ಇಲ್ಲೊಂದು ಪಾಪ್‍ ಕಾರ‍್ನ್ ಬೀಚ್!

ಕೆ.ವಿ. ಶಶಿದರ.

 

ಪಾಪ್‍ ಕಾರ‍್ನ್ ಬೀಚ್, Pop Corn Beach

ಯಾವುದೇ ಮಾಲ್‍ನಲ್ಲಿ ಚಲನಚಿತ್ರ ನೋಡಲು ಹೋದಾಗ ಮಕ್ಕಳಾದಿಯಾಗಿ ಎಲ್ಲರೂ ವಿರಾಮದ ವೇಳೆ ಕರೀದಿಸುವುದು ಪಾಪ್ ಕಾರ‍್ನ್ ಅನ್ನು. ಕೇವಲ ಕೆಲವೇ ಗ್ರಾಂ ಪಾಪ್ ಕಾರ‍್ನ್ ಗೆ ನೂರಾರು ರುಪಾಯಿ ಸುರಿಯಲು ಇಂದಿನ ಯುವಜನಾಂಗ ಹಿಂಜರಿಯುವುದಿಲ್ಲ. ಮಾಲ್‍ನ ಹೊರಗಡೆ ಅಶ್ಟೇ ಪ್ರಮಾಣದ ಪಾಪ್ ಕಾರನ್ಗೆ ಹತ್ತಾರು ರೂಪಾಯಿ ಮಾತ್ರ!!! ಇದೊಂದು ಹಗಲು ದರೋಡೆ. ಇದರ ಬಗ್ಗೆ ಏಕೆ ಹೇಳ ಹೊರಟೆ ಎಂದರೆ, ಸ್ಪೇನಿನಲ್ಲೊಂದು ಕಡಲ ತೀರವಿದೆ. ಅಲ್ಲಿನ ಪ್ರತಿ ಮರಳಿನ ಕಣ ಸಹ ಪಾಪ್ ಕಾರ‍್ನ್‍ನನ್ನೇ ಹೋಲುತ್ತದೆ ಅದಕ್ಕಾಗಿ.

ಸ್ಪೇನಿನ ಕ್ಯಾನರಿ ದ್ವೀಪಗಳಲ್ಲಿ ಎರಡನೆಯ ದೊಡ್ಡ ದ್ವೀಪ ಪ್ಯೂವೆರತೆವೆಂತೂರ (Fuerteventura). ಈ ದ್ವೀಪವು ವಿಶ್ವದ ಅತ್ಯಂತ ಅದ್ಬುತ ಆಕರ‍್ಶಣೆಗಳಲ್ಲಿ ಒಂದಾಗಿದೆ. ಇದರ ಕಡಲ ತೀರ ಬಹಳ ಹೆಸರುವಾಸಿಯಾಗಿರುವುದು ಪಾಪ್ ಕಾರನ್ ಬೀಚ್ ಎಂದೇ. ಬೀಚಿನಲ್ಲಿ ಹರಡಿರುವ ಎಲ್ಲಾ ಮರಳು ಪಾಪ್ ಕಾರ‍್ನ್ ರೀತಿಯಲ್ಲೇ ಇದೆ. ಗೋಕರ‍್ಣದ ಬಳಿ ಓಂ ಆಕಾರದಲ್ಲಿರುವ ಬೀಚ್ ಅನ್ನು ‘ಓಂ ಬೀಚ್’ ಎಂದು ಕರೆಯುವಂತೆ, ಬೀಚುಗಳು ಹೋಲುವ ವಸ್ತುಗಳ ಹೆಸರಿನಿಂದ ಗುರುತಿಸುವ ಹಲವಾರು ಬೀಚ್‍ಗಳು ವಿಶ್ವಾದಾದ್ಯಂತ ಇವೆ. ಅವುಗಳಲ್ಲಿ ಹಲವು ಸಾಕಶ್ಟು ಪ್ರವಾಸಿಗರನ್ನು ಆಕರ‍್ಶಿಸುತ್ತದೆ.

ಈ ಬೀಚ್, ಮಿಲಿಯಗಟ್ಟಲೆ ಬಿಳಿ ಪಾಪ್ ಕಾರ‍್ನ್ಗಳಿಂದ ಆವ್ರುತವಾದಂತೆ ಕಣ್ಣಿಗೆ ಕಾಣುತ್ತದೆ. ‘ಅಹಾ….. ಎಶ್ಟು ಚಂದ ಇದೆ, ಇದನ್ನು ಸವಿಯುವ’ ಎಂದು ಅಪ್ಪಿ ತಪ್ಪಿ ಸಹ ಬಾಯಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಬೇಡಿ. ಹಾಕಿಕೊಂಡಲ್ಲಿ ಹಲ್ಲುಗಳು ಜೋಪಾನ!!! ಹವಳದ ಕಲ್ಲುಗಳನ್ನು ಬಾಯಿಗೆ ಹಾಕಿಕೊಂಡಂತೆ ಆಗುತ್ತದೆ. ಅಗಿಯಲಾಗಲಿ, ಪಾಪ್ ಕಾರ‍್ನ್ ಸ್ವಾದ ಅನುಬವಿಸಲಾಗಲಿ ಇದರಿಂದ ಸಾದ್ಯವಿಲ್ಲ 🙂

ಕೊರಾಲೆಜೊದ (ಕ್ಯಾನರಿ ದ್ವೀಪಗಳಲ್ಲಿ ಒಂದಾದ ಪ್ಯೂವೆರತೆವೆಂತೂರಾದ ಉತ್ತರ ತುದಿಯಲ್ಲಿರುವ ಪುಟ್ಟ ಪಟ್ಟಣ) ವಾಯುವ್ಯ ದಿಕ್ಕಿನಲ್ಲಿರುವ ಕೊಳಕು ಹಾದಿಯ ಕೊನೆಯಲ್ಲಿ ಇರುವ ಈ ಪಾಪ್ ಕಾರ‍್ನ್ ಬೀಚ್, ಈಜು ಮತ್ತು ಸೂರ‍್ಯ ಸ್ನಾನಕಾಗಿ ಇರುವ ಸ್ತಳವಲ್ಲ. ಪುರತೆವೆಂತೂರಾಕ್ಕೆ ಬೇಟಿ ನೀಡಿದಾಗ ನೋಡಲೇಬೇಕಾದ ಸ್ತಳಗಳ ಪಟ್ಟಿಯಲ್ಲಿ ಸೇರಿಲ್ಲ. ಏಕೆಂದರೆ, ಈ ಬೀಚ್ನಲ್ಲಿರುವ ಕಲ್ಲಿನ ಪಾಪ್ ಕಾರ‍್ನ್ ಮರಳಿನಶ್ಟು ಆರಾಮದಾಯಕವಲ್ಲ. ಆದರೆ ಇದು ನೋಡಲೇಬೇಕಿರುವ ಸ್ತಳ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಪಾಪ್ ಕಾರ‍್ನ್ ಬೀಚ್ ಬಹಳ ವರುಶಗಳಿಂದ ಅಸ್ತಿತ್ವದಲ್ಲಿದೆ ಎಂದು ಸ್ತಳೀಯರು ಹೇಳುತ್ತಾರೆ. ಇನ್ಸ್ಟಾಗ್ರಾಂನಲ್ಲಿ ಇದರ ಚಿತ್ರಗಳು ಪ್ರಕಟವಾದ ಮೇಲೆ, ಅಂತರ‍್ಜಾಲದಿಂದ ಈ ಕಡಲ ತೀರದ ಬಗ್ಗೆ ವಿಶಯವು ಬೇರೆ ದೇಶಗಳಲ್ಲೂ ತಿಳಿಯತೊಡಗಿತು. ವಿಶ್ವದ ಬೇರೆಲ್ಲಾ ಬೀಚ್‍ಗಳಿಗಿಂತಾ ಇದು ಅನನ್ಯವಾದ ಕಾರಣ ಇದರ ವೀಕ್ಶಣೆಗೆ ಪ್ರವಾಸಿಗರು ಮುಗಿಬೀಳಲು ಕಾರಣವಾಯಿತು.

( ಮಾಹಿತಿ ಮತ್ತು ಚಿತ್ರ ಸೆಲೆ : odditycentral.com, maritimeherald.com, dailymail.co.uk )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಬಹಳ ಒಳ್ಳೆಯ ಬರಹ..

ಅನಿಸಿಕೆ ಬರೆಯಿರಿ: