ಕರ‍್ನಾಟಕ ಕ್ರಿಕೆಟ್ ತಂಡದ ನಾಲ್ಕನೇ ರಣಜಿ ಗೆಲುವು
1982/83 ರ ಬರ‍್ಜರಿ ಗೆಲುವಿನ ಬಳಿಕ ಒಂದು ದಶಕಕ್ಕೂ ಹೆಚ್ಚು ಕಾಲ ಕರ‍್ನಾಟಕ ತಂಡ ರಣಜಿ ಟೂರ‍್ನಿ ಗೆಲ್ಲುವುದಿರಲಿ, ಹನ್ನೆರಡು ವರುಶಗಳಲ್ಲಿ ಒಮ್ಮೆಯೂ ಪೈನಲ್ ಕೂಡ ತಲುಪುವುದಿಲ್ಲ. ಈ ಅವದಿಯಲ್ಲಿ ಎರಡು ಬಾರಿ ಸೆಮಿಪೈನಲ್, ಎರಡು ಬಾರಿ ಕ್ವಾರ‍್ಟರ್ ಪೈನಲ್, ಹಾಗೂ ಮೂರು ಬಾರಿ ಪ್ರೀ-ಕ್ವಾರ‍್ಟರ್ ಪೈನಲ್ ಹಂತದಲ್ಲಿ ತಂಡದ ಹೋರಾಟ ಕೊನೆಗೊಂಡರೆ ಇನ್ನುಳಿದ ಐದು ವರುಶಗಳಲ್ಲಿ ಲೀಗ್ ಹಂತದಲ್ಲೇ ತಂಡ ಟೂರ‍್ನಿಯಿಂದ ಹೊರನಡೆದು ನಿರಾಸೆ ಮೂಡಿಸಿತು. ಹಾಗೂ 1990/91 ರ ಕ್ವಾರ‍್ಟರ್ ಪೈನಲ್ ನಲ್ಲಿ ಬೆಂಗಾಲ್ ಎದುರು 791/6 ಗಳಿಸಿಯೂ (run-quotient) ಎಂಬ ಗೊಂದಲಮಯ ನಿಯಮದ ಆದಾರದ ಮೇಲೆ ಎದುರಾಳಿಯ ಸ್ಕೋರ್ 652/9 ಕ್ಕೆ ಸೋಲುಂಡಿದ್ದು ಕರ‍್ನಾಟಕ ಕ್ರಿಕೆಟ್ ಇತಿಹಾಸದ ಅತ್ಯಂತ ನೋವಿನ ಕ್ಶಣಗಳಲ್ಲೊಂದಾಗಿ ಇಂದಿಗೂ ಕಾಡುತ್ತದೆ.
“ಕರ‍್ನಾಟಕ ತಮ್ಮ ಹಳೇ ವೈಬವದ ದಿನಗಳನ್ನು ನೆನೆಯಬೇಕಶ್ಟೇ”
ದಶಕಕ್ಕೂ ಹೆಚ್ಚು ಕಾಲ ತಂಡದ ನೀರಸ ಪ್ರದರ‍್ಶನದ ಹಿಂದೆ ನಾನಾ ಕಾರಣಗಳಿದ್ದವು. 80 ರ ದಶಕದ ದಿಗ್ಗಜರೆಲ್ಲಾ ಒಬ್ಬೊಬ್ಬರಾಗಿ ಆಟದಿಂದ ದೂರ ಸರಿದಾಗ ಅವರ ಎಡೆಯನ್ನು ತುಂಬುವ ಅಳವುಳ್ಳ ಆಟಗಾರರು ಒಡನೇ ಸಿಗದ್ದಿದ್ದದ್ದು ಅದರಲ್ಲಿ ಮುಕ್ಯವಾದ ಕಾರಣ. ಕೆ. ಜೆಶ್ವಂತ್, ಅರ‍್ಜುನ್ ರಾಜ, ಸಲ್ದಾನ ಅವರಂತಹ ಒಳ್ಳೆ ಆಟಗಾರರಿದ್ದರೂ ತಂಡದ ಓಟ್ಟಾರೆ ಪ್ರದರ‍್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಿರ‍್ಮಾನಿ, ತಂಡಕ್ಕೆ ಅವರ ಅಗತ್ಯತೆಯನ್ನು ಅರಿತು ಹಿರಿಯ ಆಟಗಾರರಾಗಿ, ಮಾರ‍್ಗದರ‍್ಶಕರಾಗಿ 1993/94 ರ ತನಕ ಆಡಿದರೂ ಕರ‍್ನಾಟಕದ ಅದ್ರುಶ್ಟ ಬದಲಾಗುವುದಿಲ್ಲ. ಹೀಗಿರುವಾಗ ಸಹಜವಾಗಿಯೇ ಕ್ರಿಕೆಟ್ ಪಂಡಿತರು, ಪತ್ರಕರ‍್ತರು ಹಾಗೂ ಬಾರತದ ಅನೇಕ ಮಾಜಿ ಆಟಗಾರರು ಕರ‍್ನಾಟಕ ತಂಡವನ್ನು, ಪ್ರತಿ ವರ‍್ಶ ಟೂರ‍್ನಿ ಗೆಲ್ಲಲಾಗದ, ಸ್ಪರ‍್ದಿಸಲಶ್ಟೇ ಕಣಕ್ಕಿಳಿಯುವ ತಂಡವೆಂದು, ಹಾಗೂ ಇನ್ನೇನ್ನಿದ್ದರೂ ಅವರ ಗತವೈಬವವನ್ನಶ್ಟೇ ನೆನೆಯಬೇಕೆಂದು ಬಣ್ಣಿಸಲು ಮೊದಲು ಮಾಡಿದರು. ಅವರು ಹಾಗೆ ಕರೆದ್ದಿದ್ದರಲ್ಲಿ ಯಾವುದೇ ತಪ್ಪಿರಲಿಲ್ಲ. ಆದರೆ 90ರ ದಶಕದ ಆರಂಬದಿಂದ ಶ್ರೀನಾತ್, ಕುಂಬ್ಳೆ, ದ್ರಾವಿಡ್, ವೆಂಕಟೇಶ್ ಪ್ರಸಾದ್ ರಂತಹ ಆಟಗಾರರ ಬರುವಿಕೆಯಿಂದ ತಂಡ ಹಂತಹಂತವಾಗಿ ಬಲಗೊಳ್ಳುತ್ತಾ ಹೋಯಿತು ಮತ್ತು ನಾಡಿನ ಕ್ರಿಕೆಟ್ ವೈಬವ ಮರುಕಳಿಸಿತು.
1995/96 ಲೀಗ್ ಹಂತ
ಈ ಸಾಲಿನ ಟೂರ‍್ನಿ ಮೊದಲ್ಗೊಳ್ಳುವ ಹೊತ್ತಿಗೆ ಬಾರತದ ಯಾವುದೇ ಅಂತರಾಶ್ಟ್ರೀಯ ಪಂದ್ಯಗಳಿಲ್ಲದ ಕಾರಣ ಕುಂಬ್ಳೆ, ಶ್ರೀನಾತ್ ಹಾಗೂ ಪ್ರಸಾದ್ ರ ಸೇವೆ ಕರ‍್ನಾಟಕ ತಂಡಕ್ಕೆ ಮೊದಲೆರಡು ಪಂದ್ಯಗಳಲ್ಲಿ ಸಿಗುತ್ತದೆ, ಹಾಗೂ ಕುಂಬ್ಳೆ ನಾಯಕರಾಗುತ್ತಾರೆ. ಆಂದ್ರ ಎದುರಿನ ಮೊದಲ ಪಂದ್ಯದಲ್ಲಿ ಕುಂಬ್ಳೆ ಅವರ 64 ಹಾಗೂ ಅರುಣ್ ಕುಮಾರ್ ರ 58 ರನ್ ಗಳ ಕೊಡುಗೆಯಿಂದ 247 ರನ್ ಗಳ ಸಾದಾರಣ ಮೊತ್ತ ಕಲೆಹಾಕಿದರೂ ಬೌಲಿಂಗ್ ಬಲದಿಂದ ಎರಡೇ ದಿನಗಳಲ್ಲಿ ಎದುರಾಳಿಯನ್ನು 41 ಹಾಗೂ 97 ರನ್ ಗಳಿಗೆ ಎರಡು ಬಾರಿ ಆಲೌಟ್ ಮಾಡಿ, ಕರ‍್ನಾಟಕ ಇನ್ನಿಂಗ್ಸ್ ಹಾಗೂ 109 ರನ್ ಗಳ ದೊಡ್ಡ ಗೆಲುವು ಪಡೆಯುತ್ತದೆ. ಮೊದಲ ಇನ್ನಿಂಗ್ಸ್ ನಲ್ಲಿ ಪ್ರಸಾದ್ (6/23) ಹಾಗೂ ದೊಡ್ಡ ಗಣೇಶ್ (4/12) ಗಮನ ಸೆಳೆದರೆ ಎರಡನೇ ಇನ್ನಿಂಗ್ಸ್ ಲಿ ಸುನಿಲ್ ಜೋಶಿ 3/19 ವಿಕೆಟ್ ಪಡೆಯುತ್ತಾರೆ. ನಂತರ ಗೋವಾ ಎದುರು ಶ್ರೀನಾತ್ (3/28) ಮತ್ತು ಜೋಶಿ (3/47) ಅವರ ಬೌಲಿಂಗ್ ನಿಂದ 132 ರನ್ ಗಳಿಗೆ ಅವರನ್ನು ಆಲೌಟ್ ಮಾಡಿದರೆ, ಸೋಮಸುಂದರ್ (114) ಹಾಗೂದ್ರಾವಿಡ್ ರ (108) ಶತಕಗಳ ನೆರವಿನಿಂದ 466 ರನ್ ಗಳನ್ನು ಕಲೆಹಾಕುತ್ತಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಕುಂಬ್ಳೆ (6/20) ಹಾಗೂ ಜೋಶಿ (4/48) ಅವರ ಸ್ಪಿನ್ ಬಲದ ಮೇಲೆ ಕರ‍್ನಾಟಕ ಇನ್ನಿಂಗ್ಸ್ ಹಾಗೂ 237 ರನ್ ಗಳ ಮತ್ತೊಂದು ದೊಡ್ಡ ಗೆಲುವು ಪಡೆಯುತ್ತದೆ.
1996 ರ ವಿಶ್ವಕಪ್ ಪೂರ‍್ವಬಾವಿ ಸಿದ್ದತೆ – ಕರ‍್ನಾಟಕಕ್ಕಿಲ್ಲ ಅನುಬವಿಗಳ ಸೇವೆ
ವಿಶ್ವಕಪ್ ಹತ್ತಿರವಾಗುತ್ತಿದ್ದಂತೆಯೇ ಬಿಸಿಸಿಐ ಸಂಬಾವ್ಯ ಪಟ್ಟಿಯನ್ನು ಪ್ರಕಟಿಸಿ ಅದರಲ್ಲಿದ್ದ ಎಲ್ಲಾ ಆಟಗಾರರನ್ನು ತರಬೇತಿಗೆಂದು ಕೆರೆಸಿಕೊಳ್ಳುತ್ತದೆ. ಹಾಗಾಗಿ ಶ್ರೀನಾತ್, ಕುಂಬ್ಳೆ, ಪ್ರಸಾದ್ ರೊಟ್ಟಿಗೆ ದ್ರಾವಿಡ್ ಕೂಡ ತರಬೇತಿಗೆ ತೆರಳುತ್ತಾರೆ. ಇವರೆಲ್ಲರ ಅನುಪಸ್ತಿತಿಯಲ್ಲಿ ಜೆಶ್ವಂತ್ ತಂಡದ ಮುಂದಾಳು ಆಗುತ್ತಾರೆ. ಬೆಂಗಳೂರಿನ RSI ಅಂಗಳದಲ್ಲಿ ಕೇರಳ ಎದುರು ಮೂರನೇ ಲೀಗ್ ಪಂದ್ಯದಲ್ಲಿ ಜಾನ್ಸನ್ (6/63) ಹಾಗೂ ಗಣೇಶ್ (3/46) ಅವರ ವೇಗದ ದಾಳಿಗೆ ಕೇರಳ 151 ಕ್ಕೆಕುಸಿಯುತ್ತದೆ. ಆದರೆ ಕರ‍್ನಾಟಕ ಬ್ಯಾಟಿಂಗ್ ಮಾಡುವಾಗ 77 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಶ್ಟಕ್ಕೆ ಸಿಲುಕುತ್ತದೆ. ಈ ಸುದ್ದಿ ದೂರವಾಣಿ ಮೂಲಕ ತಿಳಿಯುತ್ತಿದ್ದಂತೆ ಚಿನ್ನಸ್ವಾಮಿ ಅಂಗಳದಲ್ಲಿ ಬಾರತ ತಂಡದೊಂದಿಗಿದ್ದ ಕರ‍್ನಾಟಕದ ಕೆಲವು ಮಾಜಿ ಆಟಗಾರರು RSI ಅಂಗಳಕ್ಕೆ ಕೂಡಲೇ ಬಂದು ಮುಂದೆ ಬ್ಯಾಟ್ ಮಾಡಲಿದ್ದ ಆಟಗಾರರಿಗೆ ಸಲಹೆ, ಸೂಚನೆ ನೀಡಿ ದೈರ‍್ಯ ತುಂಬುತ್ತಾರೆ. ಆ ಬಳಿಕ ಶಶಿಕಾಂತ್ 103 ರನ್ ಗಳಿಸಿ ಕೆಳಗಿನ ಕ್ರಮಾಂಕದವರೊಟ್ಟಿಗೆ ತಂಡವನ್ನು 244 ತನಕ ಕೊಂಡೊಯ್ದು 93 ರನ್ ಗಳ ಮುನ್ನಡೆ ದಕ್ಕಿಸಿಕೊಡುತ್ತಾರೆ. ಕೇರಳ ಎರಡನೇ ಇನ್ನಿಂಗ್ಸ್ ನಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಿ 346 ರನ್ ಗಳಿಸಿ ಕರ‍್ನಾಟಕಕ್ಕೆ 254 ರನ್ ಗಳ ದೊಡ್ಡ ಗುರಿ ನೀಡುತ್ತದೆ. ಇದನ್ನು ಬೆನ್ನತ್ತಿ ಹೊರಟ ರಾಜ್ಯ ತಂಡ ಮತ್ತೊಮ್ಮೆ 114ಕ್ಕೆ 5 ವಿಕೆಟ್ ಕಳೆದುಕೊಂಡು ಪಂದ್ಯ ಸೋಲುವ ಬೀತಿಯಲ್ಲಿರುತ್ತದೆ. ಆಗ ನಾಯಕ ಜೆಶ್ವಂತ್ 59, ಸೋಮಸುಂದರ್ 51 ಹಾಗೂ ಜೋಶಿ ಔಟಾಗದೆ 59 ರನ್ ಗಳಿಸಿ 3 ವಿಕೆಟ್ ಗಳ ರೋಚಕ ಗೆಲುವಿಗೆ ರೂವಾರಿಯಾಗುತ್ತಾರೆ. ದಿಟ್ಟತನದಿಂದ ಹೋರಾಡಿ ಪಡೆದ ಈ ಗೆಲುವು ಆಟಗಾರರ ತನ್ನಂಬಿಕೆಯನ್ನು ಹೆಚ್ಚಿಸುತ್ತದೆ. ಆ ಬಳಿಕ ಹೈದರಾಬಾದ್ ಎದುರು 118 ರನ್ ಗಳಿಸಿ, 7/60 ಮತ್ತು 4/66 ವಿಕೆಟ್ ಪಡೆದ ಜೋಶಿಯವರ ಆಲ್ರೌಂಡ್ ಆಟದ ನಿರವಿನಿಂದ ತಂಡ 9 ವಿಕೆಟ್ ಗಳ ನಿರಾಯಾಸ ಗೆಲುವು ಪಡೆಯುತ್ತದೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ರಾಹುಲ್ ದ್ರಾವಿಡ್, ತಮಿಳು ನಾಡು ಎದುರಿನ ಕಡೆಯ ಲೀಗ್ ಪಂದ್ಯಕ್ಕೆ ಸರಿಯಾಗಿ ರಾಜ್ಯ ತಂಡಕ್ಕೆ ಹಿಂದಿರುಗಿ ನಾಯಕನ ಹೊಣೆ ಹೊರುತ್ತಾರೆ. ಬದ್ರಾವತಿಯಲ್ಲಿ ನಡೆದ ಈ ಪಂದ್ಯ ಸಪ್ಪೆಯಾಗಿ ಡ್ರಾ ನಲ್ಲಿ ಕೊನೆಗೊಂಡರೂ ಸೋಮಸುಂದರ್ 166, ವಿಜಯ್ ಬಾರದ್ವಾಜ್ 122, ಶ್ರೀರಾಮ್ 174 ಹಾಗೂ ಜೆಶ್ವಂತ್ 91 ರನ್ ಗಳಿಸಿ ಬ್ಯಾಟಿಂಗ್ ಬಲ ಪ್ರದರ‍್ಶಿಸುತ್ತಾರೆ. ತಂಡ 716 ರನ್ ಗಳಿಸುತ್ತದೆ. ನಂತರ ಜೋಶಿ (4/93) ಹಾಗೂ ಜಾನ್ಸನ್ ರ (3/121) ಬೌಲಿಂಗ್ ನಿಂದ ತಮಿಳುನಾಡು ತಂಡವನ್ನು 366ಕ್ಕೆ ಕುಸಿಯುವಂತೆ ಮಾಡಿ 350 ರನ್ ಗಳ ಮುನ್ನಡೆ ಪಡೆದು ದಕ್ಶಿಣ ವಲಯದ ಅಂಕಪಟ್ಟಿಯಲ್ಲಿ ಒಟ್ಟು ನಾಲ್ಕು ಗೆಲುವು ಹಾಗೂ ಒಂದು ಡ್ರಾ ದಾಕಲಿಸಿ, ಮೊದಲ ಸ್ತಾನ ಪಡೆದು ಕರ‍್ನಾಟಕ ತಂಡ ಮತ್ತೊಮ್ಮೆ ನಾಕೌಟ್ ಹಂತ ತಲುಪುತ್ತದೆ.
ಪ್ರೀ-ಕ್ವಾರ‍್ಟರ್ ಪೈನಲ್ – ಎದುರಾಳಿ ಬೆಂಗಾಲ್
ಬೆಂಗಳೂರಿನ RSI ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಬೆಂಗಾಲ್, ಜಾನ್ಸನ್ (4/49) ಹಾಗೂ ಗಣೇಶ್ (2/28) ಅವರ ವೇಗದ ದಾಳಿಗೆ 153 ರನ್ ಗಳಿಗೆ ನೆಲಕಚ್ಚುತ್ತದೆ. ನಂತರ ಬ್ಯಾಟ್ ಮಾಡಿದ ಕರ‍್ನಾಟಕ ಜೆಶ್ವಂತ್ ರ 70 ಹಾಗೂ ಸೋಮಸುಂದರ್ ಅವರ 57 ರನ್ ಗಳ ನೆರವಿನಿಂದ 330 ರನ್ ಗಳಿಸಿ 177 ರನ್ ಗಳ ಮುನ್ನಡೆ ಪಡೆಯುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಜೋಶಿ (6/47) ಹಾಗೂ ಜೆಶ್ವಂತ್ (2/13) ಇವರ ಸ್ಪಿನ್ ದಾಳಿಗೆ 148 ರನ್ ಗಳಿಗೆ ಆಲೌಟ್ ಆಗಿ ಬೆಂಗಾಲ್ ಇನ್ನಿಂಗ್ಸ್ ಹಾಗೂ 29 ರನ್ ಗಳ ಸೋಲು ಅನುಬವಿಸುತ್ತದೆ. ಈ ಗೆಲುವಿನಿಂದ ಕರ‍್ನಾಟಕ ಮತ್ತೊಂದು ಕ್ವಾರ‍್ಟರ್ ಪೈನಲ್ ಪ್ರವೇಶಿಸುತ್ತದೆ.
ಕ್ವಾರ‍್ಟರ್ ಪೈನಲ್ – ಎದುರಾಳಿ ಬರೋಡ
ಮತ್ತೊಮ್ಮೆ ಬೆಂಗಳೂರಿನ RSI ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಬರೋಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಳ್ಳುತ್ತದೆ. ಮುಂಜಾನೆ ವೇಗದ ಬೌಲರ್ ಗಳಿಗೆ ಹೆಚ್ಚು ನೆರವಿದ್ದ ಈ ಪಿಚ್ ಮೇಲೆ ಜೆಶ್ವಂತ್ (138) ಹಾಗೂ ಬಾರದ್ವಾಜ್ (106) ಅವರ ಶತಕಗಳು ಎದುರಾಳಿಯು ಬೌಲಿಂಗ್ ಆಯ್ದುಕೊಂಡ ತಮ್ಮ ನಿರ‍್ದಾರವನ್ನೇ ಶಪಿಸಿಕೊಳ್ಳುವಂತೆ ಮಾಡುತ್ತದೆ. ಒಟ್ಟು 480 ರನ್ ಗಳಿಸಿದ ಕರ‍್ನಾಟಕ ಬಳಿಕ ಜಾನ್ಸನ್ ರ ಬೌಲಿಂಗ್ (5/91) ನಿಂದ ಬರೋಡಾವನ್ನು ಮೊದಲ ಇನ್ನಿಂಗ್ಸ್ ಲಿ 213 ಕ್ಕೆ ಆಲೌಟ್ ಮಾಡಿ ಪಾಲೋ-ಆನ್ ಹೇರುತ್ತದೆ. ಎರಡನೇ ಇನ್ನಿಂಗ್ಸ್ ಲಿ ಅನಂತ್ (4/57) ಹಾಗೂ ಜೆಶ್ವಂತ್ (3/40) ಅವರ ಸ್ಪಿನ್ ಬಲೆಗೆ ಸಿಕ್ಕು 188 ರನ್ ಗಳಿಗೆ ಕುಸಿದು, ಇನ್ನಿಂಗ್ಸ್ ಹಾಗೂ 79 ರನ್ ಗಳ ಸೋಲುಣ್ಣುತ್ತದೆ. ಈ ಪಂದ್ಯದಲ್ಲೂ ಎದುರಾಳಿಗೆ ಎಲ್ಲೂ ಅವಕಾಶ ಕೊಡದೆ ಪ್ರಾಬಲ್ಯ ಮೆರೆದು ಗೆದ್ದ ಕರ‍್ನಾಟಕ ಬರೋಬ್ಬರಿ ಒಂಬತ್ತು ವರುಶಗಳ ಬಳಿಕ ಮೊದಲ ಬಾರಿಗೆ ಸೆಮಿಪೈನಲ್ ತಲುಪುತ್ತದೆ.
ಸೆಮಿಪೈನಲ್ – ಎದುರಾಳಿ ಹೈದರಾಬಾದ್
ಚಿನ್ನಸ್ವಾಮಿ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ತವರು ತಂಡ ಕರ‍್ನಾಟಕ, ಕಳೆದ ಮೂರು ಪಂದ್ಯಗಳಿಂದ ರನ್ ಬರ ಅನುಬವಿಸುತ್ತಿದ್ದ ನಾಯಕ ದ್ರಾವಿಡ್ ಅವರ ಸೊಗಸಾದ ಶತಕ (153), ದೊಡ್ಡ ಗಣೇಶ್ ರ (75) ಹಾಗೂ ಸೋಮಸುಂದರ್ ಅವರ (74) ರನ್ ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 423 ರನ್ ಕಲೆಹಾಕುತ್ತದೆ. ಸುನಿಲ್ ಜೋಶಿಯವರ ಮತ್ತೊಂದು ಪ್ರಬಲ ಬೌಲಿಂಗ್ ಪ್ರದರ‍್ಶನದಿಂದ (4/58), ಹೈದರಾಬಾದ್ ತಂಡವನ್ನು 188 ರನ್ ಗಳಿಗೆ ಸೀಮಿತಗೊಳಿಸಿದರೂ ಕರ‍್ನಾಟಕ ಪಾಲೋ-ಆನ್ ಹೇರದೆ ಮತ್ತೊಮ್ಮೆ ಬ್ಯಾಟ್ ಮಾಡುತ್ತದೆ. ಎರಡನೇ ಇನ್ನಿಂಗ್ಸ್ ಲಿ ಜೆಶ್ವಂತ್ ರ (85) ಹಾಗೂ ಬಾರದ್ವಾಜ್ ರ (57) ರನ್ ಗಳ ಕೊಡುಗೆಯಿಂದ ತಂಡ ಒಟ್ಟು 312 ರನ್ ಗಳಿಸಿ ಎದುರಾಳಿಗೆ 548 ರನ್ ಗಳ ದೊಡ್ಡ ಗುರಿ ನೀಡುತ್ತದೆ. ವಿವಿಎಸ್ ಲಕ್ಶ್ಮಣ್ ಔಟಾಗದೇ 203 ಗಳಿಸಿದರೂ ಇತರರ ಬೆಂಬಲವಿಲ್ಲದೆ ತಂಡ 363 ಕ್ಕೆ 7 ವಿಕೆಟ್ ಕಳೆದುಕೊಂಡು ಸೋಲನ್ನು ಎದುರು ನೋಡುತ್ತಿದ್ದಾಗ ಪಂದ್ಯ ಡ್ರಾ ನಲ್ಲಿ ಕೊನೆಗೊಳ್ಳುತ್ತದೆ. ಜೋಶಿ ಎರಡನೇ ಇನ್ನಿಂಗ್ಸ್ ನಲ್ಲೂ ಬೌಲಿಂಗ್ ಚಳಕವನ್ನು (5/126) ಮುಂದುವರೆಸುತ್ತಾರೆ. ಕಡೆಗೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಬಲದ ಮೇಲೆ, ಒಟ್ಟು ಹದಿಮೂರು ವರುಶಗಳ ನಂತರ ಕರ‍್ನಾಟಕ ರಣಜಿ ಟೂರ‍್ನಿಯ ಪೈನಲ್ ಗೆ ಲಗ್ಗೆ ಇಡುತ್ತದೆ.
ಪೈನಲ್ – ಎದುರಾಳಿ ತಮಿಳುನಾಡು
ವಿಶ್ವಕಪ್ ನಂತರ ಅಂತರಾಶ್ಟ್ರೀಯ ಆಟಗಾರರಾದ ಕುಂಬ್ಳೆ, ಶ್ರೀನಾತ್ ಹಾಗೂ ಪ್ರಸಾದ್ ರಣಜಿ ಪೈನಲ್ ಗೆ ಕರ‍್ನಾಟಕ ತಂಡವನ್ನು ಸೇರಿಕೊಳ್ಳುತ್ತಾರೆ. ಕುಂಬ್ಳೆ ಅವರಿಗೆ ನಾಯಕನ ಹೊಣೆಯನ್ನು ನೀಡಲಾಗುತ್ತದೆ. ಈ ಹೊಣೆಯನ್ನು ಹೊತ್ತ ಕುಂಬ್ಳೆ ಅವರು ಈ ಸಾಲಿನ ಮೊದಲ ಪಂದ್ಯದಿಂದ ಜೊತೆಗಿದ್ದು ನಂತರ ತಂಡದಿಂದ ಕೈ ಬಿಡಲಾಗಿದ್ದ ಆಟಗಾರರನ್ನು ತಂಡದೊಂದಿಗೆ ಇರಲು ಅವಕಾಶ ಮಾಡಿಕೊಡುವಂತೆ ಕೆ.ಎಸ್.ಸಿ.ಎ ಗೆ ಮನವಿ ಸಲ್ಲಿಸಿ, ಒಟ್ಟು 19 ಮಂದಿಯತಂಡವನ್ನು ಮದ್ರಾಸ್ ಗೆ ಕರೆದೊಯ್ಯುತ್ತಾರೆ. ನಾವು ಬಾರತ ತಂಡದೊಂದಿಗಿದ್ದಾಗ ಈ ಆಟಗಾರರು ಶ್ರಮಿಸಿದ್ದರಿಂದಲೇ ನಾವಿಂದು ಪೈನಲ್ ತಲುಪ್ಪಿದ್ದೇವೆ, ಹಾಗಾಗಿ ಇದು ಅವರ ಕೊಡುಗೆಯನ್ನು ನೆನೆಯುವ ಬಗೆ ಎಂದು ಕುಂಬ್ಳೆ 19 ಮಂದಿಯ ತಂಡದ ಬಗ್ಗೆ ವಿವರಣೆ ನೀಡುತ್ತಾರೆ.
ಕುಂಬ್ಳೆಯವರ ಬ್ಯಾಟಿಂಗ್ ತಂತ್ರ
ಮಾರ‍್ಚ್ ತಿಂಗಳ ಉರಿ ಬಿಸಿಲಿನಲ್ಲಿ ಮದ್ರಾಸ್ ನ ಚಿದಂಬರಂ ಅಂಗಳದಲ್ಲಿ ಟಾಸ್ ಗೆದ್ದು ಕರ‍್ನಾಟಕ ಮೊದಲು ಬ್ಯಾಟ್ ಮಾಡಿತು. ನಾಯಕ ಕುಂಬ್ಳೆ ತಂಡದ ಎಲ್ಲಾ ಬ್ಯಾಟ್ಸ್ಮೆನ್ ಗಳಿಗೂ ರನ್ ಬರದ್ದಿದ್ದರೂ ಅಡ್ಡಿ ಇಲ್ಲ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಕಾಲ ಕಳೆಯುವಂತೆ ಕಿವಿ ಮಾತು ಹೇಳಿದ್ದರು. ನಿರ‍್ಜೀವ ಪಿಚ್ ಮೇಲೆ ತಮಿಳು ನಾಡಿನ ಆಟಗಾರರನ್ನು ಬಿಸಿಲಿನಲ್ಲಿ ದಣಿಸುವುದೇ ಅವರ ಉದ್ದೇಶವಾಗಿತ್ತು. ನಾಯಕನ ಮಾತಿನಂತೆ ಓಪನರ್ ಗಳಾದ ಸೋಮಸುಂದರ್ 99 ಹಾಗೂ ಅವಿನಾಶ್ ವೈದ್ಯ 42 ತಾಳ್ಮೆಯ ಜೊತೆಯಾಟವಾಡಿದರು. ಆನಂತರ ಬಾರದ್ವಾಜ್ 146 ಮತ್ತು ದ್ರಾವಿಡ್ 114 ಕೂಡ ಹೆಚ್ಚು ಕಾಲ ಕಳೆದು ಶತಕ ಗಳಿಸಿದರು. ಮೂರನೇ ದಿನದ ಊಟದ ವಿರಾಮದ ತನಕ ಒಟ್ಟು 213 ಓವರ್ ಗಳನ್ನು ಸಮಾದಾನವಾಗಿ ಎದುರಿಸಿ ಓವರ್ ಗೆ ಕೇವಲ 2.9ರ ಸರಾಸರಿಯಲ್ಲಿ ತಂಡ 620/8 ತಲುಪಿದಾಗ ಕುಂಬ್ಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಅವರ ತಂತ್ರ ಯಶಸ್ಸು ಕಂಡಿತು. ಮದ್ರಾಸ್ ನ ಆ ಬೇಗೆಯಲಿ ಅಶ್ಟು ಕಾಲ ಬೆಂದು ಇನ್ನಿಲ್ಲದಂತೆ ದಣಿದ್ದಿದ್ದ ತಮಿಳುನಾಡು ಆಟಗಾರರು ಕರ‍್ನಾಟಕದ ಅಂತರಾಶ್ಟ್ರೀಯ ಬೌಲರ್ ಗಳೆದುರು ಬ್ಯಾಟ್ ಮಾಡಿ ಆ ದೊಡ್ಡ ಸ್ಕೋರ್ ಅನ್ನು ಬೆನ್ನತ್ತಲು ಪವಾಡ ಮಾಡಬೇಕಿತ್ತು. ರಾಬಿನ್ ಸಿಂಗ್ ಮುಂದಾಳ್ತನದ ತಂಡದಲ್ಲಿ ಡಬ್ಲ್ಯೂ.ವಿ ರಾಮನ್, ವಾಸು, ಸಡಗೋಪ್ಪನ್ ರಮೇಶ್, ಕೆ.ಶ್ರೀನಾತ್ ರಂತಹ ಒಳ್ಳೆ ಬ್ಯಾಟ್ಸ್ಮೆನ್ ಗಳಿದ್ದರೂ ಅವರ ಆಟ ನಡೆಯುವುದಿಲ್ಲ. ಜಾವಗಲ್ ಶ್ರೀನಾತ್ ಒಂದೇ ವಿಕೆಟ್ ಪಡೆದರೂ ಅವರು ಆರಂಬದಲ್ಲಿ ತಮ್ಮ ವೇಗದಿಂದ ಎದುರಾಳಿಯನ್ನು ದ್ರುತಿಗೆಡುವಂತೆ ಮಾಡಿದರು. ರಮೇಶ್ ರನ್ನು ಬೌನ್ಸರ್ ಗಳಿಂದ ಕಾಡಿ ಅವರನ್ನು ಔಟ್ ಮಾಡಿದ ಸ್ಪೆಲ್ ಇಂದಿಗೂ ನೆನೆಯತಕ್ಕದ್ದು. ಪ್ರಸಾದ್ (2/71) ಪಡೆದರೆ ಕುಂಬ್ಳೆ ತಮ್ಮಎಂದಿನ ಕರಾರುವಾಕ್ ಸ್ಪಿನ್ ದಾಳಿಯಿಂದ (5/95) ತಮಿಳು ನಾಡುವನ್ನು 370 ರನ್ ಗಳಿಗೆ ಆಲೌಟ್ ಮಾಡಿ 250 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ದಕ್ಕಿಸಿಕೊಟ್ಟರು. ಪಾಲೊ-ಆನ್ ಹೇರುವ ಅವಕಾಶವಿದ್ದರೂ ಬಿಸಿಲಿನಲ್ಲಿ ಎಲ್ಲರನ್ನೂ ದಣಿಸುವುದು ತರವಲ್ಲವೆಂದು ಮತ್ತೊಮ್ಮೆ ಬ್ಯಾಟ್ ಮಾಡಿ ತಂಡದ ಸ್ಕೋರ‍್277/6 ತಲುಪಿ ಕಡೇ ದಿನದಲ್ಲಿ ಕೇವಲ 15 ಓವರ್ ಗಳು ಬಾಕಿ ಇರುವಾಗ ಡಿಕ್ಲೇರ್ ಮಾಡಿ, ತಮಿಳು ನಾಡುಗೆ 528 ರನ್ ಗಳ ಅಸಾದ್ಯ ಗುರಿ ನೀಡಿದರು. ಕೊನೆಯ ಒಂದು ಗಂಟೆಯ ಅವದಿಯಲ್ಲೂ ಕರ‍್ನಾಟಕದ ಬೌಲರ್ ಗಳು 3 ವಿಕೆಟ್ ಕೆಡವಿ ಪ್ರಾಬಲ್ಯ ಮೆರೆದರು. ಕಡೆಗೆ ತಮಿಳುನಾಡು ಸ್ಕೋರ್ 31/3 ಇರುವಾಗ ಅಂಪೈರ್ ಗಳು ಪಂದ್ಯ ಡ್ರಾ ಎಂದು ಗೋಶಿಸಿದರು. ಅಲ್ಲಿಗೆ ಕನ್ನಡಿಗರ 13 ವರ‍್ಶಗಳ ಹೆಬ್ಬಯಕೆ ಈಡೇರಿತು. ಕರ‍್ನಾಟಕ ತನ್ನ ನಾಲ್ಕನೇ ರಣಜಿ ಟೂರ‍್ನಿ ಗೆದ್ದು ಬೀಗಿತು. ಈ ಗೆಲುವಿನ ಬಳಿಕ ದೇಸೀ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಎಲ್ಲರೂ ಕರ‍್ನಾಟಕ ತಂಡವನ್ನು ಗೌರವಿಸಲು ಮೊದಲು ಮಾಡಿದರು. ಆ ಗೌರವ ಅಚ್ಚಳಿಯದೆ ಇಂದಿ ಗೂಉಳಿದಿದೆ.
ಈ ಪೈನಲ್ ಪಂದ್ಯ ಇನ್ನೊಂದು ಅಪರೂಪಕ್ಕೆ ಸಾಕ್ಶಿಯಾಯಿತು. ಒಡಹುಟ್ಟಿದವರಾದ ಕೆ. ಶ್ರೀರಾಮ್ ಮತ್ತು ಕೆ. ಶ್ರೀನಾತ್ ಎದುರಾಳಿಗಳಾಗಿ ಕಣಕ್ಕಿಳಿದರು. ಅಣ್ಣ ಶ್ರೀನಾತ್ ತಮಿಳುನಾಡು ಪರ ಆಡಿದರೆ ತಮ್ಮ ಶ್ರೀರಾಮ್ ಕರ‍್ನಾಟಕದ ಪರ ಆಡಿದರು. ಕುಂಬ್ಳೆ ಬೌಲಿಂಗ್ ನಲ್ಲಿ ಸಿಲ್ಲಿ ಪಾಯಿಂಟ್ ನಲ್ಲಿ ಪೀಲ್ಡಿಂಗ್ ಮಾಡುತ್ತಾ ಪ್ರತೀ ತಮಿಳುನಾಡಿನ ಬ್ಯಾಟ್ಸ್ಮೆನ್ ಅನ್ನು ಮಾತಿನಲ್ಲಿ ಕಿಚಾಯಿಸಿ ಕಾಡುತ್ತಿದ್ದ ಶ್ರೀರಾಮ್, ಅವರಣ್ಣ ಶ್ರೀನಾತ್ ಬ್ಯಾಟ್ ಮಾಡುವಾಗ ಮಾತ್ರ ಮೌನವಾಗಿದ್ದನ್ನು ಕಂಡು ಜಾವಗಲ್ ಶ್ರೀನಾತ್ ಅವರು “ಯಾಕೋ ನಿಮ್ಮಣ್ಣನ ಕಂಡ್ರೆ ಬಯಾನಾ ? ಇವನನ್ನು ಕಿಚಾಯಿಸು, ನಾನಿದ್ದೀನಿ ಹೆದರಬೇಡ ಎಂದು ತಮಾಶೆ ಮಾಡಿದ್ದು ಈ ಪಂದ್ಯದ ಮರೆಯಲಾಗದ ಕ್ಶಣಗಳಲ್ಲೊಂದು”.
1995/96 ರ ಟೂರ‍್ನಿ ಮೊದಲ್ಗೊಂಡಾಗ ಯಾರೂ ಕರ‍್ನಾಟಕಕ್ಕೆ ಗೆಲ್ಲುವ ಅವಕಾಶವಿದೆ ಎಂದು ಎಣಿಸಿರಲಿಲ್ಲ. ಹಾಗೂ ಬಹುತೇಕ ಪಂದ್ಯಗಳಲ್ಲಿ ಮುಕ್ಯ ಆಟಗಾರರು ಆಡದ್ದಿದ್ದರೂ ಜಾನ್ಸನ್, ದೊಡ್ಡ ಗಣೇಶ್, ಸೋಮಸುಂದರ್, ಅರುಣ್ ಕುಮಾರ್, ಜೋಶಿರಂತಹ ಯುವ ಆಟಗಾರರು ಮುನ್ನೆಲೆಗೆ ಬಂದು ತಂಡಕ್ಕೆ ಆಸರೆಯಾಗಿ ಗೆಲುವು ತಂದಿತ್ತ ಬಹು ಅಪರೂಪದ ಟೂರ‍್ನಿ ಗೆಲುವಿದು.
(ಚಿತ್ರ ಸೆಲೆ: twitter.com/cricfinity)
ಇತ್ತೀಚಿನ ಅನಿಸಿಕೆಗಳು