‘ಒನ್ಸ್ ಇನ್ ಎ ಬ್ಲೂ ಮೂನ್’ ಅಂದರೇನು?
ನಿಮ್ಮ ಕಾಲೇಜು ದಿನಗಳ ಕೊನೆಯ ದಿನ. ಎಲ್ಲರೂ ಒಟ್ಟಿಗೆ ಸೇರಿ ಬೀಳ್ಕೊಡುವ ಎಂದು ಯೋಚಿಸಿ, ಒಂದು ಕಡೆ ಸೇರುವ ಯೋಜನೆ ಹಾಕಿರುತ್ತೀರಿ. ಸಂಜೆ 5 ಗಂಟೆಗೆ ಎಲ್ಲಾ ಸೇರಬೇಕು ಎಂದು ಸಮಯವನ್ನೂ ಸಹ ನಿಗದಿ ಮಾಡಿರುತ್ತೀರಿ. ತರಗತಿಯಲ್ಲಿ ಇದ್ದ ಹತ್ತೂ ಜನ ಓದು ಮುಗಿಸಿ, ಸಂಪಾದನೆಯ ಪ್ರಪಂಚಕ್ಕೆ ಕಾಲಿಡಲು ಹೋಗುತ್ತಿರುವ ಸಮಯ. ಎಲ್ಲಾ ಸೇರಿ ಯಾವಾಗಲೂ ತಡವಾಗಿ ಬರುವ ಒಬ್ಬನಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಿಳಿಸಿರುತ್ತೀರಿ. ಅಂದಿನ ದಿನದ ಅತ್ಯಾಶ್ಚರ‍್ಯಕರ ಗಟನೆಯೆಂದರೆ, ಆತ ಅಂದು ಸಮಯಕ್ಕೆ ಸರಿಯಾಗಿರೋದು ಬಿಡಿ, ಐದು ನಿಮಿಶ ಮುಂಚೆಯೇ ಹಾಜರಾಗಿರುತ್ತಾನೆ, ಅವನನ್ನು ಆಶ್ಚರ‍್ಯದಿಂದ ಕಂಡ ಅವನ ಕಾಸಾ ಗೆಳೆಯನೊಬ್ಬ ‘ಏನಮ್ಮಾ, ಎಂದೂ ಇಲ್ಲದವ ಇಂದು ಐದು ನಿಮಿಶ ಮುಂಚೆ” ಎಂದು ಕಿಚಾಯಿಸುತ್ತಾನೆ. ಅವನ ಮತ್ತೊಬ್ಬ ಗೆಳೆಯ ‘ಹೌದಮ್ಮಾ ಒನ್ಸ್ ಇನ್ ಎ ಬ್ಲೂ ಮೂನ್ ಬಂದಿದ್ದಾನೆ ಅಶ್ಟೆ. ನಾಳೆಯಿಂದ ನಾಯಿ ಬಾಲ, ಡೊಂಕು” ಅಂತ ಅನ್ನುತ್ತಾನೆ.
‘ಒನ್ಸ್ ಇನ್ ಎ ಬ್ಲೂ ಮೂನ್’ – ಈ ಆಂಗ್ಲ ನುಡಿಯ ಪದಪುಂಜವನ್ನು ಕಾಲೇಜು ಹುಡುಗರು ಹುಡುಗಿಯರು ಒಂದಲ್ಲಾ ಒಂದು ಸಂದರ‍್ಬದಲ್ಲಿ ಬಳಸೇ ಇರುತ್ತಾರೆ. ಆದರೆ ಬಹಳಶ್ಟು ಜನಕ್ಕೆ ಬ್ಲೂ ಮೂನ್ ಬಗ್ಗೆ ಗೊತ್ತಿರುವುದಿಲ್ಲ. ಹಾಗಾದರೆ ನಿಜಕ್ಕೂ ನೀಲಿ ಚಂದ್ರ ಆಗಸದಲ್ಲಿ ಕಾಣಿಸಿಕೊಳ್ಳುತ್ತದೆಯೇ? ಪಿಂಕ್ ಮೂನ್, ಬ್ಲಾಕ್ ಮೂನ್, ಸೂಪರ್ ಮೂನ್ ರೀತಿಯಲ್ಲೇ ಇರಬಹುದೇ? ಎಂಬ ಪ್ರಶ್ನೆ ಕಾಡದಿರುವುದಿಲ್ಲ.
ವಿಶ್ವದಲ್ಲಿ ಬಹತೇಕ ಎಲ್ಲಾ ದೇಶದವರು ಉಪಯೋಗಿಸುವುದು ಗ್ರೆಗೇರಿಯನ್ ಕ್ಯಾಲೆಂಡರ್. ಇದರಲ್ಲಿ 12 ತಿಂಗಳುಗಳಿವೆ. ಚಂದ್ರನ ಚಲನೆಯ ಮೇಲೆ ಇರುವ ಹಿಂದೂ ಕ್ಯಾಲೆಂಡರಿನಲ್ಲೂ ಸಹ 12 ಮಾಸಗಳಿವೆ. ಗ್ರೆಗೇರಿಯನ್ ಕ್ಯಾಲೆಂಡರ್ ಅರ‍್ತಾತ್ ಸೌರ ತಿಂಗಳಲ್ಲಿ ಮೂವತ್ತು ದಿನಗಳ ನಾಲ್ಕು ತಿಂಗಳು, ಏಳು, ಮೂವತ್ತೊಂದು ದಿನದ ತಿಂಗಳು ಇದ್ದು ಒಂದು ತಿಂಗಳು ಮೂವತ್ತಕ್ಕಿಂತ ಕಡಿಮೆಯಿರುವುದು ಎಲ್ಲರಿಗೂ ತಿಳಿದ ವಿಶಯ. ಅದೇ ಚಾಂದ್ರ ತಿಂಗಳುಗಳಲ್ಲಿ ಪ್ರತಿ ತಿಂಗಳೂ ಯಾವುದೇ ವ್ಯತ್ಯಾಸವಿಲ್ಲದೆ ಮೂವತ್ತು ದಿನ ಹೊಂದಿದೆ (ಅದಿಕ ಮಾಸ ಬಂದಾಗಲೂ, ಅದರಲ್ಲೂ ಮೂವತ್ತು ದಿನ ಮಾತ್ರವಿರುತ್ತೆ. ಇದರ ಬಗ್ಗೆ ಮುಂದೆ ತಿಳಿಸಲಾಗುವುದು). ಈ ಕಾರಣದಿಂದ ಒಮ್ಮೊಮ್ಮೆ ಸೌರತಿಂಗಳೊಂದರಲ್ಲಿ ಎರಡು ಪೌರ‍್ಣಮಿ ಹಾಗೂ ಸೌರ ವರ‍್ಶದಲ್ಲಿ ಹದಿಮೂರು ಪೌರ‍್ಣಮಿಗಳು ಬರುವ ಸಾದ್ಯತೆಯಿದೆ. ಈ ರೀತಿ ಸೌರ ತಿಂಗಳಲ್ಲಿ ಎರಡು ಪೌರ‍್ಣಮಿ ಬಂದಾಗ ಮೊದಲನೆಯದು ತನ್ನ ನಾಮಾಂಕಿತದಲ್ಲೇ ಹೋದರೆ, ಎರಡನೆಯದೇ ‘ಬ್ಲೂ ಮೂನ್’.
ಇದು ಸರಿ ಸುಮಾರು ಎರಡೂವರೆ ವರ‍್ಶಕ್ಕೊಮ್ಮೆ ಬರುತ್ತದೆ (ಇದರ ಹಿಂದೆ ಸಾಕಶ್ಟು ಲೆಕ್ಕಾಚಾರವಿದೆ. ಅದು ಇಲ್ಲಿ ಬೇಡ). ಹಾಗಾಗಿ ಯಾವಾಗಲೂ ತಡವಾಗಿ ಬರುವವರು, ಒಮ್ಮೆ ನಿಗದಿಯಾದ ಸಮಯಕ್ಕೆ ಬಂದಾಗ ‘ಒನ್ಸ್ ಇನ್ ಎ ಬ್ಲೂ ಮೂನ್’ ಎಂಬ ನುಡಿಗಟ್ಟನ್ನು ಉಪಯೋಗಿಸಲಾಗುತ್ತೆ. ಬ್ಲೂಮೂನಿನ ಮತ್ತೊಂದು ವಿಶೇಶ ಸಂಗತಿ ಎಂದರೆ, ಇದು ಯಾವುದೇ ಕಾರಣಕ್ಕೂ ಪೆಬ್ರವರಿ ತಿಂಗಳಿನಲ್ಲಿ ಬರುವ ಸಾದ್ಯತೆಯೇ ಇಲ್ಲ. ಹಾಗಾದರೆ ಪೆಬ್ರವರಿ ತಿಂಗಳು ಪೌರ‍್ಣಮಿ/ಅಮಾವಾಸ್ಯೆ ಇಲ್ಲದ ತಿಂಗಳಾಗಲು ಸಾದ್ಯವೇ? ಹೌದು ಸಾದ್ಯ ಎನ್ನುತ್ತದೆ ವಿಜ್ನಾನ. ಈ ವಿಶೇಶತೆ ಪ್ರತಿ ಹತ್ತೊಂಬತ್ತು ವರ‍್ಶಕ್ಕೊಮ್ಮೆ ಆಗುತ್ತದೆ. ಹೀಗಾದಾಗ ಆ ಪೆಬ್ರವರಿಯ ಹಿಂದಿನ ಜನವರಿ/ಡಿಸೆಂಬರ್ ಅತವಾ ಮಾರ‍್ಚ್/ಏಪ್ರಿಲ್‍ನಲ್ಲಿ ಎರಡು ಪೌರ‍್ಣಮಿಗಳು ಕಂಡಿತವಾಗಿ ಇರುತ್ತವೆ.
ಇದೇ ರೀತಿಯಲ್ಲಿ ಒಂದೇ ತಿಂಗಳಿನಲ್ಲಿ ಎರಡು ಅಮಾವಾಸ್ಯೆ ಬಂದಾಗ ಎರಡನೇ ಅಮಾವಾಸ್ಯೆ ಬ್ಲಾಕ್ ಮೂನ್ ಎನ್ನುತ್ತಾರೆ. 2018ರಲ್ಲಿ ಪೆಬ್ರವರಿಯಲ್ಲಿ ಪೌರ‍್ಣಮಿ ಇರಲಿಲ್ಲ. ಮುಂದಿನದು 2037ರಲ್ಲಿ. ಅಂತೆಯೇ ಅಮಾವಾಸ್ಯೆ ಇಲ್ಲದ ಪೆಬ್ರವರಿ 2014ರಲ್ಲಿ ಬಂದಿತ್ತು. ಮುಂದಿನದು 2033 ರಲ್ಲಿ.
( ಮಾಹಿತಿ ಮತ್ತು ಚಿತ್ರಸೆಲೆ : timeanddate.com )
ನಿಸರ್ಗದಲ್ಲಿನ ಆಗುಹೋಗುಗಳು ಚೆಲುವಿನ ಸಂಗತಿಗಳಿಂದ ಕೂಡಿರುವುದನ್ನು ತಿಳಿಸುವ ಈ ಬರಹ ತುಂಬಾ ಚೆನ್ನಾಗಿದೆ.