ಜೀವನಕ್ಕೆ ಬೇಕು ಜೀವಸತ್ವಗಳು

– ಸಂಜೀವ್ ಹೆಚ್. ಎಸ್.

 

ವಿಟಾಮಿನ್‌ಗಳು, ಜೀವಸತ್ವಗಳು, vitamins, fruits, vegetables, ಹಣ್ಣು, ತರಕಾರಿಗಳು

ಬಹುಕೋಶಗಳಿಂದ ಕೂಡಿದ ಸಂಗ್ರಹ ಮಾನವನ ದೇಹ. ಮಾನವನ ದೇಹದ ಬೆಳವಣಿಗೆ ಹಾಗೂ ವಿಕಸನಕ್ಕೆ ಹಲವು ಪ್ರಮುಕ ಪೋಶಕಾಂಶಗಳು ಅಗತ್ಯ, ಇವುಗಳ ಜೊತೆಜೊತೆಗೆ ಸಣ್ಣ ಪ್ರಮಾಣದ ಜೀವಸತ್ವಗಳು (ವಿಟಮಿನ್ ಗಳು) ಅತ್ಯಗತ್ಯವಾದವು. ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ “vital/vita” (ಪ್ರಮುಕ) “amines” (ಜೀವನಕ್ಕೆ ಅಗತ್ಯವಾದ ಸಾರಜನಕ ವಸ್ತು) ಗಳೇ ವಿಟಮಿನ್ಸ್ (“Vitamins”).

ನಮ್ಮ ಪೂರ‍್ವಜರಿಗೆ ಜೀವಸತ್ವಗಳ ಕೊರತೆ ಇರಲಿಲ್ಲ, ಆದರೂ ಕೂಡ ಅವರು ನಿಯಮಿತವಾಗಿ ಹಣ್ಣು, ತರಕಾರಿ, ಸೊಪ್ಪು ಹಾಗೂ ವೈವಿದ್ಯಮಯ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಿದ್ದರು. ನಮ್ಮ ಬೇಟೆಗಾರ ಗುಂಪಿನ ಪೂರ‍್ವಜರು ತಾವು ಬೇಟೆಯಾಡಿದ ಪ್ರಾಣಿಗಳಿಂದ ಮತ್ತು ಅವರು ಸಂಗ್ರಹಿಸಿದ ಸಸ್ಯಗಳಿಂದ ಜೀವಸತ್ವಗಳನ್ನು ಪಡೆಯುತ್ತಿದ್ದರು. ಆದರೆ ಇಂದಿನ ಜನಾಂಗ ನಗರೀಕರಣದಿಂದ ಜೀವಸತ್ವಗಳಿಲ್ಲದ ಕಳಪೆ ಪಿಶ್ಟಗಳನ್ನು ತಿನ್ನಲು ಪ್ರಾರಂಬಿಸಿದೆ. ಇನ್ನೊಂದೆಡೆ ನಾವು ನಮ್ಮ ಆಹಾರವನ್ನು ಹೆಚ್ಚು ಪರಿವರ‍್ತಿಸಿದಶ್ಟೂ, ಜೀವಸತ್ವ-ಸಂಬಂದಿತ ಕಾಯಿಲೆಗಳ ಅಪಾಯವನ್ನು ಹೊಂದುತ್ತೇವೆ.

ಜೀವಸತ್ವಗಳ ಅವಿಶ್ಕಾರದ ಇತಿಹಾಸವು ಅವುಗಳ ಕೊರತೆಯಿಂದ ಉಂಟಾಗಬಹುದಾದ ಕಾಯಿಲೆಗಳನ್ನು ಇಲ್ಲವಾಗಿಸಿದೆ. ಕ್ಯಾಸಿಮಿರ‍್ ಪಂಕ್ ಅವರನ್ನು ‘ವಿಟಮಿನ್ ಚಿಕಿತ್ಸೆಯ ಪಿತಾಮಹ’ ಎಂದು ಹೇಳಲಾಗುತ್ತದೆ. ಜೀವಸತ್ವಗಳ ಆವಿಶ್ಕಾರವೆ ಒಂದು ರೋಚಕ. ಒಂದೊಂದು ಜೀವಸತ್ವಕ್ಕೂ ಸುದೀರ‍್ಗ ಅನ್ವೇಶಣೆಯ ಇತಿಹಾಸವಿದೆ. ಪ್ರಾಚೀನ ಈಜಿಪ್ಶಿಯನ್ನರು, ಜಪಾನಿನ ನೌಕಾಪಡೆಗಳು, ರಶ್ಯಾದ ಹಲವು ಶಾಸ್ತ್ರಗ್ನರು ಜೀವಸತ್ವದ ಬಗ್ಗೆ ತಿಳಿಸಿರುವುದಿದೆ. ಅಶ್ಟೆಲ್ಲ ಯಾಕೆ ಬಾರತದ ಆಯುರ‍್ವೇದ, ಚರಕಸಂಹಿತೆಯಲ್ಲಿ ಕೂಡ ಜೀವಸತ್ವಗಳ ಉಲ್ಲೇಕಗಳಿವೆ. ಜೀವಸತ್ವಗಳಿಗೆ ರಾಸಾಯಿನಿಕವಾಗಿ ಬಿನ್ನವಾದ ಕೆಲವು ಸಾವಯವ ಸಂಯುಕ್ತಗಳು ಅತ್ಯಲ್ಪ ಪ್ರಮಾಣದಲ್ಲಿರುತ್ತವೆ ಅನ್ನುವುದನ್ನು ಈ ಶತಮಾನದ ಪ್ರಾರಂಬದಲ್ಲಿ ಕಂಡು ಹಿಡಿಯಲಾಯಿತು. ಇವುಗಳು ಅತ್ಯಲ್ಪ ಪ್ರಮಾಣದಲ್ಲಿದ್ದರೂ ದೇಹಕ್ಕೆ ಅತ್ಯಗತ್ಯವಾಗಿವೆ.

ಗರ‍್ಬದಾರಣೆಯಾದ ಕ್ಶಣದಿಂದ ಪಡೆದುಕೊಳ್ಳುವ ಪೋಶಕಾಂಶಗಳಿಂದ ಬೆಳೆಯಲಾರಂಬಿಸುವ ಬ್ರೂಣವು, ತನ್ನ ಪೋಶಕರಿಂದ ಬಳುವಳಿಯಾಗಿ ಪಡೆದ ಸಾಮಾನ್ಯ ತಳಿನಕ್ಶೆಯ ಪ್ರಕಾರ ರೂಪುಗೊಳ್ಳುತ್ತದೆ. ನಿರ‍್ದಿಶ್ಟ ಅವದಿಯಲ್ಲಿ ನಿರ‍್ದಿಶ್ಟ ಜೀವಸತ್ವಗಳು ಹಾಗೂ ಕನಿಜಾಂಶಗಳು ಅದಕ್ಕೆ ಅಗತ್ಯವಾಗಿರುತ್ತದೆ. ಈ ಪೋಶಕಾಂಶಗಳು ಇತರೆ ಅಂಶಗಳೊಂದಿಗೆ- ಚರ‍್ಮ, ಅಸ್ತಿ, ಹಾಗೂ ಸ್ನಾಯುಗಳನ್ನು ರೂಪಿಸುವ ರಾಸಾಯನಿಕ ಪ್ರತಿಕ್ರಿಯೆಗಳಿಗೆ ಪ್ರಚೋದಿಸುತ್ತವೆ. ಹುಟ್ಟಿನಿಂದ ಸಾಯುವ ತನಕ ಈ ಜೀವಸತ್ವಗಳು ನಮ್ಮ ಜೀವಕ್ಕೆ ಜೀವ ನೀಡುತ್ತಲೇ ಇರುತ್ತವೆ.

ಜೀವಸತ್ವಗಳನ್ನು ಅವುಗಳ ಜೈವಿಕ ಹಾಗೂ ರಾಸಾಯನಿಕ ಚಟುವಟಿಕೆಗಳ ಮೇಲೆ ವರ‍್ಗೀಕರಿಸಲಾಗುತ್ತದೆ, ಜೀವಸತ್ವಗಳು ವೈವಿದ್ಯಮಯ ಜೀವರಾಸಾಯನಿಕ ಕಾರ‍್ಯಗಳನ್ನು ಹೊಂದಿವೆ. ಕೆಲವು ಹಾರ‍್ಮೋನ್‌ಗಳಂತೆ, ಕನಿಜಗಳಂತೆ, ಕೋಶ ಹಾಗೂ ಅಂಗಾಂಶಗಳ ಬೆಳವಣಿಗೆ ಮತ್ತು ಪ್ರಬೇದಕರಣದ ನಿಯಂತ್ರಕದಂತೆ, ಹೆಚ್ಚಿನ ಸಂಕ್ಯೆಯ ಜೀವಸತ್ವಗಳು ಕಿಣ್ವ ಸಹವರ‍್ತಿಯಾಗಿ, ಚಯಾಪಚಯ (digestion) ಕ್ರಿಯೆಗೆ ವೇಗ ವರ‍್ದಕವಾಗಿ‌, ರೋಗ ನಿರೋದಕ ಶಕ್ತಿಯಾಗಿ ಕೂಡ ಕಾರ‍್ಯನಿರ‍್ವಹಿಸುತ್ತದೆ. ಜೀವಕೋಶಗಳ, ಅಂಗಾಂಶಗಳ ಹಾಗೂ ಅಂಗಗಳ ಆರೋಗ್ಯಕರ ನಿರ‍್ವಹಣೆಗೆ ಜೀವಸತ್ವಗಳು ಅತ್ಯಗತ್ಯ. ಬಹುಕೋಶೀಯ ಜೀವಿಗೆ ತಾನು ಸೇವಿಸುವ ಆಹಾರದಿಂದ ಪಡೆದ ರಾಸಾಯನಿಕ ಶಕ್ತಿಯನ್ನು ದಕ್ಶ ರೀತಿಯಲ್ಲಿ ಬಳಸಿಕೊಂಡು ದೇಹಕ್ಕೆ ಬೇಕಾಗುವ ಪ್ರೋಟೀನ್‌ಗಳನ್ನು, ಕಾರ‍್ಬೋಹೈಡ್ರೇಟ್‌ಗಳನ್ನು ಹಾಗೂ ಕೊಬ್ಬಿನಂಶಗಳನ್ನು ಸಂಸ್ಕರಿಸಲು ಸಹಾಯ ನೀಡುತ್ತವೆ.

ವೈವಿದ್ಯಮಯ ಆಹಾರಗಳೇ ಈ ಜೀವಸತ್ವಗಳ ಮೂಲ. ಬಹಳ ಮಟ್ಟಿಗೆ ಜೀವಸತ್ವಗಳನ್ನು ಆಹಾರದಿಂದಲೇ ಪಡೆಯಲಾಗುತ್ತಾದರೂ, ಕೆಲವನ್ನು ಬೇರೆ ರೀತಿಯಲ್ಲಿಯೂ ಪಡೆಯಬಹುದು. ಉದಾಹರಣೆಗೆ, ಸೂರ‍್ಯನ ಕಿರಣಗಳ ಸಹಾಯದಿಂದ D ಜೀವಸತ್ವ ಪಡೆಯುವುದು ಒಂದು ಬಗೆ. ಇತ್ತೀಚೆಗೆ ಕೇವಲ ಜೀವಸತ್ವಗಳನ್ನು ತೆಗೆದು ಸಂಸ್ಕರಿಸಿ ಮಾತ್ರೆಗಳ ರೂಪದಲ್ಲಿ ಸೇವಿಸುವುದನ್ನು ಕಾಣಬಹುದಾಗಿದೆ. ಆದರೆ ಅವುಗಳ ಸೇವನೆ ಮಿತಿಯಲ್ಲಿರಬೇಕು. ಆಹಾರದ ಮೂಲಕ ನಮ್ಮ ದೇಹಕ್ಕೆ ಜೀವಸತ್ವ ದೊರೆತರಶ್ಟೇ ಯೋಗ್ಯ.

ಜೀವಸತ್ವಗಳನ್ನು ನೀರಿನಲ್ಲಿ-ಕರಗಬಲ್ಲ ಮತ್ತು ಕೊಬ್ಬಿನಲ್ಲಿ ಕರಗಬಲ್ಲ ಜೀವಸತ್ವಗಳೆಂದು ವರ‍್ಗೀಕರಿಸಲಾಗಿದೆ. ಮಾನವರಲ್ಲಿ 13 ಜೀವಸತ್ವಗಳಿವೆ : 4 ಕೊಬ್ಬಿನಲ್ಲಿ-ಕರಗಬಲ್ಲಂತಹವು (A, D, E ಮತ್ತು K) ಹಾಗೂ 9 ನೀರಿನಲ್ಲಿ-ಕರಗಬಲ್ಲಂತವು (8 B ಜೀವಸತ್ವಗಳು ಹಾಗೂ C ಜೀವಸತ್ವ). ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳು ಸಾದಾರಣವಾಗಿ ದೇಹದಿಂದ ನೇರವಾಗಿ ವಿಸರ‍್ಜಿತಗೊಳ್ಳುತ್ತವೆ. ಇವುಗಳು ಶೇಕರಣೆ ಆಗದ ಕಾರಣ, ನಿರಂತರ ದೈನಿಕ ಸೇವನೆಯು ಅತ್ಯಗತ್ಯ. ಕೊಬ್ಬಿನಲ್ಲಿ-ಕರಗಬಲ್ಲ ಜೀವಸತ್ವಗಳನ್ನು ಮೇದಸ್ಸಿನ (ಕೊಬ್ಬು) ಸಹಾಯದಿಂದ ಕರುಳಿನ ಮಾರ‍್ಗವಾಗಿ ಹೀರಿಕೊಳ್ಳಲಾಗುತ್ತದೆ. ಅವುಗಳು ದೇಹದಲ್ಲಿ ಶೇಕರಗೊಳ್ಳುವ ಸಾದ್ಯತೆ ಹೆಚ್ಛಾಗಿರುತ್ತದೆ.

ಮಾನವ ದೇಹವು ವಿವಿದ ಜೀವಸತ್ವಗಳನ್ನು ಕೂಡಿಡಲು ತನ್ನದೇ ವ್ಯವಸ್ತೆಯನ್ನು ಹೊಂದಿದೆ. ಜೀವಸತ್ವಗಳ ಕೂಡಿಡುವಲ್ಲಿ ಗಂಬೀರ ಕೊರತೆಯಾದರೆ ಹಲವು ರೋಗಗಳಿಗೆ ಈಡಾಗಬಹುದು. ಕೆಲವೊಮ್ಮೆ ಈ ಕೊರತೆಗಳು ಶಾಶ್ವತ ಹಾನಿ ಉಂಟು ಮಾಡಲೂಬಹುದು. ಇರುಳುಗಣ್ಣು ಕೆರಟೋಮಲೆಶಿಯ, ಪೆಲಾಗ್ರ, ಅನಿಮಿಯಾ, ಪೇರಿಪೆರಲ್ ನ್ಯೂರೋಪತಿ, ರಕ್ತಪಿತ್ತ ರೋಗ, ಬೆರಿಬೆರಿ, ಬಾಲಗ್ರಹ, ಸ್ಕಾರ‍್ವಿ ಮತ್ತು ಇತರೆ ಹಲವು ರೋಗಗಳು ಜೀವಸತ್ವಗಳ ಕೊರತೆಯಿಂದ ಉಂಟಾಗುತ್ತದೆ. ಇವುಗಳೆಲ್ಲಾ ನೇರ ರೋಗಗಳಾದರೆ ಇನ್ನೂ ಹಲವು ಪರೋಕ್ಶ ಅಡ್ಡಪರಿಣಾಮಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ರೋಗ ನಿರೋದಕ ಶಕ್ತಿ ಕುಗ್ಗಿದಂತೆ ಹಲವು ರೋಗರುಜಿನಗಳಿಗೆ ಇದೇ ಮೂಲ ಕಾರಣವಾಗಬಹುದು.

ಇಂದಿನ ಕಾಲಗಟ್ಟದಲ್ಲಿ ಜೀವಸತ್ವಗಳ ಕೊರತೆ ಬಾದಿಸದಂತೆ ತಡೆಗಟ್ಟಲು, ಅವುಗಳನ್ನು ಬೇರೆ ಬೇರೆ ಆಹಾರದ ರೂಪದಲ್ಲಿ ಸೇವಿಸಲೇಬೇಕಾದ ಅನಿವಾರ‍್ಯತೆ ಇದೆ. ಆಹಾರದ ಮೂಲಕ ಅಗತ್ಯ ಪ್ರಮಾಣದ ಜೀವಸತ್ವವನ್ನು ಪಡೆಯದಿದ್ದರೆ ಪ್ರಾತಮಿಕ ಕೊರತೆ ಉಂಟಾಗುತ್ತದೆ. ದೂಮಪಾನ, ವಿಪರೀತ ಮದ್ಯಪಾನ ಸೇವನೆಯಿಂದುಂಟಾದ ಜೀವಸತ್ವದ ಬಳಕೆಯನ್ನು ಅತವಾ ಹೀರುವಿಕೆಯನ್ನು ಮಿತಿಗೊಳಿಸುವ/ತಡೆಯುವ ಒಳಗಿನ ಅಸ್ವಸ್ತತೆ ಹಾಗೂ ಔಶದಿಗಳ ಬಳಕೆಯಿಂದ ಮಾದ್ಯಮಿಕ ಕೊರತೆ ಉಂಟಾಗುತ್ತದೆ. ಈ ಎರಡು ರೀತಿಯ ಕೊರತೆ ಬಾರದಂತೆ ಜೀವಿಸುವ ಅವಶ್ಯಕತೆ ಜನರಿಗಿದೆ. ಇತ್ತೀಚಿನ ದಿನಗಳಲ್ಲಿ ಸಮಗ್ರ ಆಹಾರಕ್ಕಿಂತ ಆಹಾರದಲ್ಲಿನ ಕೇವಲ ಬಿಡಿ ಪೋಶಕಾಂಶಗಳ ಹುಡುಕಾಟ ಹೆಚ್ಚಾಗಿದೆ. ವೈವಿದ್ಯಮಯ, ಸಕಾಲಿಕ ಆಹಾರ ಪೂರೈಕೆ, ಹಣ್ಣು-ತರಕಾರಿ, ವಿವಿದ ಸೊಪ್ಪು, ಪಾಲಿಶ್ ಮಾಡಿಸದ ಅಕ್ಕಿ ಮತ್ತು ಸ್ತಳೀಯ ಆಹಾರಗಳ ಸೇವನೆಯಿಂದ ಅನೇಕ ರೀತಿಯ ಅಸ್ವಸ್ತತೆಯನ್ನು ತಡೆಯಬಹುದು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: