ಕರ‍್ತವ್ಯ ನಿಶ್ಟೆ ಮತ್ತು ಆದರ‍್ಶ
ಕರ‍್ತವ್ಯ ಮತ್ತು ಆದರ‍್ಶ ಎರಡು ಪರಸ್ಪರ ಪೂರಕವಾದ ವಿಚಾರಗಳು. ಒಂದು ವೇಳೆ ಅವು ಪರಸ್ಪರ ಎದುರಾದರೆ ನಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಬಂದಾಗ ಉತ್ತರ ಹುಡುಕುವುದು ಅಶ್ಟೊಂದು ಸುಲಬವಲ್ಲ. ಇದೊಂದು ರೀತಿ ಮನೆಯಲ್ಲಿ ಅಪ್ಪನ ಮಾತು ಕೇಳಬೇಕಾ, ಅಮ್ಮನ ಮಾತು ಕೇಳಬೇಕಾ ಎನ್ನುವ ಪ್ರಶ್ನೆ ಅಚಾನಕ್ಕಾಗಿ ಮಕ್ಕಳಿಗೆ ಎದುರಾದಂತೆ. ನಿರೀಕ್ಶೆ ಮಾಡದಿದ್ದ, ಸುಲಬವಾಗಿ ಉತ್ತರಿಸಲಾಗದ ಪ್ರಶ್ನೆ. ‘ಇದೇನಪ್ಪ ಅಪ್ಪ ಅಮ್ಮ ಇಬ್ಬರೂ ಒಂದೇ ರೀತಿಯಲ್ಲಿ ಮಾತನಾಡುತಿದ್ದವರು ಇವತ್ತು ಬೇರೆ ಬೇರೆ ಮಾತು ಹೇಳುತ್ತಿದ್ದಾರೆ, ಇಬ್ಬರಲ್ಲಿ ಒಬ್ಬರ ಮಾತು ನನಗೆ ಇಶ್ಟವಾಗಿದೆ. ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತೆ. ಹಾಗಾದ್ರೆ ಯಾರ ಮಾತು ಕೇಳಬೇಕು ನಾನು?’ ಎಂಬ ಗೊಂದಲವಿದ್ದಂತೆ.
ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ, ಉತ್ತರ ಹುಡುಕಲು ನಮಗೆ ನೆರವಾಗುವುದೊಂದೇ – ಅದು ನಮ್ಮ ಮನಸ್ಸು, ಆತ್ಮಸಾಕ್ಶಿ! ಪರಿಹಾರದಲ್ಲೂ ಕೂಡ ಎರಡು ಬಗೆ. ಒಂದು, ನಮಗೆ ಇಶ್ಟವಾಗುವ ಪರಿಹಾರ ಹುಡುಕುವುದು. ಇಲ್ಲವೇ ಇಬ್ಬರಿಗೂ ನೋವಾಗದಂತೆ, ನಮಗೆ ಮತ್ತು ಅವರಿಗೂ ಇಶ್ಟವಾಗುವ ಬೇರೆ ಪರಿಹಾರ ಹುಡುಕುವುದು. ( ಉದಾಹರಣೆಗೆ ಅಪ್ಪನ ಆಯ್ಕೆ ಸರ‍್ಕಾರಿ ಅದಿಕಾರಿಯಾಗಬೇಕು ಎನ್ನುವುದು. ಅಮ್ಮನಿಗೆ ಮಗ/ಮಗಳು ವೈದ್ಯರಾಗಲಿ ಎನ್ನುವುದು. ಒಂದು, ನನಗೆ ಇಶ್ಟವಾದ ಕೆಲಸ ಮಾಡುತ್ತೇನೆ ಎಂದು ಅವರ ಬಳಿ ಹೇಳುವುದು. ಇಲ್ಲವೇ ವೈದ್ಯ ಕಲಿಕೆ ಮಾಡಿ, ಸರ‍್ಕಾರಿ ವೈದ್ಯಾದಿಕಾರಿಯಾಗುವುದು. ಇದರಿಂದ ಅಪ್ಪ-ಅಮ್ಮ ಇಬ್ಬರಿಗೂ ಸಮಾದಾನ).
ಕರ‍್ತವ್ಯ ಮತ್ತು ಆದರ‍್ಶ ಅಪ್ಪ-ಅಮ್ಮರಂತೆ. ನಮ್ಮ ಕೆಲಸವನ್ನು ನಿಶ್ಟೆಯಿಂದ ಮಾಡುವುದು ಕೂಡ ಒಂದು ಆದರ‍್ಶ ಎನ್ನುವುದನ್ನು ನಾವು ಮರೆಯಬಾರದು! ಆದರೂ ಕೆಲವೊಮ್ಮೆ ಕರ‍್ತವ್ಯ ಮತ್ತು ಆದರ‍್ಶ ಪರಸ್ಪರ ಎದುರಾಗುವ ಸಂದರ‍್ಬಗಳು ನಮ್ಮ ಜೀವನದಲ್ಲಿ ಬರುತ್ತವೆ. ಅಂತ ಸಂದರ‍್ಬಗಳನ್ನು ಜಾಣ್ಮೆಯಿಂದ ಹೇಗೆ ನಿರ‍್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸು ಅವಲಂಬಿಸಿರುತ್ತದೆ. ಆದರ‍್ಶ ಪರಿಪಾಲನೆ ನಮ್ಮ ವ್ಯಕ್ತಿತ್ವಕ್ಕೆ ಹಿಡಿಯುವ ಕನ್ನಡಿ. ಕರ‍್ತವ್ಯ ನಿಶ್ಟೆ ಪಾಲಿಸುವಾಗ ನಾವು ನಂಬಿರುವ ಆದರ‍್ಶಗಳನ್ನು ಕೂಡ ಮರೆಯದಿದ್ದರೆ ನಮ್ಮ ಯಶಸ್ವನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.
ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಗಟನೆಗಳ ಬಗ್ಗೆ ಬೆಳಕು ಹರಿಸುವುದಾದರೆ , ಕರೋನದ ಬೀಕರತೆ ನಮ್ಮೆಲ್ಲರಿಗೂ ಅರಿವಿದೆ. ನಮ್ಮ ಪೊಲೀಸರು ತಮ್ಮ ಶಕ್ತಿಮೀರಿ , ನಮ್ಮ ಒಳಿತಿಗಾಗಿ ಅಹೋ ರಾತ್ರಿ ಶ್ರಮಿಸುತ್ತಿದ್ದಾರೆ . ಆದರೆ ಅವರಲ್ಲಿ ಕೆಲವೊಬ್ಬರು ಕರ‍್ತವ್ಯ ನಿಶ್ಟೆಯ ನೆಪದಲ್ಲಿ ಮಾನವತೆ ಮರೆಯುತ್ತಿದ್ದಾರಾ ಎಂದನಿಸುತ್ತದೆ. ಮಾನವತೆ ಕೂಡ ಒಂದು ಆದರ‍್ಶವೇ. ಸಮಾಜಕ್ಕೆ ತಮ್ಮ ರೀತಿ, ನಡೆ ನುಡಿಗಳಿಂದ ಆದರ‍್ಶ ಪ್ರಾಯರಾಗಬೇಕಾದದ್ದು ಅವರ ಕರ‍್ತವ್ಯ. ಕರೋನದಿಂದ ಪಾರಾಗಲು ಸರ‍್ಕಾರ, ಅಂಗಡಿ, ರಸ್ತೆ ಎಲ್ಲವನ್ನು ಮುಚ್ಚಿ, ಜನರಿಗೆ ಮನೆಯಲ್ಲಿರಿ ಅಂತ ಹೇಳಿದ ಮೇಲೆ ಜನ ಬೀದಿಗೆ ಬರುವುದು ತಪ್ಪು. ಆದರೆ ಅನಿವಾರ‍್ಯ ಪರಿಸ್ತಿತಿಯಿಂದ ಬೀದಿಗೆ ಬಂದ ಜನರನ್ನು ಯಾಕಾಗಿ ಬಂದಿದೀರಿ ಎಂದು ವಿಚಾರಿಸದೆ ಕೂಡ ಲಾಟಿಯಿಂದ ಹೊಡೆಯುವುದು ಕರ‍್ತವ್ಯ ಪಾಲನೆಯಲ್ಲ! ಸರಿ, ಅದು ಅವರ ಕರ‍್ತವ್ಯನಿಶ್ಟೆ ಎಂದೇ ಒಪ್ಪಿಕೊಳ್ಳುವ. ಸಮಾಜದ ಪ್ರತಿಯೊಬ್ಬ ಅಸಹಾಯಕರನ್ನು ರಕ್ಶಿಸುವ, ಆದರ‍್ಶವನ್ನು ಪರಿಪಾಲನೆ ಮಾಡುತ್ತೇನೆ ಎಂದು ಅವರು ಕೊಟ್ಟಿರುವ ವಚನಕ್ಕೆ ಯಾವ ಬೆಲೆ ಇದೆ? ಕರ‍್ತವ್ಯನಿಶ್ಟೆಯೊಂದಿಗೆ ಆದರ‍್ಶ ಬೆರೆತಾಗ ಮಾತ್ರ ಕೆಲಸಕ್ಕೆ, ವ್ಯಕ್ತಿತ್ವಕ್ಕೆ ಒಂದು ಬೆಲೆ ಬರುತ್ತದೆ. ಹಾಗಂತ ಎಲ್ಲರೂ ಒಂದೇ ಎಂದು ಹೇಳುತ್ತಿಲ್ಲ. ಬಡವರ ಹಸಿವನ್ನು ನೀಗಿಸಿದ, ಕಶ್ಟದಲ್ಲಿರುವವರಿಗೆ ಸಹಾಯ ಮಾಡಿದ ಪೊಲೀಸರು ಎಶ್ಟೋ ಜನ ಇದ್ದಾರೆ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಕ ಮಾಡುತ್ತಿಲ್ಲ, ಮಾಡಲೂಬಾರದು!
ಕರ‍್ತವ್ಯನಿಶ್ಟೆಯ ಯಶಸ್ಸು ಅಡಗಿರುವುದೇ ಆದರ‍್ಶ ಪೂರಕವಾಗಿ ಹೆಜ್ಜೆ ಇಟ್ಟಾಗ. ಆದರೆ ಆದರ‍್ಶ ಮತ್ತು ಕರ‍್ತವ್ಯನಿಶ್ಟೆ ಎರಡು ಎದುರು ಬದುರು ಆದಾಗ, ಹೊಂದಾಣಿಕೆ ಮಾಡಿಕೊಂಡು, ಮನಶಾಂತಿ ಕೆಡಿಸಿಕೊಳ್ಳುವುದು ಕೂಡ ತಪ್ಪು. ಕರ‍್ತವ್ಯಕ್ಕೆ ಯಾವಾಗಲು ಮೋಸ ಮಾಡಬಾರದು. ಆದರೆ ಯಾವಾಗ ತನ್ನ ಕರ‍್ತವ್ಯ, ಆದರ‍್ಶಕ್ಕೆ ಅಡ್ಡಿಬರುತ್ತೆ ಎಂದು ಅನಿಸಲಾರಂಬಿಸುತ್ತದೆಯೋ ಆಗ ಅಲ್ಲಿಂದ ಹೊರಗೆ ಬರುವುದೇ ಜಾಣತನ. ತನ್ನ ಕರ‍್ತವ್ಯವನ್ನು, ತಾನು ನಂಬಿರುವ ಆದರ‍್ಶಕ್ಕೆ ದಕ್ಕೆ ಬಾರದಂತೆ ನಿರ‍್ವಹಿಸಲು ಎಲ್ಲ ಪ್ರಯತ್ನವನ್ನು ಮಾಡಬೇಕು. ಬೇರೆ ಯಾವ ದಾರಿಯೂ ಇಲ್ಲ, ನಾನು ನನ್ನ ಆತ್ಮ ಸಾಕ್ಶಿಗೆ ಮೋಸ ಮಾಡುತ್ತೇನೆ ಎನ್ನುವ ಬಾವನೆ ಮನಸಿಗೆ ಬಂದರೆ ಅಲ್ಲಿಂದ ಹೊರಗೆ ಬರುವುದೇ ಸೂಕ್ತ. ಎಶ್ಟೋ ಸರ‍್ಕಾರಿ ಅದಿಕಾರಿಗಳು, ತಮ್ಮ ಆದರ‍್ಶಗಳನ್ನು ಬಲಿ ಕೊಡದೆ, ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ. ಇದು ಜಾಣತನದ ಕೆಲಸ ಎಂದು ನನ್ನ ಅನಿಸಿಕೆ. ಅಲ್ಲೇ ಉಳಿದುಕೊಂಡರೆ ತನ್ನ ಕರ‍್ತವ್ಯವನ್ನು ಸರಿಯಾಗಿ ನಿರ‍್ವಹಿಸಬೇಕಾಗುವ ಹೊಣೆ. ಹಾಗಂತ ಆತ್ಮಸಾಕ್ಶಿಗೆ ಮೋಸ ಮಾಡುವುದು ಸರಿಯಲ್ಲ. ‘ನಾನು ನನ್ನ ಆದರ‍್ಶವನ್ನು ಬಿಡಲಾರೆ’ ಎಂದು ನಾವು ನಿರ‍್ವಹಿಸಬೇಕಾದ ಕರ‍್ತವ್ಯಕ್ಕೆ ಮೋಸ ಮಾಡುವುದು ಕೂಡ ಸರಿಯಲ್ಲ. ಎಲ್ಲದಕ್ಕಿಂತ ದೊಡ್ಡದು ನಮಗೆ ಸೂಕ್ತವಾದದ್ದು. ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಹಕ್ಕು ನಮಗೆ ಇದೆ.
ಬಾಲ್ಯದಲ್ಲಿ ಅಹಿಂಸೆಯನ್ನು ಆದರ‍್ಶವನ್ನಾಗಿಟ್ಟುಕೊಂಡ ವ್ಯಕ್ತಿ ಕೊನೆಗೆ ಸೈನಿಕನಾಗುತ್ತಾನೆ ಎಂದುಕೊಳ್ಳೋಣ. ಆತ ಸೈನಿಕನಾಗಬೇಕೆಂದು ನಿರ‍್ದರಿಸಿದ ಮೇಲೆ, ಕಂಡಿತ ಅವನಿಗೆ ಗೊತ್ತಿರುತ್ತದೆ, ಕರ‍್ತವ್ಯವನ್ನು ನಿರ‍್ವಹಿಸುವಾಗ ತನ್ನ ಆದರ‍್ಶವನ್ನು ಬಲಿಗೊಡಬೇಕು ಎಂಬುದು. ಗುಂಡು ಹಾರಿಸುವ ಇಲ್ಲವೇ ಒಬ್ಬನ ಪ್ರಾಣ ತೆಗೆಯುವ ಸಂದರ‍್ಬ ಬರಬಹುದು. ಆಯ್ಕೆಯ ಸ್ವಾತಂತ್ರ್ಯ ಆತನಲ್ಲೇ ಇತ್ತು. ಈ ಸಂದರ‍್ಬದಲ್ಲಿ ಕಂಡಿತ ಆದರ‍್ಶ ದೊಡ್ಡದಲ್ಲ. ಹಾಗಾಗಿ ನಾನು ಮೊದಲು ಹೇಳಿದ್ದು, ಆದರ‍್ಶ, ಕರ‍್ತವ್ಯ ಎರಡನ್ನು ಪರಸ್ಪರ ಹೋಲಿಕೆ ಮಾಡಲು ಸಾದ್ಯವಿಲ್ಲ. ಅವು ಪರಸ್ಪರ ಪೂರಕ. ಅಮ್ಮ-ಅಪ್ಪನಂತೆ. ಸೂಕ್ತವಾದ ನಿರ‍್ದಾರ ಕೈಗೊಳ್ಳಬೇಕಾಗಿರುವುದು ನಮ್ಮ ಆತ್ಮ ಸಾಕ್ಶಿ.
ಆದರೆ ಒಂದು ವಿಚಾರ ಮನಸಿನಲ್ಲಿರಬೇಕು. ಕೆಲಸವೇ ದೇವರು.ಅದಕ್ಕೆ ಯಾವುದು ಅಡ್ಡಿ ಬರಬಾರದು. ಆದರ‍್ಶ ಕೂಡ! ಕೆಲಸದಲ್ಲಿ ಯಾವುದೇ ಕುಂದು ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಆದರೆ, ನಮ್ಮ ಕರ‍್ತವ್ಯ ‘ನಾವು ನಂಬಿರುವ ಆದರ‍್ಶಕ್ಕೆ ವಿರುದ್ದವಾದದ್ದು, ಇದನ್ನು ನಿರ‍್ವಹಿಸಿದರೆ, ನನ್ನ ಕುಟುಂಬ, ನನ್ನ ಸ್ನೇಹಿತರು, ಕಡೆಗೆ ನನ್ನ ಆತ್ಮಸಾಕ್ಶಿ ಒಪ್ಪದು’ ಎಂದು ಮನಸಿಗೆ ಅನಿಸಿದರೆ, ಅಲ್ಲಿಂದ ಹೊರಗೆ ಬಂದು ಬಿಡಬೇಕು. ಹೊಸ ಬದುಕು ಕಟ್ಟಿಕೊಳ್ಳಬೇಕು. ಅದನ್ನು ಬಿಟ್ಟು, ಆತ್ಮಸಾಕ್ಶಿಗೆ ಮೋಸಮಾಡಿಕೊಂಡು ಅಲ್ಲೇ ಉಳಿಯುವ ಪ್ರಯತ್ನ ಪಟ್ಟರೆ, ಅದು ನಾವು ನಮ್ಮ ಆದರ‍್ಶಗಳನ್ನು ಮರೆತು ಹೊಂದಾಣಿಕೆ ಮಾಡಿಕೊಂಡಂತೆ. ಹಾಗೆ ಮಾಡಿ ನಾವು ಯಶಸ್ವಿನ ತುತ್ತ ತುದಿಗೂ ಏರಬಹುದು, ಆದರೆ ಮನಸಿಗೆ ಸಮಾದಾನ ಇರುತ್ತದೆಯೇ? ಬಹುಶಹ ಇದೊಂದು ಉತ್ತರ ಗೊತ್ತಿಲ್ಲದ ಯಕ್ಶ ಪ್ರಶ್ನೆ! ಹಾಗಂತ ಕರ‍್ತವ್ಯಕಾಗಿ ಆದರ‍್ಶ ಮರೆತವರು ಎಲ್ಲರೂ ಕೆಟ್ಟವರೇ? ಕಂಡಿತ ಅಲ್ಲ. ಪರಿಸ್ತಿತಿ ಮನುಶ್ಯನನ್ನು ಕೆಲವೊಮ್ಮೆ ಆದರ‍್ಶ ಮರೆತು ಕರ‍್ತವ್ಯ ನಿರ‍್ವಹಿಸುವಂತೆ ಮಾಡುತ್ತದೆ. ಹಾಗೆ ಅದೇ ಪರಿಸ್ತಿತಿ, ಆದರ‍್ಶ ಪರಿಪಾಲನೆಗಾಗಿ ಕರ‍್ತವ್ಯ ಮರೆಯುವಂತೆ ಮಾಡುತ್ತದೆ! ಆದರ‍್ಶ ಮತ್ತು ಕರ‍್ತವ್ಯದ ನಡುವೆ ಸರಿಯಾದ ಸಮನ್ವಯ ಸಾದಿಸಿದರೆ ಗೆಲುವು ಕಚಿತ ಮತ್ತು ನೆಮ್ಮದಿಯೂ ಕಂಡಿತ!
( ಚಿತ್ರಸೆಲೆ : people.highline.edu )
ಇತ್ತೀಚಿನ ಅನಿಸಿಕೆಗಳು