‘ದೇವರು ವರವನು ಕೊಟ್ರೆ…’

.

ವರ, boon

‘ದೇವರು ವರವನು ಕೊಟ್ರೆ  ನಾ ನಿನ್ನೆ ಕೋರುವೆ ಚೆಲುವೆ…’ – ಇದು ಒಂದು ಸಿನಿ ಹಾಡಿನ ಸಾಲು.

ಇಲ್ಲ, ಕಂಡಿತ ಚೆಲುವೆಯನು ಕೋರುವ ವಯಸ್ಸನ್ನು ದಾಟಿ ಬಂದಿದ್ದೇನೆ, ಸಂಸಾರವೆಂಬ ಸಾಗರದ ಅಲೆಗಳ ಬಡಿತಕ್ಕೆ ಎದೆ ಕೊಟ್ಟು ನಿಂತು ಗಟ್ಟಿಯಾಗಿದ್ದೇನೆ. ಹೆಬ್ಬಂಡೆಯಾಗಿದ್ದೇನೆ.‌ ದೇವರು ಎದುರಿಗೆ ಬಂದು ವರವನು ಕೊಡುವುದಾದ್ರೆ ನಮ್ಮೂರು ಚೆಲುವಾಗಿರಿಸಲು ಎಲ್ಲರಿಗೂ ಬುದ್ದಿ, ಕಾಳಜಿ, ಜವಾಬ್ದಾರಿ ಕೊಡಲಿ ಎಂದು ಬೇಡುತ್ತೇನೆ. ಏಕೆಂದರೆ ನಿತ್ಯ ನಾನು ಮನೆಯಿಂದ ಹೊರ ಬಿದ್ದ ಕೂಡಲೆ ನನಗೆ ಸ್ವಾಗತ ಮಾಡುವುದು ರಸ್ತೆಯ ಇಕ್ಕೆಲಗಳಲ್ಲೂ ಬೇಕಾಬಿಟ್ಟಿ ಬಿಸಾಡಿದ ಕಸ, ಕಡ್ಡಿ, ಪ್ಲಾಸ್ಟಿಕ್ ಚೀಲ, ಕೊಳೆತ ಹಣ್ಣು-ತರಕಾರಿ ಮುಂತಾದವು. ನಮ್ಮ ಕಾಲೋನಿಗಳನ್ನ, ನಮ್ಮ ರಸ್ತೆಗಳನ್ನ, ನಮ್ಮ ಊರುಗಳನ್ನ ನಾವು ಚೊಕ್ಕವಾಗಿಡಲು ನಮಗೆ ಕನಿಶ್ಟ ಪ್ರಗ್ನೆ ಕೊಡು ಓ ದೇವರೆ ಎಂದು ಕೇಳುತ್ತೇನೆ.

ಬೇಸಿಗೆ ಬಂದರೆ ಸಾಕು ಕುಡಿಯುವ ನೀರಿಗೆ ಎಲ್ಲೆಲ್ಲೂ ಹಾಹಾಕಾರ. ನಾವು ಲ್ಯಾಬ್ ಗಳಲ್ಲಿ  ರಾಸಾಯನಿಕವನ್ನು ತಯಾರಿಸಿದಂತೆ ನಮ್ಮ ಕುಡಿಯುವ ನೀರನ್ನು ತಯಾರಿಸಲಾಗದು. ಪ್ರಕ್ರುತಿಯಲ್ಲಿ ಸಿಗುವ H2O ಅನ್ನೇ (ನೀರು) ನಾವು ಕುಡಿಯಲು ಬಳಸಬೇಕು. ಬೂಮಿ ತಂತಾನೆ ನೀರನ್ನು ತಯಾರಿಸಿಕೊಳ್ಳುವ ಕಾರ‍್ಕಾನೆ ಇಟ್ಟುಕೊಂಡಿಲ್ಲ. ನಾವು ನಮ್ಮ ಸ್ವಾರ‍್ತಕ್ಕೆ ಮರಗಿಡಗಳನ್ನು ಕಡಿದು, ಕಾಡು ಬೆಟ್ಟ ಗುಡ್ಡಗಳನ್ನು ಬೋಳು ಮಾಡಿ, ಅಲ್ಲಿ ನಮ್ಮ ಲಾಬಕ್ಕಾಗಿ ಕಾಪಿ ಟೀ ರಬ್ಬರ್ ಗಿಡಗಳನ್ನು ವ್ಯಾಪಕವಾಗಿ ಬೆಳೆಸುವುದು, ಮೋಜು ಮಸ್ತಿಗಾಗಿ ರೆಸಾರ‍್ಟಗಳನ್ನು ಮಾಡುವುದು, ಅವೈಗ್ನಾನಿಕ ಗಣಿಗಾರಿಕೆ ಮಾಡುವುದು – ಇವೆಲ್ಲ ನಾವು ಪ್ರಕ್ರುತಿಗೆ ಮಾಡುತ್ತಿರುವ ಅಪಚಾರ.

ಪರಿಸ್ತಿತಿ ಹೀಗಿರುವಾಗ, ಮೋಡಗಳನ್ನು ತಡೆದು ಮಳೆಯನ್ನು ಸುರಿಸಲು ಬೆಟ್ಟ ಗುಡ್ಡ, ದಟ್ಟ ಕಾಡು, ಮರಗಿಡಗಳು ಇಲ್ಲದಿರೆ ದರೆಯ ಒಡಲು ಜಲವನ್ನು ಹೇಗೆ ತುಂಬಿಕೊಳ್ಳಬೇಕು? ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಅತಿ ಹೆಚ್ಚಾಗಿ ಅತಿವ್ರುಶ್ಟಿ-ಅನಾವ್ರುಶ್ಟಿಗಳಂತಹ ಅವಗಡಗಳನ್ನು ಮನುಶ್ಯ-ಪ್ರಾಣಿ-ಪಕ್ಶಿ ಸಂಕುಲಗಳು ಎದುರಿಸುವಂತಾಗಿದೆ. ಹಾಗೇನಾದರೂ ಆ ಚೆಲುವ ದೇವರು ಪ್ರತ್ಯಕ್ಶನಾಗಿ ವರ ಬೇಡಲು ಕೇಳಿದರೆ ಈ ಅಲ್ಪ ಮಾನವನ ಸ್ವಾರ‍್ತ ಬುದ್ದಿಗೆ ಸರ‍್ಜರಿ ಮಾಡಿ ಸುಬುದ್ದಿ ಕೊಡು, ವಿವೇಕ ತುಂಬಿ ಪ್ರಕ್ರುತಿಯನ್ನು ಕಾಪಾಡುವ ಬುದ್ದಿ ಕೊಟ್ಟು ಸರ‍್ವ ಪ್ರಾಣಿ ಪಕ್ಶಿ, ಮನುಶ್ಯ ಸಂಕುಲಗಳನು ಉಳಿಸುವಂತೆ ಪ್ರಗ್ನೆ ತುಂಬು ಮತ್ತು ನೀರನ್ನು ಅತಿಯಾಗಿ ಚೆಲ್ಲಿ ಹಾಳು ಮಾಡದೆ ಎಚ್ಚರದಿಂದ ಬಳಕೆ ಮಾಡುವ ವಿವೇಚನೆ ಕೊಡು ಎಂದು ಕೇಳಿಕೊಳ್ಳುತ್ತೇನೆ.

ಅತಿಯಾದ ನಗರೀಕರಣದಿಂದ ನಗರಗಳ ಮೇಲೆ ಒತ್ತಡ ಹೆಚ್ಚಾಗಿ ನಗರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಕೇವಲ ನಗರಗಳನ್ನೆ ಮತ್ತೆ ಮತ್ತೆ ಅಬಿವ್ರುದ್ದಿ ಮಾಡುವ ಅವೈಗ್ನಾನಿಕ ಯೋಜನೆಗಳನ್ನು ಕೈ ಬಿಟ್ಟು, ದೇಶದ ಇತರೆ ಸಣ್ಣ ಸಣ್ಣ ನಗರ, ಪಟ್ಟಣ, ಜಿಲ್ಲೆ, ತಾಲ್ಲೂಕು, ಮತ್ತು ಹಳ್ಳಿಗಳನ್ನು ಅಬಿವ್ರುದ್ದಿ ಮಾಡುವ ಅರಿವು ನಮ್ಮನಾಳುವ ನಾಯಕರಿಗೆ ಕೊಡು, ಜನರು ನಗರಕ್ಕೆ ಕೆಲಸಗಳನ್ನು ಹುಡುಕಿಕೊಂಡು ವಲಸೆ ಹೋಗುವುದನ್ನು  ತಪ್ಪಿಸುವಂತಹ ಯೋಜನೆ ರೂಪಿಸುವ ಬುದ್ದಿ ಕೊಡು ಎಂದು ಆ ದೇವರಲ್ಲಿ ಕೇಳುತ್ತೇನೆ.

ದೇಶದ ಎಲ್ಲ ಜನರಿಗೂ ಒಳ್ಳೆಯ, ಗುಣಮಟ್ಟದ ವಿದ್ಯೆಯನ್ನು ದಯಪಾಲಿಸು, ವಿದ್ಯೆಯನ್ನು ಮಾರಾಟದ ಸರಕಾಗಿ ಮಾಡಿಕೊಂಡು ಬಣ್ಣ ಬಣ್ಣದ ಜಾಹೀರಾತು ಕೊಟ್ಟು ವ್ಯಾಪಾರೀಕರಣವಾಗಿಸಿರುವುದನ್ನು ನಿಲ್ಲಿಸು, ಉತ್ತಮ ವಿದ್ಯೆಯಿಂದ ಉತ್ಕ್ರುಶ್ಟ  ಪ್ರಜೆಗಳನ್ನು ದೇಶಕ್ಕೆ ದಯಾಪಾಲಿಸು ಎಂದು ವರ ಕೋರುತ್ತೇನೆ. ಮುಶ್ಕರದ ಹೆಸರಲ್ಲಿ ಸಾರ‍್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿ ನಮ್ಮ ತೆರಿಗೆ ಹಣವನ್ನು ನಾವೇ ಪೋಲು ಮಾಡುವ ಜನರಿಗೆ ಅರಿವು ನೀಡಿ ಸರಿದಾರಿಯಲ್ಲಿ ಹರತಾಳ ಮಾಡಲು ಬುದ್ದಿ ಕೊಡು ಎಂದು ಆ ಪ್ರತ್ಯಕ್ಶವಾಗುವ ದೇವರಲ್ಲಿ‌ ಪ್ರಾರ‍್ತಿಸಿಕೊಳ್ಳುತ್ತೇನೆ.

ದೇವರು ಪ್ರತ್ಯಕ್ಶವಾಗಿ ವರವನು ಕೋರಲು ಕೇಳಿದರೆ ಕೋರುವ ಪಟ್ಟಿ ಬಹಳ ಉದ್ದವಿದೆ. ಎಲ್ಲ ಜನರಿಗೆ ಒಳಿತಾಗುವ ವರವನ್ನೆ ಕೊಡಲು ದೇವರನ್ನು ಕೇಳುವೆ. ಏಕೆಂದರೆ ಊರು, ದೇಶ ಸ್ವಸ್ತವಾಗಿದ್ದರೆ ಜನರು ನೆಮ್ಮದಿಯಾಗಿ ಬದುಕಬಹುದು ಮತ್ತು ನಾವು ಮುಂದಿನ ಪೀಳಿಗೆಗೆ ಸ್ವಸ್ತ ನೆಲ, ಜಲ, ಪ್ರಕ್ರುತಿಯನ್ನು ಬಿಟ್ಟು ಹೋಗಬಹುದು. ಅಲ್ಲವೇ!?

( ಚಿತ್ರಸೆಲೆ : jagannathpurihkm.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: