ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

ಅಕ್ಕ ಮಹಾದೇವಿ, Akka Mahadevi

ಮುತ್ತು ಒಡೆದಡೆ ಬೆಸೆಯಬಹುದೆ
ಮನ ಮುರಿದಡೆ ಸಂತಕ್ಕೆ ತರಬಹುದೆ. (337-820)

ಮುತ್ತು=ದುಂಡನೆಯ ಮಣಿ/ಗುಂಡಗಿರುವ ಹರಳು; ಒಡೆ=ಸೀಳು/ಬಿರಿ/ಚೂರು ಚೂರಾಗುವುದು; ಒಡೆದಡೆ=ಒಡೆದರೆ/ಚೂರಾದರೆ; ಬೆಸು=ಎರಡು ಚೂರುಗಳನ್ನು ಒಂದಾಗಿ ಸೇರಿಸುವುದು/ಜೋಡಿಸುವುದು/ಕೂಡಿಸುವುದು; ; ಬೆಸೆಯಬಹುದೆ=ಜತೆಗೂಡಿಸುವುದಕ್ಕೆ ಆಗುವುದೇ ಅಂದರೆ ಕೂಡಿಸಲು ಆಗುವುದಿಲ್ಲ;

ಮನ=ಮನಸ್ಸು/ಚಿತ್ತ; ಮುರಿ=ತುಂಡಾಗು/ಬಾಗು/ಬಗ್ಗು/ಡೊಂಕಾಗು; ಮುರಿದಡೆ=ಮುರಿದು ತುಂಡಾದರೆ ಇಲ್ಲವೇ ಬಾಗಿದರೆ;

ಸಂತ=ಸರಿಯಾದುದು/ಶಾಂತವಾದುದು/ನೆಮ್ಮದಿಯಿಂದಿರುವುದು; ತರಬಹುದೆ=ತರಲು ಆಗುತ್ತದೆಯೇ ಅಂದರೆ ತರಲು ಆಗುವುದಿಲ್ಲ; ಸಂತಕ್ಕೆ ತರಬಹುದೆ=ಮೊದಲಿನಂತೆ ಸರಿಪಡಿಸಲು ಆಗುವುದೇ;

ದುಂಡನೆಯ ಮುತ್ತು ಒಡೆದು ಹೋಳಾದರೆ ಅದನ್ನು ಮತ್ತೆ ಒಂದುಗೂಡಿಸಲು ಆಗುವುದಿಲ್ಲವೋ ಅಂತೆಯೇ ಒಮ್ಮನದಿಂದ ಜತೆಗೂಡಿ ಬಾಳುತ್ತಿದ್ದ ವ್ಯಕ್ತಿಗಳ ನಡುವೆ ಪರಸ್ಪರ ಸಂಶಯ ಮತ್ತು ಅಪನಂಬಿಕೆ ಉಂಟಾಗಿ ಮನಸ್ಸು ಮುರಿದುಹೋದರೆ , ಮತ್ತೆ ಅವರು ಮೊದಲಿನಂತೆ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಲಾಗುವುದಿಲ್ಲ.

ರತ್ನದ ಸಂಕೋಲೆಯಾದಡೆ ತೊಡರಲ್ಲವೆ
ಮುತ್ತಿನ ಬಲೆಯಾದಡೆ ಬಂಧನವಲ್ಲವೆ
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ. (345-821)

ರತ್ನ=ಕೆಂಪು ಹರಳು/ಮಾಣಿಕ್ಯ; ಸಂಕೋಲೆ+ಆದಡೆ; ಸಂಕೋಲೆ=ಬೇಡಿ/ಕೋಳ/ವ್ಯಕ್ತಿಯ ಕಯ್ಗೆ ಹಾಕುವ ಇಲ್ಲವೇ ಕಾಲುಗಳಿಗೆ ಬಿಗಿಯುವ ಸರಪಣಿ; ಆದಡೆ=ಆದರೆ; ರತ್ನದ ಸಂಕೋಲೆ=ರತ್ನದ ಹರಳುಗಳಿಂದ ಜೋಡಿಸಿ ಮಾಡಿರುವ ಸಂಕೋಲೆ; ತೊಡರ್+ಅಲ್ಲವೆ; ತೊಡರು=ಅಡ್ಡಿ/ಅಡಚಣೆ;

ಮುತ್ತು=ದುಂಡನೆಯ ಮಣಿ/ಗುಂಡಗಿರುವ ಹರಳು; ಬಲೆ+ಆದಡೆ; ಬಲೆ=ಹಕ್ಕಿಗಳನ್ನು ಪ್ರಾಣಿಗಳನ್ನು ಹಿಡಿಯಲು ಬಳಸುವ ದಾರದಿಂದ ಇಲ್ಲವೇ ಲೋಹದ ಎಳೆಗಳಿಂದ ಮಾಡಿರುವ ಉಪಕರಣ; ಮುತ್ತಿನ ಬಲೆ=ಮುತ್ತುಗಳನ್ನು ಜೋಡಿಸಿ ಮಾಡಿರುವ ಬಲೆ; ಬಂಧನ+ಅಲ್ಲವೆ; ಬಂಧನ=ಸೆರೆ/ವ್ಯಕ್ತಿಯು ಅತ್ತಿತ್ತ ಅಡ್ಡಾಡದಂತೆ ಹತೋಟಿಯಲ್ಲಿಡುವುದು;

ಚಿನ್ನ=ಹೊನ್ನು/ಬಂಗಾರ/ಬೆಲೆಬಾಳುವ ಒಂದು ಬಗೆಯ ಲೋಹ; ಕತ್ತಿ+ಅಲ್ಲಿ; ಕತ್ತಿ=ಕರವಾಳು/ಕಡ್ಗ/ಒಂದು ಬಗೆಯ ಹತಾರ; ಹೊಯ್=ಹೊಡಿ/ಬಡಿ/ಕಡಿ; ಹೊಯ್ದಡೆ=ಹೊಡೆದರೆ/ಕತ್ತರಿಸಿದರೆ; ತಲೆಹೊಯ್ದಡೆ=ತಲೆಯನ್ನು ಕತ್ತರಿಸಿದರೆ;

ಸಾಯದೆ+ಇರ್ಪರೆ; ಸಾಯ್=ಮರಣ ಹೊಂದುವುದು/ಜೀವ ಹೋಗುವುದು; ಇರ್ಪರೆ=ಇರುತ್ತಾರೆಯೆ/ಇರುವರೆ; ಸಾಯದಿರ್ಪರೆ=ಸಾಯದೆ ಜೀವಂತವಾಗಿ ಉಳಿಯುತ್ತಾರೆಯೆ/ಜೀವ ಹೋಗದೆ ಇರುತ್ತದೆಯೆ/ಸಾಯುವುದು ನಿಶ್ಚಿತ;

ನಾವು ಅತಿಯಾಗಿ ಪ್ರೀತಿಸುವ ಇಲ್ಲವೇ ಮೆಚ್ಚಿಕೊಳ್ಳುವ ವ್ಯಕ್ತಿಗಳ ಕೆಟ್ಟ ನಡೆನುಡಿಗಳನ್ನು ಸಹಿಸಿಕೊಂಡರೆ ಅದರಿಂದ ಕೇಡಾಗುತ್ತದೆಯೇ ಹೊರತು ಒಳಿತಾಗುವುದಿಲ್ಲ.

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ. (358-823)

ಲೋಕ=ಜಗತ್ತು/ಪ್ರಪಂಚ; ಚೇಷ್ಟೆ=ತುಂಟತನ/ಕೀಟಲೆ/ಚೆಲ್ಲಾಟ/ಅಂಗಾಂಗಗಳ ಚಲನವಲನ; ಲೋಕದ ಚೇಷ್ಟೆ=ಲೋಕದಲ್ಲಿ ನಡೆಯುವ ಎಲ್ಲಾ ಬಗೆಯ ಚಟುವಟಿಕೆಗಳು/ಲೋಕದಲ್ಲಿರುವ ಜೀವಜಂತುಗಳ ದಿನನಿತ್ಯದ ಕ್ರಿಯೆಗಳು/ಜನಸಮುದಾಯಗಳ ವ್ಯವಹಾರ; ರವಿ=ನೇಸರು/ಸೂರ‍್ಯ/ಹೊತ್ತು; ಬೀಜ+ಆದ+ಅಂತೆ; ಬೀಜ=ದವಸದ ಇಲ್ಲವೇ ಹಣ್ಣಿನ ಕಾಳು/ಬಿತ್ತ; ಆದ=ಆಗಿರುವ; ಅಂತೆ=ಹಾಗೆ;

ಕರಣ=ಇಂದ್ರಿಯ; ಕರಣಂಗಳು=ನೋಟ-ಶಬ್ದ-ಕಂಪು-ರುಚಿ-ಮುಟ್ಟುವಿಕೆಯಿಂದ ಉಂಟಾಗುವ ಅರಿವನ್ನು ಪಡೆಯಲು ನೆರವಾಗುವ ಅಂಗಗಳು. ಕಣ್ಣು-ಕಿವಿ-ಮೂಗು-ನಾಲಗೆ-ತೊಗಲು ಎಂಬ ಅಯ್ದು ಬಗೆಯ ಕರಣಗಳು; ಮನ=ಮನಸ್ಸು/ಚಿತ್ತ;

ಲೋಕದ ಸಕಲ ವ್ಯವಹಾರಗಳಿಗೂ ರವಿಯ ಮೂಡುವಿಕೆಯು ಕಾರಣವಾಗುವಂತೆಯೇ , ವ್ಯಕ್ತಿಯ ನಡೆನುಡಿಗಳೆಲ್ಲಕ್ಕೂ ಮನಸ್ಸೇ ಮೂಲ ನೆಲೆಯಾಗಿದೆ. ಅಯ್ದು ಇಂದ್ರಿಯಗಳ ಮೂಲಕ ಪಡೆಯುವ ಎಲ್ಲ ಬಗೆಯ ತಿಳಿವನ್ನು ಒರೆಹಚ್ಚಿ ನೋಡಿ, ವ್ಯಕ್ತಿಯ ನಡೆನುಡಿಗಳನ್ನು ನಿಯಂತ್ರಿಸುವ ಮತ್ತು ಹೊರಹೊಮ್ಮಿಸುವ ಕಸುವನ್ನು ಮನಸ್ಸು ಹೊಂದಿದೆ.

( ಚಿತ್ರಸೆಲೆ : srisailamonline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: