ಲೇಶನ್ ಬುದ್ದ : ಬಂಡೆಯಲ್ಲಿನ ದೈತ್ಯ ಪ್ರತಿಮೆ
ಇಡೀ ವಿಶ್ವದಲ್ಲೇ ಅತಿ ದೊಡ್ಡದಾದ ಬುದ್ದನ ಕಲ್ಲಿನ ವಿಗ್ರಹ ಚೀನಾದ ಲೇಶನ್ ನಲ್ಲಿದೆ. ಈ ದೈತ್ಯಾಕಾರದ ಮತ್ತು ಬವ್ಯವಾದ ಪ್ರತಿಮೆಯನ್ನು ಬೆಟ್ಟದ ಇಳಿಜಾರಿನ ಕಲ್ಲಿನಲಿ ಕೆತ್ತಲಾಗಿದೆ. ಇದಿರುವುದು ಚೀನಾದ ಸಿಚುವಾನ್ ಪ್ರಾಂತ್ಯದ ಲೇಶನ್ ನಲ್ಲಿ. ಮಿನ್ ಜಿಯಾಂಗ್, ದದು ಮತ್ತು ಕಿಂಗೀ ಎಂಬ ಮೂರು ನದಿಗಳು ಸೇರುವ ಸಂಗಮದ ಎದುರಿನಲ್ಲಿದೆ. ಇಲ್ಲೇ ಇದನ್ನು ಸ್ತಾಪಿಸಲು ಒಂದು ಬಲವಾದ ಕಾರಣ ಸಹ ಇದೆ. ಏನದು? ನೋಡುವ ಬನ್ನಿ.
ಈ ದೈತ್ಯ ಪ್ರತಿಮೆಯ ಹಿನ್ನೆಲೆ
ಈ ದೈತ್ಯ ಪ್ರತಿಮೆಯ ಕೆತ್ತನೆ ಕೆಲಸ ಪ್ರಾರಂಬವಾಗಿದ್ದು 713 ರಲ್ಲಿ. ತಾಂಗ್ ರಾಜವಂಶದ ಸನ್ಯಾಸಿ ಹೈ ತಾಂಗ್ ಆಳುತ್ತಿದ್ದ ಕಾಲವದು. ದೈತ್ಯ ಬುದ್ದನಿರುವ ಈ ಸ್ತಳದಲ್ಲಿ ಮೂರು ನದಿಗಳ (ಮಿನ್ ಜಿಯಾಂಗ್, ದದು ಮತ್ತು ಕಿಂಗೀ) ಸಂಗಮವಿದ್ದು, ಇವುಗಳ ಹರಿವಿನ ಪ್ರಕ್ಶುಬ್ಯತೆಯಿಂದ ವ್ಯಾಪಾರಿ ಹಡಗುಗಳ ಓಡಾಡಕ್ಕೆ ಬಹಳ ಅಡಚಣೆಯಾಗುತ್ತಿತ್ತು. ಇದರಿಂದ ವ್ಯಾಪಾರ ವಾಹಿವಾಟಿನಲ್ಲಿ ತೊಂದರೆ ಕಂಡುಬರುತ್ತಿತ್ತು. ಬುದ್ದನ ವಿಗ್ರಹದ ಉಪಸ್ತಿತಿ ಪ್ರವಾಹಗಳ ಪ್ರಚೋದಕ ಶಕ್ತಿಯನ್ನು ಶಾಂತಗೊಳಿಸುತ್ತದೆ ಎಂಬ ನಂಬಿಕೆ ಈ ದೊಡ್ಡ ಗಾತ್ರದ ಕೆತ್ತನೆಗೆ ನಾಂದಿಯಾಯಿತು. ಹೈ ತಾಂಗ್ ನ ಬಾವನೆ ಸಹ ಇದೇ ಆಗಿತ್ತು, ಮತ್ತದು ತಕ್ಕಮಟ್ಟಿಗೆ ನಿಜವೂ ಆಯಿತು! ಏಕೆಂದರೆ ಈ ಬಾರಿ ಗಾತ್ರದ ವಿಗ್ರಹದ ಕೆತ್ತನೆಯ ಸಮಯದಲ್ಲಿ ಹೊರಬಿದ್ದ ಕಲ್ಲು ಮಣ್ಣುಗಳ ಅಪಾರ ಪ್ರಮಾಣ ನದಿಯಲ್ಲಿ ಬಿದ್ದ ಕಾರಣ, ನೀರಿನ ಹರಿವಿನ ಬಲವನ್ನು ಕುಂಟಿತಗೊಳಿಸಿ, ಪ್ರಕ್ಶುಬ್ಯತೆಯನ್ನು ತಗ್ಗಿಸಿ, ಹರಿವಿನ ದಿಕ್ಕನ್ನು ಸ್ವಲ್ಪ ಮಟ್ಟಿಗೆ ಬದಲಿಸಲು ಯಶಸ್ವಿಯಾಯಿತು.
ಈ ವಿಗ್ರಹದ ಅಳತೆ
ಕುಳಿತುಕೊಂಡಿರುವ ಬಂಗಿಯಲ್ಲಿ ಕೆತ್ತಿರುವ ಈ ಬ್ರುಹತ್ ಪ್ರತಿಮೆಯಲ್ಲಿ ಬುದ್ದ ತನ್ನ ಎರಡೂ ಕೈಗಳನ್ನು ಮೊಣಕಾಲಿನ ಮೇಲೆ ಇರಿಸಿಕೊಂಡಂತೆ ಚಿತ್ರಿತವಾಗಿದೆ. ಇದೇ 230 ಅಡಿ ಇದೆ. ಬುಜದಿಂದ ಬುಜಕ್ಕೆ 90 ಅಡಿ, ಕಿವಿಗಳ ಉದ್ದ 22 ಅಡಿ, ಪ್ರತಿ ಕಾಲಿನ ಅಳತೆ 36 ಅಡಿ ಇದೆ. ಬುದ್ದನ ತಲೆಯು 48 ಅಡಿ ಉದ್ದವಿದ್ದು, 32 ಅಡಿ ಅಗಲವಿದೆ. ಇದರ ಮೇಲೆ ಕೆತ್ತಿರುವ ಸುರಳಿ ಸುತ್ತಿರುವ ಕೂದಲುಗಳ ಸಂಕ್ಯೆ 1021. ಈ ದೈತ್ಯ ವಿಗ್ರಹವು, ರಿಯೋದಲ್ಲಿನ ‘ಕ್ರೈಸ್ಟ್ ದ ರಿಡೀಮರ್’ ವಿಗ್ರಹದ ಗಾತ್ರಕ್ಕಿಂತಾ ಎರಡು ಪಟ್ಟು ಹೆಚ್ಚಿದೆ.
ಮಳೆ ಬಿದ್ದ ಸ್ವಲ್ಪ ಹೊತ್ತಿನಲ್ಲೇ ಮೊದಲಿನಂತಾಗುವ ವಿಗ್ರಹ!
ದೈತ್ಯ ಲೇಶನ್ ಬುದ್ದನ ಅಪರಿಮಿತ ಗಾತ್ರಕ್ಕೆ ಸರಿಯಾಗಿ ಅತ್ಯಾದುನಿಕ ಒಳಚರಂಡಿ ವ್ಯವಸ್ತೆಯನ್ನೂ ಸಹ ಹೊಂದಿರುವುದು ವಿಶೇಶ. ಇದರಿಂದಾಗಿ ಮಳೆ, ಚಳಿ, ಗಾಳಿಗೆ ಮೈಯೊಡ್ಡಿ ನಿಂತಿರುವ ಈ ಪ್ರತಿಮೆ, ಮಳೆ ಬಿದ್ದ ಕೆಲ ಸಮಯದಲ್ಲೇ ಒಣಗಿ ಮೊದಲಿನ ರೂಪ ಪಡೆಯುತ್ತದೆ. ಹಾಗಾಗಿ ಇದು ಸೊಗಸಾಗಿ ಸಂರಕ್ಶಿಸಲ್ಪಟ್ಟಿದೆ. ಸೂಕ್ಶ್ಮವಾಗಿ ಗಮನಿಸಿದರೆ, ಬುದ್ದನ ಈ ಪ್ರತಿಮೆಯ ವಿವಿದ ಬಾಗಗಳಲ್ಲಿ, ಮಳೆ ನೀರು ಹರಿದು ಹೋಗಿ ನದಿಯನ್ನು ಸೇರಲು, ಹೊರ ಹರಿವಿಗೆ ಕೊಳವೆಗಳನ್ನು ಅಳವಡಿಸಿರುವುದನ್ನು ಕಾಣಬಹುದು.
ಸುತ್ತಾಡುಗರ ಅಚ್ಚುಮೆಚ್ಚಿನ ತಾಣ
ಪ್ರಾಚೀನ ಜಗತ್ತಿನ ಶ್ರೇಶ್ಟ ಸ್ಮಾರಕಗಳಲ್ಲಿ ಒಂದೆಂದು ಇದು ಪರಿಗಣಿಸಲ್ಪಟ್ಟಿದೆ. 1996ರಲ್ಲಿ ಯುನೆಸ್ಕೋ ಈ ದೈತ್ಯ ವಿಗ್ರಹವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಿತು. ಇಂದಿನ ದಿನ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು ದಿನವೊಂದಕ್ಕೆ ಸಾವಿರಾರು ಮಂದಿಯನ್ನು ಆಕರ್ಶಿಸುವ ದೈತ್ಯ ವಿಗ್ರಹ ಇದಾಗಿದೆ.
( ಮಾಹಿತಿ ಮತ್ತು ಚಿತ್ರಸೆಲೆ : chinadiscovery.com, chinahighlights.com, wikipedia )
ಇತ್ತೀಚಿನ ಅನಿಸಿಕೆಗಳು