ಲಾಕ್‌ಡೌನ್‌ನಿಂದ ಸಿಕ್ಕ ಬ್ರೇಕ್‌ಡೌನ್ ಬಾಗ್ಯ…!

ಲಾಕ್ ಡೌನ್, lockdown

ಬ್ರೇಕ್ ಬ್ರೇಕ್ ಬ್ರೇಕ್…. ಹಲವಾರು ವಾರಗಳಿಂದ ಎಲ್ಲದಕ್ಕೂ ಬ್ರೇಕ್. ಬಾರ್, ಪಬ್ಬು, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಕೆಪೆ, ತಿಯೇಟರ್, ಮಾಲ್ ಗಳು ಇತ್ಯಾದಿ ಎಲ್ಲವೂ ಬಂದ್. ಲಾಕ್ ಡೌನ್/ಸೀಲ್ ಡೌನ್ ಪರಿಣಾಮ, ಮೇಲಿನ ಎಲ್ಲವೂ ತನ್ನ ಸರಪಳಿಯನ್ನು ಕಳಚಿಕೊಂಡು ತಾತ್ಕಾಲಿಕ ಬ್ರೇಕ್ ಡೌನ್ (ಸ್ತಗಿತ) ಸ್ತಿತಿಗೆ ಬಂದು ನಿಂತಿದೆ. ಹಿಂದೆಲ್ಲ ಮನುಶ್ಯ ಗೆಡ್ಡೆ ಗೆಣಸು ಹಸಿ ಸೊಪ್ಪು ತರಕಾರಿಗಳನ್ನು ತಿಂದು ಜೀವಿಸುತ್ತಿದ್ದ. ಮೈ ಮುರಿದು ಗೇಯುತ್ತಿದ್ದ, ಗಟ್ಟಿಮುಟ್ಟಾಗಿ ಆರೋಗ್ಯ ಪೂರ‍್ಣವಾಗಿದ್ದ, ಶಕ್ತಿ ತುಂಬಿಕೊಂಡಿದ್ದ. ಅಂದು ಸರಾಗವಾಗಿ ನಡೆಯುತ್ತಿದ್ದ ಜೀವನ ಇಂದು ಏರುಪೇರಾಗಿದೆ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಇಂದಿನ ಆದುನೀಕರಣದ ಹೊಸ್ತಿಲಲ್ಲಿ ಮಾನವನ ಆಹಾರ ಪದ್ದತಿಗಳು ಬದಲಾಗಿದೆ. ಇಂದು ತೊಂಬತ್ತರ ಮೇಲೆ ಬದುಕುಳಿದ ಜನ‌ ಸಿಗುವುದು ಅಪರೂಪ. ಅಶ್ಟರ ಮಟ್ಟಿಗೆ ಹದಗೆಟ್ಟಿದೆ ಜನರ ಆರೋಗ್ಯ.

ಮಹಾಮಾರಿ ಕೊರೋನಾದಿಂದ ಜಾರಿಗೊಂಡ ಲಾಕ್ ಡೌನ್ ನಮ್ಮೆಲ್ಲರ ಬದುಕನ್ನು ಹೈರಾಣಾಗಿ ಮಾಡಿದ್ದರೂ‌ ಸಹ ಅದರೊಳಗೆ ಒಂದಶ್ಟು ಒಳ್ಳೆಯದನ್ನು ಹೆಕ್ಕಿ ತೆಗೆಯುವ ಪ್ರಯತ್ನವಶ್ಟೇ. ಈ ಲಾಕ್ ಡೌನ್ ನ ದಿನಗಳನ್ನು ಗಮನಿಸಿ. ನಿಮಗರಿಯದೆ ನಿಮ್ಮಲ್ಲಿ ಆಗಾದವಾದ ಬದಲಾವಣೆ ಕಂಡಿತ ಆಗಿರುತ್ತದೆ. ಅದನ್ನೊಮ್ಮೆ ಅವಲೋಕನ ಮಾಡಿ ನೋಡಿ. ಲಾಕ್ ಡೌನ್ ನಿಂದಾಗಿ ಆರ‍್ತಿಕತೆ ಕೆಳಗೆ ಬಿದ್ದಿರುವುದು ಎಶ್ಟು ಸತ್ಯವೋ, ಅಶ್ಟೇ ವೈಯುಕ್ತಿಕವಾದ ಸಕಾರಾತ್ಮಕ ಬದಲಾವಣೆಗಳು ಕೂಡ ಆಗಿದೆ.‌ ಅದರಲ್ಲೂ ಆರೋಗ್ಯದ ದ್ರುಶ್ಟಿಯಲ್ಲಿ ಇದು ಮಹತ್ತರ ಬದಲಾವಣೆಯನ್ನೇ ತಂದಿದೆ.

ಲಾಕ್ ಡೌನ್ ಪರಿಣಾಮ ಮಾಲ್ ಗಳಲ್ಲಿ ಸಿನಿಮಾ ನೋಡುವಾಗ ಇದ್ದ ದೊಡ್ಡ ಡಬ್ಬದ ಪಾಪ್ಕಾರ‍್ನ್ ಮತ್ತು ಲೀಟರ್ ಗಟ್ಟಲೆ ಕುಡಿಯೊ ಕೋಕಾಕೋಲಕ್ಕೆ ಕತ್ತರಿ ಬಿದ್ದಾಗಿದೆ. ಸ್ವಿಗ್ಗಿ, ಜೋಮಟೋಗಳ ಮುಕಾಂತರ ಆರ‍್ಡರ್ ಮಾಡುವ ಮತ್ತು ಮುಗಿಬಿದ್ದು ಹೆಚ್ಚು ತಿನ್ನುತ್ತಿದ್ದ ಬೇಕರಿ ಪದಾರ‍್ತಗಳಿಗೆ ಬ್ರೇಕ್ ಬಿದ್ದಾಗಿದೆ. ನಾಲಿಗೆ ರುಚಿ ಕೇಳಿದಾಗ ದಪ್ಪ ಕೆನೆಯ ಪೇಸ್ಟ್ರೀಸ್, ರಸ್ತೆ ಬದಿಯ ಚಾಟ್ಸ್ ಮತ್ತು ಪಾಸ್ಟ್ ಪುಡ್ ಯಾವುದು ದೊರೆಯುತ್ತಿಲ್ಲ. ಎಲ್ಲದಕ್ಕೂ ಬ್ರೇಕ್ ಬ್ರೇಕ್ ಬ್ರೇಕ್… ಎಶ್ಟೋ ಜನರಿಗೆ ವೀಕೆಂಡ್ ಪಾರ‍್ಟಿಗಳು ಮಾಡದೆ ಇದ್ದಲ್ಲಿ ಏನೋ ಕಳಕೊಂಡ ಬಾವನೆ ಮೂಡುತ್ತಿತ್ತು. ಯುವಜನತೆ ಮಾಲ್ ಗಳಗೆ ಹೋಗಿ ತಿಂದು ಒಂದೆರಡು ಪೊಟೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡದಿದ್ದರೆ ಸಮಾದಾನವಿರುತ್ತಿರಲಿಲ್ಲ. ವಿದ್ಯಾರ‍್ತಿಗಳು ಸಂಜೆ ಹೊತ್ತು ಬೀದಿಬದಿಯ ಪಾನಿಪುರಿ ಇಲ್ಲದೆ ಮನೆಗೆ ವಾಪಸ್ ಆಗುತ್ತಿರಲಿಲ್ಲ, ಇವು ಕೇವಲ ಉದಾಹರಣೆಗಳಶ್ಟೇ. ಕೆಟ್ಟ ಕೊಬ್ಬು ತುಂಬಿದ, ಪೌಶ್ಟಿಕತೆ ಇಲ್ಲದ ಆಹಾರಗಳಿಂದ ಜನರಲ್ಲಿ ಜಡತ್ವ ತುಂಬಿತ್ತು. ಇಂತಹ ಆಹಾರದ ಅಬ್ಯಾಸದಿಂದ ತನು ಮನ ಎರಡೂ ಸ್ರುಜನಶೀಲತೆ ಕಳೆದುಕೊಂಡಿತ್ತು. ಮೈಬಾರ ಹೆಚ್ಚಿಸಿಕೊಂಡ ಅನೇಕರು ಹಲವು ರೀತಿಯ ತೊಂದರೆಗಳ ಸರಮಾಲೆಯನ್ನೇ ಸವಾಲು ಹಾಕಿಕೊಂಡಿದ್ದರು. ಆದರೆ ಕೊಂಚಕಾಲ ಅದರ ಸರಪಳಿಯ ಕೊಂಡಿ ಕಳಚಿದಂತಾಗಿದೆ.

ದುಡ್ಡು ಕೊಟ್ಟು ಕಾಯಿಲೆಗಳನ್ನು ಕರೀದಿ ಮಾಡ್ತಾ ಇದ್ದಂತಹ ಎಲ್ಲದಕ್ಕೂ ಕ್ಶಣಿಕ ಬ್ರೇಕ್ ಡೌನ್. ತೋರ‍್ಪಡಿಕೆಗಾಗಿ ಮತ್ತು ಒಣ ಪ್ರತಿಶ್ಟೆಯಗಾಗಿ ಮಾಡುತ್ತಿದ್ದ ಆಹಾರದ ಮೇಲಿನ ದುಂದು ವೆಚ್ಚಕ್ಕೆ ಕಡಿವಾಣ ಬಿದ್ದಿದೆ. ಯಾವುದನ್ನು ಆದುನೀಕರಣದ ಪ್ರತೀಕವೆಂದು ಸ್ವಯಂ ಬಾವಿಸಿದ್ದೆವೊ ಎಲ್ಲದಕ್ಕೂ ಕೊಂಚ ಪಕ್ಕಕ್ಕೆ ಸರಿಸಿದ್ದಾಗಿದೆ. ಯಾವುದನ್ನು ಬಿಟ್ಟು ನಾವು ಬದುಕುವುದಕ್ಕೆ ಸಾದ್ಯವಿಲ್ಲ ಎಂದು ಅಂದುಕೊಂಡಿದ್ದೆವೊ ಎಲ್ಲವೂ ಸಾದ್ಯವಾಗಿದೆ, ನಮ್ಮ ಮನಸ್ಸಿನಲ್ಲಿ ಇದ್ದ ತಿರುಳಿಲ್ಲದ ಸಾಮಾಜಿಕ ಬಾವನೆ ತಲೆಕೆಳಗಾಗಿದೆ. ಶೋಕಿ ಬಿಟ್ಟು ಸಾಮಾನ್ಯ ಜೀವನ ನಡೆಸಲು ಸಾದ್ಯ ಎಂಬುದು ಸಾಬೀತಾಗಿದೆ. ಲಾಕ್ ಡೌನ್ ನಿಂದಾಗಿ ಏರುಪೇರಾಗಿದ್ದ ಪಟ್ಟಣದ ವಾತಾವರಣದ ಗುಣಮಟ್ಟ ಉನ್ನತ ವಾಗಿರುವುದು ಎಶ್ಟು ಸತ್ಯವೋ, ನಮ್ಮ ಆರೋಗ್ಯದ ಗುಣಮಟ್ಟ ಹೆಚ್ಚಿರುವುದು ಅಶ್ಟೇ ಸತ್ಯ. ಮಿತಿಯಿಲ್ಲದೆ ಉಪಯೋಗಿಸುತ್ತಿದ್ದ ಅನಗತ್ಯ ಸೇವನೆಗೆ ಇದೊಂದು ಅಡ್ಡಗೋಡೆಯಾಯಿತು. ಅಂತೆಯೇ ಜಿಡ್ಡುಗಟ್ಟಿದ್ದ ಆರೋಗ್ಯ ಯಂತ್ರಕ್ಕೆ ಒಳ್ಳೆಯ ಸರ‍್ವಿಸ್ ಒದಗಿಸಿ, ಆರೋಗ್ಯವನ್ನು ವರ‍್ದಿಸಿದೆ. ಅನ್ನ, ಸಾಂಬಾರ್, ಉಪ್ಸಾರು , ಮುದ್ದೆ, ಬಸ್ಸಾರು, ರಾಗಿ, ಗಂಜಿ, ಜೋಳ, ಮೊಸರು, ಮಜ್ಜಿಗೆ, ಸೊಪ್ಪು, ಪಲ್ಯ, ಮನೆಯ ಹಿತ್ತಲಿನಲ್ಲಿ ಬೆಳೆದ ಹಣ್ಣು ತರಕಾರಿಗಳು ಮತ್ತು ಅವರವರ ಸ್ತಳೀಯ ಪ್ರದೇಶಗಳಲ್ಲಿ ಏನು ಸಿಗುವುದೋ ಅವುಗಳನ್ನು ತಿಂದು ಚಪ್ಪರಿಸಿ ಸಂತ್ರುಪ್ತಿ ಪಡೆದಿದ್ದಾರೆ.

ಇರುವುದನ್ನೇ ಉಂಡಿದ್ದಾರೆ, ಅಮ್ಮನ ಕೈ ರುಚಿಯನ್ನು ಮತ್ತಶ್ಟು ಆಸ್ವಾದಿಸಿದ್ದಾರೆ. ಚೌಕಾಸಿ ಮಾಡಿ ದಿನಸಿ ತರಕಾರಿಗಳನ್ನು ಹಿಡಿತದಲ್ಲಿ ಬಳಸುವುದನ್ನು ಕಲಿತಿದ್ದಾರೆ. ಅಡುಗೆ ಮನೆಯ ಕಡೆ ಮುಕವನ್ನೇ ಮಾಡದ ಹಲವರು ತಮ್ಮ ವೈವಿದ್ಯಮಯ ಪಾಕ ವಿದ್ಯೆಯ ಕಲೆಯನ್ನು ಪ್ರದರ‍್ಶಿಸಿ ಶಬಾಸಗಿರಿ ಪಡೆದುಕೊಂಡವರು ಕೂಡ ಇದ್ದಾರೆ. ಮನೆಯಲ್ಲಿಯೇ ಅವಶ್ಯಕತೆಗೆ ಬೇಕಾದಶ್ಟನ್ನು ತಯಾರಿಸಿಕೊಂಡು ಬದುಕಬಹುದು ಎಂಬುದು ಮತ್ತೊಮ್ಮೆ ರುಜುವಾತಾಗಿದೆ.

ಜೀವನ ಹಳೆಕಾಲದ ಬ್ಲಾಕ್ ಅಂಡ್ ವೈಟ್ ಚಿತ್ರದ ಹಾಗೆ ಇದೆ ಅಲ್ಲವೇ? ಕೇವಲ ದೈಹಿಕ ಆರೋಗ್ಯ ಅಶ್ಟೇ ಅಲ್ಲದೆ ಮಾನಸಿಕ ಆರೋಗ್ಯದಲ್ಲಿ ಉತ್ತಮ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಮನೆಮಂದಿಯೊಂದಿಗೆ ಕಾಲ ಕಳೆಯುವ ಅವಕಾಶ, ಅವರ ಇಶ್ಟ-ಕಶ್ಟಗಳನ್ನು ಇನ್ನಶ್ಟು ಅರ‍್ತಮಾಡಿಕೊಂಡತಾಗಿದೆ. ಇಶ್ಟದ ಆಟ-ಪಾಟಗಳಲ್ಲಿ ತೊಡಗಿಸಿಕೊಂಡ ಸಾರ‍್ತಕ ಬಾವನೆ. ಮನಸ್ಸಿನ ಒಡಲಾಳದಲ್ಲಿ ಹುದುಗಿದ್ದ ಎಶ್ಟು ಹವ್ಯಾಸಗಳು ಮತ್ತು ಪ್ರತಿಬೆ ಹೊರ ಬಂದಿದೆ. ಹಳ್ಳಿ ಜೀವನ, ಎಳನೀರು, ಗದ್ದೆ, ಹೂಲ, ತೋಟ, ಹಸು, ಕರು, ಎಮ್ಮೆ, ಕುರಿ, ಆಡು, ಇವುಗಳೊಂದಿಗಿನ ಒಡನಾಟ ಹಲವರ ಮನಸ್ಸಿಗೆ ಮುದ ನೀಡಿದೆ. ಸದಾ ಒತ್ತಡದ ಜೀವನದಲ್ಲಿ ಸಾಗಿಸುತ್ತಿದ್ದ ಜನರಿಗೆ ಸುದೀರ‍್ಗ ವಿಶ್ರಾಂತಿ ಸಿಕ್ಕಿದೆ. ರಜಾ ಹಾಕಿ ಕುಳಿತರು ಈ ಮಟ್ಟದ ವಿಶ್ರಾಂತಿ ಸಿಕ್ಕಿರುವುದಿಲ್ಲ. ಇನ್ನು ಕೆಲವರು ತಮ್ಮ ಬದುಕಿನ ಬಂಡಿ ಸಾಗಿಸಲು ಹಲವು ಕ್ರಿಯಾತ್ಮಕ ರೀತಿಯಲ್ಲಿ ತಾವು ಬೆಳೆದ ಬೆಳೆ ಮತ್ತು ತರಕಾರಿಗಳನ್ನು ಅವಶ್ಯಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳೆಲ್ಲಾ ನಮ್ಮ ನಿಮ್ಮೆಲ್ಲರಿಗೂ ಮತ್ತೊಮ್ಮೆ ಒದಗಿಬಂದ ಬಾಗ್ಯವಲ್ಲದೆ ಇನ್ನೇನು?

ಈ ವಿರಾಮ ನಮ್ಮ ನಿಮ್ಮ ಎಲ್ಲಾ ಕೆಟ್ಟ ಚಟಗಳಿಗೂ ವಿರಾಮ ನೀಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದಾದಮೇಲೆಯೂ ಅವುಗಳ ಸಹವಾಸ ಮಾಡಬೇಡಿ. ನಿಮ್ಮ ಆರೋಗ್ಯ ಸಮತೋಲನ ಕಾಯ್ದುಕೊಳ್ಳುವ ನಿರ‍್ದಾರ ನಿಮ್ಮ ಕೈಯಲ್ಲಿದೆ. ಇಶ್ಟು ದಿವಸ ಅನಿವಾರ‍್ಯವಾಗಿ ಹಿಡಿತದಲ್ಲಿದ್ದ ಮನಸ್ಸನ್ನು ಇನ್ನು ಮುಂದೆಯೂ ಹತೋಟಿಯಲ್ಲಿರಿಸಿ. ಆರೋಗ್ಯಕ್ಕಾಗಿ ಆಹಾರ ಪತ್ಯ ಮಾಡಬೇಕೆಂಬ ಆರೋಗ್ಯ ಶಾಸನದ ಪರಿಕಲ್ಪನೆಯು ಇತ್ತೀಚಿನ ದಿನಗಳಲ್ಲಿ ಸಂಪೂರ‍್ಣವಾಗಿ ತಲೆಕೆಳಗಾಯಿತು. ಬದುಕಿನ ಗುರಿಯೇ ಆನಂದದ ಅರಸುವಿಕೆ. ತಿನ್ನುವುದು ಉಣ್ಣುವುದು ಕೆಲಸ ಮಾಡುವುದು ಎಲ್ಲವೂ ಆನಂದದ ಅರಸುವಿಕೆಯ ಬಾಗಗಳು. ಆದರೆ ಈ ಅರಸುವಿಕೆಯಲ್ಲಿ ನಾವು ಎಡವಿದೆವು. ಬಯಸಿದ್ದನ್ನು ತಿಂದು , ಕುಡಿದು ಕುಶಿಪಡಿ. ಅದರಲ್ಲಿ ಒಳ್ಳೆಯದನ್ನೇ ಆಯ್ಕೆ ಮಾಡಬೇಕು. ಆಗಶ್ಟೇ ಕ್ಶಣಿಕ ಆನಂದಕ್ಕಿಂತ ಬವಿಶ್ಯದ ನಿತ್ಯ ಆನಂದ ಸಿದ್ದಿಯಾಗುವುದು. ಮೊದಮೊದಲು ಬಲವಂತವಾಗಿ ಅತವಾ ಅನಿವಾರ‍್ಯವಾಗಿ ಇದ್ದರೂ ಈಗ ಅಬ್ಯಾಸವಾಗಿಬಿಟ್ಟಿದೆ. ಈ ಅಬ್ಯಾಸವನ್ನೇ ಮುಂದುವರಿಸಿದರೆ ಮತ್ತಶ್ಟು ಸಂತ್ರುಪ್ತಿ ಸಿಗುವುದು ಕಂಡಿತ. ಇವತ್ತಿನ ಅನಿವಾರ‍್ಯ ಬದುಕು ಅವಶ್ಯಕ ಬದುಕಾಗಿ  ಬದಲಾವಣೆಗೊಂಡರೆ ಉತ್ತಮ ಆರೋಗ್ಯ ಸಿದ್ದಿಸುವುದು ನಿಶ್ಚಿತ.

(ಚಿತ್ರ ಸೆಲೆ: pixabay

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: