ಕಿಟ್ಟಿ ಪಾರ‍್ಟಿ
ಕಾಲಕ್ಕೆ ತಕ್ಕಂತೆ ಬದಲಾಗುವ ಸಮಾಜದಲ್ಲಿ ಕಂಡು ಬರುವ ಬೆಳವಣಿಗೆಗಳು ಹಲವಾರು. ಇಂತಾ ಬೆಳವಣಿಗೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿರುವ, ಕೇಳಿ ಬರುತ್ತಿರುವ ಬೆಳವಣಿಗೆ ಎಂದರೆ ಕಿಟ್ಟಿ ಪಾರ‍್ಟಿ. ಸುಮಾರು 10-15 ವರ‍್ಶಗಳ ಹಿಂದೆ ನಗರದ ಪ್ರತಿಶ್ಟಿತ ಶ್ರೀಮಂತ ಮನೆಯ ಗ್ರುಹಿಣಿಯರು ತಮ್ಮ ಬಿಡುವಿನ ವೇಳೆಯಲ್ಲಿ ಮೋಜಿಗಾಗಿ, ಕಾಲ ಕಳೆಯುವುದಕ್ಕಾಗಿ ಶುರುಮಾಡಿಕೊಂಡ ಕಿಟ್ಟಿಪಾರ‍್ಟಿಯು, ಮುಂದುವರೆದು ಈಗಿನ ಸಾಮಾಜಿಕ ಜೀವನದಲ್ಲಿ ಕೇವಲ ಗ್ರುಹಿಣಿಯರು ಮಾತ್ರವಲ್ಲದೇ ಅನೇಕ ಮಹಿಳಾ ಸಂಗ ಸಂಸ್ತೆಗಳು, ಮಹಿಳಾ ಉದ್ಯೋಗಿಗಳು, ಒಂದು ಬಡಾವಣೆಗೆ ಸೇರಿದ ಮಹಿಳೆಯರೆಲ್ಲಾ ಹಣ ಹೂಡಿ, ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ನಡೆಸುವ ವಿಶೇಶ ಚಟುವಟಿಕೆ ಇದಾಗಿದೆ.
ತಿಂಗಳಿಗೊಮ್ಮೆ ಒಬ್ಬೊಬ್ಬರ ಮನೆ, ಸಬಾಂಗಣ ಅತವಾ ದೊಡ್ಡ ಹೋಟೆಲ್ ಗಳಲ್ಲಿ ನಡೆಯುವ ಈ ಕಿಟ್ಟಿಪಾರ‍್ಟಿಯಲ್ಲಿ ಬಗೆ ಬಗೆಯ ಊಟ-ತಿಂಡಿತಿನಿಸುಗಳು, ಉಡುಗೆ-ತೊಡುಗೆಗಳು, ಅನೇಕ ಮನರಂಜನಾ ಕಾರ‍್ಯಕ್ರಮಗಳು ನೋಡಸಿಗುತ್ತವೆ. ಒಂದು ಕಿಟ್ಟಿಯಲ್ಲಿ ಹತ್ತಕ್ಕಿಂತ ಅದಿಕ ಜನರು ಸೇರಿರುತ್ತಾರೆ. ಮೊದಮೊದಲು ಕಡಿಮೆ ಹಣದ ಹೂಡಿಕೆಯಿಂದ ಪ್ರಾರಂಬವಾದ ಕಿಟ್ಟಿಯು ಈಗೀಗ ಬಹಳಶ್ಟು ದುಡ್ಡು ಹೊಂದಿಸಿ ಕರ‍್ಚು ಮಾಡುವಶ್ಟು ಪ್ರಕ್ಯಾತವಾಗಿವೆ.
ಹಲವು ಬಗೆಯ ಒಂದು ನಿಮಿಶದ ಆಟಗಳನ್ನೂ ಆಡಿಸಿ ಬುದ್ದಿಗೆ ಕಸರತ್ತು ಕೊಡುವಂತಹ ಬಗೆ ಬಗೆಯ ಚಟುವಟಿಕೆಗಳು ಕಿಟ್ಟಿ ಪಾರ‍್ಟಿಯ ವಿಶೇಶಗಳಲ್ಲಿ ಒಂದು. ತಮ್ಮ ಕೂಟದಲ್ಲಿ ತಿಂಗಳಿಗೊಬ್ಬರನ್ನು ಗೊತ್ತು ಮಾಡಿ ಅವರ ನೇತ್ರುತ್ವದಲ್ಲಿ ಈ ಕಿಟ್ಟಿ ಪಾರ‍್ಟಿಯನ್ನು ನಡೆಸಲಾಗುತ್ತದೆ. ಕೆಲವು ಕಿಟ್ಟಿಪಾರ‍್ಟಿಗಳಲ್ಲಿ ಪರರನ್ನು ಹಂಗಿಸುವುದು, ತಮ್ಮ ಶ್ರೀಮಂತಿಕೆಯನ್ನು ಪ್ರದರ‍್ಶಿಸುವುದು, ಅನ್ಯರ ವೈಯಕ್ತಿಕ ವಿಶಯಗಳ ಬಗ್ಗೆ ಚರ‍್ಚಿಸುವುದೂ ನಡೆಯುತ್ತದೆ. ಹಲವು ಕಿಟ್ಟಿ ಪಾರ‍್ಟಿ ಸದಸ್ಯರು ಮೂರು/ಆರು ತಿಂಗಳುಗಳಿಗೊಮ್ಮೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಕೆಲವರು ವರ‍್ಶಕ್ಕೊಮ್ಮೆ ವಿದೇಶ ಪ್ರವಾಸವನ್ನೂ ಮಾಡಿ ಬರುವರು!
ಹಲವರು ಕಿಟ್ಟಿ ಪಾರ‍್ಟಿಗಳನ್ನು ಕೇವಲ ಮೋಜು ಮಸ್ತಿಗೆ ಮೀಸಲಿಡದೇ ಸಮಾಜ ಸೇವೆ ಮಾಡುತ್ತಿರುವುದೂ ಇದೆ. ಅಲ್ಲಿ ಕಲಿಕಾ ಚಟುವಟಿಕೆಗಳನ್ನು ಏರ‍್ಪಡಿಸಲಿಕ್ಕೆ, ಅನಾತಾಶ್ರಮ, ವ್ರುದ್ದಾಶ್ರಮಗಳ ಬೆಳವಣಿಗೆಗೆ ‘ಕಿಟ್ಟಿ’ಯ ಹಣ ಬಳಸಿಕೊಳ್ಳಲಾಗುತ್ತದೆ. ಕಿಟ್ಟಿ ಪಾರ‍್ಟಿಗಳಲ್ಲಿ ಸೇರುತ್ತಾ ಪರಿಚಿತರಾದ ಮೇಲೆ ಮಹಿಳೆಯರು ಒಬ್ಬರಿಗೊಬ್ಬರು ಹಣಕಾಸಿನ ವಿಶಯದಲ್ಲೂ ನೆರವಾಗುವರು. ಕಿಟ್ಟಿ ಪಾರ‍್ಟಿಗಳ ಮೂಲಕ ವ್ಯಾವಹಾರಿಕವಾಗಿಯೂ (ಬಟ್ಟೆಗಳ ವ್ಯಾಪಾರ, ಟಪ್ಪರ‍್ವೇರ‍್, ಅಲಂಕಾರಿಕ ವಸ್ತುಗಳು, ಗ್ರುಹೋಪಯೋಗಿ ವಸ್ತುಗಳ ಮಾರಾಟ) ಮಹಿಳೆಯರು ಯಶಸ್ವಿಯಾಗುತ್ತಿದ್ದಾರೆ. ದೇಶದೆಲ್ಲೆಡೆ ಕರೋನ ಬೀತಿಯಿಂದ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಕಿಟ್ಟಿ ಪಾರ‍್ಟಿಗಳು ಈಗ ಅಶ್ಟಾಗಿ ನಡೆಯದಿರುವುದು ಕಂಡು ಬರುತ್ತಿದೆ.
(ಚಿತ್ರ ಸೆಲೆ : cookifi.com)
ಇತ್ತೀಚಿನ ಅನಿಸಿಕೆಗಳು