಯ್/ದೇಹ/ಶರೀರ; ಗೆಲಲ್+ಅರಿಯದೆ; ಗೆಲ್=ಜಯಿಸು; ಅರಿಯದೆ=ತಿಳಿಯದೆ;

ಗೆಲಲರಿಯದೆ=ತನ್ನ ಹತೋಟಿಯಲ್ಲಿ/ನಿಯಂತ್ರಣದಲ್ಲಿ ಇಟ್ಟುಕೊಂಡು ಬಾಳುವುದನ್ನು ತಿಳಿಯದೆ;

ತನುವ ಗೆಲಲರಿಯದೆ=ಮಯ್ಯನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬುದನ್ನು ತಿಳಿಯದೆ /ವ್ಯಕ್ತಿಯು ಮಾಡುವ ಎಲ್ಲಾ ಬಗೆಯ ಕೆಲಸಗಳಿಗೂ ದೇಹವೇ ಒಂದು ಉಪಕರಣ. ಆದ್ದರಿಂದ ದೇಹವನ್ನು ಗಟ್ಟಿಮುಟ್ಟಾಗಿ ಯಾವುದೇ ರೋಗರುಜಿನಗಳು ತಟ್ಟದಂತೆ ಚೆನ್ನಾಗಿ ಇಟ್ಟುಕೊಳ್ಳಬೇಕೆಂಬುದನ್ನು ಅರಿಯದೆ;

ಮನ=ಮನಸ್ಸು; ಮನವ ಗೆಲಲರಿಯದೆ=ಮನದಲ್ಲಿ ತುಡಿಯುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ನಡೆನುಡಿಗಳಲ್ಲಿ ಅಳವಡಿಸಿಕೊಂಡು ಬಾಳುವುದನ್ನು ತಿಳಿಯದೆ;

ಧನ=ಹಣ/ಒಡವೆ ವಸ್ತು/ಆಸ್ತಿಪಾಸ್ತಿ/ಸಂಪತ್ತು; ಧನವ ಗೆಲಲರಿಯದೆ=ಸಂಪಾದಿಸಿದ ಹಣವನ್ನು ದುಂದು ವೆಚ್ಚ ಮಾಡಿ ಕಳೆಯದೆ ಇಲ್ಲವೇ ಕೆಟ್ಟ ಚಟಗಳಿಗಾಗಿ ಬಳಸದೆ ತನ್ನ , ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಳಸಬೇಕೆಂಬ ಎಚ್ಚರವಿಲ್ಲದೆ;

ಭ್ರಮೆ+ಕೊಂಡಿತ್ತು; ಭ್ರಮೆ=ತಪ್ಪುಗ್ರಹಿಕೆ/ಕಲ್ಪಿತ ಸಂಗತಿ; ಭ್ರಮೆಗೊಂಡಿತ್ತು=ಇಲ್ಲದ್ದನ್ನು ಇದೆಯೆಂಬ/ಇರುವುದನ್ನು ಇಲ್ಲವೆಂಬ ಒಳಮಿಡಿತಗಳಿಂದ ಕೂಡಿರುವುದು; ಲೋಕ+ಎಲ್ಲವು; ಲೋಕ=ಜಗತ್ತು/ಪ್ರಪಂಚ/ಜನಸಮುದಾಯ; ಎಲ್ಲ=ಪ್ರತಿಯೊಂದನ್ನು ಒಳಗೊಂಡಿರುವುದು;

ಭ್ರಮೆಗೊಂಡಿತ್ತು ಲೋಕವೆಲ್ಲವು=ಜಗತ್ತಿನ ಜನಸಮುದಾಯವೆಲ್ಲವೂ ಜೀವನದ ಉದ್ದಕ್ಕೂ ಬಹುಬಗೆಯ ತಪ್ಪುಗ್ರಹಿಕೆಗಳಿಂದಲೇ ತೊಳಲಾಡುತ್ತಿದೆ;

ಮಾನವ ಜೀವಿಯ ತನ್ನ ಬದುಕಿನಲ್ಲಿ ಒಲವು ನಲಿವು ನೆಮ್ಮದಿಯಿಂದ ಎಲ್ಲರೊಡನೆ ಬಾಳಬೇಕಾದರೆ ತನ್ನ ಮಯ್ ಮನಗಳನ್ನು ಕೆಟ್ಟದ್ದರ ಕಡೆಗೆ ಜಾರದಂತೆ ಹತೋಟಿಯಲ್ಲಿಟ್ಟುಕೊಂಡು, ಸಂಪಾದಿಸಿದ ಹಣವನ್ನು ದುಂದು ಮಾಡದೆ/ಕೆಟ್ಟ ಚಟಗಳಿಗೆ ಬಳಸದೆ/ಹಣವನ್ನು ದೊಡ್ಡದೆಂದು ತಿಳಿದು ಹಣಕ್ಕೆ ದಾಸನಾಗದೆ, ಎಚ್ಚರದಿಂದ ಕೂಡಿರಬೇಕು.

ತನ್ನ ತಾನರಿದಡೆ
ನುಡಿಯೆಲ್ಲ ತತ್ವ ನೋಡಾ
ತನ್ನ ತಾ ಮರೆದಡೆ
ನುಡಿಯೆಲ್ಲ ಮಾಯೆ ನೋಡಾ. (1208-249)

( ತನ್ನ=ತನ್ನನ್ನು; ತಾನ್+ಅರಿದಡೆ; ತಾನು=ವ್ಯಕ್ತಿಯು; ಅರಿವು=ತಿಳುವಳಿಕೆ/ವಿವೇಕ; ಅರಿದಡೆ=ತಿಳಿದುಕೊಂಡರೆ;

‘ ತನ್ನನ್ನು ತಾನು ತಿಳಿಯುವುದು ‘ ಎಂದರೆ ಸಾಮಾಜಿಕ ಜೀವಿಯಾದ ಮಾನವನ ದೇಹವು ಒಂದು ಕಡೆಯಲ್ಲಿ ನಿಸರ‍್ಗ ಸಹಜವಾದ ಹಸಿವು ಮತ್ತು ಕಾಮದಿಂದ ಕೂಡಿದ್ದರೆ, ಮತ್ತೊಂದೆಡೆಯಲ್ಲಿ ಅವನ ನಡೆನುಡಿಗಳನ್ನು ನಿಯಂತ್ರಿಸುವಂತಹ ಸಾಮಾಜಿಕ ಕಟ್ಟುಪಾಡುಗಳು, ಸಂಪ್ರದಾಯಗಳು , ನಂಬಿಕೆಗಳು ಮತ್ತು ರಾಜ್ಯಾಡಳಿತದ ನಿಯಮಗಳು ಬದುಕನ್ನು ಸುತ್ತುವರಿದಿರುತ್ತವೆ. ಆದ್ದರಿಂದಲೇ ವ್ಯಕ್ತಿಯ ಮಯ್ ಮನಸ್ಸು ಸದಾಕಾಲ ಒಳಿತು ಕೆಡುಕಿನ ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುತ್ತವೆ. ಈ ವಾಸ್ತವವನ್ನು ಅರಿತುಕೊಂಡು ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿ, ಒಳ್ಳೆಯ ನಡೆನುಡಿಗಳಿಂದ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಎಚ್ಚರವನ್ನು ಹೊಂದಿರುವುದು;

ನುಡಿ+ಎಲ್ಲ; ನುಡಿ=ಮಾತು/ಸೊಲ್ಲು; ಎಲ್ಲ=ಸಕಲ/ಸಮಗ್ರ;

ತತ್ವ=ದಿಟ/ಸತ್ಯ/ವಾಸ್ತವವನ್ನು ಒಳಗೊಂಡಿರುವ ವಿಚಾರ/ಸಂಗತಿ; ನುಡಿಯೆಲ್ಲ ತತ್ವ=ಆಡಿದ ಮಾತುಗಳು ವಾಸ್ತವದ ಸಂಗತಿಗಳಿಂದ ಕೂಡಿರುತ್ತವೆ;

ನೋಡು=ಕಾಣು/ತಿಳಿ; ತಾ=ತಾನು/ವ್ಯಕ್ತಿಯು; ಮರೆ=ಕಡೆಗಣಿಸು/ತಿರಸ್ಕರಿಸು/ನೆನಪಿಸಿಕೊಳ್ಳದಿರು; ಮರೆದಡೆ=ಮರೆತರೆ;

ತನ್ನ ತಾ ಮರೆತಡೆ=ನಿಸರ‍್ಗ ಮತ್ತು ಸಮಾಜ ತನ್ನ ನಡೆನುಡಿಗಳನ್ನು ರೂಪಿಸುತ್ತಿದೆಯೆಂಬ ವಾಸ್ತವವನ್ನು ಮರೆತರೆ/ಕಡೆಗಣಿಸಿದರೆ; ಮಾಯೆ=ಮಯ್ ಮನಗಳಲ್ಲಿ ಬಯಕೆಗಳನ್ನು ಕೆರಳಿಸಿ ತಮ್ಮತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು;

ನುಡಿಯೆಲ್ಲಾ ಮಾಯೆ=ವ್ಯಕ್ತಿಯು ಆಡಿದ ನುಡಿಯೆಲ್ಲವೂ ವಾಸ್ತವಕ್ಕೆ ದೂರವಾಗಿರುತ್ತವೆ. ಇಂತಹ ಮಾತುಗಳಿಂದಾಗಿ ವ್ಯಕ್ತಿಯ ಬದುಕು ಹಲವು ಬಗೆಯ ಸಂಕಟ/ದುರಂತಗಳಿಗೆ ಗುರಿಯಾಗುತ್ತದೆ; ನೋಡಾ=ಕಂಡೆಯಾ/ತಿಳಿದಿರುವೆಯಾ;

ಲೋಕದಲ್ಲಿನ ವಾಸ್ತವ ಸಂಗತಿಗಳನ್ನು ಅರಿತುಕೊಂಡು ವ್ಯಕ್ತಿಯು ಆಡುವ ಮಾತುಗಳು ತನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಒಳಿತನ್ನು ಉಂಟುಮಾಡುತ್ತವೆ. ಈ ವಾಸ್ತವವನ್ನು ಅರಿಯದೆ ಆಡುವ ಮಾತುಗಳು ಬದುಕನ್ನು ಗೊಂದಲಕ್ಕೆ ಈಡುಮಾಡಿ ಕೇಡನ್ನುಂಟುಮಾಡುತ್ತವೆ.

ನಿರ್ಣಯವನರಿಯದ ಮನವೆ
ದುಗುಡವನಾಹಾರಗೊಂಡೆಯಲ್ಲಾ. (45-141)

( ನಿರ್ಣಯ+ಅನ್+ಅರಿಯದ ; ನಿರ್ಣಯ=ಯಾವುದೇ ಒಂದು ಸಂಗತಿ/ವಿಚಾರ/ಆಗುಹೋಗುಗಳ ಬಗ್ಗೆ ಏನನ್ನು ಮಾಡಬೇಕು ಇಲ್ಲವೇ ಮಾಡಬಾರದು ಎಂಬುದನ್ನು ತೀರ‍್ಮಾನಿಸುವುದು ; ಅರಿ=ತಿಳಿ ; ಅರಿಯದ=ತಿಳಿಯಲಾಗದ/ಗೊತ್ತುಪಡಿಸಿಕೊಳ್ಳಲಾಗದ; ಮನ=ಮನಸ್ಸು;

ನಿರ್ಣಯವನರಿಯದ ಮನ=ವ್ಯಕ್ತಿಯ ದಿನನಿತ್ಯದ ವ್ಯವಹಾರಗಳಲ್ಲಿ ತೊಡಕು/ಸಮಸ್ಯೆ/ಗೊಂದಲ

ಉಂಟಾದಾಗ, ಅದನ್ನು ಹೇಗೆ ಪರಿಹರಿಸಿಕೊಂಡು ಮುನ್ನಡೆಯಬೇಕು ಎಂಬುದನ್ನು ನಿಶ್ಚಯಿಸಲಾಗದೆ, ಇಬ್ಬಗೆಯಲ್ಲಿ ಚಂಚಲತೆಯಿಂದ ಮನಸ್ಸು ತೊಳಲಾಡುವುದು;

ದುಗುಡ+ಅನ್+ಆಹಾರ+ಕೊಂಡೆ+ಅಲ್ಲಾ ; ದುಗುಡ=ಕಳವಳ/ತಳಮಳ/ತಲ್ಲಣ/ಆತಂಕ/ಉಮ್ಮಳ ; ಆಹಾರ=ಕೂಳು/ಅನ್ನ/ಉಣ್ಣುವ ತಿನ್ನುವ ಕುಡಿಯುವ ವಸ್ತು ; ಕೊಳ್=ತೆಗೆದುಕೊ/ಸ್ವೀಕರಿಸು/ಪಡೆಯುವುದು; ಅಲ್ಲಾ=ಅಲ್ಲವೇ ; ಕೊಂಡೆಯಲ್ಲಾ=ಪಡೆದುಕೊಂಡೆಯಲ್ಲವೇ/ತೆಗೆದುಕೊಂಡೆಯಲ್ಲವೇ; ” ಆಹಾರಗೊಂಡೆ “ ಎಂಬ ಪದಕಂತೆಯು “ ಗುರಿಯಾದೆ/ಹೊಂದಿದೆ/ನಿನ್ನದಾಗಿಸಿಕೊಂಡೆ “ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು;

ದುಗುಡವನಾಹಾರಗೊಂಡೆ=ಮಾನಸಿಕ ಒತ್ತಡಕ್ಕೆ ಒಳಗಾಗಿ ಆತಂಕ/ತಲ್ಲಣ/ಆಕ್ರೋಶ/ಹೆದರಿಕೆ/ಕಳವಳದ ಒಳಮಿಡಿತಗಳಿಂದ ತೊಳಲಾಡುತ್ತಿರುವೆ;

ಜೀವನದಲ್ಲಿ ಯಾವುದೇ ಬಗೆಯ ಅಡೆತಡೆಗಳು ಉಂಟಾದಾಗ ವ್ಯಕ್ತಿಯು ಕಂಗಾಲಾಗಿ ಹೆದರಿ ಮುದುಡಿಕೊಳ್ಳದೆ, ಕೆಚ್ಚು ಮತ್ತು ವಿವೇಕದಿಂದ ಸಮಸ್ಯೆಯನ್ನು ಎದುರಿಸಿ ಮುನ್ನಡೆಯಬೇಕು. ಇಲ್ಲದಿದ್ದರೆ ಮಾನಸಿಕ ಒತ್ತಡಕ್ಕೆ ಒಳಗಾಗಿ ವ್ಯಕ್ತಿಯು ನಿರಂತರವಾದ ಸಂಕಟದಿಂದ ನರಳತೊಡಗುತ್ತಾನೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *