ಚಂದಿಮರಸನ ವಚನಗಳಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ. (553/1258)

ಅರಿ=ತಿಳಿ/ಗ್ರಹಿಸು; ಅರಿಯದ=ಒಳ್ಳೆಯ ತಿಳುವಳಿಕೆಯನ್ನು ಪಡೆಯದಿರುವ/ಹೊಂದದಿರುವ; ಗುರು=ಜನರಿಗೆ ವಿದ್ಯೆಯನ್ನು ಕಲಿಸಿ, ಅವರ ನಡೆನುಡಿಯಲ್ಲಿನ ತಪ್ಪುಗಳನ್ನು ತಿದ್ದಿ ಸರಿಪಡಿಸಿ , ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ವ್ಯಕ್ತಿ; ಶಿಷ್ಯ=ವಿದ್ಯೆಯನ್ನು ಕಲಿಯಲೆಂದು ಗುರುವಿನ ಬಳಿಯಲ್ಲಿ ಇರುವವನು/ಗುಡ್ಡ; ಶಿಷ್ಯಂಗೆ=ಗುಡ್ಡನಿಗೆ;

ಅನುಗ್ರಹ=ಕರುಣೆ/ದಯೆ/ನೀಡುವುದು/ಕೊಡುವುದು; ಮಾಡಿದಡೆ+ಏನ್+ಅಪ್ಪುದು+ಎಲವೋ; ಮಾಡಿದಡೆ=ಮಾಡಿದರೆ; ಅನುಗ್ರಹ ಮಾಡಿದಡೆ=ವಿದ್ಯೆಯನ್ನು ಹೇಳಿಕೊಟ್ಟರೆ; ಏನ್=ಯಾವುದು; ಅಪ್ಪುದು=ಆಗುವುದು; ಏನಪ್ಪದು=ಏನಾಗುವುದು/ಏನು ತಾನೆ ಪ್ರಯೋಜನ; ಎಲವೋ=ವ್ಯಕ್ತಿಯನ್ನು ಕುರಿತು ನೇರವಾಗಿ ಮಾತನಾಡಿಸುವಾಗ ಬಳಸುವ ಪದ;

“ಜೀವನದಲ್ಲಿ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ “ ಎಂಬ ಅರಿವನ್ನು ವ್ಯಕ್ತಿಯಲ್ಲಿ ಮೂಡಿಸಿ, ಅವನಿಗೆ ಒಳ್ಳೆಯ ನಡೆನುಡಿಯನ್ನು ಕಲಿಸಿ , ಅವನ ವ್ಯಕ್ತಿತ್ವವನ್ನು ರೂಪಿಸುವ ಹೊಣೆಯನ್ನು ಹೊತ್ತಿರುವ ಗುರುವೇ ತಿಳಿಗೇಡಿಯಾಗಿದ್ದರೆ, ಅಂತಹ ಗುರುವಿನ ಬಳಿ ಬೆಳೆದ ಗುಡ್ಡನು ಒಳ್ಳೆಯದೇನನ್ನೂ ಕಲಿಯಲಾರ ಮತ್ತು ಮಾಡಲಾರ.

ಆದ್ದರಿಂದ ವಿದ್ಯೆಯನ್ನು ಕಲಿಸುವ ಗುರು ಮೊತ್ತಮೊದಲು ತಾನು ಅರಿವನ್ನು ಗಳಿಸಿಕೊಳ್ಳುವುದರ ಜತೆಗೆ ಒಳ್ಳೆಯ ನಡೆನುಡಿಗಳನ್ನು ಹೊಂದಿರಬೇಕು. ಅರಿವು ಮತ್ತು ಸಾಮಾಜಿಕ ಎಚ್ಚರವುಳ್ಳ ಗುರುವಿನಿಂದ ವಿದ್ಯೆಯನ್ನು ಕಲಿತಾಗ ಮಾತ್ರ ಗುಡ್ಡನು ಒಳ್ಳೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾಗುತ್ತಾನೆ.

ನಡೆಯೊಂದು ನುಡಿಯೊಂದು ಪರಿಯುಳ್ಳವ
ತತ್ತ್ವವಿದನಲ್ಲ. (626/1266)

ನಡೆ+ಒಂದು; ನಡೆ=ಮಾಡುವ ಕೆಲಸ/ವರ‍್ತನೆ; ನುಡಿ+ಒಂದು; ನುಡಿ=ಆಡುವ ಮಾತು/ಸೊಲ್ಲು; ಪರಿ+ಉಳ್ಳವ; ಪರಿ=ರೀತಿ/ಬಗೆ; ಉಳ್ಳ್=ಇರು/ಹೊಂದು/ಪಡೆ; ಉಳ್ಳವ=ಇರುವವನು/ಪಡೆದಿರುವವನು; ತತ್ತ್ವವಿದನ್+ಅಲ್ಲ; ತತ್ತ್ವ=ದಿಟ/ಸತ್ಯ/ವಾಸ್ತವ/ನಿಯಮ;

ತತ್ತ್ವವಿದ=ಸತ್ಯದ ವಿಚಾರವನ್ನು ಚೆನ್ನಾಗಿ ಅರಿತವನು/ನಿಸರ‍್ಗದ ಆಗುಹೋಗು ಮತ್ತು ಜೀವಜಗತ್ತಿನ ಸಂಗತಿಯನ್ನು ತಿಳಿದವನು; ತತ್ತ್ವವಿದನಲ್ಲ=ಅರಿತವನಲ್ಲ/ತಿಳಿದವನಲ್ಲ;

ಮಾತಿನಲ್ಲಿ ಒಳ್ಳೆಯ ನುಡಿಗಳನ್ನಾಡುತ್ತ, ತನ್ನ ನಿತ್ಯ ಜೀವನದ ನಡೆಯಲ್ಲಿ ಅಂದರೆ ಮಾಡುವ ಕೆಲಸದಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಯು ನೀತಿವಂತನಲ್ಲ. ಇಂತಹವರು ಆಡುವುದೇ ಒಂದು; ಮಾಡುವುದು ಮತ್ತೊಂದಾಗಿರುತ್ತದೆ. ಓದು ಬರಹದಿಂದ ಪಡೆದ ಅರಿವಿನ ಇಲ್ಲವೇ ಪಾಂಡಿತ್ಯದ ಜತೆಗೆ ಒಳ್ಳೆಯ ನಡತೆಯೂ ವ್ಯಕ್ತಿಯಲ್ಲಿರಬೇಕು.

ಲೋಕಕ್ಕೆ ಜ್ಞಾನಿ ಮರುಳು
ಜ್ಞಾನಿಗೆ ಲೋಕ ಮರುಳು. (669/1270)

ಲೋಕ=ಜಗತ್ತು/ಪ್ರಪಂಚ/ಮಾನವ ಸಮುದಾಯ; ಜ್ಞಾನಿ=ಅರಿವು ಉಳ್ಳವನು/ತಿಳುವಳಿಕೆಯುಳ್ಳವನು; ಮರುಳು=ಹುಚ್ಚ/ದಡ್ಡ/ತಲೆಕೆಟ್ಟಿರುವವನು/ತಿಳಿಗೇಡಿ/ಅರಿವನ್ನು ಕಳೆದುಕೊಂಡುವನು/ಮನಸ್ಸಿನ ಮೇಲೆ ಹತೋಟಿಯನ್ನು ಕಳೆದುಕೊಂಡವನು;

ಜನ ಸಮುದಾಯದಲ್ಲಿ ಬಹುತೇಕ ಮಂದಿ ತಾವು ಹುಟ್ಟಿ ಬೆಳೆದು ಬಾಳುತ್ತಿರುವ ಸಮಾಜದ ಸಂಪ್ರದಾಯ, ಕಟ್ಟುಪಾಡು ಮತ್ತು ಆಚರಣೆಗಳಿಗೆ ಒಳಪಟ್ಟು ಬಾಳುತ್ತಿರುತ್ತಾರೆ. ಇಂತಹವರ ಮುಂದೆ ತಿಳುವಳಿಕೆಯುಳ್ಳ ವ್ಯಕ್ತಿಯು ಜಾತಿ, ಮತ, ದೇವರುಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆಯ ಸಂಗತಿಗಳನ್ನು ಕುರಿತು ವಿವರಿಸುತ್ತ, ಜನರಲ್ಲಿ ಸಾಮಾಜಿಕ ಎಚ್ಚರವನ್ನು ಮೂಡಿಸಲು ಪ್ರಯತ್ನಿಸಿದಾಗ, ಜನಗಳ ಕಣ್ಣಿಗೆ ಹುಚ್ಚನಾಗಿ ಕಾಣುತ್ತಾನೆ.

ತಮ್ಮ ಹಸಿವು, ಬಡತನ ಮತ್ತು ಸಂಕಟಕ್ಕೆ ತಾವು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳೇ ಕಾರಣವೆಂಬ ಕರ‍್ಮ ಸಿದ್ದಾಂತ, ಪುನರ್ ಜನ್ಮ ಮತ್ತು ಹಣೆಬರಹವನ್ನು ಒಪ್ಪಿಕೊಂಡು ಬಾಳುತ್ತಿರುವ ಜನರು ತಿಳುವಳಿಕೆಯುಳ್ಳ ವ್ಯಕ್ತಿಯ ಕಣ್ಣಿಗೆ ತಿಳಿಗೇಡಿಗಳಾಗಿ ಕಾಣುತ್ತಾರೆ. ಏಕೆಂದರೆ ಆಡಳಿತದ ಗದ್ದುಗೆಯಲ್ಲಿರುವವರು, ಸಿರಿವಂತರು ಮತ್ತು ಓದು ಬರಹವನ್ನು ಕಲಿತವರು ಮಾಡುತ್ತಿರುವ ವಂಚನೆ ಮತ್ತು ಸುಲಿಗೆಯು ತಮ್ಮ ಬದುಕಿನ ದುರಂತಕ್ಕೆ ಕಾರಣವೆಂಬ ವಾಸ್ತವವನ್ನು ಜನರು ಅರಿಯದವರಾಗಿರುತ್ತಾರೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Rajashekara L says:

    ಪ್ರಸ್ತುತ ಕಾಲಮಾನಕ್ಕೆ ಸರಿಯಾಗಿ ಇದೆ.. ಇಂತಹ ಒಳ್ಳೆಯ ವ್ಯಕ್ತಿಗಳ ಆಚಾರ ವಿಚಾರಗಳನ್ನು ತಿಳಿಸುತ್ತಿರುವ ಹೊನಲು ಸಿಬ್ಬಂದಿ ಗಳಿಗೆ ತುಂಬಾ ಧನ್ಯವಾದಗಳು

ಅನಿಸಿಕೆ ಬರೆಯಿರಿ: