ಕರ‍್ನಾಟಕ ಕ್ರಿಕೆಟ್ ತಂಡದ ಐದನೇ ರಣಜಿ ಗೆಲುವು

ರಾಮಚಂದ್ರ ಮಹಾರುದ್ರಪ್ಪ.

ರಣಜಿ 1997-98, Ranji 1997-98

1995/96 ರ ಟೂರ‍್ನಿ ಗೆಲುವಿನ ನಂತರ 1996/97 ರ ಸಾಲಿನಲ್ಲಿ ಕರ‍್ನಾಟಕದ ಹೋರಾಟ ಲೀಗ್ ಹಂತದಲ್ಲೇ ಕೊನೆಗೊಂಡಿತು. ಬಹುತೇಕ ಪ್ರಮುಕರು ಈ ಸಾಲಿನಲ್ಲಿ ತಂಡದೊಂದಿಗೆ ಇರದಿದ್ದದು ಕರ‍್ನಾಟಕಕ್ಕೆ ಬಹಳ ದುಬಾರಿಯಾಯಿತು. ಮೊದಲ ಬಾರಿಗೆ ಗೋವಾ ಹಾಗೂ ಕೇರಳ ಎದುರು ಸೋಲುಂಡು ತೀವ್ರ ಮುಜುಗರ ಅನುಬವಿಸಿತು. ಇಂತಹ ಕಳಪೆ ಆಟ ಆಡುತ್ತಿರೋ ಈ ತಂಡ ಕಳೆದ ಸಾಲಿನ ರಣಜಿ ಗೆದ್ದ ತಂಡವೇ? ಎಂದೆಲ್ಲಾ ವ್ಯಂಗ್ಯ ಮಾಡಿ ಪತ್ರಿಕೆಗಳು ಟೀಕಿಸಿದವು. ಹಾಗಾಗಿ 1997/98 ರ ಸಾಲಿನ ಟೂರ‍್ನಿ ಕರ‍್ನಾಟಕಕ್ಕೆ ಪ್ರತಿಶ್ಟೆಯ ಪ್ರಶ್ನೆಯಾಗಿತ್ತು. ಕಳೆದ ವರುಶ ಸೋಲುಂಡಿದ್ದು ಆಕಸ್ಮಿಕ ಎಂದು ಸಾಬೀತು ಮಾಡುವ ದ್ಯೇಯದಿಂದಲೇ ರಾಜ್ಯ ತಂಡ ಕಣಕ್ಕಿಳಿಯಿತು. ಹಾಗೂ ಲೀಗ್ ಹಂತಕ್ಕೆ ಸರಿಯಾಗಿ ಎಲ್ಲಾ ಅಂತರಾಶ್ಟ್ರೀಯ ಆಟಗರಾರ ಸೇವೆ ತಂಡಕ್ಕೆ ದೊರಕಿತು. ಅನಿಲ್ ಕುಂಬ್ಳೆ ತಂಡದ ಮುಂದಾಳುವಾದರು.

1997/98 : ಬದಲಾದ ಟೂರ‍್ನಿ ಸ್ವರೂಪ

ಮೊದಲಿದ್ದ ನಾಕೌಟ್ ಹಂತಗಳಾದ ಪ್ರೀ-ಕ್ವಾರ‍್ಟರ‍್ ಪೈನಲ್ ಹಾಗೂ ಕ್ವಾರ‍್ಟರ‍್ ಪೈನಲ್ ಬದಲಾಗಿ ವಲಯವಾರು ಲೀಗ್ ಹಂತದಿಂದ ಹೆಚ್ಚು ಅಂಕ ಕಲೆ ಹಾಕಿದ ಮೊದಲೆರಡು ತಂಡಗಳನ್ನು ಆರಿಸಿ, ಬಳಿಕ ತಲಾ ಐದು ತಂಡಗಳ 2 ಗುಂಪುಗಳನ್ನು ಮಾಡಿ, ಈ ಹಂತದ ಒಟ್ಟು 4 ರೌಂಡ್-ರಾಬಿನ್ ಪಂದ್ಯಗಳ ಬಳಿಕ, ಎರಡೂ ಗುಂಪಿನ ಅಂಕಪಟ್ಟಿಯ ಮೊದಲೆರಡು ತಂಡಗಳು ನೇರ ಸೆಮಿಪೈನಲ್ ಆಡಿ, ಆ ನಂತರ ಪೈನಲ್ ತಲುಪುವ ಹಾದಿ ರೂಪಿಸಲಾಯಿತು. ಟೂರ‍್ನಿ ಗೆಲ್ಲುವ ಅಳವುಳ್ಳ ಒಟ್ಟು 10 ಬಲಾಡ್ಯ ತಂಡಗಳ ಎರಡನೇ ಹಂತದ ಕಾಳಗ ತೀವ್ರ ಪೈಪೋಟಿಯಿಂದ ಕೂಡಿರುವುದಾಗಿದ್ದರಿಂದ ಈ ಸ್ವರೂಪಕ್ಕೆ ಪ್ರಶಂಸೆಗಳು ಕೇಳಿಬಂದವು.

1997/98 – ಲೀಗ್ ಹಂತ

ಅನಿಲ್ ಕುಂಬ್ಳೆರ ಮುಂದಾಳ್ತನದ ಕರ‍್ನಾಟಕ ತಂಡ ಸಾಲಿನ ಮೊದಲನೇ ಪಂದ್ಯವನ್ನು ಚಿನ್ನಸ್ವಾಮಿ ಅಂಗಳದಲ್ಲಿ ಕೇರಳ ಎದುರು ಆಡಿತು. ಕೇರಳವನ್ನು 181 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಸುನಿಲ್ ಜೋಶಿ (4/33) ಹಾಗೂ ವೆಂಕಟೇಶ ಪ್ರಸಾದ್ (3/25) ಮುಕ್ಯ ಪಾತ್ರ ವಹಿಸಿದರು. ಬ್ಯಾಟಿಂಗ್ ನಲ್ಲಿ ಅರುಣ್ ಕುಮಾರ್ ರ 111 ಹಾಗೂ ಕುಂಬ್ಳೆರ 58 ರನ್ ಗಳಿಂದ ತಂಡ 345 ರನ್ ಗಳಿಸಿ 164 ರನ್ ಗಳ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಕುಂಬ್ಳೆರ ಸ್ಪಿನ್ ಮೋಡಿ (6/32) ಕರ‍್ನಾಟಕಕ್ಕೆ ಇನ್ನಿಂಗ್ಸ್ ಹಾಗೂ  23 ರನ್ ಗಳ ಗೆಲುವು ದಕ್ಕಿಸಿಕೊಟ್ಟಿತು. ಟೂರ‍್ನಿಗೆ ಬೇಕಾದ ಒಳ್ಳೆಯ ಆರಂಬ ಕರ‍್ನಾಟಕ ಕ್ರಿಕೆಟ್ ತಂಡಕ್ಕೆ ಸಿಕ್ಕಿತು. ಆನಂತರ ತವರಿನಲ್ಲೇ ಗೋವಾ ಎದುರು 10 ವಿಕೆಟ್ ಗಳ ಗೆಲುವು ಪಡೆಯುವಲ್ಲಿ ತಂಡ ಯಶಸ್ವಿಯಾಯಿತು. ಡೇವಿಡ್ ಜಾನ್ಸನ್ (4/57) ಹಾಗೂ ಜೋಶಿ (5/25) ಬೌಲಿಂಗ್ ನಲ್ಲಿ ಮಿಂಚಿದರೆ, ಸುಜಿತ್ ಸೋಮಸುಂದರ‍್ (55) ಹಾಗೂ ವಿಜಯ್ ಬಾರದ್ವಾಜ್ (42) ಬ್ಯಾಟಿಂಗ್ ನಲ್ಲಿ ತಂಡಕ್ಕೆ ಆಸರೆಯಾದರು. ಆ ಬಳಿಕ ಸಿಕಂದರಾಬಾದ್ ನ ಜಿಮ್ಕಾನಾ ಅಂಗಳದಲ್ಲಿ ನಡೆದ ಹೈದರಾಬಾದ್ ಎದುರಿನ ಮೂರನೇ ಲೀಗ್ ಪಂದ್ಯದಲ್ಲಿ ಎರಡೂ ತಂಡಗಳ ಗಟಾನುಗಟಿಗಳು ಎದುರಾದರು. ನಾಯಕ ಅಜರ‍್ ಅವರ ತಂಡದಲ್ಲಿ ಅಂತರಾಶ್ಟ್ರೀಯ ಆಟಗಾರರಾದ ಲಕ್ಶ್ಮಣ್, ವೆಂಕಟಪತಿ ರಾಜು, ನೊಯೆಲ್ ಡೇವಿಡ್ ಇದ್ದರೆ ಕರ‍್ನಾಟಕ ತಂಡದಲ್ಲಿ ಆಗಿನ ಎಲ್ಲಾ ಆರು ಮಂದಿ ಅಂತರಾಶ್ಟ್ರೀಯ ಆಟಗಾರರಿದ್ದರು. ಕುಂಬ್ಳೆರ (6/73) ಹೊರತಾಗಿಯೂ ಹೈದರಾಬಾದ್ 433 ರನ್ ಗಳ ದೊಡ್ಡ ಮೊತ್ತ ಕಲೆಹಾಕಿತು. ಇದನ್ನು ಬೆನ್ನತ್ತಿ ಹೊರಟ ಕರ‍್ನಾಟಕ ರಾಹುಲ್ ದ್ರಾವಿಡ್ 99 ರನ್ ಗಳಿಸಿ ರನೌಟ್ ಆದಾಗ 238 ರನ್ ಗಳಿಗೆ 5 ವಿಕೆಟ್ ಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯನ್ನು ಎದುರು ನೋಡುತ್ತಿತ್ತು. ಆಗ ನಾಯಕ ಕುಂಬ್ಳೆ ಸೊಗಸಾದ ಶತಕ (113) ಗಳಿಸಿ ಮೊದಲ ಇನ್ನಿಂಗ್ಸ್ ಮುನ್ನಡೆ ಕೊಡಿಸಿ ತಂಡದ ಸ್ಕೋರ‍್ 446/9 ಆದಾಗ ಡಿಕ್ಲೇರ‍್ ಮಾಡಿದರು. ಬಲಾಡ್ಯ ಎದುರಾಳಿ ಎದುರು ಹೋರಾಡಿ ಪಡೆದ ಈ ಮುನ್ನಡೆ ಒಂದು ಮಟ್ಟಿಗೆ ಎಲ್ಲಾ ಆಟಾಗಾರರಲ್ಲೂ ತನ್ನಂಬಿಕೆ ಮೂಡಿಸಿದ್ದು ಸುಳ್ಳಲ್ಲ. ಈ ಪಂದ್ಯದ ಬಳಿಕ ರಾಜ್ಯ ತಂಡದ ಎಲ್ಲಾ ಅಂತರಾಶ್ಟ್ರೀಯ ಆಟಗಾರರು ಬಾರತ ತಂಡ ಸೇರಿಕೊಂಡರು. ಹಾಗಾಗಿ ಸುಜಿತ್ ಸೋಮಸುಂದರ‍್ ನಾಯಕರಾದರು. ನಂತರದ ತಮಿಳುನಾಡು ಹಾಗೂ ಆಂದ್ರ ಎದುರಿನ ಪಂದ್ಯಗಳು ನೀರಸ ಡ್ರಾನಲ್ಲಿ ಕೊನೆಗೊಂಡವು. ತಮಿಳುನಾಡು ಎದುರು ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದರೆ ಆಂದ್ರ ಎದುರು ಮುನ್ನಡೆ ಪಡೆಯುವಲ್ಲಿ ಅರುಣ್ ಕುಮಾರ‍್ ಹಾಗೂ ಬಾರದ್ವಾಜ್ ರ ಶತಕಗಳು (ತಲಾ 101 ರನ್ ಗಳು), ಸೋಮಸುಂದರ‍್ (97) ಮತ್ತು ಜಾನ್ಸನ್ ರ (5/65) ಕೊಡುಗೆ ಇತ್ತು. ಮೊದಲ ಲೀಗ್ ಹಂತದಲ್ಲಿ ಒಂದೂ ಪಂದ್ಯ ಸೋಲದೆ 2 ಗೆಲುವು ಹಾಗೂ 2 ಇನ್ನಿಂಗ್ಸ್ ಮುನ್ನಡೆ ಪಡೆದು ಮುಂದಿನ ಹಂತಕ್ಕೆ ಕರ‍್ನಾಟಕ ಮುಂದಡಿಯಿಟ್ಟಿತು.

ಎರಡನೇ ಹಂತ – ಮರಳಿದ ಪ್ರಮುಕರು

ಎರಡನೇ ರೌಂಡ್-ರಾಬಿನ್ ಹಂತದ ಮೊದಲ ಪಂದ್ಯವನ್ನು ಕರ‍್ನಾಟಕ ತಂಡ ಚಿನ್ನಸ್ವಾಮಿ ಅಂಗಳದಲ್ಲಿ ಪಂಜಾಬ್ ಎದುರು ಆಡಿತು. ಕುಂಬ್ಳೆರೊಟ್ಟಿಗೆ ಎಲ್ಲಾಅಂತರಾಶ್ಟ್ರೀಯ ಆಟಗಾರರು ಮರಳಿ, ತಂಡಕ್ಕೆ ಬಲ ತುಂಬಿದರು. ಕುಂಬ್ಳೆರ ಹೆಗಲಿಗೆ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ಹೊರಿಸಲಾಯಿತು. ಮೊದಲು ಬ್ಯಾಟ್ ಮಾಡಿ 298 ರನ್ ಗಳಿಸಿದ ಆತಿತೇಯರು ನಂತರ ಬೌಲಿಂಗ್ ಬಲದಿಂದ ಪಂಜಾಬ್ ತಂಡವನ್ನು 157 ರನ್ ಗಳಿಗೆ ಆಲೌಟ್ ಮಾಡಿದರು. ಕುಂಬ್ಳೆ (5/51) ಹಾಗೂ ಜೋಶಿ (3/27) ಗಮನ ಸೆಳೆದರು. ಇದರ ಹಿಂದೆ ಎರಡನೇ ಇನ್ನಿಂಗ್ಸ್ ನಲ್ಲಿ 254 ರನ್ ಗಳಿಸಿ ಎದುರಾಳಿಗೆ 395 ರನ್ ಗಳ ಗುರಿ ನೀಡಿ ಅವರನ್ನು 133 ರನ್ ಗಳಿಗೆ ಕುಸಿಯುವಂತೆ ಮಾಡಿದರು. ಜಾವಗಲ್ ಶ್ರೀನಾತ್ ತಮ್ಮ ವೇಗದಿಂದ (3/20) ಪಂಜಾಬ್ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದು ಪಂದ್ಯದ ಮುಕ್ಯ ಅಂಶಗಳಲ್ಲೊಂದು. ಈ ಹಂತದ ಮೊದಲ ಗೆಲುವಿನ ಬಳಿಕ ಎರಡನೇ ಪಂದ್ಯವನ್ನು ಕರ‍್ನಾಟಕ, ಚಿನ್ನಸ್ವಾಮಿ ಅಂಗಳದಲ್ಲಿ ರೈಲ್ವೇಸ್ ಎದುರು ಆಡಿತು. ಬಾರದ್ವಾಜ್ ರ ಬರ‍್ಜರಿ 164 ರನ್ ಗಳ ನೆರವಿನಿಂದ 462 ರನ್ ಗಳಿಸಿದ ರಾಜ್ಯ ತಂಡ ಬಳಿಕ ಕುಂಬ್ಳೆ (4/81) ಹಾಗೂ ಜೋಶಿ (4/57) ಬೌಲಿಂಗ್ ನಿಂದ ರೈಲ್ವೇಸ್ ಅನ್ನು 269 ರನ್ ಗಳಿಗೆ ಕಟ್ಟಿಹಾಕಿ 193 ರನ್ ಗಳ ಮುನ್ನಡೆಯನ್ನು ಪಡೆದು ಪಾಲೋ-ಆನ್ ಹೇರಿತು. ಕುಂಬ್ಳೆರ ಸ್ಪಿನ್ ಮೋಡಿ (6/69) ಮತ್ತೊಮ್ಮೆ ರೈಲ್ವೇಸ್ ಅನ್ನು ಹಳಿ ತಪ್ಪುವಂತೆ ಮಾಡಿತು. ಎದುರಾಳಿ ತಂಡ 213 ರನ್ ಗಳಿಗೆ ಸರ‍್ವಪತನ ಕಂಡು 6 ವಿಕೆಟ್ ಗಳ ಸೋಲುಂಡಿತು. ನಂತರ ಮೂರನೇ ಪಂದ್ಯವನ್ನು, ಕರ‍್ನಾಟಕ ರೌರ‍್ಕೇಲಾ ದಲ್ಲಿ ಒಡಿಶಾ ಎದುರು ಆಡಿತು. ಕುಂಬ್ಳೆ (5/34) ಹಾಗೂ ಜೋಶಿ (3/46) ಅವರ ಸ್ಪಿನ್ ಬಲೆಗೆ ಸಿಕ್ಕ ಒಡಿಶಾ 183 ರನ್ ಗಳಿಗೆ ನೆಲಕಚ್ಚಿತು. ದ್ರಾವಿಡ್ ರ ಶತಕ (138) ದಿಂದ ತಂಡ 398 ರನ್ ಗಳಿಸಿ 215 ರನ್ ಗಳ ಮುನ್ನಡೆ ಪಡೆಯಿತು. ಮತ್ತೊಮ್ಮೆ ಬೌಲಿಂಗ್ ಮಾಡಲು ಕಣಕ್ಕಿಳಿದ ನಾಯಕ ಕುಂಬ್ಳೆರ ಹ್ಯಾಟ್ರಿಕ್ ಒಳಗೊಂಡ (5/9) ಪ್ರದರ‍್ಶನದಿಂದ ಇನ್ನಿಂಗ್ಸ್ ಹಾಗೂ 123 ರನ್ ಗಳ ಗೆಲುವು ದಾಕಲಿಸಿ ಕರ‍್ನಾಟಕ ಸೆಮಿಪೈನಲ್ ತಲುಪುವ ಹಾದಿಯನ್ನು ಸುಳುವಾಗಿಸಿಕೊಂಡಿತು. ಮುಂಬೈ ಎದುರು ಈ ಹಂತದ ಕಡೆಯ ಲೀಗ್ ಪಂದ್ಯಕ್ಕೆ ಪ್ರಮುಕರು ಇಲ್ಲದ ಕಾರಣ ಸೋಮಸುಂದರ‍್ ಮತ್ತೊಮ್ಮೆ ನಾಯಕರಾದರು. ವಾಂಕೆಡೆ ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದರೂ ಹೆಚ್ಚು ಗೆಲುವುಗಳನ್ನು ಮೊದಲೇ ಪಡೆದು ಹೆಚ್ಚು ಅಂಕ ಗಳಿಸಿದ್ದರಿಂದ ಕರ‍್ನಾಟಕ ನಿರಾಯಾಸವಾಗಿ ಮತ್ತೊಂದು ಸೆಮಿಪೈನಲ್ ತಲುಪಿತು.

ಸೆಮಿಪೈನಲ್ ಎದುರಾಳಿ ಹೈದರಾಬಾದ್

ಶಾರ‍್ಜಾಗೆ ತೆರಳಿದ್ದ ಬಾರತದ ಒಂದು-ದಿನದ ತಂಡದಿಂದ ಕೈಬಿಡಲಾಗಿದ್ದ ರಾಹುಲ್ ದ್ರಾವಿಡ್ ಕರ‍್ನಾಟಕ ತಂಡಕ್ಕೆ ಮರಳಿ ನಾಯಕನ ಹೊಣೆ ಹೊತ್ತರು. ಸಿಕಂದರಾಬಾದ್ ನ ಜಿಮ್ಕಾನಾ ಅಂಗಳದ ಈ ಪಿಚ್ ಪಂದ್ಯ ಮುಂದುವರೆಯುತ್ತಾ ಹೋದಂತೆ ಮೂರನೇ ದಿನದಿಂದ ಸ್ಪಿನ್ನರ‍್ ಗಳಿಗೆ ಅನುಕೂಲವಾಗಲಿದೆ ಎಂಬುದನ್ನು ಅರಿತಿದ್ದ ಆತಿತೇಯ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಏಪ್ರಿಲ್ ತಿಂಗಳ ಉರಿ ಬಿಸಿಲಿನಲ್ಲಿ ಹುಲ್ಲಿನ ಸುಳಿವೇ ಇಲ್ಲದ ಈ ಪಿಚ್ ಮೇಲೆ ಕರ‍್ನಾಟಕದ ವೇಗಿ ದೊಡ್ಡ ಗಣೇಶ್ ತಮ್ಮ ಒಳ್ಳೆಯ ಪ್ರದರ‍್ಶನದಿಂದ(5/74) ಎಲ್ಲರ ಗಮನ ಸೆಳೆದರು. ಹೈದರಾಬಾದ್ 283 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅರುಣ್ ಕುಮಾರ‍್ ರ 85 ಹಾಗೂ ದ್ರಾವಿಡ್ ರ 71 ರನ್ ಗಳ ನೆರವಿನಿಂದ ಒಟ್ಟು 309 ರನ್ ಗಳಿಸಿದ ರಾಜ್ಯ ತಂಡ ಒಟ್ಟು 26 ರನ್ ಗಳ ಸಣ್ಣ ಮುನ್ನಡೆ ಪಡೆಯಿತು. ಬಳಿಕ ಎರಡನೇ ಇನ್ನಿಂಗ್ಸ್ ನಲ್ಲೂ ಗಣೇಶ್ ರ ದಾಳಿಗೆ(4/74) ಹೈದರಾಬಾದ್ 179 ರನ್ ಗಳಿಗೆ ಕುಸಿದು ಕರ‍್ನಾಟಕಕ್ಕೆ 154 ರನ್ ಗಳ ಗುರಿ ನೀಡಿತು. ನಾಲ್ಕನೇ ದಿನದ ಕೊನೇ ಒಂದು ಗಂಟೆಯಲ್ಲಿ ಬ್ಯಾಟಿಂಗ್ ಗೆ ಇಳಿದ ಕರ‍್ನಾಟಕ ತಂಡದವರ ಇನ್ನಿಂಗ್ಸ್ ತೊಂದರೆ ಇಲ್ಲದೆ ಸಾಗುತ್ತಿತ್ತು. ಆದರೆ ಮೊದಲ ವಿಕೆಟ್ ಗೆ 43 ರನ್ ಗಳ ಜೊತೆಯಾಟ ಬಿಟ್ಟರೆ ಅದಾದ ಮೇಲೆ ಒಂದೂ ಒಳ್ಳೆ ಜೊತೆಯಾಟ ಬಾರದೆ, ತಂಡ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಪಜಲ್ ಕಲೀಲ್ 51 ರನ್ ಗಳಿಸಿ ಔಟಾದ ಮೇಲೆ ನೋಡನೋಡುತ್ತಾ ಒಬ್ಬರ ಹಿಂದೊಬ್ಬರು ಕನ್ವಲ್ಜೀತ್ ರ ಎಡಗೈ ಸ್ಪಿನ್ ಅರಿಯಲಾಗದೆ ಪೆವಿಲಿಯನ್ ಹಾದಿ ಹಿಡಿದರು. ದ್ರಾವಿಡ್ 1 ಹಾಗೂ ಬಾರದ್ವಾಜ್ 2 ರನ್ ಗಳಿಗೆ ಔಟಾದ ಮೇಲಂತೂ ತಂಡದ ಮೇಲೆ ಸೋಲಿನ ಕಾರ‍್ಮೋಡ ಕವಿಯಿತು. ಐದನೇ ದಿನದ ಊಟದ ವಿರಾಮದ ಹೊತ್ತಿಗೆ ತಂಡ 138/9 ಕ್ಕೆ ಕುಸಿಯಿತು. ಗೆಲ್ಲಲು ಇನ್ನೂ 16 ರನ್ ಗಳು ಬೇಕಿದ್ದವು. ಪಿಚ್ ಮೇಲೆ ವಿಚಿತ್ರವಾಗಿ, ಬುಗುರಿಯಂತೆ ತಿರುಗುತ್ತಿದ್ದ ಚೆಂಡು ಒಂದೊಂದು ಬಗೆಯಲ್ಲಿ ವರ‍್ತಿಸುತ್ತಿತ್ತು. ಪಂದ್ಯ ನೋಡುತ್ತಿದ್ದವರಿಗೆ ಪ್ರತಿ ಚೆಂಡಿಗೂ ವಿಕೆಟ್ ಬೀಳಲಿದೆ ಎಂದನಿಸುತ್ತಿತ್ತು. ಒಂದೆಡೆಯಿಂದ ಕನ್ವಲ್ಜೀತ್ ಸಿಂಗ್ ಇನ್ನೊಂದೆಡೆಯಿಂದ ವೆಂಕಟಪತಿ ರಾಜು ಬ್ಯಾಟ್ಸ್ಮನ್ ಗಳಿಗೆ ರನ್ ಗಳಿಸಲು ಒಂದಿಂಚೂ ನೀಡದೆ ಕಟ್ಟಿಹಾಕುವಂತ ಸ್ಪೆಲ್ ಎಡೆಬಿಡದೆ ಮಾಡುತ್ತಿದ್ದರು. ಹೀಗಿರುವಾಗ ರನ್ ಗಳಿಸುವುದಾದರೂ ಎಲ್ಲಿ ಮತ್ತು ಹೇಗೆ?

“ರಾಹುಲ್, ನಾನ್ ಗೆಲ್ಲಿಸ್ಕೊಂಡ್ ಬರ‍್ತೀನಿ”

ಊಟದ ವಿರಾಮದ ವೇಳೆ ಕರ‍್ನಾಟಕ ತಂಡದ ಯಾರೊಬ್ಬರೂ ಊಟ ಮಾಡದೆ, ‘ಸಣ್ಣ ಗುರಿಯನ್ನು ಬೆನ್ನತ್ತಿ ಹೊರಟ ನಾವು ಎಡವಿದ್ದು ಎಲ್ಲಿ?’ ಎಂಬ ಆಲೋಚನೆಯಲ್ಲೇ ಮುಳುಗಿದ್ದರು. ಡ್ರೆಸ್ಸಿಂಗ್ ರೂಮ್ ನಲ್ಲಿ ಸಪ್ಪೆ ಮುಕಗಳ ನೀರಸ ಮೌನ ಆವರಿಸಿತು. ಅರ‍್ದ ಗಂಟೆ ಕಾಲ ಯಾರೊಂದಿಗೂ ಮಾತಾಡದೆ ಯಾರಿಗೂ ಮುಕ ತೋರಿಸದೆ ಒಂದು ಮೂಲೆಯಲ್ಲಿ ಕೂತು ತಮ್ಮದೇ ಆಲೋಚನೆಯಲ್ಲಿದ್ದ ದೊಡ್ಡ ಗಣೇಶ್ ಮತ್ತೆ ಬ್ಯಾಟ್ ಮಾಡಲು ಹೊರನಡೆಯುವ ಮುನ್ನ ನಾಯಕ ದ್ರಾವಿಡ್ ರ ಹೆಗಲ ಮೇಲೆ ಕೈಹಾಕಿ, “ರಾಹುಲ್, ನಾನ್ ಗೆಲ್ಲಿಸ್ಕೊಂಡ್ ಬರ‍್ತೀನಿ” ಎಂದು ಬರವಸೆ ನೀಡಿ ಕಣಕ್ಕಿಳಿದರು. ದಿಟ್ಟತನದಿಂದ ಒಂದೊಂದು ರನ್ ಕಲೆಹಾಕುತ್ತಾ ಹೋದ ಗಣೇಶ್-ಮನ್ಸೂರ‍್ ರ ಕಡೇ ವಿಕೆಟ್ ಜೋಡಿ ಕೆಲವೇ ನಿಮಿಶಗಳಲ್ಲಿ ಗುರಿಯನ್ನು ಒಂದಂಕಿಗೆ ಇಳಿಸಿತು. ಗಣೇಶ್ ಅವರು ಮನ್ಸೂರಿಗೆ ಹೆಚ್ಚು ಸ್ಟ್ರೈಕ್ ನೀಡದೆ ಚಾಣಾಕ್ಶತೆಯಿಂದ ಬ್ಯಾಟ್ ಮಾಡುತ್ತಾ ಹೋದರು. ಹೈದರಾಬಾದ್ ತಂಡ ಕಾತರದಿಂದ ಎದುರು ನೋಡುತ್ತಿದ್ದ ಆ ಕಡೇ ವಿಕೆಟ್ ಕಡೆಗೂ ಅವರ ಕೈ ಸೇರಲೇ ಇಲ್ಲ. ಕುತೂಹಲದ ಗಟ್ಟ ತಲುಪಿದ್ದ ಪಂದ್ಯದಲ್ಲಿ, ಕಡೆಗೆ ವೆಂಕಟಪತಿ ರಾಜುರ ಒಂದು ಆಪ್-ಸ್ಟಂಪ್ ಮೇಲಿದ್ದ ಎಸೆತವನ್ನು ಗುಂಡಪ್ಪವಿಶ್ವನಾತ್ ರನ್ನು ನೆನಪಿಸುವ ಬಗೆಯಲ್ಲಿ ಲೇಟ್ ಕಟ್ ಮಾಡುವ ಮೂಲಕ ಗಣೇಶ್ ತಂಡದ ಮೊತ್ತವನ್ನು ಸಮಮಾಡಿದರು. ಆಗ ಗೆದ್ದೆವೆಂದು ಸಂಬ್ರಮಿಸುತ್ತಿದ್ದ ಕರ‍್ನಾಟಕದ ಆಟಗಾರರಿಗೆ ದ್ರಾವಿಡ್ ಡ್ರೆಸ್ಸಿಂಗ್ ಕೊಟಡಿಯಿಂದ ಕೊಂಚ ಸಿಟ್ಟಿನಲ್ಲೇ ಇನ್ನೂ ಒಂದು ರನ್ ಬೇಕು ಎಂದು ಎಚ್ಚರಿಸಿದರು. ಅಂಗಳದಲ್ಲಿದ್ದ ಗಣೇಶ್ ರಿಗೆ ಬ್ಯಾಟಿಂಗ್ ಮುಂದುವರಿಸುವಂತೆ ಸನ್ನೆ ಮಾಡಿದರು. ಅದರ ನಂತರದ ಎಸೆತವನ್ನೇ ಮಿಡ್-ಆಪ್ ಮೇಲೆ ಬೌಂಡರಿಗೆ ಅಟ್ಟಿ ನಾಯಕ ದ್ರಾವಿಡ್ ರಿಗೆ ಕೊಟ್ಟ ಮಾತನ್ನು ಎದೆಗುಂದದೆ ಹೋರಾಡಿ ಗಣೇಶ್ ಉಳಿಸಿಕೊಂಡರು. ಗಣೇಶ್ ಅವರು ಗೆಲ್ಲಿಸಿದ್ದೇ ತಡ ದ್ರಾವಿಡ್ ರೊಟ್ಟಿಗೆ ಕರ‍್ನಾಟಕ ತಂಡದ ಪ್ರತಿಯೊಬ್ಬರೂ ಹುಚ್ಚೆದ್ದು ಕುಣಿದರು. ಕೇಕೇ ಹಾಕುತ್ತಾ ಅಂಗಳಕ್ಕೆ ಓಡಿಬಂದು ಗಣೇಶ್ ರನ್ನು ಎಲ್ಲರೂ ಬಿಗಿದಪ್ಪಿ ಪ್ರಶಂಸೆ ವ್ಯಕ್ತ ಪಡಿಸಿದರು. ಈ ಗೆಲುವು ಕರ‍್ನಾಟಕ ಇತಿಹಾಸದ ಅತೀ ರೋಚಕ ಗೆಲುವುಗಳಲ್ಲೊಂದಾಗಿ ಇಂದಿಗೂ ನೆನೆಯಲ್ಪಡುತ್ತದೆ. ದೊಡ್ಡ ಗಣೇಶ್ ಈ ಸೆಮಿಪೈನಲ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಗಳು ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಬಲು ಮುಕ್ಯವಾದ 14 ರನ್ ಗಳಿಂದ ಗೆಲುವು ದಕ್ಕಿಸಿ ಕೊಟ್ಟರು. ಈ ಗೆಲುವಿನಿಂದ ಕರ‍್ನಾಟಕ ಮತ್ತೊಂದು ರಣಜಿ ಪೈನಲ್ ಗೆ ಲಗ್ಗೆ ಇಟ್ಟಿತು.

ಪೈನಲ್ – ಎದುರಾಳಿ ಉತ್ತರಪ್ರದೇಶ

ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಯ ವೇಳೆ ಗಾಯಗೊಂಡಿದ್ದ ಜಾವಗಲ್ ಶ್ರೀನಾತ್ ಬಾರತ ತಂಡದೊಂದಿಗೆ ಶಾರ‍್ಜಾಗೆ ಹೋಗದೆ ಬೆಂಗಳೂರಿನಲ್ಲಿ ಸುದಾರಿಸಿಕೊಳ್ಳುತ್ತಿದ್ದರು. ಪೈನಲ್ ಪಂದ್ಯಕ್ಕೆ ಸಂಪೂರ‍್ಣ ಗುಣಮುಕರಾಗಿದ್ದ ಮೈಸೂರು ಎಕ್ಸ್ಪ್ರೆಸ್ ರ ಸೇವೆ ಕೂಡ ದೊರಕಿದ್ದು ಕರ‍್ನಾಟಕ ತಂಡಕ್ಕೆ ಆನೆ ಬಲ ಬಂದಂತಾಗಿದ್ದು ಸುಳ್ಳಲ್ಲ. ಪಂದ್ಯ ಮೊದಲಾಗುವ ಮುನ್ನವೇ ಎರಡೂ ತಂಡಗಳ ಬಲಾಬಲವನ್ನು ಕಂಡು ಪತ್ರಿಕೆಗಳು ‘ಇದು ನೀರಸ ಏಕಮುಕ ಪಂದ್ಯವಾಗಲಿದೆ. ಉತ್ತರ ಪ್ರದೇಶ ಬಲಾಡ್ಯ ಕರ‍್ನಾಟಕದ ಎದುರು ಅದೂ ಅವರ ತವರು ಬೆಂಗಳೂರಿನಲ್ಲಿ ಸೆಣಸಿ ಗೆಲ್ಲಲು ಪವಾಡ ಮಾಡಬೇಕು’ ಎಂದು ಬಣ್ಣಿಸಿದರು. ನಂತರ ಅದು ಹಾಗೇ ಆಯಿತು. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪೈನಲ್ ನಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಉತ್ತರಪ್ರದೇಶಕ್ಕೆ ಶ್ರೀನಾತ್ ಮೊದಲ ಓವರ‍್ ನಲ್ಲೇ ಆಗಾತ ನೀಡಿದರು. ಉತ್ತರಪ್ರದೇಶ ತಂಡ ಕಾತೆ ತೆರೆಯುವ ಮುನ್ನವೇ ಶ್ರೀನಾತ್ ರ ವೇಗಕ್ಕೆ ಎರಡು ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಗಣೇಶ್ (2/28) ಹಾಗೂ ಜೋಶಿ (4/37) ಕೂಡ ಎದುರಾಳಿಗೆ ಚೇತರಿಸಿಕೊಳ್ಳುವ ಅವಕಾಶ ನೀಡದೆ ಕೇವಲ 134 ರನ್ ಗಳಿಗೆ ಅಂತ್ಯ ಹಾಡಿದರು. ಇದರ ಬೆನ್ನತ್ತಿ ಹೊರಟ ಕರ‍್ನಾಟಕ, ನಾಯಕ ದ್ರಾವಿಡ್ ರ ಸೊಗಸಾದ ದ್ವಿಶತಕ (215), ಬಾರದ್ವಾಜ್ (122) ಹಾಗೂ ಅರುಣ್ ಕುಮಾರ‍್ (104) ಅವರ ಶತಕಗಳ ಕೊಡುಗೆಯಿಂದ ಬರೋಬ್ಬರಿ 617/9 ಗಳಿಸಿ ಡಿಕ್ಲೇರ‍್ ಮಾಡಿತು. ಒಟ್ಟು 483 ರನ್ ಗಳ ದೊಡ್ಡ ಇನ್ನಿಂಗ್ಸ್ ಮುನ್ನಡೆ ಪಡೆದು ಎದುರಾಳಿಗೆ ಪಂದ್ಯದಲ್ಲಿ ಮರಳುವ ಎಲ್ಲಾ ಕದಗಳನ್ನು ರಾಜ್ಯ ತಂಡದ ಬ್ಯಾಟ್ಸ್ಮೆನ್ ಗಳು ಮುಚ್ಚಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಸುದಾರಿತ ಬ್ಯಾಟಿಂಗ್ ಪ್ರದರ‍್ಶನ ನೀಡಿ 416/7 ಗಳಿಸಿ ಉತ್ತರ ಪ್ರದೇಶ ಸೋಲು ತಪ್ಪಿಸಿಕೊಂಡು ಡ್ರಾ ಮಾಡಿಕೊಂಡಿತು. ಆದರೆ ಮೊದಲ ಇನ್ನಿಂಗ್ಸ್ ನ ಬಾರೀ ಮುನ್ನಡೆಯ ಬಲದಿಂದ ಕರ‍್ನಾಟಕ 5ನೇ ರಣಜಿ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಈ ಗೆಲುವಿನಿಂದ 1996/97 ರ ಸೋಲಿನ ನೋವನ್ನು ಮರೆತು ಆಟಗಾರರು ‍ನಲಿದಾಡಿದರು ಮತ್ತು ಅಬಿಮಾನಿಗಳಿಗೂ ಸಂತಸ ನೀಡಿದರು. ಹಾಗೂ ‘ದೇಸೀ ಕ್ರಿಕೆಟ್ ನಲ್ಲಿ ಗಂಡಬೇರುಂಡ ಲಾಂಚನದ ಕರ‍್ನಾಟಕ ಕ್ರಿಕೆಟ್ ಪಡೆಯನ್ನು ಯಾರೂ ತಳ್ಳಿಹಾಕುವಂತಿಲ್ಲ’ ಅನ್ನೋದನ್ನ ಆಟಗಾರರು ಮತ್ತೊಮ್ಮೆ ಸಾಬೀತು ಮಾಡಿದರು.

(ಚಿತ್ರಸೆಲೆ : twitter.com/NorthStandGang)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: