ತುಮಕೂರು – ಒಂದು ಕಿರುನೋಟ

– ಶ್ಯಾಮಲಶ್ರೀ.ಕೆ.ಎಸ್.

tumkur, ತುಮಕೂರು

ತುಮಕೂರು ಕರ‍್ನಾಟಕದ ಕಲ್ಪತರು ಜಿಲ್ಲೆ, ಶೈಕ್ಶಣಿಕ ನಗರಿ ಎಂದೇ ಹೆಸರುವಾಸಿಯಾಗಿದೆ. ಜಿಲ್ಲೆಯ ತಿಪಟೂರು ತೆಂಗಿನ ಕ್ರುಶಿಗೆ ಪ್ರಸಿದ್ದಿ ಪಡೆದಿರುವುದರಿಂದ ತುಮಕೂರನ್ನು ಕಲ್ಪತರು ಜಿಲ್ಲೆ ಎಂಬುದಾಗಿಯೂ ಕರೆಯುತ್ತಾರೆ‌. ಸಿದ್ದಗಂಗಾ ವಿದ್ಯಾ ಸಂಸ್ತೆ, ಸಿದ್ದಾರ‍್ತ ವಿದ್ಯಾ ಸಂಸ್ತೆ ಹಾಗೂ ಇನ್ನಿತರ ಅನೇಕ ವಿದ್ಯಾ ಸಂಸ್ತೆಗಳು ಶಿಕ್ಶಣಕ್ಕೆ ಪ್ರಾದಾನ್ಯತೆ ನೀಡುತ್ತಾ, ಶೈಕ್ಶಣಿಕ ಕ್ಶೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿವೆ‌. ಇದೇ ಕಾರಣಕ್ಕೆ ತುಮಕೂರಿಗೆ ಶೈಕ್ಶಣಿಕ ನಗರಿ ಎಂಬ ಬಿರುದನ್ನೂ ಕೂಡ ತಂದುಕೊಟ್ಟಿವೆ. ತುಮಕೂರು ಹಲವು ಶತಮಾನಗಳ ಹಿಂದೆ ತುಂಬೆಊರು ಎಂದು ಕರೆಯಲ್ಪಟ್ಟು, ನಂತರದ ದಿನಗಳಲ್ಲಿ ತುಮಕೂರು ಎಂದು ಹೆಸರು ಪಡೆಯಿತು ಎಂದು ಹೇಳಲಾಗುತ್ತದೆ‌.

ಬೆಂಗಳೂರಿನಿಂದ ಸುಮಾರು 70ಕಿಮೀ ಅಂತರದಲ್ಲಿರುವ ಈ ಜಿಲ್ಲೆಯಲ್ಲಿ, ಕ್ರುಶಿ ಪ್ರದಾನ ಗ್ರಾಮೀಣ ಬಾಗವೇ ಹೆಚ್ಚಾಗಿ ವಿಸ್ತಾರಗೊಂಡಿದೆ. ನಗರ ಪ್ರದೇಶವು ಚೊಕ್ಕವಾಗಿ ಅಶ್ಟೇ ಸುಂದರ ಹಾಗೂ ಸುಸಜ್ಜಿತ ಸೌಲಬ್ಯಗಳನ್ನು ಒಳಗೊಂಡಿದೆ. ನಗರದ ಹ್ರುದಯ ಬಾಗದಲ್ಲಿ ಮಹಾತ್ಮ ಗಾಂದೀ ಕ್ರೀಡಾಂಗಣವಿದೆ. ವಿಶ್ವವಿದ್ಯಾಲಯ, ಪ್ರತಿಶ್ಟಿತ ವಿದ್ಯಾ ಸಂಸ್ತೆಗಳು, ಕೋಟೆ ಆಂಜನೇಯ ದೇವಸ್ತಾನದ ಬಳಿ ಇರುವ 86 ಅಡಿ ಉದ್ದದ ಆಂಜನೇಯನ ಪ್ರತಿಮೆ, ಸೌಲಬ್ಯ ಬರಿತ ಆಸ್ಪತ್ರೆಗಳನ್ನು ತುಮಕೂರು ಹೊಂದಿದೆ. ನಡೆದಾಡುವ ದೇವರೆಂದೇ ಕರೆಯಲ್ಪಡುತ್ತಿದ್ದ ಡಾ. ಶ್ರೀ ಶಿವಕುಮಾರಸ್ವಾಮೀಜಿ ಯವರು ನೆಲೆಸಿದ್ದ ಶ್ರೀ ಸಿದ್ದಗಂಗಾ ಮಟವು ನಗರದಿಂದ ಸುಮಾರು 5 -6 ಕಿಮೀ ಅಂತರದಲ್ಲಿದೆ. ಬೆಂಗಳೂರಿನಿಂದ ತುಮಕೂರಿಗೆ ಬರುವ ಹೆದ್ದಾರಿಯಲ್ಲಿಯೇ 65ಕಿಮೀ ಅಂತರದಲ್ಲಿರುವ ಕ್ಯಾತಸಂದ್ರದಲ್ಲಿ ಸಿದ್ದಗಂಗಾ ಮಟವಿದ್ದು ಸಾವಿರಾರು ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಆಶ್ರಯ ಕಲ್ಪಿಸಿರುವ ಶ್ರೀಮಟವು ನಿಜಕ್ಕೂ ಅದ್ಬುತವಾದ ದಾರ‍್ಮಿಕ ಕ್ಶೇತ್ರ ಹಾಗೂ ಪ್ರೇಕ್ಶಣೀಯ ಸ್ತಳ. ಶ್ರೀಗಳ ಗದ್ದುಗೆ, ಅವರ ಗುರುಗಳಾದ ಉದ್ದಾನ ಶಿವಯೋಗಿಗಳ ಗದ್ದುಗೆ, ಹಳೇ ಮಟ, ಕಲ್ಯಾಣಿ, ದಾಸೋಹ ಮನೆ, ವಿದ್ಯಾರ‍್ತಿ ನಿಲಯ ಸೇರಿದಂತೆ ಸಿದ್ದಗಂಗೆ ಬೆಟ್ಟದ ಮೇಲಿರುವ (ಸಿದ್ದಲಿಂಗೇಶ್ವರ ದೇವಾಲಯದ) ಉದ್ಬವಗಂಗೆಯನ್ನು ಸಿದ್ದಗಂಗಾ ಕ್ಶೇತ್ರ ಒಳಗೊಂಡಿದೆ.

ತುಮಕೂರಿನಿಂದ ತುಸು ದೂರದಲ್ಲಿ ಕೈದಾಳ ಊರಿದೆ. ಹೊಯ್ಸಳ ಶೈಲಿಯ ಇಲ್ಲಿನ ಚನ್ನಕೇಶವ ದೇವಾಲಯ ತುಂಬಾ ಪ್ರಸಿದ್ದ. ಬೇಲೂರು ಹಳೆಬೀಡು ಶಿಲ್ಪಗಳ ಕೆತ್ತಿದ ಶಿಲ್ಪಿ ಜಕಣಾಚಾರಿ, ಶಿಲ್ಪದ ವಿಶಯವಾಗಿ ತನ್ನ ಕೈಯೊಂದನ್ನು ಕಳೆದುಕೊಳ್ಳುತ್ತಾನೆ. ಮತ್ತೆ ಆತನು ಈ ಸ್ತಳಕ್ಕೆ ಬಂದು ತನ್ನ ಕೈಯನ್ನು ಮರುಪಡೆದ್ದದ್ದರಿಂದ ಈ ಪ್ರದೇಶಕ್ಕೆ ಕೈದಾಳ ಎಂಬ ಹೆಸರು ಬಂದಿತೆಂಬುದು ಈ ಜಾಗದ ಚರಿತ್ರೆ.

ಜಯಮಂಗಲಿ ನದಿ ಉಗಮ ಸ್ತಾನ ಹೊಂದಿರುವ ದೇವರಾಯನದುರ‍್ಗ ಬೆಟ್ಟವು ತುಮಕೂರು ನಗರದಿಂದ ಸುಮಾರು 16 ಕಿಮೀ ಅಂತರದಲ್ಲಿದ್ದು, 10 ಕಿಮೀ ಸಾಗಿದಂತೆಯೇ ದಟ್ಟ ಮರಗಳಿರುವ ದೇವರಾಯನದುರ‍್ಗದ ಕಾಡು ಗೋಚರಿಸುತ್ತದೆ. ಇದೇ ದಾರಿಯಲ್ಲಿ, ರಾಮನು ವನವಾಸದಲ್ಲಿದ್ದಾಗ, ಹಣೆಗೆ ನಾಮವನ್ನು ದರಿಸಲು ಬಾಣವನ್ನು ಬಿಟ್ಟಾಗ ಈ ಜಾಗದಲ್ಲಿ ನೀರು ಚಿಮ್ಮಿ, ಅದನ್ನು ನಾಮದ ಚಿಲುಮೆ ಎಂಬ ಹೆಸರಿನಿಂದ ಕರೆದನು ಎನ್ನವ ಪ್ರತೀತಿ ಇದೆ. ಈ ಜಾಗದಲ್ಲಿ ಸದಾ ನೀರು ಹೊರಬರುವುದು ವಿಶೇಶ. ಇಲ್ಲಿ ಸಸ್ಯೋದ್ಯಾನ ಹಾಗೂ ಜಿಂಕೆ ವನವಿದೆ. ದೇವರಾಯನದುರ‍್ಗದ ಯೋಗ ಹಾಗೂ ಬೋಗ ಲಕ್ಶ್ಮೀ ನರಸಿಂಹ ದೇವಾಲಯಗಳು ಚಾರಣಿಗರನ್ನು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರಮುಕ ತಾಣಗಳಾಗಿವೆ.

ಏಶ್ಯಾದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಎಂದು ಹೇಳಲಾಗುವ ಬೆಟ್ಟ ತುಮಕೂರಿನ ಮದುಗಿರಿಯಲ್ಲಿದೆ. ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಲಕ್ಶ್ಮೀ ದೇವಾಲಯ, ಸಿದ್ದೇಶ್ವರ ಗುಡಿಯಿರುವ ಸಿದ್ದರ ಬೆಟ್ಟ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯ ಮುಂತಾದ ದಾರ‍್ಮಿಕ ಕ್ಶೇತ್ರಗಳು, ಪ್ರೇಕ್ಶಣೀಯ ಸ್ತಳಗಳು ತುಮಕೂರಿನ ಮಡಿಲಲ್ಲಿವೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ದಿವಾಕರ ತಿಮ್ಮಣ್ಣ says:

    ಮದುಗಿರಿಯ ಏಕ ಶಿಲಾ ಬೆಟ್ಟವು ಏಷಿಯಾದಲ್ಲಿಯೇ ಮೊದಲನೆಯದು, ಇಡೀ ಪ್ರಪಂಚದಲ್ಲಿ ಎರಡನೆಯದು, ಮಾಹಿತಿ ತಪ್ಪಿರಬಹುದು. ಮತ್ತೊಮ್ಮೆ ಪರಿಸೀಲಿಸಿ ದೃಡಪಡಿಸಿಕೊಳ್ಳುವುದು ಒಳ್ಳೆಯದು?

ಅನಿಸಿಕೆ ಬರೆಯಿರಿ:

%d bloggers like this: