ಜೆನ್ ಕತೆ: ಬಿಕ್ಶಾ ಪಾತ್ರೆ

– .

ಬಿಕ್ಶುಕನೊಬ್ಬ ರಾಜನ ಅರಮನೆಗೆ ಬಂದ. ರಾಜ ವಾಯುವಿಹಾರದಲ್ಲಿ ಇದ್ದ. ಉದ್ಯಾನದ ಹೊರಗಡೆ ಇದ್ದ ಸೇವಕ ಬಿಕ್ಶುಕನನ್ನು ತಡೆದು, ತಾನೇ ಬಿಕ್ಶೆ ನೀಡಲು ಮುಂದಾದ. ತಕ್ಶಣ ಆ ಬಿಕ್ಶುಕ ಆ ಸೇವಕನನ್ನು ತಡೆದು “ನನ್ನದೊಂದು ಶರತ್ತಿದೆ. ನಾನು ಬಿಕ್ಶೆ ಸ್ವೀಕರಿಸುವುದು ದಣಿಯಿಂದ ಮಾತ್ರ, ಎಂದಿಗೂ ಸೇವಕರಿಂದ ಅಲ್ಲ” ಎಂದ. ಬಿಕ್ಶುಕ ಮತ್ತು ತನ್ನ ಸೇವಕನ ನಡುವೆ ನಡೆದ ಸಂಬಾಶಣೆಯನ್ನು ಉದ್ಯಾನದಲ್ಲಿ ನಡಿಗೆಯಲ್ಲಿದ್ದ ರಾಜ ಕೇಳಿಸಿಕೊಂಡ. ಅವನಿಗೆ ಆಶ್ಚರ‍್ಯವಾಯಿತು. ಬಿಕ್ಶುಕರಿಗೆ ಆಯ್ಕೆ ಮರೀಚಿಕೆ. ಅಂತಹುದರಲ್ಲಿ ಈ ಬಿಕ್ಶುಕ ಬಿಕ್ಶೆ ಪಡೆಯಲು ಶರತ್ತನ್ನು ವಿದಿಸಿದ್ದು ಕೇಳಿ ರಾಜನಿಗೆ ವಿಚಿತ್ರವೆನಿಸಿತು. ಬಹಳ ಅಪರೂಪದ ಬಿಕ್ಶುಕ ಇರಬೇಕು, ಎಂದುಕೊಳ್ಳುತ್ತಾ ಅವನ ಬಳಿ ಬಂದ ರಾಜ. ರಾಜನನ್ನು ಮೀರಿಸುವ ವರ‍್ಚಸ್ಸು ಬಿಕ್ಶುಕನ ಮುಕದಲ್ಲಿ ಕಂಡಿತು. ಹಾಕಿದ್ದು ಪೂರ‍್ಣ ಮೈ ಮುಚ್ಚದ ಚಿಂದಿ ಬಟ್ಟೆ ಆದರೂ, ಅವನ ಸುತ್ತ ಪ್ರಬೆ ಇದ್ದಂತಿತ್ತು. ಅವನ ಕೈಲಿದ್ದ ಆ ಬಿಕ್ಶಾ ಪಾತ್ರೆ ಸಹ ಬಹಳ ಅಮೂಲ್ಯವಾದಂತೆ ಕಾಣಿಸುತ್ತಿತ್ತು.

ರಾಜ ಆ ಬಿಕ್ಶುಕನನ್ನು ಕುರಿತು, “ಬಿಕ್ಶೆ ಪಡೆಯಲು ಯಾಕೆ ಈ ಶರತ್ತು? ಯಾರು ಕೊಟ್ಟರೇನಂತೆ? ಬಿಕ್ಶೆ, ಬಿಕ್ಶೆಯೇ ಅಲ್ಲವೆ?” ಎಂದು ಕೇಳಿದ. ರಾಜನ ಮಾತು ಕೇಳಿದ ಆ ಬಿಕ್ಶುಕ, “ರಾಜ, ನಿನ್ನ ಸೇವಕರು ಸ್ವತಹ ಬಿಕ್ಶುಕರು. ಅವರು ನೀನು ನೀಡುವ ಬಿಕ್ಶೆಯಿಂದ ಬದುಕಿದ್ದಾರೆ. ಅವರಿಂದ ಬಿಕ್ಶೆ ಪಡೆಯುವುದು ಸರಿಯಲ್ಲ ಅಲ್ಲವೇ?” ಎಂದು ಮರು ಪ್ರಶ್ನೆ ಹಾಕಿದ. “ತಾವು ದಣಿಗಳು. ತಾವು ಬಿಕ್ಶೆ ನೀಡಲು ಸಿದ್ದವಿದ್ದರೆ ನಾನು ಅದನ್ನು ಸ್ವೀಕರಿಸುವೆ. ಆದರೆ ತಮ್ಮಿಂದ ಬಿಕ್ಶೆ ಸ್ವೀಕರಿಸಲು ನನ್ನದೊಂದು ಸಣ್ಣ ಶರತ್ತಿದೆ. ಅದೇನೆಂದರೆ, ನನ್ನ ಬಳಿಯಿರುವ ಈ ಬಿಕ್ಶಾ ಪಾತ್ರೆ ಸಂಪೂರ‍್ಣ ತುಂಬಬೇಕು” ಎಂದ.

ಬಿಕ್ಶುಕನ ಬಳಿಯಿರುವ ಆ ಬಿಕ್ಶಾ ಪಾತ್ರೆಯನ್ನು ಗಮನಿಸಿದ ರಾಜ ನಗಲು ಶುರುಮಾಡಿದ. ನಂತರ ಬಿಕ್ಶುಕನನ್ನು ಕುರಿತು, “ಈ ಸಣ್ಣ ಬಿಕ್ಶಾ ಪಾತ್ರೆಯನ್ನು ತುಂಬಿಸಲು ನನ್ನ ಕೈಯಲ್ಲಿ ಅಸಾದ್ಯ ಎಂದು ಬಾವಿಸಿದ್ದೀರ?” ಎನ್ನುತ್ತಾ ನಗುವನ್ನು ಹೆಚ್ಚಿಸಿದ. ಅಲ್ಲೇ ಜೊತೆಯಲ್ಲೇ ಇದ್ದ ಮಂತ್ರಿಗಳಿಗೆ, “ಅಮೂಲ್ಯವಾದ, ಅನನ್ಯವಾದ ಮುತ್ತು ರತ್ನಗಳಿಂದ ಆ ಬಿಕ್ಶುಕನ ಬಳಿಯಿರುವ ಬಿಕ್ಶಾ ಪಾತ್ರೆಯನ್ನು ತುಂಬಿಸಿ, ಅವನನ್ನು ಸಂತ್ರುಪ್ತಪಡಿಸಿ” ಎಂದು ಆದೇಶಿಸಿದ.
ಮಂತ್ರಿಗಳು ರಾಜನ ಆದೇಶ ಪಾಲಿಸದೇ ವಿದಿಯಿರಲಿಲ್ಲ. ಕಜಾನೆಯಲ್ಲಿದ್ದ ಅನನ್ಯ ಮತ್ತು ಅಮೂಲ್ಯವಾದ ಮುತ್ತು ರತ್ನಗಳನ್ನು ತಂದು ಆ ಬಿಕ್ಶುಕನ ಬಿಕ್ಶಾ ಪಾತ್ರೆಗೆ ಹಾಕಿದರು. ಬಿಕ್ಶಾ ಪಾತ್ರೆಗೆ ಹಾಕಿದರೂ ಆವುಗಳಿಂದ ಯಾವುದೇ ಶಬ್ದ ಬರಲಿಲ್ಲ. ಒಂದೆರೆಡು ಕ್ಶಣಗಳಲ್ಲಿ ಅವು ಕಣ್ಮರೆಯಾಗಿ, ಬಿಕ್ಶಾ ಪಾತ್ರೆ ಮತ್ತೆ ಕಾಲಿಯಾಯಿತು. ರಾಜ ಈಗ ಚಿಂತಾಕ್ರಾಂತನಾದ. ಅವನ ಅಹಂಗೆ ಪೆಟ್ಟು ಬಿದ್ದಿತ್ತು. ಬಿಕ್ಶುಕನ ಆ ಸಣ್ಣ ಬಿಕ್ಶಾ ಪಾತ್ರೆ ತುಂಬಿಸಲಾಗದಶ್ಟು ಸಣ್ಣವನೇ ಎಂದು ಯೋಚಿಸುತ್ತಾ ಮಂತ್ರಿಗಳಿಗೆ ತನ್ನ ಕಜಾನೆಯಲ್ಲಿರುವ ಅಶ್ಟೂ ಅಮೂಲ್ಯವಾದ ಮುತ್ತು ರತ್ನಗಳನ್ನು ತಂದು ಆ ಬಿಕ್ಶಾ ಪಾತ್ರೆಯನ್ನು ತುಂಬಿಸಲು ಆದೇಶಿಸಿದ. ರಾಜನ ಕಜಾನೆ ಕಾಲಿಯಾದರೂ ಆ ಬಿಕ್ಶುಕನ ಬಿಕ್ಶಾ ಪಾತ್ರೆ ತುಂಬಲೇ
ಇಲ್ಲ.

ತನ್ನೆಲ್ಲಾ ಕಜಾನೆಯನ್ನು ಕಳೆದುಕೊಂಡು ರಾಜ ಈಗ ಬಿಕಾರಿಯಾಗಿದ್ದ. ಮತ್ತೇನು ಮಾಡಲು ತೋಚದೆ, ಆ ಬಿಕ್ಶುಕನ ಕಾಲಿಗೆರೆಗಿ, “ಎಲ್ಲವನ್ನೂ ಕಳೆದುಕೊಂಡು ಈಗ ನಾನು ಬಿಕ್ಶುಕನಾಗಿದ್ದೇನೆ. ಅದು ಮಾಂತ್ರಿಕ ಬಿಕ್ಶಾ ಪಾತ್ರೆ ಎನಿಸುತ್ತದೆ, ದಯಮಾಡಿ ಆ ಬಿಕ್ಶಾ ಪಾತ್ರೆಯ ರಹಸ್ಯವನ್ನು ತಿಳಿಸಿರಿ” ಎಂದು ಬೇಡಿದ. ಆ ಬಿಕ್ಶುಕ ತನ್ನಲ್ಲಿದ್ದ ಆ ಬಿಕ್ಶಾ ಪಾತ್ರೆಯನ್ನು ಹಿಂದೆ ಮುಂದೆಲ್ಲಾ ತಿರುಗಿಸಿ, “ಎಲೈ ರಾಜನೆ, ಈ ಬಿಕ್ಶಾ ಪಾತ್ರೆಯಲ್ಲಿ ಯಾವುದೇ ಮಾಯೆ ಮಂತ್ರ ಇಲ್ಲ. ಇದು ಮಾನವನ ಮನಸ್ಸಿನಿಂದ ಮಾಡಿದೆ, ಪ್ರತಿಯೊಬ್ಬ ಮಾನವನ ಮನಸ್ಸೂ ಈ ಬಿಕ್ಶಾಟನೆಯ ಪಾತ್ರೆಯಂತೆ. ಅದನ್ನು ಒಂದು ಕಡೆಯಿಂದ ಬರ‍್ತಿ ಮಾಡುತ್ತಿದ್ದರೂ ಅದು ಕಾಲಿಯಾಗಿದ್ದಂತೆಯೇ ಇರುತ್ತದೆ. ಇಡೀ ಪ್ರಪಂಚದಲ್ಲಿರುವುದನ್ನೆಲ್ಲಾ ಅದರಲ್ಲಿ ಹಾಕಿ, ಅವು ಯಾವುದೇ ಶಬ್ದ ಮಾಡದೆ ಕಾಲಿಯಾಗುತ್ತೆ. ಇದೇ ಮಾನವನ ಮನಸ್ಸಿನ ತಾಕತ್ತು. ಸರಿಯಾದ ರೀತಿಯಲ್ಲಿ ಅದನ್ನು ಬಳಸಿಕೊಳ್ಳಿ” ಎಂದು ಹೇಳುತ್ತಾ, ತನ್ನ ದಾರಿ ಹಿಡಿದು ಹೊರಟು ಹೋದ.

(ಚಿತ್ರ ಸೆಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: