ದೈತ್ಯಾಕಾರದ ಸೂಪರ್‌ಹೀರೋ – ‘ಹಲ್ಕ್’
ಹಲ್ಕ್! ಹಸಿರು ಮೈಬಣ್ಣದ ದಡೂತಿ ದೇಹದ ಸೂಪರ್ ಹೀರೋ ಹೆಸರು ಕೇಳದವರು ಬಹುಶಹ ಇರಲಿಕ್ಕಿಲ್ಲ. ಬೇರೆಲ್ಲ ಸೂಪರ್ ಹೀರೋಗಳಿಗೆ ತಮ್ಮದೇ ಆದ ವಿಶೇಶ ಸೂಪರ್ ಪವರ್ ಇದ್ದರೆ ಹಲ್ಕ್‌ಗೆ ತನ್ನ ಮೈಮಾಟವೇ ಸೂಪರ್‌ಪವರ್! ಇಂತಿಪ್ಪ ಹಲ್ಕ್ ಬಗ್ಗೆ ಒಂದಶ್ಟು ವಿಶಯಗಳು ನಿಮ್ಮ ಮುಂದೆ 🙂
2003 ರಲ್ಲಿ ಹಲ್ಕ್ ಸಿನೆಮಾದಿಂದ ಮುನ್ನೆಲೆಗೆ ಬಂದ ಈ ಸೂಪರ್ ಹೀರೋ ಪಾತ್ರ ಸುಮಾರು 60 ವರುಶಗಳಶ್ಟು ಹಳೆಯದು! ಮಾರ‍್ವೆಲ್ ಕಾಮಿಕ್ಸ್‌ನ ಹೆಸರುವಾಸಿ ಬರಹಗಾರ ಸ್ಟಾನ್ ಲೀ ಮತ್ತು ಕಲಾವಿದ ಜಾಕ್ ಕಿರ‍್ಬೀ ಇದನ್ನು ಹುಟ್ಟುಹಾಕಿದವರು. ಕಾಮಿಕ್ ಪುಸ್ತಕದಲ್ಲಿ ಹಲ್ಕ್ ಮೊದಲು ಕಾಣಿಸಿಕೊಂಡಿದ್ದು 1962 ರ ಮೇ ತಿಂಗಳ ಕಡತದಲ್ಲಿ.
ಹಲ್ಕ್‌ಗೆ ಸ್ಪೂರ‍್ತಿ ಇನ್ನೂರು ವರುಶಕ್ಕೂ ಹಿಂದಿನ ಪಾತ್ರಗಳು
ಹಲ್ಕ್ ಪಾತ್ರವನ್ನು ಹುಟ್ಟುಹಾಕಿದ ಸ್ಟಾನ್ ಲೀ ಹೇಳುವಂತೆ 2 ಪಾತ್ರಗಳು ಹಲ್ಕ್ ಹುಟ್ಟಿಗೆ ಸ್ಪೂರ‍್ತಿಯಾಗಿವೆ. 1818 ರಲ್ಲಿ ಮೂಡಿ ಬಂದ ಕಾದಂಬರಿಯ ಪಾತ್ರ ಪ್ರಾಂಕೈನ್‌ಸ್ಟೀನ್ ಎಂಬ ದೈತ್ಯ ಮತ್ತು 1886ರಲ್ಲಿ ಮೂಡಿ ಬಂದ ಕಿರುಕತೆಯ ಪಾತ್ರ ಡಾ.ಜೆಕಲ್ ಮತ್ತು ಮಿ. ಹೈಡ್ – ಹಲ್ಕ್ ಪಾತ್ರದ ಹಿಂದಿನ ಪ್ರೇರಣೆಗಳು.
ಹಲ್ಕ್‌ನ ಇನ್ನೊಂದು ಮುಕ
ಹಲ್ಕ್ ಎಂದರೆ ಹಸಿರು ಮೈಯ ದಡೂತಿ ಆಕಾರದ ಆಕ್ರುತಿ ಕಣ್ಣ ಮುಂದೆ ಬರುತ್ತದೆ. ತನ್ನ ಮೈಯ ಅಳತೆಗೂ ಮೀರಿ ಅಗಾದ ಶಕ್ತಿಯುಳ್ಳ ಈ ಸೂಪರ್ ಹೀರೋನ ಇನ್ನೊಂದು ಮುಕ ಈತನ ಇರುವಿಗೆಕೆ ಪಕ್ಕಾ ತದ್ವಿರುದ್ದ! ಸಣಕಲು ಮೈಯ, ಬೇರೆಯವರೊಂದಿಗೆ ಬೆರೆಯದ ಇರುವರಿಮೆಗಾರ(physicist) ಡಾ. ರಾಬರ‍್ಟ್ ಬ್ರೂಸ್ ಬ್ಯಾನರ್, ಹಲ್ಕ್‌ನ ಇನ್ನೊಂದು ಮುಕ. ತನ್ನಶ್ಟಕ್ಕೆ ತಾನು ಎನ್ನುವಂತೆ ಇರುವ ಡಾ. ಬ್ಯಾನರ್ ಹಲ್ಕ್ ಆಗಿ ಬದಲಾಗುವುದರ ಹಿನ್ನೆಲೆ ಕುತೂಹಲಕಾರಿಯಾಗಿದೆ.
ಮೂಲತಹ ಅರಿಮೆಗಾರನಾಗಿದ್ದ ಡಾ. ಬ್ಯಾನರ್ ಬಾಂಬ್ ಒಂದನ್ನು ಪರೀಕ್ಶಿಸುತ್ತಿರಬೇಕಾದರೆ, ಬಾಂಬ್ ಇಟ್ಟ ಜಾಗಕ್ಕೆ ರಿಕ್ ಜೋನ್ಸ್ ಗೊತ್ತಿಲ್ಲದೇ ನುಗ್ಗುತ್ತಾನೆ. ರಿಕ್‌ನನ್ನು ಉಳಿಸಲೆಂದು ಅಲ್ಲಿಗೆ ಬಂದ ಡಾ. ಬ್ಯಾನರ್ ರಿಕ್ ಜೋನ್ಸ್‌ನನ್ನು ಕಂದಕಕ್ಕೆ ತಳ್ಳುತ್ತಾನೆ ಆದರೆ ತಾನು ಅಲ್ಲಿಂದ ಪಾರಾಗಲು ಆಗುವುದಿಲ್ಲ. ಬಾಂಬ್ ಸಿಡಿದು ಅದರಿಂದ ಹೊರಹೊಮ್ಮಿದ ಗಾಮಾ ಅಲೆಗಳು ಡಾ. ಬ್ಯಾನರ್ ನ ಬದುಕನ್ನೇ ಬದಲಿಸುತ್ತವೆ. ನೆಲಕ್ಕುರುಳಿದ ಡಾ. ಬ್ಯಾನರ‍್‌ಗೆ ಅರಿವು ಬಂದಾಗ ತನಗೇನೋ ಆಗಿಯೇ ಇಲ್ಲವೇನೋ ಎನ್ನುವಂತೆ ಎದ್ದೇಳುತ್ತಾನೆ. ಮಾನಸಿಕ ಒತ್ತಡಕ್ಕೆ ಒಳಗಾದ ಡಾ. ಬ್ಯಾನರ್ ಅಂದು ರಾತ್ರಿ ಹಲ್ಕ್ ಮಾರ‍್ಪಾಟಾಗಿ ಕೈಗೆ ಬಂದದ್ದೆಲ್ಲವನ್ನೂ ಹಾಳುಗೆಡವವುತ್ತಾನೆ. ಮುಂದಿನ ದಿನಗಳಲ್ಲಿ ಡಾ. ಬ್ಯಾನರ್ ಅತಿಯಾದ ಸಿಟ್ಟುಬಂದಾಗ ಹಲ್ಕ್ ಆಗಿ ಬದಲಾಗುತ್ತಿರುತ್ತಾನೆ.
ಡಾ. ಬ್ಯಾನರ್ ಹೆಸರಿನ ಹಿಂದಿದೆ ಒಂದು ಮೋಜಿನ ವಿಚಾರ
ಡಾ. ಬ್ಯಾನರ್ ಪಾತ್ರವನ್ನು ಹುಟ್ಟು ಹಾಕಿದ ಸ್ಟಾನ್ ಲೀ, ನೆನಪಿಟ್ಟುಕೊಳ್ಳಲು ಇದೇನು ಕಶ್ಟದ ಹೆಸರು ಅಲ್ಲವೆಂದು ಮೊದಲಿಗೆ ಬ್ರೂಸ್ ಬ್ಯಾನರ್ ಎಂದು ಕರೆದಿದ್ದರು. ಮುಂದಿನ ಕೆಲವು ಕತೆಗಳಲ್ಲಿ ಮೂಲ ಹೆಸರನ್ನೇ ಮರೆತ ಸ್ಟಾನ್ ಲೀ, ಬಾಬ್ ಬ್ಯಾನರ್ ಎಂದು ಬಳಸಿದ್ದರು. ಇದು ಕೂಡಲೆ ಓದುಗರ ಕಣ್ಣಿಗೆ ಬಿದ್ದು ನಗೆಪಾಟಲಿಗೆ ಈಡಾಗುವಂತೆ ಮಾಡಿತು. ಈ ಗೊಂದಲ ಸರಿಪಡಿಸಲೆಂದು ರಾಬರ‍್ಟ್ ಬ್ರೂಸ್ ಬ್ಯಾನರ್ ಎಂದು ಪೂರ‍್ತಿ ಹೆಸರಿಡಲಾಯಿತು. ಟಿವಿ ಶೋಗಳಲ್ಲಿ ಡೇವಿಡ್ ಬ್ಯಾನರ್ ಎಂದಿದೆ!
ಅವೆಂಜರ‍್ಸ್ ಮತ್ತು ಹಲ್ಕ್
ಮಾರ‍್ವೆಲ್‌ನ ಹೆಸರುವಾಸಿ ಕಾಮಿಕ್ ಮತ್ತು ಸಿನೆಮಾ ಅವೆಂಜರ‍್ಸ್ ಸರಣಿ ಇಂದು ಮನೆಮಾತಾಗಿದೆ. ಸ್ಟಾನ್ ಲೀ ಮತ್ತು ಕಲಾವಿದ ಜಾಕ್ ಕಿರ‍್ಬೀ ಹುಟ್ಟುಹಾಕಿದ ಅವೆಂಜರ‍್ಸ್ ತಂಡದ ಸದಸ್ಯ ಹಲ್ಕ್. ಅವೆಂಜರ‍್ಸ್ ತಂಡದಲ್ಲಿ ಹಲ್ಕ್ ಅಲ್ಲದೇ ಆಂಟ್ ಮ್ಯಾನ್, ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ಇನ್ನೂ ಹಲವರಿದ್ದಾರೆ.
ಹಲ್ಕ್‌ನ ಮೂಲ ಬಣ್ಣ ಹಸಿರಲ್ಲ!
ಹಲ್ಕ್ ಪಾತ್ರವನ್ನು ಮೊದಲು ಹುಟ್ಟು ಹಾಕಿದಾಗ ಬೂದು ಬಣ್ಣವನ್ನು ಬಳಸಲಾಗಿತ್ತು. ಬೂದು ಬಣ್ಣದಿಂದಾಗಿ ಪ್ರತಿಗಳು ಕೆಲವೊಮ್ಮೆ ತೀರಾ ಕಪ್ಪಗೆ, ಕೆಲವೊಮ್ಮೆ ತಿಳಿ ಬೂದು ಬಣ್ಣದದಲ್ಲಿ ಮೂಡಿಬರುತ್ತಿದ್ದವು. ಬೂದು ಬಣ್ಣ ಸ್ಪಶ್ಟವಾಗಿ ಮೂಡಿ ಬರದ ಕಾರಣ, ಮೊದಲ ಆವ್ರುತ್ತಿ ಮೂಡಿ ಬಂದ ಬಳಿಕ ಸ್ಟಾನ್ ಲೀ ಹಸಿರು ಬಣ್ಣವನ್ನು ಬಳಸಿಕೊಳ್ಳಲು ತೀರ‍್ಮಾನಿಸಿದರು. 1984 ರ ನಂತರ ಮರು ಅಚ್ಚಾದ ಕಾಮಿಕ್ ಹೊತ್ತಗೆಗಳ ಪ್ರತಿಗಳಲ್ಲಿ ಹಸಿರು ಬಣ್ಣವನ್ನು ಬಳಸಿಕೊಳ್ಳಲಾಗಿದೆ.
ಮನೆಮಾತಾಗಿರುವ ಹಲ್ಕ್
ಹಲ್ಕ್ ಇಂದು ಎಶ್ಟು ಹೆಸರುವಾಸಿ ಎಂದರೆ ಈ ಸೂಪರ್‌ಹೀರೋನ ಹೆಸರು ಕೇಳದವರು ಇರಲಿಕ್ಕಿಲ್ಲ. ಬಟ್ಟೆಗಳು, ಸಂಗ್ರಹಿಸಬಹುದಾದ ಆಟಿಕೆಗಳು, ವಿಡಿಯೋ ಗೇಮ್‌ಗಳು ಅಲ್ಲದೇ ಹಲ್ಕ್ ಪಾತ್ರದಿಂದ ಪ್ರೇರಣೆ ಪಡೆದ ಕಟ್ಟಡಗಳೂ ತೀಮ್ ಪಾರ‍್ಕುಗಳೂ ಇವೆ. ಅಮೆರಿಕಾದಲ್ಲಿ ಗೇಮಿಂಗ್ ಮತ್ತು ಮನರಂಜನಾ ಮೀಡಿಯಾಗೆ ಹೆಸರುವಾಸಿಯಾಗಿರುವ ಮಿಂದಾಣ ಐಜಿಎನ್ ಹಲ್ಕ್ ಅನ್ನು ಟಾಪ್ 100 ಕಾಮಿಕ್ ಬುಕ್ ಹೀರೋಗಳಲ್ಲಿ 9ನೇ ಸ್ತಾನ ಮತ್ತು ಟಾಪ್ 50 ಅವೆಂಜರ‍್ಸ್ ಅಲ್ಲಿ 4ನೇ ಸ್ತಾನ ನೀಡಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, pixabay.com)
ಇತ್ತೀಚಿನ ಅನಿಸಿಕೆಗಳು