ಕವಿತೆ: ಕನಸು
– ವೆಂಕಟೇಶ ಚಾಗಿ.
ಮುಂಜಾನೆಯ ಬೆಳಕಿಗೆ
ಕನಸೊಂದು ಶುರುವಾಗಿದೆ
ಅದು ನಿನ್ನೆ ಕಂಡ ಕನಸಿನ
ಮುಂದುವರಿದ ಬಾಗವೇನೋ
ಎಂಬಂತಿದೆ
ಕಾಲುಗಳು ಬಾರದಿಂದ
ಕುಂಟುತ್ತ ಹೆಜ್ಜೆ ಹಾಕುತ್ತಿವೆ
ಒಳಗಣ್ಣುಗಳು ಮುಚ್ಚಿ
ಹೊರಗಣ್ಣುಗಳು ಜಗವ
ಅಚ್ಚರಿಯಲಿ ನೋಡುತ್ತಿವೆ
ಹತ್ತಾರು ಮುಕಗಳು
ನನ್ನನ್ನೆ ದುರುಗುಟ್ಟಿ ನೋಡುತ್ತಿವೆ
ಕೆಲವು ಕಣ್ಣುಗಳು ಕರುಣೆಯಲಿ
ಕೆಲವು ಆಸೆಯಲಿ
ಕೆಲವು ಜವಾಬ್ದಾರಿಗಳು ಸುಮ್ಮನೆ
ನನ್ನ ಹೆಗಲೇರಿ ಕುಣಿಯುತ್ತಿವೆ
ಸುಮ್ಮನಿದ್ದೇನೆ
ಕಾರಣ, ಕೈಗಳನ್ನು ಕಟ್ಟಲಾಗಿದೆ
ಉಸಿರಿಗೂ ಹೊಗಳಿ
ಒಳಗೆಳೆದುಕೊಳ್ಳಬೇಕಿದೆ
ಅಶ್ಟು ದಿಮಾಕು ಅದಕ್ಕೂ
ಕೆಲವು ಮಾತುಗಳನ್ನು
ನನಗೇ ಹೇಳುತ್ತಿರುವಂತೆ ಅನಿಸಿದೆ
ನಾನೇನು ಮಾಡಲಿ
ಕಿವಿಗಳ ಕತ್ತು ಹಿಚುಕಲಾಗಿದೆ
ತಲೆತಗ್ಗಿದೆ ಅಶ್ಟೇ, ತಲೆ ಎತ್ತಲು
ಇಲ್ಲಿ ಅನುಮತಿ ಇಲ್ಲ
ಬಾವನೆಗಳು ಮೊಳಕೆಯೊಡೆಯಲು
ಮಳೆಯಿಲ್ಲ.
ಮತ್ತೆ ಕತ್ತಲಾಗಿದೆ
ಬಣ್ಣಬಣ್ಣದ ಕನಸಿಗೆ ವಿರಾಮ
ಮತ್ತೆ ನಿಜದ ಬಣ್ಣ ಕಾಣುತ್ತಿದೆ
ಕುಶಿಗಳಿಗೆ ಜೀವ ಬಂದಿದೆ
(ಚಿತ್ರಸೆಲೆ : sloanreview.mit.edu)
ತುಂಬ ಚೆನ್ನಾಗಿದೆ ಸರ್
ಸೂಪರ್ ನಾವೂ ಬರೆಯಬಹುದೇ
ನಿಮ್ಮ ಬರಹವನ್ನು [email protected] ಗೆ ಕಳಿಸಿ