ಇಂದಾದರೂ ಅರಿತೆವೇನು ಆಹಾರದ ಮೌಲ್ಯವ?

ಸಂಜೀವ್ ಹೆಚ್. ಎಸ್.

ಅನ್ನದಾನ, ಊಟ, feeding poor

ಎಲ್ಲಾ ಮನುಶ್ಯನ ಮೂಲಬೂತ ಅವಶ್ಯಕತೆ ಆಹಾರ‌ ಎಂಬುದು ನಮ್ಮೆಲ್ಲರಿಗೆ ಗೊತ್ತೇ ಇದೆ, ಆಹಾರ ಕೇವಲ ಪೌಶ್ಟಿಕಾಂಶಕ್ಕೆ ಮಾತ್ರ ಸೀಮಿತವಲ್ಲ. ಆಹಾರ ಶಕ್ತಿಯ ಮೂಲ, ಬದ್ರತೆಯ‌ ಬೇರು, ಸತ್ಕಾರದ ಚಿಹ್ನೆ, ಹೀಗೆ ಹಲವು ರೀತಿಯ ಬಾವನೆಗಳನ್ನು ವ್ಯಕ್ತಪಡಿಸಲು ಆಹಾರ ಒಂದು ಸೇತುವೆ. ನಾವು ಪ್ರತಿನಿತ್ಯ ಸೇವಿಸುವ ಅನ್ನ ಆಹಾರದ ಪ್ರತಿರೂಪ. “ಅನ್ನಂ ಪರಬ್ರಹ್ಮo ಸ್ವರೂಪಂ” ಎಂದರೆ ಹಸಿದವನಿಗೆ ಅನ್ನ ಬ್ರಹ್ಮ ದೇವರ ಸ್ವರೂಪದಲ್ಲಿ ಕಾಣುತ್ತದಂತೆ. ಎಂತ ಮಾತು ಅಲ್ಲವೇ ಸ್ನೇಹಿತರೆ.

ಈ ವಿಶ್ವದ ಉತ್ಪತ್ತಿ ಮತ್ತು ಬೆಳವಣಿಗೆ ಅನ್ನವನ್ನು ಆದರಿಸಿದೆ. ಅನ್ನಕ್ಕಾಗಿ ಅದೆಶ್ಟೋ ಯುದ್ದಗಳೆ ನಡೆದಿರುವುದನ್ನು ನಾವು ಇತಿಹಾಸ ಓದಿದಾಗ ತಿಳಿದುಕೊಂಡಿದ್ದೇವೆ. ಬರತ ಕಂಡದಲ್ಲಿ ವಿನಯತೆ, ಅತಿತೇಯ ಔಪಚಾರಿಕತೆಗೆ ಕನ್ನಡಿಯಂತೆ‌ ಅನ್ನವನ್ನು ದೇವರ ಸಮವಾಗಿ ನೋಡುವವರು. ಹೊಟ್ಟೆಗೆ ಅನ್ನ ಬೀಳುವ ಮೊದಲು ಕೈ ಅಲ್ಲಿ ಹಿಡಿದ ಅನ್ನದ ಅಗುಳನ್ನು ಕಣ್ಣಿಗೆ ಒತ್ತಿ ತಿನ್ನುತ್ತೇವೆ. ಅದು ನಾವು ಅನ್ನಕ್ಕೆ ಕೊಡುವ ಗೌರವ. ಅನ್ನವೆಂದರೆ ಜೀವದಾತು. “ಅನ್ನ ಬ್ರಹ್ಮ, ಅನ್ನದಾತ, ಅನ್ನದಾಸೋಹ, ಅನ್ನಪೂರ‍್ಣೇಶ್ವರಿ, ಅನ್ನದ ರುಣ” ಈ ಎಲ್ಲಾ ಪದಗಳು ಅನ್ನದ ಮಹತ್ವ ತಿಳಿಸಿದೆ. ”ಹಸಿದಾಗ ಅನ್ನ, ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ?” ಅಂದ ನಮ್ಮ ಜನಪದರು ಅನ್ನದಾನಕ್ಕಿಂತ ಶ್ರೇಶ್ಟ ಬೇರೇನೂ ಇಲ್ಲ ಎನ್ನುವ ಪಾಟ ಕಲಿಸಿದ್ದಾರೆ. “ಅಕ್ಕಿಯೊಳಗ್ ಅನ್ನವನು ಮೊದಲಾರು ಕಂಡವನು” ಎಂದು ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿವಿಜಿ ತಾತ ಹೇಳಿಲ್ಲವೇ.

ಇದೆಲ್ಲ ವಿಶೇಶವಾದ ವಿಚಾರವೇನಲ್ಲ. ನಮಗೆಲ್ಲ ತಿಳಿದಿರುವ ಸರ‍್ವೇ ಸಾಮಾನ್ಯ ಸಂಗತಿ. ಇದೆಲ್ಲವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಒಂದು ಬಲವಾದ ಕಾರಣವೂ ಇದೆ. ಅಕಸ್ಮಾತ್ತಾಗಿ ಬಂದಿರುವ ಮಹಾಮಾರಿಯಿಂದ ಇಡೀ ವಿಶ್ವವೇ ಲಾಕ್‌ಡೌನ್ ಆಗಿದೆ. ಆದರೆ ಲಾಕ್‌ಡೌನ್ ಎಲ್ಲರಿಗೂ ಒಂದೇ ತೆರನಾಗಿ ಇಲ್ಲ. ಉಳ್ಳವರು ಒಂದಶ್ಟು ಶೇಕರಿಸಿಕೊಂಡಿದ್ದಾರೆ. ಅವರಿಗೆ ಇವತ್ತಿನ ನಾಳೆಯ ಚಿಂತೆ ಇಲ್ಲ. ಆದರೆ‌ ದಿನದ ಲೆಕ್ಕಚಾರದಲ್ಲಿ ಕೂಲಿ ಮಾಡಿ ಬದುಕುವವರ ಕತೆಯೇನು? ಇವತ್ತು ದುಡಿದರೆ ಹೊಟ್ಟೆಗೆ ಅನ್ನ, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಒಂದಶ್ಟು ಜನಕ್ಕೆ ಲಾಕ್‌ಡೌನ್ ವಿಶ್ರಾಂತಿಯ ಸಮಯವಾದರೆ ಬಹುತೇಕರಿಗೆ ಮಾನಸಿಕ ಅಶಾಂತಿ, ಹೇಗಪ್ಪ ಹೊಟ್ಟೆ ತುಂಬಿಸಿಕೊಳ್ಳುವುದು ಎಂಬುದರ ಚಿಂತೆ.

ಮುಂದುವರಿಯುತ್ತಿರುವ ರಾಶ್ಟ್ರವಾಗಿ ಬೆಳೆಯುತ್ತಿರುವ ಬಾರತದಲ್ಲಿ ಇನ್ನೂ ಈ ಸ್ತಿತಿ ಇರುವುದು ವಿಶಾದನೀಯ ಸಂಗತಿ. ಆರ‍್ತಿಕತೆಯಲ್ಲಿ ಮುಂದಿದ್ದರೂ ಬಡವರಿಗೆ ಅನ್ನ ಹುಟ್ಟಿಸಿಕೊಳ್ಳುವ ತಾಕತ್ತು ಬೆಳೆಸುವಲ್ಲಿ ಬಾರತ ಇನ್ನೂ ಹಿಂದೆ ಇದೆ, ಸೋತಿದೆ ಎಂದರೂ ತಪ್ಪಾಗಲಾರದು. ಕಿತ್ತು ತಿನ್ನುವ ಬಡತನ ಇನ್ನೂ ನಮ್ಮನ್ನು ಕಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಶಿ. ಇದು ಯಾರ ತಪ್ಪು?

ಮಹಾಮಾರಿ ಕೊರೋನಾ ಬಂದು ನಮ್ಮನ್ನು ಸರ‍್ವನಾಶ ಮಾಡುತ್ತದೆ ಎಂಬ ಅರಿವಿನ ನಡುವೆಯೂ ತಮ್ಮ ದಿನಗೂಲಿಗಳಿಗೆ ಹೋಗುತ್ತಿರುವ ಹಲವಾರು‌ ಜನ ನಿಜವಾಗಿಯೂ ಅಂಜುತ್ತಿರುವುದು ಹಸಿವು ಎಂಬ ಹೆಮ್ಮಾರಿಗೆ. ಹಸಿವು ಎಂಬುದು ಅಶ್ಟು ಕ್ರೂರಿ. ಹಸಿದವನಿಗೆ ಮಾತ್ರ ಅನ್ನದ ಬೆಲೆ ತಿಳಿದಿರುವುದು. ದಿನಗೂಲಿಗಾಗಿ ಬಡಿದಾಡುವ ಇಂತಹ ಎಶ್ಟೋ ಜನರನ್ನು ನೋಡಿ ಸ್ವತಹ ನಾನೇ ನನ್ನ ನೋವು, ಹತಾಶೆ ಮತ್ತು ದೂರುಗಳಿಗೆ ಒಂದಶ್ಟು ಉತ್ತರ ಕಂಡುಕೊಳ್ಳುವ ಮತ್ತು ಸಮಾದಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಆತ್ಮೀಯ ಓದುಗರೇ ಇತ್ತೀಚಿಗೆ ನಡೆದ ಕೆಲವೊಂದು ಗಟನೆಗಳು‌ ಈ ಅಂಕಣ ಬರೆಯುವುದಕ್ಕೆ ಕಾರಣ.

ಒಂದು ಕಡೆ ಹೊತ್ತು ಊಟಕ್ಕೆ ಕಾದು ಕೂರುವ ಜನ. ಇನ್ನೊಂದೆಡೆ ಅಹಂಕಾರದಿಂದ ಆಹಾರವನ್ನು ವಿವಿದ ರೀತಿಯಲ್ಲಿ ದುರ‍್ಬಳಕೆ ಮಾಡುವ ಜನ. ಇಂತಹ ಬಿಕ್ಕಟ್ಟಿನ ಪರಿಸ್ತಿತಿಯಲ್ಲಿ ಸರ‍್ಕಾರ ಬಡಜನರಿಗಾಗಿ ಒದಗಿಸುತ್ತಿರುವ ಅಕ್ಕಿಯನ್ನು ಇತರೆ ಆಹಾರ ಪದಾರ‍್ತಗಳನ್ನು ಮನುಶ್ಯತ್ವ ಇಲ್ಲದವರು ತಮ್ಮ ಹಿತಕ್ಕಾಗಿ ಬಳಸಿಕೊಳ್ಳುತ್ತಿರುವುದು ಕಂಡನೀಯ. ಬಡವರ ಹಸಿವನ್ನು ಬಂಡವಾಳ ಮಾಡಿಕೊಂಡವರಿಗೆ ದಣಿವು ಆರದ ದುಡ್ಡಿನ ಹಸಿವಿರಬೇಕು. ಇದಲ್ಲದೆ ಹಲವು ಸಮಾರಂಬಗಳಲ್ಲಿ ಎಲೆಯ ಮೇಲೆ ಊಟ ಬಿಡುವುದನ್ನು ಎಶ್ಟೋ ಜನ ಪ್ರತಿಶ್ಟೆ ಎಂದು ಬಾವಿಸಿದ್ದಾರೆ. ಇನ್ನೂ ಅದೆಶ್ಟೋ ಹಾಸ್ಟೆಲ್ ಗಳಲ್ಲಿ, ಹೋಟೆಲುಗಳಲ್ಲಿ, ಕಾರ‍್ಕಾನೆಗಳಲ್ಲಿ ಅನ್ನ ತಟ್ಟೆಯಲ್ಲಿ ಇರುವದಕ್ಕಿಂತ ಹೆಚ್ಚು ಕಸದ ಬುಟ್ಟಿಯಲ್ಲಿ ಕಾಣಸಿಗುತ್ತದೆ.

ಈ ರೀತಿಯಾಗಿ ಆಹಾರವನ್ನು ವ್ಯಯ ಮಾಡುವುದು ಎಶ್ಟು ಸರಿ? ಒಂದು ಬತ್ತದ ಸಸಿ ನೆಟ್ಟು, ಕೊಯ್ಲು ಮಾಡಿ, ಅದನ್ನು ಸಂಸ್ಕರಿಸಿ ಒಬ್ಬ ಗ್ರಾಹಕನಿಗೆ ಬಂದು ಸೇರುತ್ತದೆ ಎಂದರೆ ಅದರ ಹಿಂದೆ ಎಶ್ಟೋ ರೈತರ, ಕಾರ‍್ಮಿಕರ ಶ್ರಮವಿದೆ, ಅವರ ಅಮೂಲ್ಯವಾದ ಸಮಯವಿದೆ. ಅನ್ನ ಚೆಲ್ಲಿದರೆ ನೀವು ಅವರಿಗೆ ಮಾಡಿದ ಅವಮಾನವೇ ಸರಿ. 1 ಕೆಜಿ ಅಕ್ಕಿ ಬೆಳೆಯಲು ಕನಿಶ್ಟ ನಾಲ್ಕರಿಂದ ಐದು ಸಾವಿರ ಲೀಟರ್ ನೀರು ಬೇಕಾಗುತ್ತದೆ ಎಂಬುದು ನೆನಪಿನಲ್ಲಿರಬೇಕು. ನಾವು ಬಿಟ್ಟ ಅನ್ನ ಕೇವಲ ನಮಗಾಗುವ ನಶ್ಟವಲ್ಲ. ವ್ಯರ‍್ತ ಮಾಡುವುದು ಎಂದರೆ ಇನ್ನೊಬ್ಬರ ಪಾಲಿನ ಅನ್ನವನ್ನು ಕಿತ್ತುಕೊಂಡ ಹಾಗೆ. ಆ ಪಾಪ ನಮ್ಮನ್ನು ತಟ್ಟದಿರಲಿ. ಒಂದು ತುತ್ತು ಅನ್ನ ಚೆಲ್ಲುವ ಮುಂಚೆ ಒಂಚೂರು ಯೋಚಿಸಿ.

ಅನ್ನದ ಮೇಲೆ ಅಹಂಕಾರ ತೋರುವುದು ಮೂರ‍್ಕತನ. ಎಶ್ಟೇ ಹಣ ಸಂಪಾದಿಸಿ ಸಿರಿವಂತನಾಗಬಹುದು. ಆದರೆ ಹಣ ಹೊಟ್ಟೆ ತುಂಬಿಸೀತೆ? ಹಣಕೊಟ್ಟರೂ ಅನ್ನ ಸಿಗದಿದ್ದರೆ ಏನು ಮಾಡುವುದು? ಅನ್ನಕ್ಕೆ ಅದರದ್ದೇ ಆದ ಮಹತ್ವವಿದೆ. ಆ ಮಹತ್ವವನ್ನು ಅರಿತು, ಆರಾದಿಸಿ, ಅಳವಡಿಸಿ ನಡೆದರೆ ನಮಗೆ ಒಳಿತು. ಇಶ್ಟಾದರೂ ನಮ್ಮನ್ನು ಕಾಡುವ ಪ್ರಶ್ನೆ, ಇಂದಾದರೂ ಅರಿತೆವೇನು ನಾವು ನಮ್ಮ ಆಹಾರದ ಮೌಲ್ಯವ ?!

ಬತ್ತ ಬೆಳೆವನು ರೈತ
ಜನರ ಹಸಿವನು ನೀಗುತ

ಬೆವರ ಇಳಿಸುವನು ತಿಂಗಳು
ನಾವಿಲ್ಲಿ ಎಸೆಯುವೆವು ತಂಗಳು

ಕೆಲವರಿಗೆ ತಿನ್ನಲಿಲ್ಲ ಅನ್ನ
ಹಲವರಿಗೆ ಅನ್ನ ಬಿಡುವುದೇ ಶೋಕಿಯಾಯಿತಣ್ಣ

ಈ ಮೂಲಕ ನಾ ಕೆಳುವುದೊಂದೇ
ಮಾಡದಿರಿ ಅನ್ನಕ್ಕೆ ನಿಂದೆ
ಮಾಡದಿರಿ ಅನ್ನಕ್ಕೆ ನಿಂದೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: