ಇಟಲಿಯಲ್ಲಿದೆ ‘ದೈತ್ಯರ ಉದ್ಯಾನವನ’

– .

ವಿಶ್ವದಾದ್ಯಂತ ಇರುವ ಉದ್ಯಾನವನಗಳು, ವಿಹರಿಸಲು ಬರುವ ನಾಗರಿಕರ ಮನಸ್ಸಿಗೆ ಉಲ್ಲಾಸ ನೀಡುವ ಸಲುವಾಗಿ ಇದ್ದರೆ, ಇಟಲಿಯ ಬೊಮಾರ‍್ಜೊದಲ್ಲಿನ ಉದ್ಯಾನವನ ಇದಕ್ಕೆ ವ್ಯತಿರಿಕ್ತವಾಗಿದೆ. ಆಗಾತವನ್ನು ಉಂಟುಮಾಡುವ ಮತ್ತು ದುಕ್ಕವನ್ನು ಅಬಿವ್ಯಕ್ತಿಸುವ ಉದ್ಯಾನವನ ಇದು. 1552ರಲ್ಲಿ ಈ ಉದ್ಯಾನವನ ಶುರುಮಾಡಿದ್ದು ಅಲ್ಲಿನ ರಾಜಕುಮಾರ ಪಿಯರ‍್ ಪ್ರಾನ್ಸೆಸ್ಕೋ ಒರ‍್ಸಿನಿ.

ರಾಜಕುಮಾರ ಪಿಯರ‍್ ಪ್ರಾನ್ಸೆಸ್ಕೋ ಒರ‍್ಸಿನಿಯು, ವಿಸಿನೋ ಎಂದು ಚಿಕ್ಕದಾಗಿ ಕರೆಯಲ್ಪಡುತ್ತಿದ್ದನು. ಈ ವಿಸಿನೋ, ಆಗ ತಾನೆ ಅತ್ಯಂತ ಕ್ರೂರ ಯುದ್ದವನ್ನು ಪೂರೈಸಿದ್ದ. ಯುದ್ದದಲ್ಲಿ ಅವನ ಪ್ರಿಯ ಸ್ನೇಹಿತ ಕೊಲ್ಲಲ್ಪಟ್ಟಿದ್ದ. ಹೆಚ್ಚು ಯೋದರನ್ನು ಬಹಳ ವರ‍್ಶಗಳ ಕಾಲ ಬಂದಿಸಲಾಗಿತ್ತು. ಮನೆಗೆ ಹಿಂದಿರುಗಿದ ವಿಸಿನೋನ ಕಣ್ಣೆದುರಿಗೇ ಅವನ ಮಡದಿಯೂ ಸತ್ತಳು. ಈ ದುಕ್ಕ ಮತ್ತು ಆಗಾತದಿಂದ ಬಳಲುತ್ತಿದ್ದ ರಾಜಕುಮಾರನ ಮನದಲ್ಲಿ ಮೂಡಿ ಬಂದಿದ್ದು ‘ವಿಲ್ಲಾ ಆಪ್ ವಂಡರ‍್ಸ್‘ನ ಚಿತ್ರಣ. ತನ್ನ ಮನದಲ್ಲಿ ಮೂಡಿದ ಚಿತ್ರವನ್ನು ಅನುಶ್ಟಾನಕ್ಕೆ ತರಲು ಆತ ಪಿರೊ ಲಿಗೊರಿ ಎಂಬ ವಾಸ್ತು ಶಿಲ್ಪಿಯನ್ನು ನೇಮಿಸಿದ. ಲಿಗೊರಿ ಒಬ್ಬ ಕ್ಯಾತ ವಾಸ್ತು ಶಿಲ್ಪಿ ಮತ್ತು ಕಲಾವಿದ. ಇಟಲಿಯಲ್ಲಿ ಗೌರವಾನ್ವಿತ. ಸುಪ್ರಸಿದ್ದ ಮೈಕೇಲ್ ಆಂಜೆಲೋ ಮರಣದ ನಂತರ, ಸೇಂಟ್ ಪೀಟರ‍್ ಕ್ಯಾತೆಡ್ರೆಲ್ ಮತ್ತು ವಿಲ್ಲಾ ಡಿ’ಎಸ್ಟೇಯ ಉಳಿದಿದ್ದನ್ನು ಪೂರೈಸಿದ ಕ್ಯಾತಿ ಲಿಗೊರಿಗೆ ಸಲ್ಲುತ್ತದೆ. ಆದರೆ, ವಿಸಿನೋ ಪರಿಕಲ್ಪನೆ ತೀರ ವಿಬಿನ್ನವಾಗಿದ್ದು, ಲಿಗೊರಿಗೆ ಸವಾಲಿನ ಹಾಗೂ ಆಸಕ್ತಿದಾಯಕ ಕೆಲಸವಾಗಿತ್ತು.

ಈ ಉದ್ಯಾನವನ ವಿಲಕ್ಶಣ ಹಾಗೂ ಆಕರ‍್ಶಕ ಶಿಲ್ಪಗಳಿಂದ ತುಂಬಿದೆ. ಅವುಗಳ ಜೊತೆಗಿರುವ ವಿವರಣೆಯನ್ನು ಓದಿದಲ್ಲಿ ಮಾತ್ರ ಅದರ ಹಿಂದಿರುವ ವಿಶಯವನ್ನು ಗ್ರಹಿಸಲು ಸಾದ್ಯ. ಇದರಲ್ಲಿ ಯುದ್ದದ ಆನೆಗಳು, ದೈತ್ಯಾಕಾರದ ಮೀನು, ತಲೆ, ಒಂದು ದೈತ್ಯ ಮತ್ತೊಂದು ದೈತ್ಯನನ್ನು ಹರಿದುಹಾಕುವುದು, ವೀಕ್ಶಕರನ್ನು ದಿಗ್ಬ್ರಮೆಗೊಳಿಸುವಂತೆ ಈಗಲೋ ಆಗಲೋ ಬೀಳುವಂತಿರುವ ಓರೆಯಾದ ಮನೆ ಇದೆ. ಈ ಉದ್ಯಾನವನದಲ್ಲಿ ಅತ್ಯಂತ ಬಯಾನಕವಾದ ಶಿಲ್ಪವೆಂದರೆ ದೈತ್ಯ ತಲೆಯ ತುಣುಕು. ಇದರ ಬಾಯಿ ‘ಊರಗಲ’ ತೆರೆದಂತಿದೆ. ಸಲೀಸಾಗಿ ಮನುಶ್ಯ ಅದರಲ್ಲಿ ನಡೆದು ಹೋಗಬಹುದಾದಶ್ಟು ದೊಡ್ಡದು. ಅದರ ಜೊತೆಯಲ್ಲಿರುವ ಪಲಕದಲ್ಲಿ “ಆಲ್ ರೀಸನ್ಸ್ ಡಿಪಾಟ್ರ‍್ಸ್” ಎಂದಿದೆ. ಇದನ್ನು ‘ನರಕದ ಬಾಯಿ’ ಎಂದು ಅರ‍್ತೈಸಬಹುದು.

ಇಟಾಲಿಯನ್ ನವೋದಯ ಸಮಯದಲ್ಲಿ ನಿರ‍್ಮಿಸಲಾದ ಈ ಉದ್ಯಾನವನವು, ಇದೇ ಕಾಲಗಟ್ಟದಲ್ಲಿ ನಿರ‍್ಮಿಸಲಾದ ಹಲವಾರು ಸ್ಮಶಾನದ ಉದ್ಯಾನವನಗಳನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಇದು ಅಲ್ಲಿನ ನವ್ಯ ಸಾಹಿತ್ಯದ ಸಿದ್ದಾಂತವಾಗಿದೆ ಹಾಗೂ ನವ್ಯ ಸಾಹಿತಿಗಳು ಇದನ್ನು ಇಶ್ಟಪಟ್ಟಿರುವುದು ಅರ‍್ತಪೂರ‍್ಣವಾಗಿದೆ. ರಾಜಕುಮಾರನ ಪರಿಕಲ್ಪನೆಯಂತೆ ಈ ಉದ್ಯಾನವನ ಮೂಡಿ ಬಂದಿತೋ ಹೇಗೆ? ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಸಾದ್ಯವಿರಲಿಲ್ಲ. ಸಾಮಾನ್ಯವಾಗಿ ಈ ಉದ್ಯಾನವದ ವೀಕ್ಶಣೆಗೆ ಹೋದವರು, ಆ ತೆರೆದ ಬಾಯಿಯನ್ನು ಪ್ರವೇಶಿಸದೆ ಹಿಂದಿರುಗಲಾರರು. ಏಕೆಂದರೆ ಅದರ ನಾಲಿಗೆಯ ಮೇಲೆ ಪಿಕ್ನಿಕ್ ಟೇಬಲ್ ಇದ್ದು, ನಾಲ್ಕೈದು ಜನರ ಕುಟುಂಬ ಅದರ ಮೇಲೆ ಕುಳಿತು, ಅಚ್ಚುಕಟ್ಟಾಗಿ ಊಟ ಮಾಡುವಶ್ಟು ಸ್ತಳಾವಕಾಶವಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, romehints.com, italianways.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.