ಗುಪ್ತ ಮಂಚಣ್ಣನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು : ಗುಪ್ತ ಮಂಚಣ್ಣ
ಕಾಲ : ಕ್ರಿ.ಶ.12ನೆಯ ಶತಮಾನ.
ಕಸುಬು : ಬಿಜ್ಜಳ ದೊರೆಯ ಕೋಶಾಗಾರದಲ್ಲಿ ಕರಣಿಕನಾಗಿದ್ದನು.
ದೊರೆತಿರುವ ವಚನಗಳು : 100
ಅಂಕಿತ ನಾಮ : ನಾರಾಯಣಪ್ರಿಯ ರಾಮನಾಥ.

ಕಳವು ಹಾದರಕ್ಕೆ ಗುಪ್ತ
ಶಿವಭಕ್ತಿ ಶಿವಪೂಜೆ ಶಿವಜ್ಞಾನ
ಇಂತಿವಕ್ಕೆ ಬಾಹ್ಯಾಡಂಬರವೆ. ( 309/1232)

ಕಳವು=ಕಳ್ಳತನ/ಇತರರ ಒಡವೆ ವಸ್ತುಗಳನ್ನು ಕದಿಯುವುದು; ಹಾದರ=ಸಮಾಜ ಒಪ್ಪಿತವಲ್ಲದ ರೀತಿಯಲ್ಲಿ ಗಂಡು ಹೆಣ್ಣು ಕಾಮದ ನಂಟನ್ನು ಹೊಂದುವುದು/ಜಾರತನ/ಸೂಳೆಗಾರಿಕೆ; ಗುಪ್ತ=ಗುಟ್ಟು/ರಹಸ್ಯ/ಯಾರಿಗೂ ತಿಳಿಯದಂತೆ; ಶಿವ=ಈಶ್ವರ; ಭಕ್ತಿ=ದೇವರಲ್ಲಿ ಒಲವು ನಲಿವನ್ನು ಹೊಂದಿರುವುದು;

ಪೂಜೆ=ದೂಪ ದೀಪಗಳನ್ನು ಬೆಳಗುತ್ತ ಶಿವನ ವಿಗ್ರಹಕ್ಕೆ ಕಯ್ ಮುಗಿದು ಅಡ್ಡಬೀಳುವ ಆಚರಣೆ; ಜ್ಞಾನ=ಅರಿವು/ತಿಳುವಳಿಕೆ; ಇಂತು+ಇವಕ್ಕೆ; ಬಾಹ್ಯ+ಆಡಂಬರವೆ; ಬಾಹ್ಯ=ಹೊರಗಡೆ/ಬಹಿರಂಗ/ಎಲ್ಲರಿಗೂ ಗೊತ್ತಾಗುವಂತೆ; ಆಡಂಬರ=ತೋರಿಕೆ/ಪ್ರದರ‍್ಶನದ ಹಂಬಲ/ನಟನೆ; ಬಾಹ್ಯಾಡಂಬರ=ಬಹಿರಂಗದಲ್ಲಿ ವ್ಯಕ್ತಿಯು ತನ್ನ ಹೆಚ್ಚುಗಾರಿಕೆಯನ್ನು ಮೆರೆಯುವುದು;

ತಾವು ಮಾಡುವ ಕಳ್ಳತನ ಮತ್ತು ಹಾದರವನ್ನು ಗುಟ್ಟಾಗಿ ಮುಚ್ಚಿಟ್ಟುಕೊಳ್ಳುವ ಜನರು, ಶಿವನ ಬಗ್ಗೆ ಅಪಾರವಾದ ಒಲವು ಉಳ್ಳವರಂತೆ ಮಾಡುವ ಪೂಜೆಯನ್ನು ಮಾತ್ರ ಎಲ್ಲರ ಮುಂದೆಯು ದೊಡ್ಡದಾಗಿ ಆಚರಿಸುತ್ತಾರೆ.

ಕೆಟ್ಟ ಕೆಲಸವನ್ನು ಮರೆಮಾಚಿ, ಒಳ್ಳೆಯದನ್ನು ಮಾತ್ರ ಹೇಳಿಕೊಳ್ಳುವ ಇಲ್ಲವೇ ತೋರಿಸಿಕೊಳ್ಳುವ ಮಾನವನ ಸಾಮಾಜಿಕ ವರ‍್ತನೆಯನ್ನು ಈ ನುಡಿಗಳಲ್ಲಿ ವಚನಕಾರನು ಗುರುತಿಸಿದ್ದಾನೆ.

ಡಂಬಕದ ಪೂಜೆ
ಹೋಹ ಹೊತ್ತಿನ ಕೇಡು
ಆಡಂಬರದ ಪೂಜೆ
ತಾಮ್ರದ ಮೇಲಣ ಸುವರ್ಣದ ಛಾಯೆ. (336/1235)

ಡಂಬ=ಮೋಸ/ವಂಚನೆ/ಸೋಗಿನ ನಡೆನುಡಿ/ಬೂಟಾಟಿಕೆ; ಡಂಬಕ=ಮೋಸಗಾರ/ವಂಚಕ; ಪೂಜೆ=ದೂಪ ದೀಪಗಳನ್ನು ಬೆಳಗುತ್ತ ಶಿವನ ವಿಗ್ರಹಕ್ಕೆ ಕಯ್ ಮುಗಿದು ಅಡ್ಡಬೀಳುವ ಆಚರಣೆ; ಡಂಬಕದ ಪೂಜೆ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯು ಮಾಡುವ ತೋರಿಕೆಯ ಪೂಜೆ; ಹೋಹ=ಉರುಳುತ್ತಿರುವ/ಕಳೆದು ಹೋಗುತ್ತಿರುವ/ಚಲಿಸುತ್ತಿರುವ;

ಹೊತ್ತು=ಸಮಯ/ವೇಳೆ/ಕಾಲ; ಕೇಡು=ನಾಶ/ಹಾನಿ/ಅಳಿವು; ಆಡಂಬರ=ತೋರಿಕೆ/ಪ್ರದರ‍್ಶನದ ಹಂಬಲ; ತಾಮ್ರ=ಒಂದು ಬಗೆಯ ಲೋಹ; ಮೇಲಣ=ಮೇಲೆ ಕಂಡುಬರುವ/ಮೇಲೆ ಲೇಪಿಸಿರುವ; ಸುವರ್ಣ=ಚಿನ್ನ/ಹೊನ್ನು/ಬಂಗಾರ; ಛಾಯೆ=ಕಾಂತಿ/ಹೊಳಪು/ಬಣ್ಣ ;

ಶಿವಶರಣಶರಣೆಯರು ವ್ಯಕ್ತಿಯ ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ನಂಬಿದ್ದರು. ಆದ್ದರಿಂದ ಅವರ ಕಣ್ಣಿಗೆ ಕಪಟತನ ಮತ್ತು ಕೇಡಿಗತನದ ನಡೆನುಡಿಯುಳ್ಳ ವ್ಯಕ್ತಿಯು ಮಾಡುವ ಪೂಜೆಯು ಸುಮ್ಮನೆ ಕಾಲಹರಣದಂತೆ ಕಾಣುತ್ತಿತ್ತು.

ದೇವರಲ್ಲಿ ತಾನು ಒಲವುಳ್ಳವನೆಂದು ತೋರಿಸಿಕೊಳ್ಳಲು ವಂಚಕನು ಜನರ ಮುಂದೆ ಮಾಡುವ ಆಡಂಬರದ ಪೂಜೆಯು ತಾಮ್ರದ ತಗಡಿಗೆ ಚಿನ್ನದ ನೀರನ್ನು ಲೇಪನ ಮಾಡಿದಂತಿರುತ್ತದೆ. ಈ ಹೋಲಿಕೆಯು ಮೇಲುನೋಟಕ್ಕೆ ಒಳ್ಳೆಯವನಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಯು ನಿಜಜೀವನದಲ್ಲಿ ಕೆಟ್ಟವನಾಗಿರುತ್ತಾನೆ ಎಂಬುದನ್ನು ಸೂಚಿಸುತ್ತದೆ.

( ಚಿತ್ರ ಸೆಲೆ:  sugamakannada.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.