ಕುವೆಂಪು ಕವನಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಸಗ್ಗದ ಬಾಗಿಲು

ಸಗ್ಗದ ಬಾಗಿಲು ಎಲ್ಲಿಹುದಣ್ಣಾ
ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ
ಕಾಶಿಗೆ ಹೋದೆನು ಅಲ್ಲಿಲ್ಲಣ್ಣಾ
ಮುಳುಗಿದೆ ಗಂಗೆಯೊಳಲ್ಲಿಲ್ಲಣ್ಣಾ
ಘಣಘಣ ಘಣಘಣ ಗಂಟೆಯ ಬಾರಿಸಿ
ಮಣಮಣ ಮಣಮಣ ಮಂತ್ರವ ಹೇಳಿದೆ
ಪೂಜೆಯ ಮಾಡಿದೆ ಧೂಪವ ಹಾಕಿದೆ
ದಕ್ಷಿಣೆಯಿತ್ತೆನು ಹಾರುವರಾಳಿಗೆ
ಪಂಡಿತವರ್ಯರ ಸೇವೆಯ ಮಾಡಿದೆ
ವೇದವನೋದಿದೆ ತರ್ಕವ ಮಾಡಿದೆ
ಸಗ್ಗದ ಬಾಗಿಲು ಎಲ್ಲಿಯು ಇಲ್ಲ
ನುಗ್ಗಿದ ಕಡೆ ತಲೆ ತಾಗದೆ ಇಲ್ಲ
ಸಗ್ಗದ ಬಾಗಿಲು ಎಲ್ಲಿಹುದಣ್ಣಾ
ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ

ಸಗ್ಗದ ಬಾಗಿಲು ಅಲ್ಲಿಹುದಣ್ಣಾ
ನುಗ್ಗಿದರಲ್ಲೇ ತೆರೆಯುವುದಣ್ಣಾ
ಹಕ್ಕಿಯ ಟುವ್ವಿಯೊಳವಿತಿದೆಯಣ್ಣಾ
ಹೂವಿನ ಬಣ್ಣದೊಳಡಗಿದೆಯಣ್ಣಾ
ದುಡಿಯುವ ರೈತನ ನೇಗಿಲೊಳಡಗಿದೆ
ಕಡಿಯುವ ಕೂಲಿಯ ಕತ್ತಿಯೊಳಡಗಿದೆ
ನೇಗಿಲ ಗೆರೆಯೇ ಸಗ್ಗದ ಹಾದಿ
ಕರ್ಮವೆ ಬಾಗಿಲಿಗೊಯ್ಯುವ ಬೀದಿ
ಹಕ್ಕಿಗಳುಲಿಯಲು ಹೂವುಗಳರಳಲು
ತಾಯಿಯು ಕಂದನ ಮುದ್ದಿಸಿ ನಲಿಯಲು
ಬರೆಯಲು ವೇದವ ರೈತನ ನೇಗಿಲು
ತೆರೆವುದು ದಿನದಿನ ಸಗ್ಗದ ಬಾಗಿಲು
ಸಗ್ಗದ ಬಾಗಿಲು ಅಲ್ಲಿಹುದಣ್ಣಾ
ನುಗ್ಗಿದರಲ್ಲೇ ತೆರೆಯುದಣ್ಣಾ.

‘ಸ್ವರ‍್ಗ‘ ಎಂಬ ಸಂಸ್ಕ್ರುತ ಪದ ಕನ್ನಡದಲ್ಲಿ ‘ಸಗ್ಗ‘ ಎಂದು ಬಳಕೆಗೆ ಬಂದಿದೆ. ಸ್ವರ‍್ಗವೆಂಬುದು ಮಾನವನ ಮನದ ಕಲ್ಪನೆಯಲ್ಲಿ ಮೂಡಿರುವ ಒಂದು ಲೋಕ. ನರಲೋಕದಲ್ಲಿ ಪುಣ್ಯದ ಕೆಲಸವನ್ನು ಮಾಡಿ ಸಾವನ್ನಪ್ಪಿದ ವ್ಯಕ್ತಿಗಳಿಗೆ ಮಾತ್ರ ಸಗ್ಗದ ಬಾಗಿಲು ತೆರೆಯುತ್ತದೆ ಮತ್ತು ಸ್ವರ‍್ಗದಲ್ಲಿ ಎಲ್ಲಾ ಬಗೆಯ ಚೆಲುವು ಒಲವು ನಲಿವು ನೆಲೆಗೊಂಡಿದೆ ಎಂಬ ನಂಬಿಕೆಯು ಜನಮನದಲ್ಲಿದೆ. ಇಂತಹ ಕಲ್ಪಿತ ಸ್ವರ‍್ಗವನ್ನು ಸೇರುವುದಕ್ಕಾಗಿ ಹಿಂದಿನಿಂದಲೂ ಜನರು ಮಾಡಿಕೊಂಡು ಬರುತ್ತಿರುವ ಆಚರಣೆಗಳ ಪೊಳ್ಳುತನವನ್ನು ಗುರುತಿಸಿರುವ ಕವಿಯು ಅವನ್ನು ನಿರಾಕರಿಸಿ, ಕಣ್ಣ ಮುಂದಿನ ವಾಸ್ತವ ಲೋಕದಲ್ಲಿನ ನಿಸರ‍್ಗದ ಚೆಲುವಿನಲ್ಲಿ , ತಾಯಿಯು ಕಂದನನ್ನು ಮುದ್ದಿಸುವ ಒಲವಿನ ನಂಟಿನಲ್ಲಿ ಮತ್ತು ಬೇಸಾಯಗಾರರ ದುಡಿಮೆಯ ನೆಲೆಯಲ್ಲಿ ಸಗ್ಗದ ಬಾಗಿಲು ತೆರೆದುಕೊಂಡಿದೆಯೆಂದು ಹೇಳಿದ್ದಾರೆ.

( ಬಾಗಿಲು=ಕದ/ಪ್ರವೇಶ ದ್ವಾರ; ಎಲ್ಲಿ+ಇಹುದು+ಅಣ್ಣಾ; ಎಲ್ಲಿ=ಯಾವ ಕಡೆ; ಇಹುದು=ಇರುವುದು; ಅಣ್ಣ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ನುಗ್ಗಿದೆನ್+ಎಲ್ಲಿಯು; ನುಗ್ಗು=ವ್ಯಕ್ತಿಯು ಇತರರನ್ನು ಹಿಂದಕ್ಕೆ ಇಲ್ಲವೇ ಪಕ್ಕಕ್ಕೆ ತಳ್ಳಿ , ಆತುರಾತುರದಿಂದ ತಾನು ಮುಂದಕ್ಕೆ ಹೋಗುವುದು; ಎಲ್ಲಿಯು=ಯಾವ ಕಡೆಯಲ್ಲಿಯೂ; ಸಿಗಲಿಲ್ಲ+ಅಣ್ಣಾ; ಸಿಗು=ದೊರಕು; ಸಿಗಲಿಲ್ಲ=ದೊರಕಲಿಲ್ಲ/ಕಾಣಲಿಲ್ಲ;

ಕಾಶಿ=ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಜಿಲ್ಲೆಯಲ್ಲಿ ಗಂಗಾ ನದಿಯ ತಟದಲ್ಲಿರುವ ಒಂದು ಪಟ್ಟಣ. ಈ ಪಟ್ಟಣಕ್ಕೆ ವಾರಣಾಸಿ/ಬನಾರಸ್/ಕಾಶಿ ಎಂಬ ಮೂರು ಬಗೆಯ ಹೆಸರುಗಳಿವೆ. ಇಲ್ಲಿರುವ ಶಿವಲಿಂಗವನ್ನು ವಿಶ್ವನಾತ ಎಂದು ಕರೆಯುತ್ತಾರೆ. ಶಿವಲಿಂಗದ ದರ‍್ಶನವನ್ನು ಪಡೆಯುವ ವ್ಯಕ್ತಿಗೆ ಪುಣ್ಯ ದೊರೆಯುವುದೆಂದು, ಕಾಶಿಯಲ್ಲಿ ಸತ್ತರೆ ಸ್ವರ‍್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ;

ಅಲ್ಲಿ+ಇಲ್ಲ+ಅಣ್ಣಾ; ಮುಳುಗು=ತಲೆಯನ್ನು ನೀರಿನಲ್ಲಿ ಅದ್ದಿ ಸ್ನಾನವನ್ನು ಮಾಡುವುದು; ಗಂಗೆ+ಒಳ್+ಅಲ್ಲಿ+ಇಲ್ಲ+ಅಣ್ಣಾ; ಗಂಗೆ=ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರ ಇಂಡಿಯಾದ ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ಒಂದು ನದಿ. ಈ ನದಿಯಲ್ಲಿ ಮಿಂದೆದ್ದರೆ ಇಲ್ಲವೇ ಇದರ ನೀರನ್ನು ಕುಡಿದರೆ ವ್ಯಕ್ತಿಗೆ ಒಳಿತಾಗುವುದೆಂಬ ನಂಬಿಕೆಯು ಜನಮನದಲ್ಲಿದೆ;

ಘಣಘಣ ಘಣಘಣ=ಗಂಟೆಯನ್ನು ಬಾರಿಸಿದಾಗ ಉಂಟಾಗುವ ದನಿಯನ್ನು ಸೂಚಿಸುವ ಅನುಕರಣ ಪದ; ಗಂಟೆ=ಕಂಚು, ಹಿತ್ತಾಳೆ, ತಾಮ್ರ ಮುಂತಾದ ಲೋಹಗಳಿಂದ ಮಾಡಿರುವ ಒಂದು ಉಪಕರಣ; ಬಾರಿಸು=ಗಂಟೆಯನ್ನು ಹೊಡೆಯುವುದು; ಮಣಮಣ ಮಣಮಣ=ವ್ಯಕ್ತಿಯು ಎಡೆಬಿಡದೆ ಒಂದೇ ಸಮನೆ ಪದ ಇಲ್ಲವೇ ವಾಕ್ಯಗಳನ್ನು ಉಚ್ಚರಿಸುತ್ತಿರುವುದನ್ನು ಸೂಚಿಸುವ ಅನುಕರಣ ಶಬ್ದ; ಮಂತ್ರ=ದೇವರ ಹೆಸರು, ಶಕ್ತಿ ಮತ್ತು ಮಹಿಮೆಯನ್ನು ಕೊಂಡಾಡುವ ನುಡಿಗಳು. ಮಂತ್ರಗಳನ್ನು ಪದೇ ಪದೇ ಉಚ್ಚರಿಸುವುದರಿಂದ ವ್ಯಕ್ತಿಯು ದೇವರ ಅನುಗ್ರಹಕ್ಕೆ ಪಾತ್ರನಾಗಿ ಒಳಿತನ್ನು ಪಡೆಯುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ;

ಪೂಜೆ=ದೇವರನ್ನು ಒಲಿಸಿಕೊಳ್ಳಲೆಂದು ದೇವರ ವಿಗ್ರಹದ ಮುಂದೆ ಹೂಹಣ್ಣುಕಾಯಿಗಳನ್ನಿಟ್ಟು, ದೂಪದೀಪಗಳನ್ನು ಬೆಳಗಿಸುತ್ತ ಮಾಡುವ ಆಚರಣೆ; ಧೂಪ=ಸಾಂಬ್ರಾಣಿ ಹಾಲುಮಡ್ಡಿ ಮುಂತಾದ ವಸ್ತುಗಳು. ಇದನ್ನು ಕೆಂಡದ ಮೇಲೆ ಹಾಕಿದಾಗ ಸುವಾಸನೆಯಿಂದ ಕೂಡಿದ ಹೊಗೆಯು ಹೊರಹೊಮ್ಮುತ್ತದೆ;

ದಕ್ಷಿಣೆ+ಇತ್ತೆನು; ದಕ್ಷಿಣೆ=ಕಾಣಿಕೆ; ಇತ್ತೆನ್=ಕೊಟ್ಟೆನು; ಹಾರುವರ+ಆಳಿಗೆ; ಹಾರುವ=ಬ್ರಾಹ್ಮಣ; ಆಳಿ=ಗುಂಪು; ಪಂಡಿತವರ್ಯ=ಓದುಬರಹವನ್ನು ಚೆನ್ನಾಗಿ ಬಲ್ಲವನು; ಸೇವೆ=ಊಳಿಗ/ಚಾಕರಿ;

ವೇದ+ಅನ್+ಓದಿದೆ; ವೇದ=ಅರಿವು/ತಿಳಿವಳಿಕೆ. ಸಂಸ್ಕ್ರುತ ನುಡಿಯಲ್ಲಿ ‘ ರುಗ್ವೇದ-ಯಜುರ‍್ವೇದ-ಸಾಮವೇದ-ಅತರ‍್ವಣ ವೇದ ‘ ಎಂಬ ನಾಲ್ಕು ವೇದಗಳು ರಚನೆಗೊಂಡಿವೆ. ನಿಸರ‍್ಗದಲ್ಲಿನ ಬೂಮಿ-ಗಾಳಿ-ಬೆಂಕಿ-ನೀರು ಮುಂತಾದವನ್ನು ಒಬ್ಬೊಬ್ಬ ದೇವತೆಯೆಂದು ಕಲ್ಪಿಸಿಕೊಂಡು ಪೂಜಿಸುವ ಆಚರಣೆಯ ವಿವರಗಳು ವೇದಗಳಲ್ಲಿದೆ; ಅನ್=ಅನ್ನು; ತರ್ಕ=ವ್ಯಕ್ತಿಯು ತಾನು ಹೇಳುತ್ತಿರುವ ಸಂಗತಿಯೇ ಸರಿಯೆಂದು ವಾದವನ್ನು ಮಾಡುವುದು; ತಾಗು=ಹೊಡೆ/ಬಡಿ; ಅಲ್ಲಿ+ಇಹುದು+ಅಣ್ಣಾ; ನುಗ್ಗಿದರೆ+ಅಲ್ಲೇ; ತೆರೆಯುವುದು+ಅಣ್ಣಾ; ತೆರೆ=ತೆಗೆ/ಬಿಚ್ಚು/ಕಾಣು;

ಟುವ್ವಿ+ಒಳ್+ಅವಿತು+ಇದೆ+ಅಣ್ಣಾ; ಹಕ್ಕಿಯ ಟುವ್ವಿ=ಹಕ್ಕಿಯ ಕೂಗು/ದನಿ; ಅವಿ=ಅಡಗು/ಬಚ್ಚಿಟ್ಟುಕೊ; ಅವಿತಿದೆ=ನೆಲೆಸಿದೆ; ಹಕ್ಕಿಯ ಟುವ್ವಿಯೊಳವಿತಿದೆ=ಹಕ್ಕಿಯ ಕೊರಳೊಳಗಿಂದ ಹೊರಹೊಮ್ಮುತ್ತಿರುವ ಇಂಪಾದ ದನಿಯಲ್ಲಿ ಸಗ್ಗ ನೆಲೆಸಿದೆ;

ಬಣ್ಣ+ಒಳ್+ಅಡಗಿದೆ+ಅಣ್ಣಾ; ಬಣ್ಣ=ರಂಗು/ಹೊಳಪು; ಅಡಗು=ನೆಲೆಸು; ಹೂವಿನ ಬಣ್ಣದೊಳಡಗಿದೆ=ಬಗೆಬಗೆಯ ಬಣ್ಣಗಳಿಂದ ಕಂಗೊಳಿಸುತ್ತಿರುವ ಹೂವಿನ ದಳಗಳಲ್ಲಿ ಸಗ್ಗ ನೆಲೆಸಿದೆ;

ದುಡಿ=ಕೆಲಸ ಮಾಡು; ನೇಗಿಲ್+ಒಳ್+ಅಡಗಿದೆ; ನೇಗಿಲು=ಮಣ್ಣನ್ನು ಮೆತುಗೊಳಸಿ ಬೀಜವನ್ನು ಬಿತ್ತಲು ಮತ್ತು ಪಯಿರನ್ನು ನೆಡಲು ಹದಗೊಳಿಸುವುದಕ್ಕಾಗಿ ಬೂಮಿಯನ್ನು ಉಳುವ ಉಪಕರಣ; ದುಡಿಯುವ ರೈತನ ನೇಗಿಲೊಳಡಗಿದೆ=ಜೀವಿಗಳಿಗೆ ಅನ್ನವನ್ನು ನೀಡುವ ಬೇಸಾಯಗಾರನ ದುಡಿಮೆಯಲ್ಲಿ ಸಗ್ಗ ನೆಲೆಸಿದೆ; ಕಡಿ=ಕತ್ತರಿಸು/ಸೀಳು; ಕೂಲಿ=ಬೇಸಾಯಗಾರನ ಜತೆಯಲ್ಲಿ ದುಡಿಮೆಯನ್ನು ಮಾಡುವವನು; ಕತ್ತಿ+ಒಳ್+ಅಡಗಿದೆ; ಕತ್ತಿ=ಹರಿತವಾದ ಮೊನೆಯುಳ್ಳ ಒಂದು ಹತಾರ;

ಕಡಿಯುವ ಕೂಲಿಯ ಕತ್ತಿಯೊಳಡಗಿದೆ=ಬೀಜವನ್ನು ಬಿತ್ತಿ ಇಲ್ಲವೇ ಪಯಿರನ್ನು ನಾಟಿ ಮಾಡಿ ಬೆಳೆಯನ್ನು ತೆಗೆಯುವ ತನಕ ಬೇಸಾಯಗಾರನ ಜತೆಜತೆಯಲ್ಲಿಯೇ ಹತಾರಗಳನ್ನು ಹಿಡಿದು ಹತ್ತಾರು ಬಗೆಯ ದುಡಿಮೆಯಲ್ಲಿ ತೊಡಗುವ ಕೂಲಿಯವನ ಪರಿಶ್ರಮದಲ್ಲಿ ಸಗ್ಗ ನೆಲೆಸಿದೆ;

ನೇಗಿಲ ಗೆರೆ=ನೇಗಿಲಿನಿಂದ ಬೂಮಿಯನ್ನು ಉಳುವಾಗ ಕಾಣುವ ಮಣ್ಣಿನ ಗೆರೆಗಳು; ಹಾದಿ=ದಾರಿ; ನೇಗಿಲ ಗೆರೆಯೇ ಸಗ್ಗದ ಹಾದಿ=ಜನಸಮುದಾಯದ ಹಸಿವು ತಣಿದು ನೆಮ್ಮದಿಯು ದೊರೆಯುವಂತೆ ಮಾಡುವ ಬೇಸಾಯಗಾರನ ದುಡಿಮೆಯೇ ಸಗ್ಗದ ಹಾದಿಯಾಗಿದೆ; ಕರ್ಮ=ಕೆಲಸ; ಬಾಗಿಲಿಗೆ+ಒಯ್ಯುವ; ಒಯ್ಯು=ತೆಗೆದುಕೊಂಡು ಹೋಗು; ಬೀದಿ=ದಾರಿ; ಕರ್ಮವೆ ಬಾಗಿಲಿಗೊಯ್ಯುವ ಬೀದಿ=ದುಡಿಮೆಯಿಂದಲೇ ಜನಸಮುದಾಯದ ಬದುಕು ನೆಮ್ಮದಿಯ ನೆಲೆಯತ್ತ ಸಾಗುತ್ತದೆ;

ಹಕ್ಕಿಗಳ್+ಉಲಿಯಲು; ಉಲಿ=ಕೂಗು/ದನಿ ಮಾಡು; ಹೂವುಗಳ್+ಅರಳಲು; ಅರಳು=ಹೂವಿನ ದಳಗಳು ಬಿರಿಯುವುದು; ಕಂದ=ಮಗು/ಕೂಸು; ಮುದ್ದಿಸು=ಒಲವಿನಿಂದ ಮಯ್ಯನ್ನು ನೇವರಿಸುವುದು/ತಬ್ಬಿಕೊಳ್ಳುವುದು; ನಲಿ=ಆನಂದವನ್ನು ಪಡು; ತಾಯಿಯು ಕಂದನ ಮುದ್ದಿಸಿ ನಲಿಯಲು=ಹೆತ್ತ ಕಂದನೊಡನೆ ತಾಯಿಯು ಹೊಂದುವ ಒಲವು ವ್ಯಕ್ತಿಗಳ ನಡುವಣ ನಂಟಿನಿಂದ ದೊರೆಯುವ ಆನಂದವನ್ನು ಸೂಚಿಸುತ್ತದೆ;

ಬರೆಯಲು ವೇದವ ರೈತನ ನೇಗಿಲು=ಬೇಸಾಯಗಾರನ ನೇಗಿಲಿನ ಉಳುಮೆಯಿಂದ ಹುಟ್ಟುವಳಿಯಾಗುವ ಅನ್ನವೇ ಜನಸಮುದಾಯದ ಎಲ್ಲ ಬಗೆಯ ಓದು ಬರಹ ಮತ್ತು ಅರಿವಿಗೆ ಮೊದಲ ಆಸರೆಯಾಗಿದೆ; ತೆರೆವುದು=ಮುಚ್ಚಿದ್ದ ಬಾಗಿಲು ತೆರೆದುಕೊಳ್ಳುವುದು;

ತೆರೆವುದು ದಿನದಿನ ಸಗ್ಗದ ಬಾಗಿಲು= ಸ್ವರ‍್ಗವೆಂಬುದು ಬೇರೆಲ್ಲೋ ಇಲ್ಲ. ಅದು ಜನಸಮುದಾಯದ ಕಣ್ಣ ಮುಂದಿನ ಜಗತ್ತಿನಲ್ಲಿಯೇ ಇದೆ. ನಿತ್ಯವೂ ಹೊಚ್ಚ ಹೊಸತಾಗಿ ಮೂಡಿ ಕಂಗೊಳಿಸುತ್ತಿರುವ ನಿಸರ‍್ಗದ ಚೆಲುವಿನಲ್ಲಿ, ವ್ಯಕ್ತಿಗಳ ನಡುವಣ ಒಲವಿನ ನಂಟಿನಲ್ಲಿ ಮತ್ತು ಬೇಸಾಯಗಾರರ ದುಡಿಮೆಯಲ್ಲಿ ನೆಲೆಗೊಂಡಿದೆ.)

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ. ಎಲ್ಲ ಕಾಲಕ್ಕೂ ಪ್ರಸ್ತುತ.

ಅನಿಸಿಕೆ ಬರೆಯಿರಿ: