ಮೆಕ್ಸಿಕೋದ ರಹಸ್ಯ ಬೀಚ್
ಸಾಮಾನ್ಯವಾಗಿ ಕಡಲು ವಿಸ್ತಾರವಾಗಿರುತ್ತದೆ. ಸಮುದ್ರ ಬೂಮಿಯನ್ನು ಸಂಪರ‍್ಕಿಸುವ ಜಾಗದ ಉದ್ದಕ್ಕೂ ಕಡಲ ಕಿನಾರೆ ಹರಡಿರುತ್ತದೆ. ಇಂತಹ ಕಡಲ ಕಿನಾರೆ ಗುಪ್ತವಾಗಿರಲು ಸಾದ್ಯವೆ? ರಹಸ್ಯ ಕಡಲ ಕಿನಾರೆ ಇದೆ ಎಂದರೆ ಕಂಡಿತಾ ಆಶ್ಚರ‍್ಯವಾಗುತ್ತದಲ್ಲವೆ?
ಮೆಕ್ಸಿಕೋದ ಮರಿಯೆಟಾ ದ್ವೀಪ ಸಮೂಹಗಳಲ್ಲಿ ಪೋರ‍್ಟೋ ವಲ್ಲಾರ‍್ಟಾ ಒಂದು ದ್ವೀಪ. ಇದರ ಪಶ್ಚಿಮಕ್ಕೆ ಜನವಸತಿಯಿಲ್ಲದ ದ್ವೀಪದಲ್ಲಿ ಈ ಗುಪ್ತ ಕಡಲ ಕಿನಾರೆ (hidden beach) ಇದೆ. ಸ್ತಳೀಯ ಬಾಶೆಯಲ್ಲಿ ಈ ಸ್ತಳವನ್ನು ಕರೆಯುವುದು ‘ಪ್ಲಾಯಾ ಡೆಲ್ ಅಮೋರ‍್’ ಎಂದು. ಇದನ್ನು ಬಿಳಿ ಮರಳಿನ ಪುಟ್ಟ ಸ್ವರ‍್ಗ ಎಂದೂ ಗುರುತಿಸಲಾಗುತ್ತದೆ. ಮರಳಿಗೆ ಜಳಕ ಮಾಡಿಸಿದಂತೆ ಕಂಡುಬರುವ ಈ ಕಿನಾರೆಯಲ್ಲಿನ ಪೆಸಿಪಿಕ್ ಸಾಗರದ ನೀರು ಸ್ಪಟಿಕದಂತೆ ಸ್ವಚ್ಚ ಹಾಗೂ ತಿಳಿಯಾಗಿದೆ.
ಪ್ರಾಚೀನ ಜ್ವಾಲಾಮುಕಿಯಿಂದ ಉಂಟಾದ ಬ್ರುಹತ್ ಕುಳಿ ಈ ಗುಪ್ತ ಕಡಲ ಕಿನಾರೆಯ ಮೂಲ. ಹೊರಗಿನಿಂದ ನೋಡಿದರೆ ಸಂಪೂರ‍್ಣವಾಗಿ ಇದು ಅಗೋಚರ. ಗುಪ್ತ ಕಿನಾರೆಯನ್ನು ತಲುಪಲು ಸಾಗರದ ಕಡೆಯಿಂದ ಮಾತ್ರ ಸಾದ್ಯ. ಸಾಗರದಲ್ಲಿ ಕಡಿಮೆ ಏರಿಳಿತವಿರುವ ಸಮಯದಲ್ಲಿ ಕೇವಲ ಆರು ಮೀಟರ್ ನಶ್ಟು ಕಿರಿದಾದ ಜಾಗವಿದ್ದು ಅದರ ಮೂಲಕ ಗುಪ್ತ ಕಡಲ ಕಿನಾರೆ ತಲುಪಲು ಅವಕಾಶವಿದೆ. ಎರಡು ಬಂಡೆಯ ನಡುವೆ ಇರುವ ಕಾಲುವೆಯಂತಹ ಸುರಂಗ ಮಾರ‍್ಗದಲ್ಲಿ ಈಜುತ್ತಾ ಅತವಾ ಸಣ್ಣ ದೋಣಿಯ ಮೂಲಕ ಹೋಗಿ ಈ ಕಡಲ ಬೀಚ್ಅನ್ನು ತಲುಪಬಹುದು.
ಸಹಸ್ರಾರು ವರ‍್ಶಗಳ ಹಿಂದೆ ತೀವ್ರವಾದ ಸಾಗರ ಗರ‍್ಬದ ಜ್ವಾಲಾಮುಕಿಯ ಸ್ಪೋಟದಿಂದಾಗಿ ಈ ದ್ವೀಪ ಸಮೂಹವು ರೂಪುಗೊಂಡಿರಬಹುದು ಎಂದು ಬೂಶಾಸ್ತ್ರಗ್ನರು ಅಬಿಪ್ರಾಯ ವ್ಯಕ್ತಪಡಿಸಿದ್ದಾರೆ. 20ನೆಯ ಶತಮಾನದ ಆದಿಯಲ್ಲಿ ಈ ದ್ವೀಪಗಳು ನಿರ‍್ಜನವಾಗಿದ್ದವು. ನಿರ‍್ಜನವಾಗಿದ್ದ ಕಾರಣ ಮೆಕ್ಸಿಕನ್ ಸರ‍್ಕಾರವು ವಿವಿದ ಮಿಲಿಟರಿ ವ್ಯಾಯಾಮಗಳಿಗೆ, ಪರೀಕ್ಶೆಗಳಿಗೆ ಈ ದ್ವೀಪವನ್ನು ಬಳಕೆ ಮಾಡಿಕೊಂಡಿತ್ತು. ಆಗ ಪರೀಕ್ಶಾರ‍್ತವಾಗಿ ನಡೆಸಿದ ಬಾಂಬ್ ಸ್ಪೋಟದಿಂದ ಅನೇಕ ಕಲ್ಲಿನ ಗುಹೆಗಳು, ಕಂಬಗಳು ನಿರ‍್ಮಾಣವಾಗಿರಬಹುದು. ಬ್ರುಹತ್ ಕುಳಿ ಸಹ ಬಾಂಬ್ ಸ್ಪೋಟದ ಪಲಿತಾಂಶ ಎನ್ನುತ್ತದೆ ಒಂದು ಸಿದ್ದಾಂತ. ಆದರೆ ಈ ಸಿದ್ದಾಂತವನ್ನು ಸಮರ‍್ತಿಸಲು ಯಾವುದೇ ಪೂರಕವಾದ ದಾಕಲೆಗಳು ಲಬ್ಯವಿಲ್ಲ.
1960ರ ದಶಕದಲ್ಲಿ, ವಿಗ್ನಾನಿ ಜಾಕ್ವೆಸ್ ಕೂಸ್ಟಿಯೊ, ಈ ದ್ವೀಪಗಳಲ್ಲಿ ನಡೆಯುತ್ತಿರುವ ಹಾನಿಕಾರಕ ಮಾನವ ಚಟುವಟಿಕೆಯ ವಿರುದ್ದ ಪ್ರತಿಬಟನೆ ನಡೆಸಿದರು. ಇಲ್ಲಿನ ಅಪಾರ ನೈಸರ‍್ಗಿಕ ಸಂಪತ್ತನ್ನು ಕಾಪಾಡುವತ್ತ ಸರ‍್ಕಾರ ಗಮನ ಹರಿಸಬೇಕೆಂದು ಮೆಕ್ಸಿಕನ್ ಅದಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಇದರ ಪರಿಣಾಮ, ನಾಲ್ಕು ದಶಕಗಳ ನಂತರ ಅಂತಿಮವಾಗಿ ಮೆಕ್ಸಿಕನ್ ಸರ‍್ಕಾರವು 2005ರಲ್ಲಿ ಇದನ್ನು ರಾಶ್ಟ್ರೀಯ ಉದ್ಯಾನವನ ಎಂದು ಗೋಶಿಸಿತು. ಇದನ್ನು ‘ಪಾರ‍್ಕ್ ನ್ಯಾಶನಲ್ ಇಸ್ಲಾಸ್ ಮರಿಯೆಟಾಸ್’ ಎಂದು ಹೆಸರಿಸಲಾಗಿದೆ.
ರಾಶ್ಟ್ರೀಯ ಉದ್ಯಾನವನದ ಅನ್ವಯ ಪ್ರವಾಸಿಗರಿಗೆ ಮಾತ್ರ ಇಲ್ಲಿ ಅವಕಾಶವಿದೆ. ಇಲ್ಲಿ ಈಜಲು, ಕಯಾಕಿಂಗ್, ನೇಸರನ ಬಿಸಿಲಿನಡಿ ಮೈ ಕಾಯಿಸಲು(Sunbathing) ಮತ್ತು ಇತರೆ ಮನರಂಜನೆಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಈ ದ್ವೀಪದ ಸುತ್ತ ಮುತ್ತ ಬೇಟೆಯಾಡುವುದನ್ನು ಹಾಗೂ ಮೀನುಗಾರಿಕೆಯನ್ನು ಸಹ ಸಂಪೂರ‍್ಣವಾಗಿ ನಿಶೇದ ಮಾಡಲಾಗಿದೆ. ಪ್ರವಾಸಿಗರು ಪರವಾನಗಿ ಪಡೆದು ಈ ದ್ವೀಪವನ್ನು ಪ್ರವೇಶಿಸಬಹುದು.
(ಮಾಹಿತಿ ಮತ್ತು ಚಿತ್ರ ಸೆಲೆ: mybestplace.com)
ಇತ್ತೀಚಿನ ಅನಿಸಿಕೆಗಳು