ಅಲ್ಲಮನ ವಚನಗಳ ಓದು – 15ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಬಿರುಗಾಳಿ ಬೀಸಿ ಮರ ಮುರಿವಂತಹ
ಸುಳುಹ ಸುಳಿಯದೆ
ತಂಗಾಳಿ ಪರಿಮಳದೊಡಗೂಡಿ
ಸುಳಿವಂತೆ ಸುಳಿಯಬೇಕು
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು
ಸುಳಿದು ಜಂಗಮವಾಗಲರಿಯದ
ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಾ.

ಬಹಿರಂಗದಲ್ಲಿ ಶರಣರಂತೆ ಮತ್ತು ಜಂಗಮರಂತೆ ಉಡುಗೆ ತೊಡುಗೆಗಳನ್ನು ತೊಟ್ಟು, ಸಮಾಜದ ಕಣ್ಣಿನಲ್ಲಿ ಒಳ್ಳೆಯ ನಡೆನುಡಿಯುಳ್ಳವರಂತೆ ಕಾಣಿಸಿಕೊಳ್ಳುತ್ತ, ಅಂತರಂಗದ ಜೀವನದಲ್ಲಿ ನೀಚತನದಿಂದ ಬಾಳುತ್ತಿರುವ ವ್ಯಕ್ತಿಗಳನ್ನು ಕುರಿತು ಕಟುವಾಗಿ ಟೀಕಿಸುವುದರ ಜತೆಗೆ, ಗುರುಹಿರಿಯರಾದವರ ನಡೆನುಡಿಗಳು ಸಹಮಾನವರ ಮತ್ತು ಸಮಾಜದ ಬದುಕಿಗೆ ಒಳಿತನ್ನು ಮಾಡುವಂತಿರಬೇಕೆ ಹೊರತು ಕೇಡನ್ನು ಬಗೆಯುವಂತಿರಬಾರದು ಎಂಬ ಸಂಗತಿಯನ್ನು ‘ ಬಿರುಗಾಳಿ ಮತ್ತು ತಂಗಾಳಿ ‘ ರೂಪಕಗಳ ಮೂಲಕ ಈ ವಚನದಲ್ಲಿ ಹೇಳಲಾಗಿದೆ.

( ಬಿರುಸು+ಗಾಳಿ; ಬಿರುಸು=ಜೋರು/ವೇಗವಾಗಿ ಚಲಿಸು; ಬಿರುಗಾಳಿ=ಬಿರುಸಾಗಿ ಬೀಸುವ ಗಾಳಿ/ಜೋರಾಗಿ ಬೀಸುವ ಗಾಳಿ/ಚಂಡ ಮಾರುತ; ಬೀಸು=ಸುಳಿ/ತೀಡು/ಚಾಚು/ಪಸರಿಸು; ಮುರಿ=ತುಂಡಾಗು/ಚೂರಾಗು/ಕಡಿ/ಕತ್ತರಿಸು; ಸುಳುಹು=ಜಾಡು/ರೀತಿ/ಬಗೆ; ಸುಳಿ=ಕಾಣಿಸಿಕೊಳ್ಳು/ಗೋಚರವಾಗು/ಬೀಸುವುದು; ಸುಳಿಯದೆ=ಬೀಸದೆ;

ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ=ಮರವನ್ನು ಬುಡಸಮೇತ ಕಿತ್ತು ಎಸೆಯುವ ಬಿರುಗಾಳಿಯಂತೆ ಕಾಣಿಸಿಕೊಳ್ಳದೆ;

ತಂಗಾಳಿ=ತಣ್ಣನೆಯ+ಗಾಳಿ; ತಣ್=ತಂಪು/ಶೀತದಿಂದ ಕೂಡಿದ/ತಣ್ಣಗಿರುವ; ಪರಿಮಳದ+ಒಡನೆ+ಕೂಡಿ; ಪರಿಮಳ=ಕಂಪು/ಒಳ್ಳೆಯ ವಾಸನೆ; ಒಡನೆ=ಜತೆಯಲ್ಲಿ; ಕೂಡು=ಸೇರು; ಒಡಗೂಡಿ=ಜತೆಸೇರಿಕೊಂಡು/ಒಂದಾಗಿ; ಸುಳಿವ+ಅಂತೆ; ಸುಳಿವ=ಕಂಡುಬರುವ/ಕಾಣಿಸಿಕೊಳ್ಳವ; ಅಂತೆ=ಆ ರೀತಿಯಲ್ಲಿ/ಆ ಬಗೆಯಲ್ಲಿ; ಸುಳಿಯಬೇಕು=ಬೀಸಬೇಕು;

ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು=ನೂರಾರು ಬಗೆಯ ಮರಗಿಡಗಳಲ್ಲಿ ಅರಳಿರುವ ಹೂವುಗಳ ಕಂಪನ್ನು ತನ್ನಲ್ಲಿ ಒಳಗೊಂಡು ಸುಳಿಯುವ ತಂಗಾಳಿಯಂತೆ ಬೀಸಬೇಕು;

ಸುಳಿದಡೆ=ಕಾಣಿಸಿಕೊಂಡರೆ; ನೆಟ್ಟನೆ=ನೇರವಾಗಿ/ಚೆನ್ನಾಗಿ/ಸರಿಯಾಗಿ; ಜಂಗಮ+ಆಗಿ; ಜಂಗಮ=ಒಳ್ಳೆಯ ನಡೆನುಡಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಜನಮನದಲ್ಲಿ ಮೂಡಿಸುತ್ತ ಎಲ್ಲಿಯೂ ಒಂದೆಡೆ ನಿಲ್ಲದೆ ಸದಾಕಾಲ ಸಂಚರಿಸುತ್ತಿರುವ ಶಿವಶರಣ; ಸುಳಿಯಬೇಕು=ಕಂಡುಬರಬೇಕು;

ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು=ಜಂಗಮನಾದವನು ಒಳ್ಳೆಯ ನಡೆನುಡಿಗಳಿಂದ ಜನಸಮುದಾಯಕ್ಕೆ ಒಳಿತನ್ನು ಮಾಡುತ್ತ ಬಾಳಬೇಕು;

ನಿಂದಡೆ=ನಿಂತುಕೊಂಡರೆ; ಭಕ್ತನ್+ಆಗಿ; ಭಕ್ತ=ಜನಸಮುದಾಯಕ್ಕೆ ಒಳಿತನ್ನು ಮಾಡುವ ನಡೆನುಡಿಗಳೇ ದೇವರೆಂದು ತಿಳಿದು ಬಾಳುತ್ತಿರುವವನು;

ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು=ಶರಣನಾದವನು ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನೇ ಅನುಸರಿಸುತ್ತ ಬಾಳಬೇಕು;

ಜಂಗಮ+ಆಗಲ್+ಅರಿಯದ; ಅರಿ=ತಿಳಿ/ಕಲಿ; ಅರಿಯದ=ತಿಳಿಯದ; ಭಕ್ತನ್+ಆಗಲ್+ಅರಿಯದ; ಉಭಯ+ಭ್ರಷ್ಟ್ರರನ್+ಏನ್+ಎಂಬೆ; ಉಭಯ=ಎರಡು; ಭ್ರಷ್ಟ=ಒಳ್ಳೆಯ ನಡೆನುಡಿಯಿಲ್ಲದವನು;; ಉಭಯಭ್ರಷ್ಟರು=ಎರಡು ನೆಲೆಗಳಲ್ಲೂ ಹೀನವಾದ ನಡೆನುಡಿಯುಳ್ಳವರು. ಅಂದರೆ ಇತ್ತ ತಮ್ಮ ವ್ಯಕ್ತಿಗತ ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದಿರದೆ, ಅತ್ತ ಸಮಾಜಕ್ಕೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಗಳು; ಏನ್=ಯಾವುದು; ಎಂಬೆ=ಎನ್ನುವೆ/ಹೇಳುವೆ;

ಸುಳಿದು ಜಂಗಮವಾಗಲರಿಯದ ನಿಂದು ಭಕ್ತನಾಗಲರಿಯದ ಉಭಯಭ್ರಷ್ಟರನೇನೆಂಬೆ=ಬಹಿರಂಗದಲ್ಲಿ ಶರಣರಂತೆ ಮತ್ತು ಜಂಗಮರಂತೆ ಕಾಣಿಸಿಕೊಳ್ಳುತ್ತ, ಅಂತರಂಗದ ಜೀವನದಲ್ಲಿ ನೀಚತನದಿಂದ ಬಾಳುತ್ತಿರುವ ವ್ಯಕ್ತಿಗಳು/ ತಮ್ಮ ಮಯ್ ಮನಕ್ಕೆ ತಾವೇ ವಂಚನೆಯನ್ನು ಮಾಡಿಕೊಂಡು ಕೆಟ್ಟತನದಿಂದ ಕೂಡಿರುವ ವ್ಯಕ್ತಿಗಳು;

ಬಿರುಗಾಳಿಯು ಹುಚ್ಚೆದ್ದು ಬೀಸತೊಡಗಿದಾಗ ಹೇಗೆ ನಿಸರ‍್ಗದಲ್ಲಿನ ಮರಗಿಡಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದು ಹಾಳಾಗುತ್ತವೆಯೋ, ಅಂತೆಯೇ ಗುರು ಹಿರಿಯರು ಎನಿಸಿಕೊಂಡವರು ಜಾತಿ, ಮತ ಮತ್ತು ದೇವರ ಹೆಸರಿನಲ್ಲಿ ಕೆಟ್ಟ ಉದ್ದೇಶದಿಂದ ಆಡುವ ನುಡಿಗಳು ಮತ್ತು ಮಾಡುವ ಕೆಲಸಗಳು ಜನರ ಮನದಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ ಮತ್ತು ಹಗೆತನವನ್ನುಂಟುಮಾಡಿ, ಇಡೀ ಸಮಾಜದ ಬದುಕನ್ನೇ ದುರಂತದತ್ತ ದೂಡುತ್ತವೆ.

ಆದ್ದರಿಂದ ಸಮಾಜದಲ್ಲಿ ಜವಾಬ್ದಾರಿಯುತವಾದ ಗದ್ದುಗೆಯಲ್ಲಿರುವ ವ್ಯಕ್ತಿಗಳು ಆಡುವ ನುಡಿಗಳು ಮತ್ತು ಮಾಡುವ ಕೆಲಸಗಳು ಪರಿಮಳದಿಂದ ಕೂಡಿದ ತಂಗಾಳಿಯಂತಿರಬೇಕು. ಅಂದರೆ ಜನರ ಮನದಲ್ಲಿ ಅರಿವು, ಒಲವು ,ನಲಿವನ್ನು ಮೂಡಿಸಿ ಎಲ್ಲರೂ ಜತೆಗೂಡಿ ನೆಮ್ಮದಿಯಿಂದ ಬಾಳುವುದಕ್ಕೆ ದಾರಿ ತೋರಿಸುವಂತಿರಬೇಕು.)

( ಚಿತ್ರ ಸೆಲೆ : lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.