ನಗೆಯ ಮಾರಿತಂದೆಯ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ನಡೆ ನುಡಿ ಶುದ್ಧವಿಲ್ಲದೆ
ಮಾತಿನ ಬಣಬೆಯ ನೀತಿಯೇಕೊ. (1205/1325)

ನಡೆ=ಮಾಡುವ ಕೆಲಸ/ಕಸುಬು; ನುಡಿ=ಆಡುವ ಮಾತು/ಸೊಲ್ಲು; ಶುದ್ಧ+ಇಲ್ಲದೆ; ಶುದ್ಧ=ಒಳ್ಳೆಯದು/ಸರಿಯಾದುದು; ಬಣಬೆ=ಹುಲ್ಲಿನ ರಾಶಿ/ಒಟ್ಟಲು/ಮೆದೆ;

ಮಾತಿನ ಬಣಬೆ=ಇದೊಂದು ನುಡಿಗಟ್ಟು. ವ್ಯಕ್ತಿಯು ಕೆಲಸಕ್ಕೆ ಬಾರದ ಪೊಳ್ಳು ಮಾತುಗಳನ್ನು ಒಂದೇ ಸಮನೆ ಆಡುತ್ತಿರುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ನೀತಿ+ಏಕೊ; ನೀತಿ=ಸತ್ಯ ಮತ್ತು ನ್ಯಾಯದಿಂದ ಕೂಡಿದ ನಡೆನುಡಿ; ಏಕೋ=ಏನು ತಾನೆ ಪ್ರಯೋಜನ;

ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಕೆಟ್ಟ ಗುಣಗಳಿಂದ ನಡೆದುಕೊಳ್ಳುತ್ತ, ಮಾತಿನಲ್ಲಿ ಮಾತ್ರ ಬಹು ದೊಡ್ಡ ನೀತಿವಂತನಂತೆ ತೋರಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಬರಿ ಮಾತಿನಿಂದ ವ್ಯಕ್ತಿಗಾಗಲಿ ಇಲ್ಲವೇ ಸಮಾಜಕ್ಕಾಗಲಿ ಒಳಿತಾಗುವುದಿಲ್ಲ.

ಸಮತೆಯ ಸಮಾಧಾನವ ಹೇಳುವ
ಪುಸ್ತಕ ಎತ್ತಿನ ಮೇಲೆ
ಹೊಯಿವ ದೊಣ್ಣೆ ಕೈಯಲ್ಲಿ
ಲೇಸಾಯಿತ್ತು ಈತನಿರವು. (1254/1329)

ಸಮತೆ=ಎಲ್ಲರನ್ನೂ ಸಮಾನವಾಗಿ ಕಾಣುವುದು/ಮೇಲು ಕೀಳು ಎಂಬ ತಾರತಮ್ಯವನ್ನು ಮಾಡದಿರುವುದು; ಸಮಾಧಾನ=ತಾಳ್ಮೆ/ಸಹನೆ/ನೆಮ್ಮದಿ; ಹೇಳುವ=ತಿಳಿಸುವ/ಮನದಟ್ಟು ಮಾಡಿಸುವ; ಪುಸ್ತಕ=ಹೊತ್ತಿಗೆ; ಎತ್ತು=ಬಸವ/ಗಂಡು ದನ;

ಹೊಯ್=ಹೊಡೆ/ಬಡಿ/ಕಡಿ/ಕುಟ್ಟು/ಜಜ್ಜು; ಹೊಯಿವ ದೊಣ್ಣೆ=ದಪ್ಪನೆಯ ಕೋಲು; ಲೇಸು+ಆಯಿತ್ತು; ಲೇಸು=ಒಳ್ಳೆಯದು/ಹಿತವಾದುದು; ಆಯಿತ್ತು=ಆಗಿರುವುದು; ಈತನ+ಇರವು; ಈತನ=ಇಂತಹ ವ್ಯಕ್ತಿಯ; ಇರವು=ಇರುವ ರೀತಿ;

“ಲೇಸಾಯಿತ್ತು ಈತನ ಇರವು ” ಎಂದರೆ ವ್ಯಕ್ತಿಯು ಈ ರೀತಿಯಿದ್ದರೆ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ. ಇಂತಹ ನಯವಂಚಕರ ವ್ಯಕ್ತಿತ್ವವನ್ನು ಸೂಚಿಸಲು “ ಬಾಯಲ್ಲಿ ಬೆಣ್ಣೆ; ಕಂಕುಳಲ್ಲಿ ದೊಣ್ಣೆ” ಎಂಬ ಗಾದೆಯನ್ನು ಜನರು ಬಳಸುತ್ತಾರೆ.

ಸಮಾಜದಲ್ಲಿನ ಜನರೆಲ್ಲರೂ ಬದುಕಿಗೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆದು ಸಮಾನತೆಯಿಂದ ಹಾಗೂ ನೆಮ್ಮದಿಯಿಂದ ಜತೆಗೂಡಿ ಬಾಳುವಂತಾಗಬೇಕೆಂಬ ಸಂದೇಶವನ್ನು ಸಾರುವ ಹೊತ್ತಿಗೆಗಳನ್ನು ಬಸವನ ಹೆಗಲ ಮೇಲೆ ಹೊತ್ತು ಮೆರೆಸುತ್ತ ಬರುವ ವ್ಯಕ್ತಿಯು, ಒಳ್ಳೆಯದೆಲ್ಲವೂ ತನ್ನ ಜಾತಿ ಮತದವರಿಗೆ ಮಾತ್ರ ದೊರಕಬೇಕು, ಇನ್ನುಳಿದವರಿಗೆ ಅದು ದಕ್ಕದಂತೆ ತಡೆಯಲು ಯಾವ ಬಗೆಯ ಹಿಂಸೆಯನ್ನಾದರೂ ಮಾಡಲು ಮನದೊಳಗೆ ಆಲೋಚಿಸುತ್ತಿರುತ್ತಾನೆ. ಇಂತಹ ನಯವಂಚಕನಿಂದ ಸಮಾಜಕ್ಕೆ ಕೇಡಾಗುತ್ತದೆಯೇ ಹೊರತು ಲೇಸಾಗುವುದಿಲ್ಲ.

( ಚಿತ್ರ ಸೆಲೆ:  sugamakannada.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.