ಅಕ್ಕಮ್ಮನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು
– ಸಿ.ಪಿ.ನಾಗರಾಜ.
ಹೆಸರು : ಅಕ್ಕಮ್ಮ
ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು : 155
ಅಂಕಿತನಾಮ : ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು
ಅಡಕೆ ಫಲ ರಸ ದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೊಮುಟ್ಟುವ ತಟ್ಟುವ ಸೋಂಕುವ
ಚಿತ್ತಕ್ಕೆ ವ್ರತವೊಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ
ವ್ರತಕ್ಕೆ ಸಲ್ಲ . (434/831)
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು=ದಿನ ನಿತ್ಯ ಆಹಾರವಾಗಿ ತೆಗೆದುಕೊಳ್ಳುವ ವಸ್ತುಗಳು; ಫಲ=ಬೆಳೆ; ರಸ=ದ್ರವರೂಪದ ವಸ್ತು; ದ್ರವ್ಯ=ವಸ್ತು/ಸಂಪತ್ತು/ಹಣ; ಮುಂತಾದ=ಮೊದಲಾದ/ಅನೇಕ ಬಗೆಯ;
ವ್ರತ= ದೇವರನ್ನು ಪೂಜಿಸುವಾಗ ಸಂಪ್ರದಾಯವನ್ನು ಚಾಚೂತಪ್ಪದೆ ಮಾಡುವ ಆಚರಣೆಗಳು/ನೋಂಪಿ; ಮುಟ್ಟು=ಕಯ್ಯಿಂದ ಹಿಡಿಯುವುದು; ತಟ್ಟು=ಬಡಿ/ಹೊಡಿ;
ಸೋಂಕು=ಯಾವುದೇ ವಸ್ತು/ವ್ಯಕ್ತಿಯನ್ನು/ಜೀವಿಯನ್ನು ತುಸು ಮುಟ್ಟುವುದು; ಚಿತ್ತ=ಮನಸ್ಸು; ಮುಟ್ಟುವ ತಟ್ಟುವ ಸೋಂಕುವ ಚಿತ್ತ=ಕಣ್ಣು, ಕಿವಿ, ಮೂಗು, ನಾಲಗೆ, ತೊಗಲು ಎಂಬ ಅಯ್ದು ಇಂದ್ರಿಯಗಳ ಮೂಲಕ ಪಡೆದ ಅರಿವಿನಿಂದ ಬಹುಬಗೆಯ ಕ್ರಿಯೆಗಳಿಗೆ ತುಡಿಯುವ ಮನಸ್ಸು;
ಚಿತ್ತಕ್ಕೆ ವ್ರತ=ಮನಸ್ಸಿನಲ್ಲಿ ಸದಾಕಾಲ ಮೂಡುತ್ತಲೇ ಇರುವ ತುಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಅಳವಡಿಸಿಕೊಂಡು ಬಾಳಬೇಕೆಂಬ ಎಚ್ಚರವನ್ನು ಹೊಂದಿರುವುದು; ಬಾಹ್ಯ+ಅಲ್ಲಿ; ಬಾಹ್ಯ=ಹೊರಗಡೆ/ಹೊರಗಿನ; ಸೌಕರಿಯವು+ಅಲ್ಲದೆ; ಸೌಕರಿಯ=ಅನುಕೂಲ;
ಇವು ಬಾಹ್ಯದಲ್ಲಿ ಮಾಡುವ ಸೌಕರಿಯ=ಬೇರೆಯವರ ಕಣ್ಣಿಗೆ ಕಾಣುವಂತೆ ಮಾಡುವ ತೋರಿಕೆಯ ಆಚರಣೆಗಳು;
ಅಲ್ಲದೆ=ಹೊರತು; ಸಲ್ಲು=ತಕ್ಕುದಾಗಿರು/ಯೋಗ್ಯವಾಗಿರು; ಸಲ್ಲ=ತಕ್ಕುದಲ್ಲ; ವ್ರತಕ್ಕೆ ಸಲ್ಲ=ಉಣಿಸು ತಿನಸುಗಳಲ್ಲಿ ಕೆಲವನ್ನು ಬಿಡುವುದು ವ್ರತವಲ್ಲ;
ಶಿವಶರಣಶರಣೆಯರ ಪಾಲಿಗೆ ವ್ರತವೆಂಬುದು ಒಳ್ಳೆಯ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವ ಆಚರಣೆಯಾಗಿತ್ತೇ ಹೊರತು ದೇವರ ಹೆಸರಿನಲ್ಲಿ ಕೆಲವು ಬಗೆಯ ಉಣಿಸು ತಿನಸುಗಳನ್ನು ತೊರೆದು ಮಾಡುವ ಸಂಪ್ರದಾಯದ ಆಚರಣೆಯಾಗಿರಲಿಲ್ಲ.
ಗುರುವಾದಡೂ ಆಚಾರಭ್ರಷ್ಟನಾದಡೆ
ಅನುಸರಿಸಲಾಗದು. (479/838)
ಗುರು+ಆದಡೂ; ಗುರು=ತನ್ನ ಬಳಿಬಂದ ಮಕ್ಕಳಿಗೆ ಮತ್ತು ವ್ಯಕ್ತಿಗಳಿಗೆ ಅರಿವನ್ನು ನೀಡಿ, ಅವರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವವನು; ಆದಡೂ=ಆದರೂ; ಆಚಾರ+ಭ್ರಷ್ಟನ್+ಆದಡೆ; ಆಚಾರ=ಒಳ್ಳೆಯ ನಡೆನುಡಿ;
ಭ್ರಷ್ಟ=ದಾರಿ ತಪ್ಪಿದ/ಹಾಳು ಬಿದ್ದ/ಕೆಳಗೆ ಬಿದ್ದ; ಆಚಾರಭ್ರಷ್ಟ=ಒಳ್ಳೆಯ ನಡೆನುಡಿಗಳಿಲ್ಲದವನು; ಆದಡೆ=ಆದರೆ; ಅನುಸರಿಸಲ್+ಆಗದು; ಅನುಸರಿಸು=ಹೊಂದಿಕೊಂಡು ಬಾಳುವುದು; ಆಗದು=ಆಗುವುದಿಲ್ಲ;
ಗುರುವಾದವನು ಕೆಟ್ಟ ನಡೆನುಡಿಗಳಿಂದ ವರ‍್ತಿಸತೊಡಗಿದರೆ, ಅಂತಹ ಗುರುವಿನ ಎಡೆಯಲ್ಲಿರದೆ, ಅವನಿಂದ ದೂರ ಸರಿಯಬೇಕು.
( ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು