ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 1 ನೆಯ ಕಂತು

ಸಿ.ಪಿ.ನಾಗರಾಜ.

ಚೆನ್ನಬಸವಣ್ಣ, Chenna Basavanna

ಅಂತರಂಗದಲ್ಲಿ ಅರಿವಾದಡೇನಯ್ಯಾ
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ. (906-385)

ಅಂತರಂಗ+ಅಲ್ಲಿ; ಅಂತರಂಗ=ಮನಸ್ಸು/ಚಿತ್ತ/ಒಳಗಿನದು; ಅರಿವು+ಆದಡೆ+ಏನ್+ಅಯ್ಯಾ;

ಅರಿವು=ತಿಳುವಳಿಕೆ; “ ಅಂತರಂಗದಲ್ಲಿ ಅರಿವಾಗುವುದು “ ಎಂದರೆ “ ಜೀವನದಲ್ಲಿ ಯಾವುದು ಒಳ್ಳೆಯದು- ಯಾವುದು ಕೆಟ್ಟದ್ದು; ಯಾವುದು ದಿಟ-ಯಾವುದು ಸಟೆ; ಯಾವುದು ನೀತಿ-ಯಾವುದು ಅನೀತಿ “ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು/ಮನದಟ್ಟು ಮಾಡಿಕೊಳ್ಳುವುದು;

ಆದಡೆ=ಆದರೆ; ಏನ್=ಯಾವುದು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಆದಡೇನಯ್ಯಾ=ಅದರಿಂದ ಉಂಟಾದ ಪ್ರಯೋಜನವೇನು/ಪರಿಣಾಮವೇನು;

ಬಹಿರಂಗ+ಅಲ್ಲಿ; ಬಹಿರಂಗ=ಹೊರಗಿನದು/ಹೊರಗೆ ಗೋಚರಿಸುವಂತಹುದು; ಕ್ರೀ=ಕ್ರಿಯೆ/ಕೆಲಸ/ದುಡಿಮೆ/ಕಾಯಕ;

“ ಬಹಿರಂಗದಲ್ಲಿ ಕ್ರೀ ಇರುವುದು “ ಎಂದರೆ ನಿತ್ಯ ಜೀವನದ ವ್ಯವಹಾರಗಳಲ್ಲಿ ವ್ಯಕ್ತಿಯು ತನಗೆ, ತನ್ನ ಕುಟುಂಬಕ್ಕೆ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ದುಡಿಮೆಯನ್ನು ಮಾಡುವುದು; ಇಲ್ಲದ+ಅನ್ನಕ್ಕ; ಅನ್ನಕ್ಕ=ವರೆಗೆ/ತನಕ; ಇಲ್ಲದನ್ನಕ್ಕ=ಇಲ್ಲದವರೆಗೆ/ಇಲ್ಲದೆ ಹೋದರೆ/ಇಲ್ಲದಿದ್ದರೆ;

ವ್ಯಕ್ತಿಯು ಕೇವಲ ಅರಿವನ್ನು ಪಡೆದುಕೊಳ್ಳುವುದೇ ದೊಡ್ಡದಲ್ಲ. ಪಡೆದ ಅರಿವಿನಿಂದ ಒಳ್ಳೆಯ ಕಾಯಕವನ್ನು ಮಾಡಬೇಕು. ಅರಿವು ಮತ್ತು ದುಡಿಮೆ ಎರಡೂ ಜತೆಗೂಡಿದಾಗ ಮಾತ್ರ ವ್ಯಕ್ತಿಯ ಬದುಕು ಹಸನಾಗುವುದರ ಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ.

ಕೊಡುವಲ್ಲಿ ಕೊಂಬಲ್ಲಿ
ಅತಿಯಾಸೆಯಿಂದ ಹುಸಿಯ ನುಡಿಯದೆ
ಕೊಟ್ಟ ಭಾಷೆಗಳ ಪ್ರಾಣಾಂತ್ಯ ಬಂದಡೆಯೂ
ನುಡಿದಂತೆ ನಡೆವುದೇ ಸತ್ಯಾಚಾರವೆಂಬೆನಯ್ಯಾ. (960-395)

ಕೊಡು+ಅಲ್ಲಿ; ಕೊಡು=ನೀಡು/ದಾನ ಮಾಡು; ಕೊಂಬ+ಅಲ್ಲಿ; ಕೊಂಬ=ತೆಗೆದುಕೊಳ್ಳುವ/ಗಳಿಸುವ/ಪಡೆದುಕೊಳ್ಳುವ;

ಕೊಡುವಲ್ಲಿ ಕೊಂಬಲ್ಲಿ=ಏನನ್ನಾದರೂ ಇತರರಿಗೆ ಕೊಡುವಾಗ ಮತ್ತು ಇತರರಿಂದ ಪಡೆಯುವಾಗ;

ಅತಿ+ಆಸೆ+ಇಂದ; ಅತಿ=ಹೆಚ್ಚಾದ/ಮಿತಿಮೀರಿದ/ಬಹಳವಾದ; ಆಸೆ=ಬಯಕೆ/ಪಡೆದುಕೊಳ್ಳಬೇಕೆಂಬ ತುಡಿತ; ಹುಸಿ=ಸುಳ್ಳು/ಸಟೆ; ನುಡಿ=ಹೇಳು; ಹುಸಿಯ ನುಡಿಯದೆ=ಸುಳ್ಳನ್ನು ಹೇಳದೆ/ಸಟೆಯನ್ನಾಡದೆ

ಕೊಟ್ಟ=ನೀಡಿದ; ಭಾಷೆ=ನುಡಿ/ಮಾತು; ಕೊಟ್ಟ ಭಾಷೆ=ಇತರರಿಗೆ ಕೊಟ್ಟಿರುವ ಮಾತು/ನೀಡಿರುವ ವಾಗ್ದಾನ; “ ಬಾಶೆ ಕೊಡುವುದು/ಮಾತು ಕೊಡುವುದು “ ಎಂದರೆ ಮತ್ತೊಬ್ಬ ವ್ಯಕ್ತಿಗೆ ತನ್ನಿಂದ ಆಗುವ ಕೆಲಸವನ್ನು ಎಂತಹ ಅಡೆತಡೆಗಳು ಬಂದರೂ ಮಾಡಿಕೊಡುತ್ತೇನೆ ಎಂದು ನುಡಿಯುವುದು;

ಪ್ರಾಣ+ಅಂತ್ಯ; ಪ್ರಾಣ=ಜೀವ/ಉಸಿರು; ಅಂತ್ಯ=ಕೊನೆ/ಕಡೆ; ಪ್ರಾಣಾಂತ್ಯ=ಜೀವ ಹೋಗುವಿಕೆ/ಸಾವು/ಮರಣ; ಬಂದಡೆಯೂ=ಬಂದರೂ/ಉಂಟಾದರೂ; ನುಡಿದ+ಅಂತೆ; ಅಂತೆ=ಹಾಗೆ/ಅದೇ ರೀತಿ; ನುಡಿದಂತೆ=ಆಡಿದ ಮಾತಿನಂತೆ/ಕೊಟ್ಟ ಮಾತಿನಂತೆ; ನಡೆ=ಮಾಡುವುದು/ವರ‍್ತಿಸುವುದು; ನಡೆವುದೇ=ಕೆಲಸವನ್ನು ಮಾಡುವುದೇ; ನುಡಿದಂತೆ ನಡೆವುದೇ=ಕೊಟ್ಟ ಮಾತಿನಂತೆ ನಡೆದುಕೊಳ್ಳುವುದೇ;

ಸತ್ಯ+ಆಚಾರ+ಎಂಬೆನ್+ಅಯ್ಯಾ; ಸತ್ಯ=ದಿಟ/ವಾಸ್ತವ; ಆಚಾರ=ಒಳ್ಳೆಯ ನಡತೆ/ಕಟ್ಟುಪಾಡು/ಸಂಪ್ರದಾಯ; ಸತ್ಯಾಚಾರ=ಒಳ್ಳೆಯ ನಡೆನುಡಿ/ಒಳ್ಳೆಯ ವರ‍್ತನೆ; ಎಂಬೆನ್=ಎನ್ನುವೆನು;;

ವ್ಯಕ್ತಿಯು ತನ್ನ ನಿತ್ಯ ಜೀವನದ ವ್ಯವಹಾರದಲ್ಲಿ ಬೇರೆಯವರನ್ನು ವಂಚಿಸಿ ಹೆಚ್ಚು ಸಂಪತ್ತನ್ನು ಗಳಿಸಬೇಕೆಂಬ ಅತಿಯಾಸೆಯಿಂದ ಸುಳ್ಳನ್ನು ಹೇಳದೆ ಮತ್ತು ಜೀವ ಹೋಗುವಂತಹ ಸನ್ನಿವೇಶ ಎದುರಾದರೂ ಕೊಟ್ಟ ಮಾತಿಗೆ ತಪ್ಪದೆ ಬಾಳುವುದೇ ಸತ್ಯಾಚಾರ.

ನಡೆಯುಳ್ಳವರ ನುಡಿಯೆಲ್ಲ
ಬರಡು ಹಯನಾದಂತೆ
ನಡೆಯಿಲ್ಲದವರ ನುಡಿಯೆಲ್ಲ
ಹಯನು ಬರಡಾದಂತೆ. (1330-455)

ನಡೆ+ಉಳ್ಳ್+ಅವರ; ನಡೆ=ನಡವಳಿಕೆ/ವರ‍್ತನೆ/ನಡತೆ/ಆಚರಣೆ; ಉಳ್ಳ್=ಇರು/ಹೊಂದು/ಪಡೆ; ನಡೆಯುಳ್ಳವರ=ಜೀವನದಲ್ಲಿ ಒಳ್ಳೆಯ ನಡವಳಿಕೆಯನ್ನು ಹೊಂದಿರುವವರ; ” ಒಳ್ಳೆಯ ನಡವಳಿಕೆ “ ಎಂದರೆ ವ್ಯಕ್ತಿಯು ಮಾಡುವ ಕೆಲಸ ಮತ್ತು ಆತನು ಇತರರೊಂದಿಗೆ ವ್ಯವಹರಿಸುವ ರೀತಿಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಿರುವುದು; ನುಡಿ+ಎಲ್ಲ; ನುಡಿ=ಮಾತು/ಸೊಲ್ಲು;

ಬರಡು=ಗೊಡ್ಡಾಗಿರುವ ಪ್ರಾಣಿ. ಅಂದರೆ ಜೀವನದ ಉದ್ದಕ್ಕೂ ಒಮ್ಮೆಯಾದರೂ ಕರುವನ್ನು ಹಾಕದಿರುವ ಹಸು, ಎಮ್ಮೆ ಮುಂತಾದುವು. ಇವು ಹಾಲನ್ನು ನೀಡುವುದಿಲ್ಲ.

ಹಯನು+ಆದ+ಅಂತೆ; ಹಯನು=ಕರುವನ್ನು ಈದ/ಕರುವನ್ನು ಹಾಕಿದ ಪ್ರಾಣಿ. ಹಯನಾದ ಹಸು/ಎಮ್ಮೆಯು ಹಾಲನ್ನು ನೀಡುತ್ತದೆ; ಅಂತೆ=ಹಾಗೆ/ಆ ರೀತಿ; ನಡೆ+ಇಲ್ಲದವರ; ನಡೆಯಿಲ್ಲದವರ ನುಡಿ=ಒಳ್ಳೆಯ ನಡವಳಿಕೆಯಿಲ್ಲದವರ ಮಾತು; ನುಡಿ+ಎಲ್ಲ; ನುಡಿಯೆಲ್ಲ=ಮಾತೆಲ್ಲವೂ; ಬರಡು+ಆದ+ಅಂತೆ;

‘ ಹಯನು ‘ ಮತ್ತು ‘ ಬರಡು ‘ ಎಂಬ ಎರಡು ಪದಗಳನ್ನು ಇಲ್ಲಿ ವಚನಕಾರನು ರೂಪಕಗಳನ್ನಾಗಿ ಬಳಸಿದ್ದಾನೆ. ಹಯನಾದ ಪ್ರಾಣಿಯು ತನ್ನನ್ನು ಸಾಕಿ ಸಲಹುತ್ತಿರುವ ವ್ಯಕ್ತಿಗೆ ಹಾಲನ್ನು ನೀಡಿ ಒಳಿತನ್ನು ಉಂಟುಮಾಡುವಂತೆಯೇ ಒಳ್ಳೆಯ ಕಾಯಕವನ್ನು ಮಾಡುತ್ತಿರುವ ಮತ್ತು ನಡವಳಿಕೆಯನ್ನು ಹೊಂದಿರುವ ವ್ಯಕ್ತಿಯು ಆಡುವ ಮಾತು ಜನಸಮುದಾಯಕ್ಕೆ ಒಳಿತಿನ ದಾರಿಯನ್ನು ತೋರಿಸುತ್ತದೆ.

ಬರಡಾಗಿರುವ ಪ್ರಾಣಿಯು ಹಾಲನ್ನು ನೀಡದೆ ತನ್ನನ್ನು ಸಾಕಿ ಸಲಹುತ್ತಿರುವ ವ್ಯಕ್ತಿಗೆ ಹೊರೆಯಾಗಿ ಬದುಕುತ್ತಿರುವಂತೆ ಯಾವುದೇ ದುಡಿಮೆಯನ್ನು ಮಾಡದ ಮತ್ತು ಒಳ್ಳೆಯ ನಡವಳಿಕೆಯಿಲ್ಲದ ವ್ಯಕ್ತಿಯು ಆಡುವ ಮಾತಿನಿಂದ ಜನಸಮುದಾಯಕ್ಕೆ ಯಾವೊಂದು ರೀತಿಯಿಂದಲೂ ಪ್ರಯೋಜನವಿಲ್ಲ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: