ಕವಿತೆ : ನಾನು ದಾರಿ
ಮರಬಿದ್ದಂತೆ ಮೂಲೆ ಮೂಲೆಗೂ
ಕೈ ಕಾಲು ಚಾಚಿ ಬಿದ್ದ ದಾರಿ ನಾನು
ನನ್ನ ಮೈತುಂಬ ಹರಿದಾಡುವ ನೆತ್ತರು
ಹೆಪ್ಪುಗಟ್ಟಿದೆ ಅಲ್ಲಲ್ಲಿ ರೋಸಿ ಕುಂತು
ಕಾಲಿಗೆ ಜೋಡಿಲ್ಲದೆ ಬಣಬಣದ
ಅರಳು ಮರಳಿನ ಬೆನ್ನೇರಿ
ನಡೆದು ನಡೆದು ಸಾಯುವವರಿಗೆ
ನಾನು ಮಡಿಲಾದೆನೆ ವಿನಹ
ಸಾಂತ್ವನದ ಮಾತಾಡಲಿಲ್ಲ
ಮತ ಕೇಳುವವರ ಕಾಲ್ನಡಿಗೆಯ
ಬೂಟಾಟಗಳ ಕಂಡಿದ್ದೇನೆ
ಬಿರಿಯುವಂತೆ ತಿಂದು
ತೂಗಾಡಿ ಮಲಗಿದವರ ಕಂಡಿದ್ದೇನೆ
ತನ್ನ ತವರೂರಿಗೆ ಹಸಿವಿನ ಅಸ್ತಿಪಂಜರದಲ್ಲಿ
ನಡೆವವರನ್ನು ಕಂಡು ಕೊರಗಿದೆನು ಇಂದು
ತಲೆ ತುಂಬ ಬಾಳಿನ ಗಂಟುಗಳು
ಕಂಕುಳಲ್ಲಿ ಜೀವನಕೆ ಕಣ್ಣು ಬಿಡದ ಕಂದಮ್ಮಗಳು
ಎಂದೂ ಸಾಯುವುದಿಲ್ಲ ಈ ದಿನದ
ಹಾದಿಯಲಿ ಬರೆದ ಜೀವನದ ಕವಿತೆ
ರಾಚುವ ಕಂಗಳಲ್ಲಿ ಎದುರು ನೋಡುತ್ತಿವೆ
ನನ್ನ ಎದೆಯ ಮೇಲೆ ಕುಳಿತು
ನಾನು ದಾರಿ, ದಾರಿ ಹೋಕನ ಗುರಿ
ಆಗಾಗ ಬಿರಿಯುತ್ತೇನೆ ಇಂತವರ ನೋವುಗಳ
ನನ್ನ ಮಡಿಲಿಗೆ ತುಂಬಿಕೊಂಡು
ಹೆಗಲಿಡಿದು ನಡೆಸುತ್ತೇನೆ ಬಡಬಗ್ಗರ ಕೈಹಿಡಿದು
ನನ್ನ ಮಾತುಗಳೆಲ್ಲ ಕವಿತೆಯಾಗುತ್ತವೆ
ಸಾಯುವುದಿಲ್ಲ, ಮುಂದೊಂದು ದಿನ ನೆನಪಿಸಿ
ಪ್ರಶ್ನಿಸುತ್ತವೆ
( ಚಿತ್ರಸೆಲೆ : medium.com )
ಇತ್ತೀಚಿನ ಅನಿಸಿಕೆಗಳು