ಪ್ಲಾಸ್ಟಿಕ್‌ನಿಂದ ಬಿಡುಗಡೆ ಯಾವಾಗ?

–  ಪ್ರಕಾಶ್‌ ಮಲೆಬೆಟ್ಟು.

ಪ್ಲಾಸ್ಟಿಕ್ Plastic Issue

ಪ್ಲಾಸ್ಟಿಕ್ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರವೇಶ ಪಡೆದ ಮೇಲೆ, ನಮ್ಮ ಜೀವನ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆ ಕಂಡುಬಂದಿತು. ಎಶ್ಟೋ ನಮ್ಮ ದಿನನಿತ್ಯದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ಲಾಸ್ಟಿಕ್‌ನಿಂದ ಪರಿಹಾರ ದೊರಕಿತು ಕೂಡ. ತುಂಬಾ ಅಗ್ಗವಾಗಿ ದೊರಕುವ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಾವು ತುಂಬಾನೇ ಅವಲಂಬಿತರಾಗಿದುದರಲ್ಲಿ ಯಾವುದೇ ಆಶ್ಚರ‍್ಯವಿಲ್ಲ. ಇಂದು ನಮ್ಮ ಜೀವನ ಹೇಗಾಗಿ ಬಿಟ್ಟಿದೆ ಅಂದ್ರೆ ಪ್ಲಾಸ್ಟಿಕ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾದ್ಯವಿಲ್ಲ. ಪ್ಲಾಸ್ಟಿಕ್ ಒಂದು ರೀತಿಯಲ್ಲಿ ಸರ‍್ವಾಂತರ‍್ಯಾಮಿ. ರೂಪ ಹಲವು, ಬಳಕೆಯ ವಿದಾನ ಕೂಡ ಹಲವು! ಆದ್ರೆ ಬಳಸದ ಮನೆ ಇಲ್ಲ. ಆದರೆ ತಿಳಿದೋ ತಿಳಿಯದೆಯೋ ನಾವು ಒಂದು ಗೋಜಲಿನೊಳಗೆ ಸಿಕ್ಕಿಹಾಕಿಕೊಳ್ಳುತಿದ್ದೇವೆ ಎನ್ನುವ ಅರಿವು ನಮಗೆ ಬರುವಶ್ಟರೊಳಗೆ ಕಾಲ ಮಿಂಚಿ ಹೋಗಿದೆ. ಪ್ಲಾಸ್ಟಿಕ್ ಎಶ್ಟೊಂದು ಹಾನಿಕಾರಕ ಎನ್ನುವುದು ನಮಗೆಲ್ಲ ತಿಳಿದಿದೆ. ಪ್ಲಾಸ್ಟಿಕ್ ಹಾನಿಕಾರಕ ಎನ್ನುವುದು ಒಂದು ನಿರ‍್ವಿವಾದ ಸತ್ಯ ಎಂದು ಕೂಡ ನಮಗೆಲ್ಲ ಗೊತ್ತಿದೆ. ಇತ್ತೀಚಿಗೆ ಪ್ಲಾಸ್ಟಿಕ್ ಮುಕ್ತ ಬಾರತ ಎನ್ನುವ ಕೂಗು ತುಂಬಾ ದೊಡ್ಡದಾಗಿ ಕೇಳಿಬರುತ್ತಿದೆ. ಆದರೆ ವಾಸ್ತವದಲ್ಲಿ ಇದು ಸಾದ್ಯವೇ. ಕಶ್ಟ ಅಲ್ವ? ಆದರೆ ಅಸಾದ್ಯ ಕೂಡ ಅಲ್ಲ ಎನ್ನುವುದು ಕೂಡ ಅಶ್ಟೇ ಸತ್ಯ. ಪ್ರಯತ್ನ ಪಡಬಹುದು ಅಲ್ವೇ.

ನಿಮಗೆ ಗೊತ್ತಿರಬಹುದು, ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು 2022 ರ ವೇಳೆಗೆ ನಿರ‍್ಮೂಲನೆ ಮಾಡುವ ಮಹತ್ವಾಕಾಂಕ್ಶೆಯ ಗುರಿಯನ್ನು ಕೇಂದ್ರ ಸರ‍್ಕಾರ ನಿಗದಿಪಡಿಸಿದೆ. ಆದರೆ ಜನಸಾಮಾನ್ಯರ ಸಹಕಾರವಿಲ್ಲದೆ ಯಾವುದು ಸಾದ್ಯವಿಲ್ಲ. ಹಾಗಾದ್ರೆ ಪ್ಲಾಸ್ಟಿಕ್ ಮುಕ್ತ ಬಾರತದ ಕನಸು ನನಸು ಮಾಡುವಲ್ಲಿ ಏನೆಲ್ಲ ಮಾಡಬಹುದು ಎನ್ನುವ ಒಬ್ಬ ಜನಸಾಮಾನ್ಯನಾಗಿ ನನ್ನ ಮನಸಿಗೆ ಬಂದ ವಿಚಾರವನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

ಅರಿವು ಮತ್ತು ಕಾನೂನು

ಪ್ಲಾಸ್ಟಿಕ್ ಹೇಗೆ ಹಾನಿಕಾರಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೂ ಬಳಕೆ ಕಮ್ಮಿ ಮಾಡಲ್ಲ ನಾವು! ಏಕೆ? ಅರಿವಿನ ಕೊರತೆ? ಕಂಡಿತ ಅಲ್ಲ. ನಮ್ಮ ಅಬ್ಯಾಸವೇ ಹಾಗೆ. ಎಲ್ಲದಕ್ಕೂ ಉದಾಸೀನ, ತಾತ್ಸಾರ, ನಮ್ಮ ಪರಿಸರ, ದೇಶದ ಬಗ್ಗೆ ಅಬಿಮಾನದ ಕೊರತೆ ಹೀಗೆ ಕಾರಣ ನೂರಾರು. ನಮ್ಮ ಸುತ್ತಲಿನ ಪರಿಸರ ನೋಡಿದ್ರೆ ಗೊತ್ತಾಗುತ್ತೆ, ನಾವೆಶ್ಟು ಆಲಸಿಗಳು, ಎಶ್ಟೊಂದು ಬೇಜವಾಬ್ದಾರಿಗಳು! ಅದೇನೇ ಇರಲಿ ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ‍್ತವ್ಯ. ಹಾಗಾದ್ರೆ ಹೇಗೆ ಅರಿವು ಮೂಡಿಸಬಹುದು? ಮೊದಲಿಗೆ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಶಕರಿಂದ ಹಾಗೆ ಮನೆಯಲ್ಲಿ ಪಾಲಕರಿಂದ ಅರಿವು ಮೂಡಿಸುವ ಕೆಲಸ ಶುರು ಆಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾದ್ಯವಾದಶ್ಟು ಕಮ್ಮಿ ಮಾಡಲು ಅವರಿಗೆ ಪ್ರೇರೇಪಿಸಬೇಕು. ಶಾಲೆಯ ಆವರಣದಲ್ಲಿ ಪ್ಲಾಸ್ಟಿಕ್ ನಿಶೇದ, ಮನೆಯಲ್ಲಿ ಪ್ಲಾಸ್ಟಿಕ್ ಉಪಯೋಗವನ್ನು ಕಮ್ಮಿ ಮಾಡುವುದು – ಇಂತಹದನ್ನು ನೋಡಿ ಬೆಳೆಯುವ ಮಕ್ಕಳು ಮುಂದೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಅರಿವು ಬಾಲ್ಯದಲ್ಲೇ ಮೂಡಿದರೆ ಕಡೆಯತನಕ ಅದು ಗಟ್ಟಿಯಾಗಿ ಉಳಿಯುತ್ತೆ. ಹಾಗೆ ನಮ್ಮ ಪರಿಸರದಲ್ಲಿ, ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆಯುವರನ್ನು ವಿರೋದಿಸುವ ಮೂಲಕ ಅರಿವು ಮೂಡಿಸಬಹದು. ಪ್ಲಾಸ್ಟಿಕ್ ಅಲ್ಲಲ್ಲಿ ಎಸೆಯುವುದು ಒಂದು ಹೊಣೆಗೇಡಿತನದ ವರ‍್ತನೆ ಎಂದು ಅಕ್ಕ ಪಕ್ಕದ ಜನ ಹೇಳಿ ಅರಿವು ಮೂಡಿಸಿದರೆ, ಇಂತಹ ಹೊಣೆಗೇಡಿತನ ತನ್ನಿಂದತಾನೇ ಕಡಿಮೆಯಾಗುತ್ತದೆ. ಇನ್ನು ನಮ್ಮ ಜನ, ಎಶ್ಟು ಹೇಳಿದರು ಅರ‍್ತಮಾಡಿಕೊಳ್ಳಲು ಇಶ್ಟವಿಲ್ಲದಿದ್ದಂತೆ ವರ‍್ತಿಸುತ್ತಾರೆ. ಇಂತವರಿಗೆ ಸರಿ ದಾರಿಗೆ ತರಲು ಇರುವುದು ಒಂದೇ ಉಪಾಯ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಕಟ್ಟು ನಿಟ್ಟಿನ ಕಾನೂನನ್ನು ಜಾರಿಗೆ ತಂದು, ದುರ‍್ಬಳಕೆ ಮಾಡುವ ಜನರಿಗೆ ದಂಡ ಹೇರಿದರೆ ಜನ ತಾವಾಗೇ ಸರಿ ದಾರಿಗೆ ಬರುತ್ತಾರೆ. ಸರ‍್ಕಾರ ಹಾಗು ಸಂಬಂದಿತ ವ್ಯಕ್ತಿಗಳು ಹೊಣೆಗಾರಿಕೆ ಅರಿತು ಇಚ್ಚಾಶಕ್ತಿ ತೋರ‍್ಪಡಿಸಿದರೆ ಕಂಡಿತವಾಗಿ ಇದು ಸಾದ್ಯ ಕೂಡ. ಹಾಗೆ ಟಿವಿ ಮಾದ್ಯಮಗಳು, ಸಾಮಾಜಿಕ ಮಾದ್ಯಮಗಳು, ಮನಸಿಗೆ ಹಾನಿಕಾರಕವಾದ ರಾಜಕೀಯ ಸುದ್ದಿಗಳನ್ನು ಕಡಿಮೆ ಮಾಡಿ ಪ್ಲಾಸ್ಟಿಕ್ ಹಾಗೆ ಇನ್ನಿತರ ಸಮಾಜಕ್ಕೆ, ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದಲ್ಲಿ ನಿಜವಾಗಿಯೂ ಪ್ಲಾಸ್ಟಿಕ್ ಮುಕ್ತ ಬಾರತ ಮಾತ್ರವಲ್ಲ, ಒಂದು ಸುಂದರ ಬಾರತವನ್ನು ನಿರ‍್ಮಿಸಲು ಸಾದ್ಯವಿದೆ.

ಪ್ಲಾಸ್ಟಿಕ್ ಮುಕ್ತ ಬಾರತ

ನಾವು ಪ್ರಬಲಗೊಳ್ಳಬೇಕಾದಲ್ಲಿ ಆಂತರಿಕವಾಗಿ ನಾವು ಪ್ರಬಲರಾಗಬೇಕು. ಪ್ಲಾಸ್ಟಿಕ್ ಒಂದು ಬಹುದೊಡ್ಡ ಶತ್ರು. ನಮ್ಮ ಆರೋಗ್ಯಕ್ಕೆ, ನಮ್ಮ ಪರಿಸರಕ್ಕೆ, ನಮ್ಮ ಮಣ್ಣಿಗೆ, ಪಶು ಪಕ್ಶಿಗಳಿಗೆ ಪ್ಲಾಸ್ಟಿಕ್ ಹಾನಿಕಾರಕ. ಅದರ ವಿರುದ್ದ ಹೋರಾಡಲು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಪ್ರಯತ್ನ ಪಡಬೇಕು. ಆಗ ಮಾತ್ರ ಯಶಸ್ಸು ಸಾದ್ಯ. ಈ ನಿಟ್ಟಿನಲ್ಲಿ ಏನು ಮಾಡಬಹುದು? ಮೊದಲಿಗೆ ಮನೆಯಿಂದ ಹೊರಡುವಾಗಲೇ, ಬಟ್ಟೆಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಮಾರುಕಟ್ಟೆಗೆ ಹೋಗುವ ಅಬ್ಯಾಸ ಬೆಳೆಸಿಕೊಳ್ಳಬೇಕು. ಸಾದ್ಯವಾದಶ್ಟು ಪ್ಲಾಸ್ಟಿಕ್ ಬಳಸುವುದಿಲ್ಲ ಎನ್ನುವ ದ್ರುಡ ನಿರ‍್ದಾರ ಕೈಗೊಳ್ಳಬೇಕು. ಹೀಗೆ ಪ್ರತಿಯೊಬ್ಬರೂ ಪ್ರಯತ್ನ ಪಟ್ಟರೆ ಪ್ಲಾಸ್ಟಿಕ್ ಬಳಕೆ ತನ್ನಿಂದತಾನೇ ಕಡಿಮೆಯಾಗುತ್ತೆ. ಹಾಗೆ ಪ್ಲಾಸ್ಟಿಕ್ ಅನ್ನು ಅಲ್ಲಲ್ಲಿ ಎಸೆಯದೆ, ಅದನ್ನು ಸಂಗ್ರಹಿಸಿ, ಮರುಬಳಕೆ ಮಾಡುವ ಸಂಸ್ತೆಗಳಿಗೆ ಒದಗಿಸುವ ಕೆಲಸ ಮಾಡಬೇಕು. ಒಂದು ವ್ಯವಸ್ತಿತವಾದ ಯೋಜನೆಯನ್ನು ಸರ‍್ಕಾರ, ಇಲ್ಲವೇ ಸಂಗ ಸಂಸ್ತೆಗಳು ರೂಪಿಸಿದಲ್ಲಿ, ಒಂದೇ ಒಂದು ತುಂಡು ಪ್ಲಾಸ್ಟಿಕ್ ಬೂಮಿಗೆ ಸೇರದೆ ಮರುಬಳಕೆ ಮಾಡಲು ಉಪಯೋಗಿಸಬಹುದು. ಜನ ಜಾಗ್ರತಿ ಹಾಗು ಮಂದಿಯ ಪಾಲ್ಗೊಳ್ಳುವಿಕೆಯಿಂದ ಪ್ಲಾಸ್ಟಿಕ್ ನಿರ‍್ಮೂಲನೆ ಸಾದ್ಯ.

ಪ್ಲಾಸ್ಟಿಕ್ ನಿರ‍್ಮೂಲನೆ  – ವಿಪುಲ ಅವಕಾಶಗಳ ಸಾದ್ಯತೆ

ಹೌದು ಪ್ಲಾಸ್ಟಿಕ್ ಅನ್ನು ಪರಿಸರಕ್ಕೆ ಹಾನಿ ಆಗದ ಹಾಗೆ ಹೇಗೆಲ್ಲ ಬಳಸಬಹುದು ಎನ್ನುವ ವಿಚಾರದಲ್ಲಿ ಹಲವು ಸಂಸ್ತೆಗಳು ಕಾರ‍್ಯನಿರತವಾಗಿವೆ. ಪ್ಲಾಸ್ಟಿಕ್‌ ಬಳಕೆಗೆ ಪರ‍್ಯಾಯ ದಾರಿ ಕಂಡುಹಿಡಿಯುವ ನಿಟ್ಟಿನಲ್ಲಿ ಕೂಡ ಸಂಶೋದನೆಗಳು ಸಾಗುತ್ತಿವೆ. ಕೆಲವರು ಕೆಲವೊಂದು ಪರ‍್ಯಾಯವನ್ನು ಕಂಡು ಹಿಡಿದಿದ್ದಾರೆ ಕೂಡ. ಆದರೂ ಒಂದು ಕಡಿಮೆ ದರದ ಉತ್ತಮ ಪರ‍್ಯಾಯ ವಸ್ತುವಿನ ಅಗತ್ಯತೆ ಬಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗಿದೆ. ಮನುಶ್ಯನ ಬುದ್ದಿಶಕ್ತಿಗೆ ಅಸಾದ್ಯವಾದುದು ಯಾವುದು ಇಲ್ಲ. ಆದರೆ ಒಳ್ಳೆ ಉಪಾಯ ಯಾವಾಗ, ಎಲ್ಲಿ ಯಾರಿಗೆ ಹೊಳೆಯುತ್ತೆ ಹೇಳಲು ಸಾದ್ಯವಿಲ್ಲ. ಸರ‍್ಕಾರ ಪ್ಲಾಸ್ಟಿಕ್‌ಗೆ ಒಂದು ಸೂಕ್ತ ಪರ‍್ಯಾಯ ಹುಡುಕಿಕೊಟ್ಟವರಿಗೆ ಸೂಕ್ತ ಗೌರವ ದೊರೆಯುತ್ತೆ ಎಂದು ಒಂದು ಸುತ್ತೋಲೆ ಹೊರಡಿಸಿ ಬಾರತದಾದ್ಯಂತ ಒಂದು ಸ್ಪರ‍್ದೆಯಂತಹ ಯೋಜನೆ ರೂಪಿಸಿದಲ್ಲಿ, ಅಸಾಮಾನ್ಯ ಪ್ರತಿಬೆಯುಳ್ಳ ನಮ್ಮ ದೇಶದಲ್ಲಿ ಯಾರಾದ್ರೂ ಒಬ್ಬರು ಸೂಕ್ತ ಪರಿಹಾರದೊಂದಿಗೆ ಕಾಣಿಸಿಕೊಳ್ಳುತ್ತಾರೆ ಎಂದು ನನ್ನ ಪ್ರಬಲ ನಂಬಿಕೆ. ಹಾಗೆ ಸ್ವ-ಉದ್ಯೋಗ ಮಾಡುವವರಿಗೆ ಅವಕಾಶಗಳು ತುಂಬಾ ಇದೆ. ಹಳೆಯ ಬಟ್ಟೆಗಳನ್ನೂ ಸಂಗ್ರಹಿಸಿ, ಅದರಿಂದ ಚೀಲ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಸಂಸ್ತೆ, ಹಾಗೆ ಪ್ಲಾಸ್ಟಿಕನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಉದ್ಯೋಗ ಆರಂಬಿಸಬಹುದು. ಸಾದ್ಯತೆಗಳು ಹಲವು. ಅಶ್ಟಕ್ಕೂ ಅವಕಾಶಗಳಿಗೆ ಏನು ಕೊರತೆಯಿಲ್ಲ. ಅದನ್ನು ಹುಡುಕುವ ಸಾಮರ‍್ತ್ಯ ನಮ್ಮಲ್ಲಿರಬೇಕು ಅಶ್ಟೇ.

ಪ್ಲಾಸ್ಟಿಕ್ ಮುಕ್ತ ಬಾರತ ಒಂದು ಕನಸಾಗಿ ಉಳಿಯದೆ, ಬೇಗ ನನಸಾಗಲಿ. ಒಂದು ಆರೋಗ್ಯಪೂರ‍್ಣ ಪರಿಸರ ಬಾರತದಲ್ಲಿ ನಿರ‍್ಮಾಣವಾಗಿ ಬಾರತ ವಿಶ್ವಕ್ಕೆ ಮಾದರಿಯಾಗಲಿ.

(ಚಿತ್ರ ಸೆಲೆ: needpix

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಬಹಳ ಅವಶ್ಯಕ ಮಾಹಿತಿ.. ಅದ್ಭುತ ನಿರೂಪಣೆಯಲ್ಲಿ ಮೂಡಿಬಂದಿದೆ.. ಶುಭವಾಗಲಿ..

ಅನಿಸಿಕೆ ಬರೆಯಿರಿ:

%d bloggers like this: