ರೈಲು ಪ್ರಯಾಣದ ಒಂದು ಅನುಬವ

– ತೇಜಶ್ರೀ. ಎನ್. ಮೂರ‍್ತಿ.

ರೈಲು, ಪ್ರಯಾಣ, ನೆನಪು, train, railway, journey, memories,

ಮೈಸೂರಿನಿಂದ ತಾಳಗುಪ್ಪಕ್ಕೆ ಹಲವು ವರ‍್ಶಗಳಿಂದ ಕಾಮಗಾರಿಯಲ್ಲಿದ್ದ ಮೀಟರ್ ಗೇಜ್ ಹಳಿಗಳನ್ನು ಬ್ರಾಡ್ಗೇಜ್ ಹಳಿಗಳನ್ನಾಗಿ ಮಾಡಲಾಗಿದೆ.

ಹೀಗೊಂದು ಸುದ್ದಿ ಕೇಳಿ ನನಗೆ ಮತ್ತೆ ಅಮ್ಮನಿಗೆ ಉಂಟಾದ ಸಂತೋಶಕ್ಕೆ ಪಾರವೇ ಇಲ್ಲ. ಅಮ್ಮ ತನ್ನ ಮದುವೆ ನಂತರ ಅಪ್ಪನೊಂದಿಗೆ ಮೈಸೂರಿನಲ್ಲೇ ತನ್ನ ಮನೆಯನ್ನು ಕಂಡುಕೊಂಡಿದ್ದಳು. ತವರಿಗೆ ಬೇಟಿಕೊಡುವ ಬಾಗ್ಯ ವರ‍್ಶಕ್ಕೊಮ್ಮೆ, ಸಾದ್ಯವಾದರೆ ಎರಡು ಬಾರಿ ಇರುತ್ತಿತ್ತು. ಅವರಿಗಾಗಿ ಹಂಬಲವಿದ್ದರೂ, ಆ 300 ಕಿಲೋಮೀಟರ್ ಗಳ ರಾತ್ರಿಯ ಕೆಂಪು ಬಸ್ಸುಗಳ ಪ್ರಯಾಣ ಪ್ರಯಾಸದಾಯಕ ಮತ್ತು ದುಬಾರಿ ಎಂದು ಒಮ್ಮೊಮ್ಮೆ ತವರಿಗೆ ಹೋಗುವ ಯೋಜನೆಯನ್ನು ಯೋಚಿಸುವಂತಹ ದಿನಗಳೂ ಇದ್ದವು.

ರೈಲಿನ ಸುದ್ದಿ ಕೇಳಿ ಕುಣಿದಾಡಿ ರೈಲಿನ ಕುಲಗೋತ್ರ ಜನ್ಮನಕ್ಶತ್ರ ಗಳನ್ನು ಗೂಗಲ್ ನೋಡಿದಾಗ ತಿಳಿದಿದ್ದು, ಮೈಸೂರು-ತಾಳಗುಪ್ಪ ಇಂಟರ‍್ಸಿಟಿ, ಬೆಳಿಗ್ಗೆ 6:00 ಗಂಟೆಗೆ ಮೈಸೂರಿನಿಂದ ಹೊರಟು ತಾಳಗುಪ್ಪದಲ್ಲಿ ಮದ್ಯಾಹ್ನ 1:20 ಕ್ಕೆ ಸುಕ ನಿರ‍್ಗಮನದ ವಿದಾಯ ನೀಡುತ್ತದೆಂದು, ಅದೂ ಕೇವಲ 130 ರೂಪಾಯಿಗಳಿಗೆ! ಈ ರೈಲು ಇನ್ನು 20 ಕಿಲೋಮೀಟರ್ ಮುಂದಕ್ಕೆ ಇದ್ದಿದ್ದರೆ ಅಜ್ಜನ ಮನೆಯ ಅಂಗಳಕ್ಕೆ ಅಡಿಯಿಡಬಹುದಿತ್ತು ಎನ್ನುವ ದೂರದ ದುರಾಲೋಚನೆಯೊಂದು ಆ ಕ್ಶಣಕ್ಕೆ ಇಣುಕಿತ್ತು. ಇರಲಿ, ಸ್ವಲ್ಪ ಬೇಗನೇ ಮನೆ ಬಿಡಬೇಕಾದ ಸ್ತಿತಿ ಇದ್ದರೂ, ಶಿವಮೊಗ್ಗದಲ್ಲಿ ಇಳಿದು ಮತ್ತೊಂದು ಬಸ್ಸು ಹಿಡಿಯುವ, ಅಲ್ಲಿನ ಬಸ್ಸುಗಳ ಅವರ‍್ಣನಾತೀತ ಪರಿಮಳಗಳನ್ನು ಸಹಿಸುವ ತ್ರಾಸಿಲ್ಲವೆಂದು ಕುಶಿಪಟ್ಟೆವು. ಇಶ್ಟೆಲ್ಲಾ ಯೋಚಿಸಿದರೂ ಪ್ರಯಾಣ ಮಾಡಿದಾಗಲೇ ಅದರ ಅನುಬವವಾಗುತ್ತದೆ ಎಂದು ಎಣಿಸಿ, ಮುಂದಿನ ರಜೆಗೆ ರೈಲಿನಲ್ಲೇ ಅಜ್ಜಿಮನೆಗೆ ಹೋಗುವುದೆಂದು ಏಣಿ ಇಟ್ಟು ಕನಸಿನ ಊರಿಗೆ ಏರಿದೆವು.

ನನ್ನ ಆ ವರ‍್ಶದ ಪರೀಕ್ಶೆಗಳಿಗೆ ದೀರ‍್ಗದಂಡ ಪ್ರಣಾಮಗಳನ್ನು ನೀಡಾಗಿತ್ತು, ಆ ದಿನವೇ ಅಪ್ಪ ಟಿಕೆಟುಗಳ ಜೊತೆಗೆ ಹಣ್ಣು-ಕುರುಕಲು ತಿಂಡಿಗಳನ್ನು ತಂದು, ಟಿಕೆಟಿಗೆ 100 ಆದರೆ ತಿಂಡಿಗೆ 300 ಎಂದು ವ್ಯಂಗ್ಯವಾಡಿದರು. ಎಂದಿನಂತೆ ಅಮ್ಮನೊಂದಿಗೆ ನಾನು ಬಟ್ಟೆ, ಪುಸ್ತಕ, ಕ್ಯಾಮರ ಹೀಗೆ ನನ್ನ ವಸ್ತುಗಳನ್ನು ಪ್ರತಿಬಾರಿಯ ರಿವಾಜಿನಂತೆ ತುಂಬಿಸುತ್ತಿದ್ದರೂ, ನನ್ನ ಅಪ್ಪ ಮಾತ್ರ ನಮ್ಮನ್ನು ಕಂಡು ರೈಲಿನಿಂದ ಸಡಗರದ ಸವಾರಿಗೆ ಈ ಬಾರಿ ಮತ್ತೊಂದು ರೆಕ್ಕೆ ಬಂದಂತಾಗಿದೆ ಅಲ್ಲವೇ ಎಂದು ಚೇಡಿಸಿದರು. ಹಿಂದಿನ ದಿನವೇ ಟಿಕೇಟು ಕೊಂಡಿದ್ದರಿಂದ ಮಾರನೇ ದಿನ ಬೆಳಿಗ್ಗೆ ಎದ್ದು ಬುತ್ತಿಯನ್ನು ಕಟ್ಟಿಕೊಂಡು ರೈಲಿಗೆ ಹೊರಟೆವು. ನಿಲ್ದಾಣ ತಲುಪಿ, ರೈಲು ಎಂದರೆ ನೆನಪಾಗುವ ಎದುರುಬದರು ಸೀಟಿನ ಶೋದನೆ ಕಾರ‍್ಯವನ್ನು ನಡೆಸಿ, ಕಡೆಗೆ ಕೆಲವೇ ಜನರಿದ್ದ ಬೋಗಿಯಲ್ಲಿ ಕುಳಿತೆವು. ಬ್ಯಾಗುಗಳನ್ನು ಸೀಟಿನ ಕೆಳಗೆ ತಳ್ಳಿ ಇಬ್ಬರು ಕಿಟಕಿಯ ಬಳಿ ಎದುರುಬದರು ಕುಳಿತು ಅಪ್ಪನಿಗೆ ವಿದಾಯ ಹೇಳಿದೆವು. ಅಮ್ಮನ ಮುಕದಲ್ಲಿ ಅದೆಂತದೋ ಒಂದು ಹೊಳಪು, ತವರಿಗೆ ತೆರಳುವ ತವಕ ಈಡೇರಿತು ಎಂಬ ಕುಶಿಗೋ, ರೈಲಿನಲ್ಲಿ ಆರಾಮಾಗಿ ತವರಿಗೆ ತೆರಳುತ್ತಿದ್ದೇನೆ ಎಂಬ ಕುಶಿಗೋ, ಅತವಾ ಈ ಎರಡೂ ಸೇರಿ ಇಂತ ಹೊಳಪನ್ನು ತಂದಿದ್ದವೋ ತಿಳಿಯಲಿಲ್ಲ. ಆದರೆ ನನಗಂತೂ ನಾಲ್ಕು ವಿಶಯಗಳಿಗೆ ಕುಶಿಯಾಗಿತ್ತು. ಒಂದು, ಅಜ್ಜಿ ಮನೆಗೆ ಪ್ರಯಾಣ; ಎರಡು, ರೈಲಿನ ಪ್ರಯಾಣ; ಮೂರು, ಬಸ್ಸಿನ ತ್ರಾಸದಾಯಕವಲ್ಲದ ಪ್ರಯಾಣ; ಮತ್ತೊಂದು ಕೇವಲ 16 ಕಿಲೋಮೀಟರ್ ಗಳ ಬಸ್ ಪ್ರಯಾಣ ಮಾತ್ರವೆಂದು. (ಮುಂಚೆ 350 ಕಿಲೋ ಮೀಟರ್ ಗಳಶ್ಟು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಮಗೆ 16 ಕಿಲೋಮೀಟರ್ ನ ಪ್ರಯಾಣ ಯಾವ ಲೆಕ್ಕವೂ ಆಗಿರಲಿಲ್ಲ.)

ಗಂಟೆ ಆರಾಯ್ತು, ರೈಲು ಒಂದೊಮ್ಮೆ ಕೂಗಿ ನಿದಾನವಾಗಿ ಹೊರಟಿತು. ಆಗ ಒಬ್ಬ ವ್ಯಕ್ತಿ “ಬಿಸಿಬಿಸಿ ಕಾಪಿ, ಬಿಸಿಬಿಸಿ ಕಾಪಿ” ಎಂದು ಪ್ಲ್ಯಾಸ್ಕ್ ಹಿಡಿದು ಬಂದರು. ನನ್ನೊಳಗೆ ಅದೇನೋ ಆ ನೀರ್ ಕಾಪಿ ಹೀರುವ ಹಂಬಲ ಉಂಟಾಗಿ ಅಮ್ಮನ ಕಡೆಗೆ ಒಂದು ಕಣ್ಣಿನ ಸಂದೇಶವನ್ನು ನೀಡಿದೆ. ತಾಯಿಯಲ್ಲವೆ ಯಾಕೆ ಅದರಲ್ಲೂ ತವರಿಗೆ ತೆರಳುತ್ತಿದ್ದ ಕುಶಿಯಲ್ಲಿದ್ದ ತಾಯಿ ಇಲ್ಲವೆನ್ನಲಿಲ್ಲ. ಕಾಪಿ ಕೈಗೆ ಬಂತು ಆಸೆಯ ಆತುರದಲ್ಲಿ ಹೀರಿದ್ದಕ್ಕೆ ನಾಲಿಗೆ ಕೂಡ ಒಮ್ಮೆ ಚುರ್ ಎಂದಿತು. ಹಾಗೆಯೇ ಬೆಳಗಿನ ಚಳಿಗೆ ನೀರ್ ಕಾಪಿಯ ಬಿಸಿ ಸ್ವಲ್ಪ ಹಿತವೆನಿಸಿತು. ಕಾಪಿ ಕಾಲಿಯಾಗಿ ಗಳಿಗೆಯಾಗಿರಲಿಲ್ಲ ರೈಲು ಮಂದವಾಗಿ ಮಂದಗೆರೆಗೆ ಬಂದು ನಿಂತಿತ್ತು. ಅಲ್ಲಿ ಕೆಲವು ಪ್ರಯಾಣಿಕರು ನಮ್ಮ ಬೋಗಿಯನ್ನು ಏರಿದರು. ಅವರನ್ನು ಕಂಡ ನನ್ನಮ್ಮ ಎಲ್ಲೋ ತನ್ನ ಮನೆಗೇ ಲಗ್ಗೆ ಇಡುತ್ತಿದ್ದಾರೆ ಎಂಬಂತೆ ಮುಕದಲ್ಲೊಂದು ಬಾವನೆಯನ್ನು ಮೂಡಿಸಿದಳು. ಹಾಗೂ ಸ್ವಲ್ಪ ವಿಸ್ತಾರವಾಗಿ ಹ್ಯಾಂಡ್ ಬ್ಯಾಗ್, ನೀರಿನ ಬಾಟಲಿಗಳನ್ನು ಸೀಟಿನ ಮೇಲೆ ಇಟ್ಟು,ಹುಸಿನಿದ್ರೆಗೆ ಜಾರಿ ಬೇರೆ ಯಾರೂ ಬರದಂತೆ ನೋಡಿಕೊಂಡಳು. ಮತ್ತೆ ರೈಲು ಸಾಗಿತ್ತು ಹೀಗೆ ಸಾಗಿದಂತೆ ನಾವಿಬ್ಬರೂ ಕಿಟಕಿ ಕಡೆ ದ್ರುಶ್ಟಿ ನೆಟ್ಟು ನಮ್ಮ ಲೋಕದಲ್ಲಿ ವಿಹರಿಸುತ್ತಿದ್ದಾಗ ಅಲ್ಲೊಬ್ಬ “ಮದ್ದೂರ್, ವಡೆ ಮದ್ದೂರ್ ವಡೆ” ಎಂದು ನಮ್ಮನ್ನೇ ಕರೆದಂತೆ ಬಾಸವಾಗಿ, ನಾನು ಹೇಳುವ ಮುನ್ನವೇ ಅಮ್ಮ ಬಿಸಿ ಇದೆ ಅಲ್ವಾ, ಪ್ರೆಶ್ ಇದೆ ಅಲ್ವಾ ಎಂದು ವಿಚಾರಿಸಿ ಎರಡನ್ನು ಕೊಂಡಾಗಿತ್ತು. ಆದರೂ ಬೆಳಿಗ್ಗೆ ಎಣ್ಣೆ ಪದಾರ‍್ತವನ್ನು ಹೇಗೆ ತಿನ್ನುವುದು ಎಂದು ನಮ್ಮ ನಾಲಿಗೆಗಳನ್ನು ನಿಯಂತ್ರಿಸಿ ಬುತ್ತಿಯೊಳಗೆ ಇರಿಸಿದೆವು.

ಹೀಗೆ ಸಾಗುತ್ತ ಹಾಸನವು ಬಂದಿತ್ತು, ಹಿಂದಿನಂತೆ ಜನರು ಏರಿದರು, ನನ್ನಮ್ಮ ಹಿಂದಿನಂತೆಯೇ ಮಾಡಿದರೂ, ಒಬ್ಬರು ಆಂಟಿ ಬಂದು ಅವರ ಪಕ್ಕದಲ್ಲಿ ಕುಳಿತುಕೊಂಡರು. ಅಮ್ಮನಿಗೆ ತನ್ನ ಮನೆಗೆ ಬಂದು ತನ್ನ ಅಡುಗೆಮನೆಯಲ್ಲೇ ಅನ್ಯರು ಸ್ತಾಪನೆಯಾದಂತೆ ಬಾಸವಾಗಿ ಸ್ವಲ್ಪ ಕೊಸರಿ ಕಿಟಕಿಯೆಡೆಗೆ ನೋಡುತ್ತಾ, ಹಾಗೆಯೇ ನನ್ನನ್ನು ನೋಡಿದಳು. ನಾನು ಇರಲಿ ಅವರು ಅಡುಗೆ ಮನೆಗೆ ಬಂದಿಲ್ಲ ಗೇಟಿನವರೆಗೆ ಅಶ್ಟೇ ಎಂಬಂತೆ ಸಮಾದಾನವನ್ನು ಕಣ್ಣಿನಲ್ಲೇ ನೀಡಿದೆ, ಹಾಗೆ ಸ್ವಲ್ಪ ಮಾತನಾಡಬೇಕೆಂಬ ಪ್ರೇರಣೆ ದೊರೆತಂತೆ ಅಮ್ಮ ನನ್ನೆಡೆಗೆ ತಿರುಗಿ ಊರಲ್ಲಿ ಅಜ್ಜ ತನ್ನ ಮಗಳ ಆಗಮನಕ್ಕೆ ಅವಳಿಗೆ ಇಶ್ಟವಾದ ತಂಬುಳಿ, ನೀರ‍್ಗೊಜ್ಜು, ಕಡುಬುಗಳನ್ನು ಮಾಡಿಸುತ್ತಿದ್ದಾರೆ ಎಂದು ಜಂಬದಿಂದ ಚಿಕ್ಕಮಕ್ಕಳ ಹಾಗೆ ನುಡಿದರು. ಇದನ್ನು ಕೇಳಿಸಿಕೊಂಡ ಪಕ್ಕದ ಆಂಟಿ ನೀವು ಸಾಗರದವರ? ಎಂದು ಕೇಳಿದರು, ಇಲ್ಲವೆಂದ ಅಮ್ಮ ನಾವು ಕಾರ‍್ಗಲ್ ನವರು ಜೋಗ್ ಪಾಲ್ಸ್ ಗೆ ಹತ್ತಿರದ ಊರು ಎಂದು ಹೇಳಿದರು. ಇದನ್ನು ಕೇಳಿದ ಆಂಟಿ, ಹಾಗಿದ್ದರೆ ನೀವು ನಮ್ಮೂರಿನವರೇ ಎಂದು ಹರಟೆಗೆ ಇಳಿದರು. ಇಶ್ಟೆಲ್ಲಾ ಆಗಿ ಅವರಿಬ್ಬರೂ ಪ್ರಾಣ ಸ್ನೇಹಿತರಾಗುವ ಮೊದಲೇ ಅರಸೀಕೆರೆ ಬಂದಿತ್ತು, ಆಂಟಿ ಇಳಿಯಬೇಕಾಗಿತ್ತು. ಕಡೆಗೆ ಅವರಿಬ್ಬರ ಪೋನ್ ನಂಬರ್ ಗಳು ಪರಸ್ಪರ ವಿನಿಮಯಗೊಂಡವು. ಮನೆಗೊಮ್ಮೆ ಬನ್ನಿ ಎಂಬ ಆಮಂತ್ರಣವೂ ದೊರಕಿತು. ನನಗೊಂದು ಬಿಟ್ಟಿ ಚಾಕಲೇಟ್ ಕೂಡ ಬಂತು. ಹೀಗೆ ಆಂಟಿಗೆ ವಿದಾಯ ನೀಡಿ, ತಿಂಡಿಯ ವಿರಾಮವೆಂದು ಅರಿವಾಗಿ, ಹಸಿವು ಹೆಚ್ಚಾಗಿ, ಬುತ್ತಿಯಲ್ಲಿದ್ದ ಪಲಾವನ್ನು ಕೈಗೆತ್ತಿಕೊಂಡು ಅದರೊಂದಿಗೆ ತಿನ್ನದೇ ಉಳಿದಿದ್ದ ಮದ್ದೂರು ವಡೆಯನ್ನು ಯಾರ ದ್ರುಶ್ಟಿಯೂ ಬೀಳದಂತೆ ಇರಿಸು ಮುರಿಸಾಗಿ ಮುಗಿಸುವ ಪರಮಾನಂದವನ್ನು ಸವಿಯುವ ವೇಳೆಗೆ ರೈಲು ಸಾಗಿತ್ತು.

ಕಿಟಕಿಯಾಚೆಯ ಹಸಿರು, ರೈಲಿನ ಕಂಬಿಗಳು, ಗಾಳಿಯ ರಬಸ, ಅಕ್ಕಪಕ್ಕದವರ ಸಂಸಾರ ತಾಪತ್ರಯಗಳು, ಇಶ್ಟಾದರೂ ನಾನು ಕಾತುರಳಾಗಿ ಕಾಯುತ್ತಿದ್ದವರು ಬರಲೇ ಇಲ್ಲ. ತರೀಕೆರೆ ಕಳೆದು ಬದ್ರಾವತಿ ಕಳೆದಂತೆ ಅಲ್ಲೊಂದು ದ್ವನಿ ಮೂಡಿತು “ಕಡ್ಲೇಕಾಯಿ ಕಡ್ಲೇಕಾಯಿ” ಕಣ್ಣರಳಿತು, ಕಿವಿ ಅರಳಿತು, ಅಮ್ಮನಿಗೆ ಹೇಳಿ ಗೋಗರೆದು, ಕಡೆಗೆ ಬೇಯಿಸಿದ ಶೇಂಗಾವನ್ನು ತಂದು ಅಮ್ಮನಿಗೆ ಒಂದಿಶ್ಟು ಶಾಸ್ತ್ರಕ್ಕೆ ಕೊಟ್ಟು, ನಾನೂ ಮೆಲ್ಲುತ ಜೊತೆಗೆ ಕಾರಂತರ ಮೂಕಜ್ಜಿಯ ಕನಸಿನೊಳಗೆ ನಾನೂ ಮೂಕಳಾದೆ. ಶಿವಮೊಗ್ಗ ಬಂದೇಬಿಟ್ಟಿತ್ತು ಆದರೆ ಎಂದಿನಂತೆ ಈ ಬಾರಿ ಇಳಿಯುವಂತಿಲ್ಲ. ಇನ್ನೂ ಎರಡು ಗಂಟೆಗಳ ರೈಲಿನ ಪ್ರಯಾಣ ಬಾಕಿ ಇತ್ತು. ಆದರೆ ರೈಲು ಮಾತ್ರ ಬಹಳಶ್ಟು ಪ್ರಮಾಣದಲ್ಲಿ ಬಿಕೋ ಎಂದಿತು. ಶಿವಮೊಗ್ಗೆಯಿಂದ ನಮ್ಮ ಬೋಗಿಯಲ್ಲಿ ಕೆಲವೇ ಮಂದಿ ಪ್ರಯಾಣ ಬೆಳೆಸಿದರು.ಅಲ್ಲಿಂದ ಸಾಗರದವರೆಗೂ ಕಿಟಕಿಯಾಚೆಯಿಂದ ದ್ರುಶ್ಟಿ ಹಿಂತೆಗೆಯಲಾಗಲಿಲ್ಲ. ಅದೆಂತಹ ಬಣ್ಣದ ಬಾನು, ತರತರದ ಹಸಿರು ಬಣ್ಣ, ದಟ್ಟವಾದ ಅಡಿಕೆ ಮರಗಳ ಹಿಂಡು, ಮಣ್ಣಿನ ಸುವಾಸನೆ, ಕಣ್ಣು ಹಾಯಿಸಿದಶ್ಟು ಉದ್ದಕ್ಕೂ ಕಾಣುವ ಹಸಿರು, ಎಂದಿನಂತೆ ಕಾರ‍್ಯ ಪ್ರವ್ರುತ್ತರಾಗಿದ್ದ ರೈತರು, ರೈಲಿಗೆ ಟಾಟಾ ಹೇಳುವ ಮಕ್ಕಳ ಗುಂಪು, ಸಣ್ಣ ಸಣ್ಣ ಕಾಲುವೆಗಳು, ಎಲ್ಲವೂ ಸೇರಿ ದಾರಿ ಸಾಗಿದ್ದೇ ತಿಳಿಯಲಿಲ್ಲ. ಸಾಗರ ಜಂಬಗಾರು ಬಂದೇಬಿಟ್ಟಿತು.

ಇನ್ನು 15 ನಿಮಿಶ ತಾಳಗುಪ್ಪ. ಅಲ್ಲಿಂದ 35 ನಿಮಿಶ ಕಾರ‍್ಗಲ್, ಕುಶಿಯೋ ಕುಶಿ ಇಬ್ಬರಿಗೂ ಇಲ್ಲಿಯವರೆಗೆ ತ್ರಾಸ್ ಇಲ್ಲದ ಪ್ರಯಾಣವಾಯಿತು ಎಂದು. ಮತ್ತೂ ಸ್ವಲ್ಪ ಜನ ಇಳಿದರು, ಈಗ ಇಡೀ ರೈಲಿಗೆ ನಾವೇ ಒಡೆಯರು ಎಂಬ ಬಾವನೆ. ಆದರೆ ಮೂಲೆಯಲ್ಲಿ ಅಮ್ಮನಿಗೆ ಆ ನಿಬಿಡತೆಯ ಬಯ. ಜನರಿದ್ದರೂ ಇಲ್ಲದಿದ್ದರೂ ಕಶ್ಟ! ಕಡೆಗೆ ಬ್ಯಾಗ್ ಎಲ್ಲ ಸಿದ್ದಮಾಡಿ ಇಳಿಯಲು ಅನುವಾದೆವು. ರೈಲು ಕೂ… ಎಂದು ನಿಲ್ದಾಣಕ್ಕೆ ಅಡಿಯಿಟ್ಟಿತು. ಗಾಡಿ ನಿಲ್ಲುವ ಮೊದಲೇ ಇಳಿಯುವ ತವಕ ಹೆಚ್ಚಾಗಿತ್ತು. ಕಡೆಗೂ ಇಳಿದು ಒಮ್ಮೆ ಆಚೆ-ಈಚೆ ನೋಡಿದರೆ ಇಡೀ ರೈಲಿನಿಂದ 20 ಜನರು ಇಳಿದಿದ್ದರೆ ಹೆಚ್ಚು. ಕಡೆಗೆ ಇಬ್ಬರೂ ಮುಕ ಮುಕ ನೋಡಿ ಒಮ್ಮೆ ಅದೇಕೋ ನಗು ಬೀರಿ, ಬ್ಯಾಗ್ ಹೊತ್ತು ಹೊರಗೆ ಹೊರಟೆವು. ನಮ್ಮ ಬರುವಿಕೆಯನ್ನೇ ಕಾಯುತ್ತಿದ್ದ ಬಸ್ಸೊಂದು ಬೇಗ ಬರುವಂತೆ ಕರೆದು ನಮ್ಮನ್ನು ಹತ್ತಿಸಿಕೊಂಡು ಹೊರಟಿತು.

ಸೀಟ್ ಇಲ್ಲದ ಕಾರಣ ನಿಂತೆ ಪ್ರಯಾಣಿಸಬೇಕಾಯ್ತು. ಆದರೂ ಸ್ವಲ್ಪ ಸಮಯದಲ್ಲಿ ಅಲ್ಲಿದ್ದ ಕೆಲವು ಪರಿಚಯ ಮುಕಗಳ ಪ್ರಬಾವದ ಮೇಲೆ ಅಮ್ಮನಿಗೆ ಸೀಟು ದೊರಕಿತ್ತು, ಹಾಗೆಯೇ ಅವರು ಅಲ್ಲಿದ್ದ ಪರಿಚಯದವರೊಂದಿಗೆ ಮಾತಿಗಿಳಿದರು ಒಬ್ಬರಾದ ಮೇಲೆ ಒಬ್ಬರು. ಅಮ್ಮ ನನ್ನನ್ನು ಮರೆತಂತೆ ಕಾಣುತ್ತಿತ್ತು. ನಾನು ಆ ಕಿಚ್ಚಿಗೆ ಕಡೆಗೆ ಡ್ರೈವರ್ ಅಂಕಲ್ ನನ್ನೇ ಮಾತನಾಡಿಸಿದೆ, ಅವರು ಮರು ಮಾತನಾಡುತ್ತಿದ್ದರು. ಪಾಪ, ಆದರೆ ಅವರ ಬಾಯಿತುಂಬಾ ತುಂಬಿದ ಕವಳ ನನಗೆ ಅವರ ಮಾತುಗಳು ಅರ‍್ತವಾಗದಂತೆ ಸಮರ‍್ತವಾಗಿ ನೋಡಿಕೊಳ್ಳುತ್ತಿದ್ದವು. ಆ ಬಸ್ಸು, ಡ್ರೈವರ್ ನ ಕವಳ, ಕಂಡಕ್ಟರ್ ನ ಬಣ್ಣಬಣ್ಣದ ಟಿಕೆಟ್ ಚೀಟಿಗಳು, ಜೋತುಬಿದ್ದಿದ್ದ ನಡೆಯದ ಗಡಿಯಾರ, ಶ್ರೀ ಸಿಗಂದೂರೇಶ್ವರಿ ಕ್ರುಪೆ, ಶಿರಸಿ ಮಾರಿಕಾಂಬೆಯ ಆಶೀರ‍್ವಾದ ಎಂಬ ವಾಕ್ಯಗಳು, ಕಾಲೇಜು ಯುವಕ-ಯುವತಿಯರ ಸಂಬಾಶಣೆ, ಹೊಸ ಪರಿಚಯಗಳು, ದಟ್ಟವಾದ ಕಾನನದ ಮದ್ಯದಲ್ಲಿದ್ದ ರಸ್ತೆಯ ಮೊನಚು ತಿರುವುಗಳು, ಸುತ್ತಣದ ನಿಶಬ್ದದ ಹಸಿರು, ನನ್ನಮ್ಮನ ಮುಕದಲ್ಲಿ ಸಂತಸ ಏರುತ್ತಿದ್ದ ಗತಿ, ಇವೆಲ್ಲವೂ ಅಂದೇಕೋ ಮುಗ್ದ ಸರಳ ಸುಂದರ ಎನಿಸಿತು. ಇಶ್ಟೆಲ್ಲ ಅನುಬವದೊಂದಿಗೆ ಮಿಂದೇಳುವಾಗ ಚೈನಾ ಗೇಟ್ ದಾಟಿ, ಕಾರ‍್ಗಲ್ ನ ಚೌಡೇಶ್ವರಿ ದೇವಸ್ತಾನ ಕಂಡಿತು. ಹಾಗೆ ಮನದಲ್ಲಿ ಇಲ್ಲೇ ಅಪ್ಪ-ಅಮ್ಮನ ಮದುವೆಯಾಗಿದ್ದು, ಎಂದು ಹೇಳಿಕೊಳ್ಳುವಶ್ಟು ರಲ್ಲಿ ನಾಕಾರು ಸ್ಟಾಪ್ ಗಳು ಕಳೆದು ಬಜಾರ್ ಸ್ಟಾಪ್ ಬಂದೇಬಿಟ್ಟಿತು. ಬಜಾರ್ ಗೆ ತಲುಪಿ ಇಳಿಯುವಾಗ, ನಮ್ಮನ್ನು ಕರೆದೊಯ್ಯಲು ಬಂದಿದ್ದ ಅಜ್ಜನಿಗೆ ಮಗಳು, ಮೊಮ್ಮಗಳನ್ನು ಕಂಡು ಮುಕ ಸೂರ‍್ಯಕಾಂತಿಯಂತೆ ಅರಳಿತ್ತು , ಸ್ವಲ್ಪ ಕವಳ ಹಾಕಿದ್ದ ಬಾಯಿಂದ, ಆರಾಮ ಮಗಳೇ? ಪುಟ್ಟಿ, ಹೇಗಿತ್ತು ಹೊಸ ರೈಲಿನ ಪ್ರಯಾಣ ಎಂದು ಕೇಳಿ ಕೈಗೊಂದಶ್ಟು ಚಾಕೊಲೇಟ್ ಗಳನ್ನು ಇರಿಸಿ, ಅದೊಂದು ಸಾತ್ವಿಕ ಜಂಬದಿಂದ ಊರಿನ ಬಜಾರಿನಲ್ಲಿ ಪೇಟೆಯಿಂದ ಬಂದ ಮಕ್ಕಳನ್ನು ಮನೆಗೆ ಕರೆದೊಯ್ಯುವ ನನ್ನಜ್ಜನ ಟೀವಿಯೇ ಚೆಂದ!!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: