ಎಲ್ಲ ಕಾಲಕ್ಕೂ ಸೈ ಈ ಮರದ ಸೇತುವೆಗಳು
– ಕೆ.ವಿ.ಶಶಿದರ.
ಜಗತ್ತಿನ ಬಹುತೇಕ ಎಲ್ಲ ನಾಡುಗಳಲ್ಲಿಯೂ ಸೇತುವೆಗಳಿವೆ. ನದಿ ಇಲ್ಲವೇ ಅಡ್ಡರಸ್ತೆಗಳನ್ನು ದಾಟಲು ಸೇತುವೆಗಳನ್ನು ಕಟ್ಟಿರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಚೀನಾದ ಡಾಂಗ್ ಸಮುದಾಯದ ಮಂದಿ ಕಟ್ಟಿರುವ ಒಂದು ಸೇತುವೆ ಎಲ್ಲ ಕಾಲಕ್ಕೂ ಸೈ ಎನಿಸಿಕೊಳ್ಳುವ ಸೇತುವೆ ಎಂದೇ ಹೆಸರುವಾಸಿಯಾಗಿದೆ. ಗುವಾಂಗ್ಕ್ಸಿ ಪ್ರಾಂತ್ಯದ, ಸಂಜಿಯಾಂಗ್ ಕೌಂಟಿಯ, ಚೆಂಗ್ಯಾಂಗ್ ಸೇತುವೆ ನೂರು ವರುಶಕ್ಕೂ ಹೆಚ್ಚು ಹಳೆಯದಾಗಿದ್ದು, ಸೇತುವೆಯನ್ನು ಕಟ್ಟಿರುವ ಬಗೆ ಮತ್ತು ಬಳಕೆಯಿಂದಾಗಿ ಪ್ರವಾಸಿಗರನ್ನು ಸೆಳೆಯುವ ತಾಣವಾಗಿದೆ.
ಚೀನಾ ದೇಶದಲ್ಲಿ ವಾಸಿಸುತ್ತಿರುವ ಐವತ್ತಾರಕ್ಕೂ ಹೆಚ್ಚು ಅಲ್ಪಸಂಕ್ಯಾತರ ಗುಂಪಿನಲ್ಲಿ ಡಾಂಗ್ ಅಲ್ಪಸಂಕ್ಯಾತರೂ ಸೇರಿದ್ದಾರೆ. ಈ ಗುಂಪಿನವರು ಚೀನಾದ ಹುನನ್, ಹುಬೈ, ಗುಯ್ಜ್ಹೌ, ಗುವಾಂಗ್ಕ್ಸಿ, ಪ್ರಾಂತ್ಯದ ಚದುರಿದ ಹಳ್ಳಿಗಳಲ್ಲಿ ತಮ್ಮ ವಸಾಹತನ್ನು ಕಂಡುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಬೆಳೆಯುವ ಸಾಂಪ್ರದಾಯಿಕ ಸಿಹಿ ಅಕ್ಕಿ ಮತ್ತು ತಮ್ಮ ಸುಂದರವಾದ ಮರದ ಕೆತ್ತನೆಯ ಕೌಶಲ್ಯಕ್ಕೆ ಡಾಂಗ್ ಜನಾಂಗದವರು ಹೆಸರುವಾಸಿಯಾಗಿದ್ದಾರೆ. ಈ ಪ್ರಾಂತದಲ್ಲಿ ಹರಿಯುವ ನದಿಗೆ ಅಡ್ಡಲಾಗಿ ಮರದ ಸೇತುವೆಗಳನ್ನು ಅವರೇ ನಿರ್ಮಿಸಿಕೊಂಡಿದ್ದಾರೆ. ಡಾಂಗ್ ಜನಾಂಗದ ಕೌಶಲ್ಯ ಈ ಸೇತುವೆಗಳ ನಿರ್ಮಾಣದಲ್ಲಿ ಕಾಣಬಹುದು. ಉತ್ಕ್ರುಶ್ಟವಾದ, ಮಾಳಿಗೆ ಇರುವ, ಮನಮೋಹಕ ಮರದ ಸೇತುವೆಗಳ ಸ್ರುಶ್ಟಿ ಇವರಿಂದಾಗಿದೆ. ಈ ಸೇತುವೆಗಳನ್ನು ಗಾಳಿ ಮತ್ತು ಮಳೆ ಸೇತುವೆಗಳೆನ್ನುತ್ತಾರೆ, ಅಂದರೆ ಎಲ್ಲ ಕಾಲಕ್ಕೂ ನೆರವಾಗುವ ಸೇತುವೆಗಳು. ಈ ಹೆಸರಿಗೆ ಕಾರಣ ಇದರ ಮೇಲೆ ಓಡಾಡುವವರಿಗೆ ಮಳೆ ಮತ್ತು ಗಾಳಿಯಿಂದ ಸಿಗುವ ರಕ್ಶಣೆ ಮತ್ತು ಆಶ್ರಯ.
ಮಳೆ ಹಾಗೂ ಬಿರು ಬಿಸಿಲಿನ ವಾತಾವರಣದಲ್ಲಿ, ಇದರ ಮೇಲೆ ಓಡಾಡುವ ಜನರಿಗೆ ಆಶ್ರಯ ನೀಡಲು ಸೇತುವೆಯ ಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಮಂಟಪಗಳನ್ನು ನಿರ್ಮಿಸಿದ್ದಾರೆ. ಈ ಮಂಟಪಗಳು ಸೊಗಸಾದ ವಾಸ್ತುಶಿಲ್ಪದ ಆಗರಗಳಾಗಿವೆ. ಕಣ್ಮನ ಸೆಳೆಯುವ ಈ ಸೇತುವೆಗಳ ಉತ್ಕ್ರುಶ್ಟ ವಾಸ್ತುಶೈಲಿಯಿಂದಾಗಿ “ಹೂ ಸೇತುವೆಗಳು” ಎಂಬ ಅಡ್ಡ ಹೆಸರನ್ನೂ ಗಳಿಸಿವೆ. ಇಲ್ಲಿನ ಮಂಟಪವನ್ನು ಸ್ತಳೀಯರು ಬೇಟಿಯ ಪ್ರದೇಶವನ್ನಾಗಿ, ವಿಶ್ರಾಂತಿಯ ಸ್ತಳವನ್ನಾಗಿ, ಹರಟುವ ತಾಣವಾಗಿ, ವಿಚಾರ ವಿನಿಮಯಕ್ಕಾಗಿ ಹಾಗೂ ಕೆಲವೊಮ್ಮೆ ವಿನೋದ ಮತ್ತು ಮನೋರಂಜನೆಯ ಸಲುವಾಗಿ ಬಳಸಿಕೊಳ್ಳುವುದುಂಟು. ಈ ಸೇತುವೆಗಳು ಎಲ್ಲಾ ಕಾಲಕ್ಕೂ ಹೇಳಿ ಮಾಡಿಸಿದಂತಹ ಸ್ತಳಗಳಾಗಿವೆ.
ಎಲ್ಲಾ ಸೇತುವೆಗಳಂತೆ ಈ ಸೇತುವೆಯೂ ಸಹ ಒಂದು ಸೇತುವೆಗಳಶ್ಟೆ. ಆದರೆ ಇದು ವಿಶೇಶವೆನಿಸುವುದು ಸೇತುವೆಯಲ್ಲಿ ಇರುವ ಸಣ್ಣ ಸಣ್ಣ ಗೋಪುರಗಳಿಂದಾಗಿ ಹಾಗೂ ಪಾದಚಾರಿಗಳು ವಿಶ್ರಾಂತಿಗಾಗಿ ಕುಳಿತುಕೊಳ್ಳಲು ನಿರ್ಮಿಸಿರುವ ಪೆವಿಲಿಯನ್ಗಳಿಂದ. ಇಲ್ಲಿನ ಸೇತುವೆಗಳ ಹೆಚ್ಚಿನ ಬಾಗ ರಚಿಸಲ್ಪಟ್ಟಿರುವುದು ಮರದ ಹಲಗೆಗಳಿಂದ. ಸೇತುವೆಯ ಇಕ್ಕೆಲಗಳಲ್ಲಿ ತಡೆಗಳಿದ್ದು, ದಾರಿಹೋಕರು ಕುಳಿತುಕೊಂಡು ಸುದಾರಿಸಿಕೊಳ್ಳಲು ತಡೆಗಳಿಗೆ ಆನಿಸಿದಂತೆ ಬೆಂಚುಗಳನ್ನು ಜೋಡಿಸಲಾಗಿದೆ. ಇಲ್ಲಿ ಅಳವಡಿಸಿರುವ ಮೇಲ್ಚಾವಣಿ, ಗೋಪುರ, ಮಂಟಪಗಳ ಮರ ಹಾಗೂ ಕಲ್ಲಿನ ಕಂಬಗಳು ಸುಂದರವಾದ ಕೆತ್ತನೆಯಿಂದ ಸಿಂಗರಿಸಲ್ಪಟ್ಟಿವೆ. ಡ್ರ್ಯಾಗನ್ಗಳು, ಪೀನಿಕ್ಸ್ ಗಳು ಇಲ್ಲಿರುವ ಕೆತ್ತನೆಗಳಲ್ಲಿ ಪ್ರಮುಕವಾದವು. ಚಾವಣಿಯ ಹೊರಬಾಗವೂ ಸಹ ಮಳೆ ಮತ್ತು ಗಾಳಿಯ ರಕ್ಶಣೆಗೆ, ದೀರ್ಗಾಯುಶ್ಯ ಬಾಳಿಕೆಗೆ ಸರಿಹೊಂದುವಂತೆ ಹಾಗೂ ಮನಕ್ಕೆ ಮುದ ನೀಡುವಂತೆ ರಚಿಸಲ್ಪಟ್ಟಿದೆ.
ಈ ಸೇತುವೆಯ ಮತ್ತೊಂದು ಹೆಗ್ಗಳಿಕೆಯೆಂದರೆ, ಇಡೀ ಸೇತುವೆಯ ನಿರ್ಮಾಣದಲ್ಲಿ ಎಲ್ಲೂ ಮೊಳೆಗಳನ್ನು ಬಳಸಲಾಗಿಲ್ಲ. ಡಾಂಗ್ ಜನಾಂಗದ ನುರಿತ ಬಡಗಿಗಳು, ಮರವನ್ನು ಮತ್ತೊಂದು ಮರಕ್ಕೆ ಜೋಡಿಸುವಾಗ ಬಿದಿರಿನ ಬೆಣೆಯಯನ್ನು ಉಪಯೋಗಿಸಿದ್ದಾರೆ, ಹಾಗೂ ಅವುಗಳ ಬಾರ ಕಂಬಗಳ ಮೇಲೆ ಬರುವಂತೆ ಯೋಜಿಸಿದ್ದಾರೆ. ಇಂತಹ ಮರದ ಸೇತುವೆಗಳು ಬಹಳಶ್ಟಿದ್ದರೂ ಚೆಂಗ್ಯಾಂಗ್ ಸೇತುವೆ ವಿಶೇಶವೆನಿಸುತ್ತದೆ, ಇದರ ನಿರ್ಮಾಣ 1916ರಲ್ಲಾಯಿತು. ಉದ್ದ, ಅಗಲ ಮತ್ತು ನಿರ್ವಹಣೆಯಲ್ಲಿ ಇದು ಚೀನಾದಲ್ಲಿರುವ ಹಲವು ಸೇತುವೆಗಳಲ್ಲಿ ಅತ್ಯುತ್ತಮವಾದದ್ದು. ಸೇತುವೆಯ ಎರಡೂ ಬದಿಯಲ್ಲಿ ಎರಡು ವೇದಿಕೆಗಳಿದ್ದು, 5 ಪೆವಿಲಿಯನ್ಗಳು, 19 ವರಾಂಡಗಳು ಮತ್ತು 3 ಮಹಡಿಗಳು ಅದರಲ್ಲಿ ಸೇರಿವೆ. ಈ ಸೇತುವೆ, 64.4 ಮೀಟರ್ ಉದ್ದ, 3.4 ಮೀಟರ್ ಅಗಲ ಮತ್ತು 10.6 ಮೀಟರ್ ಎತ್ತರವಿದೆ. ಇದರಲ್ಲಿ ಅಳವಡಿಸಿರುವ ಕೆಳಬಾಗ ಕಲ್ಲಿನಿಂದ ಮಾಡಲ್ಪಟ್ಟಿದ್ದು, ಗೋಪುರಗಳ ರಚನೆಯಲ್ಲಿ ಬಹುಪಾಲು ಮರವನ್ನು ಬಳಕೆ ಮಾಡಲಾಗಿದೆ. ಮರದ ಮೇಲ್ಚಾವಣಿಯನ್ನು ಮಳೆಯಿಂದ ತಡೆಯುವ ಸಲುವಾಗಿ ಹೆಂಚುಗಳಿಂದ ಮುಚ್ಚಲಾಗಿದೆ.
ಸೇತುವೆಯ ಎರಡೂ ಬದಿಯಲ್ಲಿ ಉದ್ದನೆಯ ಬೆಂಚುಗಳನ್ನು ಹಾಕಲಾಗಿದ್ದು, ವಿಶ್ರಾಂತಿ ಬಯಸುವವರಿಗೆ ಇದು ಉಪಯೋಗಕಾರಿ. ಈ ಬೆಂಚಿನ ಮೇಲೆ ಕುಳಿತಾಗ, ಕೆಳಗೆ ಹರಿಯುವ ಲಿಂಕ್ಸೀ ನದಿಯ ಮೇಲೆ ಹಾಯ್ದು ಬರುವ ತಂಗಾಳಿಯ ಸವಿಯನ್ನು ಸವಿಯಬಹುದು. ನದಿಯ ಎರಡೂ ಬದಿಯಲ್ಲಿ ಇಳಿಜಾರಿನ ಬೆಟ್ಟಗಳು, ಟೀ ಬೆಳೆಯುವ ಪ್ರದೇಶಗಳು, ಹಸಿರು ಕಾಡು ತುಂಬಿದ ಪ್ರದೇಶವಿದ್ದು ಪ್ರಕ್ರುತಿ ಪ್ರಿಯರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ಈ ಸೇತುವೆ ಇಂದಿಗೂ ಹಿಂಡು ಹಿಂಡು ಪ್ರವಾಸಿಗರನ್ನು ಪ್ರತಿದಿನ ತನ್ನೆಡೆಗೆ ಸೆಳೆಯುತ್ತಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: bridgesdb.com, timesofindia.indiatimes.com, kepu.net.cn, chinatouradvisor.wordpress.com)
ಉಪಯುಕ್ತ ಮಾಹಿತಿ. ಚೆನ್ನಾಗಿದೆ