ಬಾಲ್ಯ ಮತ್ತು ಕತೆಗಳ ಪಾತ್ರ
“ಕತೆ” – ಬಹಳಶ್ಟು ಮಕ್ಕಳಿಗೆ ಕತೆ ಅಂದ್ರೆ ತುಂಬಾ ಇಶ್ಟ. ಮಕ್ಕಳ ಕತೆಗಳು ಕೇವಲ ಮನೋಲ್ಲಾಸ ಮಾತ್ರ ನೀಡದೆ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ತಮ್ಮ ಪಾತ್ರವನ್ನು ಅದ್ಬುತವಾಗಿ ನಿರ‍್ವಹಿಸುವುದು ಸುಳ್ಳಲ್ಲ.
ನೆನಪಿಸಿಕೊಳ್ಳಿ ಬಾಲ್ಯದ ಆ ದಿನಗಳು. ಯಾರ ಕೈಯಲ್ಲೂ ಮೊಬೈಲ್ ಇಲ್ಲದ ದಿನಗಳು. ಅಮ್ಮ ಕೈ ತುತ್ತು ತಿನಿಸುತ್ತ ಹೇಳುತಿದ್ದ ಚಂದಮಾಮನ ಕತೆಗಳು, ೧೫ ದಿನಗಳಿಗೊಮ್ಮೆ ಬರುತ್ತಿದ್ದ ಬಾಲಮಂಗಳಕೋಸ್ಕರ ಚಾತಕ ಪಕ್ಶಿಯಂತೆ ಕಾಯುತಿದ್ದ ದಿನಗಳು! ಕತೆಗಳಲ್ಲಿ ಪಾತ್ರವಾಗಿದ್ದರೂ ನಮ್ಮನು ಕಾಡುತಿದ್ದ ಡಿಂಗ, ಕಾಡಿನ ಕಿಟ್ಟ, ರಾಜ ಮಹಾರಾಜರ ಕತೆಗಳು, ತರಂಗ, ಸುದಾ, ಮಯೂರದಲ್ಲಿ ಮಕ್ಕಳಿಗಾಗಿ ಇರುತ್ತಿದ್ದ ಪುಟಗಳು, ಮಕ್ಕಳ ಪ್ರಶ್ನೆಗಳಿಗೆ ಕಾರಂತಜ್ಜ (ಶಿವರಾಮ ಕಾರಂತರು) ಕೊಡುತಿದ್ದ ಉತ್ತರಗಳು, ಚಂಪಕ, ಬಾಲಮಿತ್ರ, ಚಂದಮಾಮ, ಪಂಚತಂತ್ರ – ಹೀಗೆ ಪಟ್ಟಿ ಮಾಡಿದರೆ ಒಂದೇ ಎರಡೇ, ಕತೆಗಳ ಮಾಯಾಲೋಕದಲ್ಲಿ ಮುಳುಗಿ ಹೋಗಿಬಿಡುತಿದ್ವಿ.
ಈ ಕತೆಗಳು ನಮ್ಮ ಮೇಲೆ ಗಾಡವಾದ ಪ್ರಬಾವ ಬೀರಿದ್ದವು. ಎಳವೆಯಲ್ಲಿ ಓದಿದ ಎಶ್ಟೋ ನೀತಿ ಕತೆಗಳು ನಮಗೆ ಇಂದಿಗೂ ನೆನಪಿದ್ದು, ಜೀವನ ಪಾಟ ಕಲಿಸುತ್ತಿರುವುದು ಸುಳ್ಳಲ್ಲ. ಎಲ್ಲಾ ಕತೆಗಳಲ್ಲಿ ಏನಾದರೊಂದು ನೀತಿ ಪಾಟ ಅಡಗಿರುತಿತ್ತು. ತಿಳುವಳಿಕೆ ನೀಡುವುದರ ಜೊತೆಗೆ ಒಂದು ಒಳ್ಳೆಯ ವ್ಯಕ್ತಿತ್ವವನ್ನು ಹೊಂದುವಲ್ಲಿ ಈ ಮಕ್ಕಳ ಕತೆಗಳ ಕೊಡುಗೆ ಅಗಾದ.
ಪ್ರದಾನಮಂತ್ರಿ ನರೇಂದ್ರಮೋದಿಯವರೂ ಕೂಡ ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ‍್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ “ಮಕ್ಕಳಿಗೆ ಕತೆಯನ್ನು ಹೇಳಬೇಕು. ಕತೆ ಹೇಳುವ ದೊಡ್ಡ ಪರಂಪರೆ ನಮ್ಮ ದೇಶದಲ್ಲಿದೆ. ರಾಮಾಯಣ, ಪಂಚತಂತ್ರದ ಕತೆಗಳನ್ನು ನಾವು ಕೇಳಿದ್ದೇವೆ. ಅದನ್ನು ಮಕ್ಕಳಿಗೂ ಹೇಳಿಕೊಡಬೇಕು” ಎಂದು ಹೇಳಿದರು.
ನಿಜ, ಮಕ್ಕಳಿಗೆ ಕತೆ ಹೇಳಬೇಕು, ಇಲ್ಲಾ ಕತೆಗಳನ್ನು ಓದುವಂತೆ ಪ್ರೇರೇಪಿಸಬೇಕು. ಕೇವಲ ಪಟ್ಯಪುಸ್ತಕ ಮಾತ್ರ ಓದುವಂತೆ ಅವರ ಮೇಲೆ ಒತ್ತಡ ಹೇರಬಾರದು. ದಿನದ ಸಲ್ಪ ಸಮಯ ಮಕ್ಕಳು ಒಳ್ಳೊಳ್ಳೆ ಪುಸ್ತಕಗಳನ್ನು, ಕತೆಗಳನ್ನು ಓದುವಂತೆ ಮಾಡಬೇಕು. ವ್ಯಕ್ತಿತ್ವ ರೂಪುಗೊಳಿಸುವಿಕೆಯಲ್ಲಿ ಇದು ತುಂಬಾ ಮುಕ್ಯವಾದುದು. ಮಕ್ಕಳ ಮನಸಿನ ಮೇಲೆ ಕಂಡಿತವಾಗಲೂ ಕತೆಗಳಲ್ಲಿ ಅಡಕವಾಗಿರುವ ನೀತಿ, ತತ್ವ ಪರಿಣಾಮ ಬೀರುವುದು. ಒಮ್ಮೆ ನೆನಪಿಸಿಕೊಳ್ಳಿ ವಿಕ್ರಮಾದಿತ್ಯ ಮತ್ತು ಬೇತಾಳನ ಕತೆಗಳನ್ನು. ಆ ರಾಜನ ಉತ್ತರದಲ್ಲಿ ಎಶ್ಟೊಂದು ವಿಶಯವಿರುತಿತ್ತು! ಹಾಗೆ ಅಕ್ಬರ‍್ ಮತ್ತು ಬೀರ‍್ಬಲ್, ಕ್ರಿಶ್ಣದೇವರಾಯ ಮತ್ತು ತೆನಾಲಿರಾಮನ ಕತೆಗಳು ಎಲ್ಲವೂ ಎಶ್ಟೊಂದು ಅರ‍್ತಪೂರ‍್ಣವಾಗಿರುತಿತ್ತು ಅಲ್ವೇ.
ನಾವು ಓದುವ ಅಬ್ಯಾಸವನ್ನು ಬೆಳೆಸಿಕೊಂಡು ಮಕ್ಕಳಿಗೂ ಓದುವಂತೆ ಪ್ರೇರೇಪಿಸಬೇಕು. ಅಶ್ಟೇ ಅಲ್ಲ ನಾವು ಅವರಿಗೆ ರಾತ್ರಿ ಮಲಗುವ ಸಮಯದಲ್ಲಿ ಕತೆ ಹೇಳುವ ಅಬ್ಯಾಸ ಬೆಳೆಸಿಕೊಂಡ್ರೆ ನಾವು ಎಶ್ಟೇ ಕೆಲಸದ ಒತ್ತಡದಲಿದ್ದ್ರು ಸಲ್ಪ ಸಮಯವನ್ನು ಮಕ್ಕಳಿಗೆ ಮೀಸಲಿಟ್ಟಂತೆ ಆಗುತ್ತದೆ. ಮಕ್ಕಳ ಉತ್ತಮ ಬವಿಶ್ಯ ನಿರ‍್ಮಾಣದಲ್ಲಿ ಪುಸ್ತಕಗಳು, ಕತೆಗಳು ತುಂಬಾ ಮಹತ್ವದ ಪಾತ್ರವನ್ನು ನಿರ‍್ವಹಿಸುತ್ತವೆ. ನಾವಿದನ್ನು ಅರ‍್ತ ಮಾಡಿಕೊಳಬೇಕು.
( ಚಿತ್ರಸೆಲೆ : vyaap.com )
ಇತ್ತೀಚಿನ ಅನಿಸಿಕೆಗಳು