ಕವಿತೆ: ಅಣ್ಣನ ಹಿತನುಡಿಗಳು

– ವೆಂಕಟೇಶ ಚಾಗಿ.

brothers, ಅಣ್ಣ ತಮ್ಮಂದಿರು

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಕವಿಲ್ಲ
ಅನ್ಯಾಯದ ಹಾದಿ ಸುಕವಲ್ಲ ತಮ್ಮಯ್ಯ
ನ್ಯಾಯಕ್ಕೆ ಬಗವಂತ ಒಲಿತಾನ

ನುಡಿದಂಗ ನಡಿಬೇಕ ನಡೆದಂಗ ನುಡಿಬೇಕ
ನಡೆನುಡಿಯು ಪರಿಶುದ್ದ ಇರಬೇಕ ತಮ್ಮಯ್ಯ
ನಿನ್ನ ನಡೆಕಂಡು ಜಗಮೆಚ್ಚಿ ನುಡಿಬೇಕ

ಜೀವನ ಎಂಬುದು ನೀರ ಮ್ಯಾಲಿನ ಗುಳ್ಳೆ
ಇಲ್ಲಾವುದೂ ಅಲ್ಲ ಶಾಶ್ವತ ತಮ್ಮಯ್ಯ
ಇರುತನಕ ಬದುಕು ಹೊಳಿಬೇಕ

ಮನಿ ಮುಂದ ಗಿಡ ಬೆಳಸಿ ಅಂಗಳವ ತಂಪಿರಿಸಿ
ಮನಿ ಸುತ್ತ ಹಸಿರು ಇರಬೇಕ ತಮ್ಮಯ್ಯ
ಕಾಡಿದ್ದರ ನಾಡು ಉಳಿತಾದ

ಸ್ವಚ್ಚತೆಯ ಮಂತ್ರವ ಪ್ರತಿದಿನ ನುಡಿಬೇಕ
ಮೈ ಮನಸು ಶುದ್ದ ಇರಬೇಕ ತಮ್ಮಯ್ಯ
ಆರೋಗ್ಯವೇ ಬಾಗ್ಯ ನಿಜಕಾಣೋ

ದೇವ್ರು ದೇವ್ರು ಅಂತ ದೇಶ ಸುತ್ತುವೆ ಯಾಕ
ಎಲ್ಲಾದರೂ ದೇವ್ರನ್ನ ಕಂಡೇನ ತಮ್ಮಯ್ಯ
ಕಾಣದಂಗ ಜೊತೆಯಾಗಿ ಇರತಾನ

(ಚಿತ್ರ ಸೆಲೆ: wikihow.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: