ಆಯ್ದಕ್ಕಿ ಲಕ್ಕಮ್ಮನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು
– ಸಿ.ಪಿ.ನಾಗರಾಜ.
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ. (715/866)
ಗರ್ವ+ಇಂದ; ಗರ್ವ=ಸೊಕ್ಕು/ಹೆಮ್ಮೆ; ಭಕ್ತಿ=ದೇವರನ್ನು ಒಲವು ನಲಿವುಗಳಿಂದ ಪೂಜಿಸುವುದು;
ಗರ್ವದಿಂದ ಮಾಡುವ ಭಕ್ತಿ=ದೇವರ ವಿಗ್ರಹಕ್ಕೆ ವಜ್ರ ಚಿನ್ನ ಬೆಳ್ಳಿಯ ಒಡವೆಗಳನ್ನು ತೊಡಿಸಿ, ಬಗೆಬಗೆಯ ಹೂಗಳಿಂದ ಸಿಂಗರಿಸಿ, ಉಣಿಸು ತಿನಸುಗಳನ್ನು ಮುಂದಿಟ್ಟು, ದೂಪ ದೀಪಗಳನ್ನು ಬೆಳಗುತ್ತ, ಗಂಟೆ ಜಾಗಟೆಗಳನ್ನು ಬಡಿಯುತ್ತ ಅಬ್ಬರದ ದನಿಯಿಂದ ಮಾಡುವ ಆಡಂಬರದ ಪೂಜೆ;
ದ್ರವ್ಯ=ಹಣ/ಸಂಪತ್ತು/ಒಡವೆ ವಸ್ತು; ಕೇಡು=ಹಾನಿ/ನಾಶ; ನಡೆ+ಇಲ್ಲದ; ನಡೆ=ವರ‍್ತನೆ/ಮಾಡುವ ಕೆಲಸ/ನಡವಳಿಕೆ; ನುಡಿ=ಮಾತು/ಸೊಲ್ಲು; ಅರಿವು=ತಿಳಿವು/ತಿಳುವಳಿಕೆ; ಅರಿವಿಂಗೆ=ಅರಿವಿಗೆ; ಹಾನಿ=ಕೇಡು/ನಾಶ/ಆಪತ್ತು/ಅಳಿವು;
ವ್ಯಕ್ತಿಯು ಸಂಪತ್ತಿನ ಸಿರಿವಂತಿಕೆಯಿಂದ ಮೆರೆಯುತ್ತ, ಇತರರ ಮುಂದೆ ತನ್ನ ಸಾಮಾಜಿಕ ಅಂತಸ್ತನ್ನು ತೋರಿಸಿಕೊಳ್ಳಲೆಂದು ಮಾಡುವ ಆಡಂಬರದ ಪೂಜೆಯಿಂದ ಹಣ ವೆಚ್ಚವಾಗುವುದೇ ಹೊರತು ಮತ್ತೇನು ಪ್ರಯೋಜನವಿಲ್ಲ.
ವ್ಯಕ್ತಿಯು ನುಡಿದಂತೆ ನಡೆಯದಿದ್ದರೆ ಅವನು ಗಳಿಸಿರುವ ಅರಿವಿಗೆ ಯಾವುದೇ ಬೆಲೆಯಿಲ್ಲ. ಏಕೆಂದರೆ ಸತ್ಯ ನ್ಯಾಯ ನೀತಿಯ ಮಾತುಗಳಿಗಿಂತ, ಅವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದು ದೊಡ್ಡದು.
ಆಡಂಬರದ ಮಾತು ಮತ್ತು ಸಿರಿಸಂಪತ್ತಿನ ತೋರಿಕೆಯ ಪೂಜೆಗಿಂತ ವ್ಯಕ್ತಿಯು ತನ್ನ ಮತ್ತು ಸಮುದಾಯದ ಒಳಿತಿಗಾಗಿ ಒಳ್ಳೆಯ ನಡೆನುಡಿಗಳಿಂದ ಕೂಡಿ ಬಾಳುವುದೇ ದೊಡ್ಡದು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.
ಸಸಿಗೆ ನೀರೆರೆದಡೆ ಎಳಕುವುದಲ್ಲದೆ
ನಷ್ಟಮೂಲಕ್ಕೆ ಹೊತ್ತು
ನೀರ ಹೊಯಿದಡೆ ಎಳಕುವುದೆ. (728/868)
ಸಸಿ=ಎಳೆಯ ಗಿಡ/ಸಸ್ಯ/ಚಿಕ್ಕ ಪಯಿರು; ನೀರ್+ಎರೆದಡೆ; ಎರೆ=ಹಾಕು/ಸುರಿ/ಹೊಯ್ಯು; ಎರೆದಡೆ=ಹಾಕಿದರೆ; ಎಳಕುವುದು+ಅಲ್ಲದೆ; ಎಳಕು=ಅಲುಗಾಟ/ಚಲನೆ/ಜೀವರಸ ತುಂಬಿ ಬೆಳೆಯುವುದು; ಅಲ್ಲದೆ=ಹೊರತು; ನಷ್ಟ=ಹಾನಿ/ಕೇಡು/ಇಲ್ಲವಾಗುವದು;
ಮೂಲ=ಮಣ್ಣಿನೊಳಗಿರುವ ಮರಗಿಡಗಳ ತಾಯಿಬೇರು ಮತ್ತು ಕವಲುಬೇರುಗಳು; ನಷ್ಟಮೂಲ=ಬುಡ ಸಮೇತ ಕಿತ್ತುಬಂದು, ಅಡಿಮೇಲಾಗಿ ಬಿದ್ದಿರುವ ಸಸಿ; ಹೊತ್ತು=ನೀರು ತುಂಬಿದ ಕೊಡವನ್ನು ತಲೆಯ ಮೇಲೆ ಇಲ್ಲವೇ ಹೆಗಲ ಮೇಲಿಟ್ಟುಕೊಂಡು ಹೋಗಿ; ನೀರ=ನೀರನ್ನು; ಹೊಯ್=ಹಾಕು/ಸುರಿ/ಎರೆ; ಹೊಯಿದಡೆ=ಹಾಕಿದರೆ; ಎಳಕುವುದೆ=ಮತ್ತೆ ಜೀವಂತವಾಗಿ ಬೆಳೆಯುವುದೆ;
ಮಣ್ಣಿನೊಳಗೆ ಬೇರು ಬಿಟ್ಟು ಬೆಳೆದು ನಿಂತಿರುವ ಸಸಿಗೆ ಅದರ ಬುಡದಲ್ಲಿ ನೀರನ್ನು ಎರೆದರೆ, ಅದು ಬೆಳೆದು ದೊಡ್ಡದಾಗಿ ಹೂವು ಕಾಯಿ ಹಣ್ಣನ್ನು ನೀಡುತ್ತದೆ. ಬುಡಸಮೇತ ಕಿತ್ತು ಬಂದು ಅಡಿಮೇಲಾಗಿ ನೆಲದ ಮೇಲೆ ಬಿದ್ದಿರುವ ಸಸಿಯ ಬೇರುಗಳ ಮೇಲೆ ನೀರನ್ನು ಹೊಯ್ದರೆ, ಸತ್ತುಹೋಗಿರುವ ಸಸಿಯು ಮತ್ತೆ ಜೀವಂತವಾಗಿ ಬೆಳೆಯುವುದಿಲ್ಲ. ಇದನ್ನು ಒಂದು ರೂಪಕವಾಗಿ ಹೇಳಲಾಗಿದೆ.
ಉಳಿದು ಬೆಳೆದು ನಾಲ್ಕು ಕಾಲ ಬಾಳುವ ಒಳ್ಳೆಯ ಕೆಲಸಕ್ಕೆ ನಾವು ಉತ್ತೇಜನವನ್ನು ಮತ್ತು ನೆರವನ್ನು ನೀಡಬೇಕಲ್ಲದೆ, ಜನಸಮುದಾಯಕ್ಕೆ ಉಪಯೋಗವಿಲ್ಲದ ಇಲ್ಲವೇ ಕೇಡನ್ನು ತರುವ ಕೆಲಸವನ್ನು ನಾವು ಬೆಂಬಲಿಸಬಾರದು ಎಂಬ ತಿರುಳಿನಲ್ಲಿ ಈ ರೂಪಕ ಬಳಕೆಯಾಗಿದೆ.
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು