ಬಿಸಿ ಬಿಸಿ ಕಡಲೆಪುರಿ
ಕಡಲೆಪುರಿ ಅತವಾ ಮಂಡಕ್ಕಿ ಯಾರಿಗೆ ಗೊತ್ತಿಲ್ಲ ಹೇಳಿ, ಬಲು ಹೆಸರುವಾಸಿ ಈ ಕಡಲೆಪುರಿ. ಜಾತ್ರೆಗಳಿಗೆ ಹೋಗಿ ಹಿಂದಿರುಗುವಾಗ ತಪ್ಪದೆ ಕೊಂಡುಕೊಳ್ಳುವ ಪದಾರ್ತ ಎಂದರೆ ಅದು ಕಡಲೆಪುರಿ. ಬತ್ತವನ್ನು ಕಬ್ಬಿಣದ ಬಾಣಲೆಯಲ್ಲಿ ಹೆಚ್ಚಿನ ತಾಪಮಾನಕ್ಕೆ ಬಿಸಿಮಾಡಿದ ಮರಳಿನ ಜೊತೆ ಸೇರಿಸಿ ಕಡಲೆಪುರಿ ತಯಾರಿಸುತ್ತಾರೆ. ತಾಪಮಾನವನ್ನು ಜಾಸ್ತಿ ಮಾಡಿದಾಗ ದಾನ್ಯ ಉಬ್ಬಿಕೊಳ್ಳುತ್ತದೆ ಮತ್ತು ಮ್ರುದುವಾದ ಬಿಳಿ ಉತ್ಪನ್ನವಾಗಿ ಸಿಡಿಯುತ್ತದೆ. ಯಾವುದೇ ರಾಸಾಯನಿಕ ಪ್ರಕ್ರಿಯೆಗಳಿಲ್ಲದೆ ಮಾಡುವ ಕಡಲೆಪುರಿ ನೋಡಲು ಬಿಳಿ ಬಣ್ಣ, ತುಸು ಅಂಡಾಕಾರಕ್ಕೆ ಬರುತ್ತದೆ. ನಂತರ ಮರಳು ಮತ್ತು ಹೊಟ್ಟನ್ನು ಜರಡಿ ಮಾಡಿದರೆ ಕೊನೆಗೆ ಸಿಗುವುದೇ ಬಿಸಿ ಬಿಸಿ ಕಡಲೆಪುರಿ. ಉನ್ನತ ಮಟ್ಟದ ಸಂಸ್ಕರಣೆ ಇರದ ಕಾರಣ ಪೌಶ್ಟಿಕಾಂಶಗಳು ಹೇರಳವಾಗಿ ದೊರೆಯುತ್ತವೆ.
ಕೇವಲ ಕಡಲೆಪುರಿ ತಿಂದರೆ ಅದು ಅಶ್ಟಾಗಿ ರುಚಿಸುವುದಿಲ್ಲ, ಕಡಲೆಪುರಿಯ ಜೊತೆ ಹಲವು ಪದಾರ್ತಗಳನ್ನು ಸೇರಿಸಿ ತಿಂದರೆ ಚೆನ್ನಾಗಿರುತ್ತದೆ. ಕಡಲೆಪುರಿಯಿಂದ ನೂರಾರು ತರಹದ ಆಹಾರ ಪದಾರ್ತಗಳನ್ನು ತಯಾರು ಮಾಡುತ್ತಾರೆ. ಕಡಲೆಪುರಿ ಜೊತೆಗೆ ಬಿಸಿಮಾಡಿ ಕರಗಿಸಿದ ಬೆಲ್ಲವನ್ನು ಸೇರಿಸಿ ಪುರಿ ಉಂಡೆ ಮಾಡಿ ನಾವು ಚಿಕ್ಕವರಿದ್ದಾಗ ತಿನ್ನುತ್ತಿದ್ದೆವು. ರಸ್ತೆ ಬದಿಯ ಚುರುಮುರಿ ಎಲ್ಲರಿಗೂ ಅಚ್ಚುಮೆಚ್ಚು ಅಲ್ಲವೇ? ಮನೆ ಮಂದಿ, ಸ್ನೇಹಿತರು ಒಟ್ಟಿಗೆ ಕೂತು ಹರಟಲು ಇದಕ್ಕಿಂತ ಒಳ್ಳೆಯ ತಿಂಡಿ ಮತ್ತೊಂದಿಲ್ಲ. ದೂರದ ಕಾಲುನಡಿಗೆ ಪಯಣಕ್ಕೆ ಕಡಲೆಪುರಿ ಆಪ್ತಮಿತ್ರ. ಕಡಲೆಪುರಿ, ಕಾರಬೂಂದಿಯ ಕಾಂಬಿನೇಶನ್ ಅತ್ಯದ್ಬುತ. ಕಡಲೆಪುರಿಯನ್ನು ಹುರಿದು, ಕಾರ ಸೇರಿಸಿ ಮಂಡಕ್ಕಿ ಮಾಡಿ ಸಂಜೆಯ ಲಗು ಉಪಹಾರವಾಗಿ ಬಳಸುವುದು ವಾಡಿಕೆ. ಉತ್ತರ ಕರ್ನಾಟಕದ ಕಡೆ ಕಡಲೆಪುರಿಯಿಂದ ಮಾಡುವ ಸೂಸಲ, ಗಿರ್ಮಿಟ್ ಬಹಳ ಹೆಸರುವಾಸಿ. ಪ್ರದೇಶಕ್ಕೆ ಅನುಗುಣವಾಗಿ ಕಡಲೆಪುರಿ ತಯಾರಿಕೆ ಮತ್ತು ಬಳಕೆ ಬದಲಾಗುವುದನ್ನು ಕಾಣಬಹುದು.
ಕ್ರುಶಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಆಳುಗಳಿಗೆ ಜಮೀನಿನ ಮಾಲೀಕರು ತಿನ್ನಲು ಕಾರ-ಕಡಲೆಪುರಿ ನೀಡುವುದು ಅಲಿಕಿತ ನಿಯಮ. ಇದು ಹಿಂದಿನ ಕಾಲದಿಂದಲೂ ರೂಡಿಸಿಕೊಂಡು ಬಂದಿರುವ ಅಬ್ಯಾಸ. ಇದಕ್ಕೆ ವೈಗ್ನಾನಿಕ ಕಾರಣವೂ ಇದೆ. ಕಡಲೆಪುರಿ ಕಾರ್ಬೋಹೈಡ್ರೇಟ್ಸ್ ನಿಂದ ಕೂಡಿದ ಆಹಾರ, ಗದ್ದೆ ಮತ್ತು ಹೊಲಗಳಲ್ಲಿ ದೇಹವನ್ನು ದಂಡಿಸಿ ದುಡಿಯುವ ಕಾರ್ಮಿಕರಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಕಡಲೆಪುರಿ ಸೇವನೆ ಶಕ್ತಿ ತುಂಬುವುದರ ಜೊತೆಗೆ ದೇಹವನ್ನು ಹಗುರ ಮಾಡುತ್ತದೆ. ಮುಕ್ಯವಾಗಿ, ಕಡಲೆಪುರಿ ಬಹಳ ಕಮ್ಮಿ ದರದಲ್ಲಿ ಸಿಗುವ ಆಹಾರ ಪದಾರ್ತ. ಕಡಲೆಪುರಿ ಪೌಶ್ಟಿಕಾಂಶಗಳಿಂದ ಶ್ರೀಮಂತವಾಗಿದೆ. ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶ ಹೊಂದಿರುವ ಕಡಲೆಪುರಿ ಆರೋಗ್ಯಕರ ಆಹಾರ ಪದಾರ್ತಗಳಲ್ಲಿ ಶ್ರೇಶ್ಟ ಎನ್ನಬಹುದು. ಹಗುರವಾದ ಈ ಕಡಲೆಪುರಿಯಲ್ಲಿ ನಾರಿನಂಶ ಅದಿಕವಾಗಿರುವ ಕಾರಣ ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಲಬವಾಗುತ್ತದೆ, ಇದರಿಂದ ಮಲಬದ್ದತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಕರುಳಿನ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕಡಲೆಪುರಿ ಸಹಕಾರಿ.
ಕಡಲೆಪುರಿಯಲ್ಲಿ ವಿಟಮಿನ್ ಡಿ ಮತ್ತು ಬಿ, ಕಾಂಪ್ಲೆಕ್ಸ್ ವಿಟಮಿನ್ ಗಳಾದ ರೈಬೋಪ್ಲೇವಿನ್ ಮತ್ತು ತಯಾಮಿನ್ ಅತ್ಯದಿಕವಾಗಿವೆ. ಕಡಲೆಪುರಿಯಲ್ಲಿರುವ ಶಕ್ತಿಯುತವಾದ ಆ್ಯಂಟಿ ಆಕ್ಸಿಡೆಂಟ್ಸ್ಗಳು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿ ಸೋಂಕು ಬಾರದಂತೆ ತಡೆಯುತ್ತದೆ. ಕಡಲೆಪುರಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಹೆಚ್ಚು, ಇದರಿಂದ ದೇಹದ ಮೂಳೆಗಳ ಮತ್ತು ಹಲ್ಲಿನ ಆರೋಗ್ಯ ಹೆಚ್ಚುತ್ತದೆ. ಮೂಳೆಗಳ ಬಲಹೀನತೆಯಿಂದ ಉಂಟಾಗುವ ಆಸ್ಟಿಯೋಪೋರೋಸಿಸ್ ನಂತಹ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಕಡಲೆಪುರಿಗೆ ಇದೆ ಎಂಬುದು ವೈಗ್ನಾನಿಕ ಲೇಕನಗಳಿಂದ ತಿಳಿದುಬಂದಿದೆ. ಕಡಲೆಪುರಿಯನ್ನು ಸೇವಿಸಿದರೆ ಚರ್ಮ ಹುರುಪಿನಿಂದ ಹೊಳೆಯುತ್ತದೆ. ಕಾರ್ಬೋಹೈಡ್ರೇಟ್ಸ್ ಅಂಶ ಹೆಚ್ಚಿರುವ ಕಡಲೆಪುರಿಯನ್ನು ಸಕ್ಕರೆ ಕಾಯಿಲೆ ಇರುವವರು ಮಿತವಾಗಿ ಸೇವಿಸಿದರೆ ಒಳ್ಳೆಯದು.
ಮನುಶ್ಯನ ಹಸಿವು ನೀಗಿಸುವ ಕಡಲೆಪುರಿ ಸಾವಿನಲ್ಲೂ ಕೂಡ ಜೊತೆಯಾಗುತ್ತದೆ. ಸತ್ತಾಗ ದಾನ್ಯದ ರೂಪವಾದ ಕಡಲೆಪುರಿಯನ್ನು ಬಾಯಿಗೆ ಹಾಕುವುದು ರೂಡಿ. ಹೆಣವನ್ನು ಮೆರವಣಿಗೆ ಮಾಡುವಾಗ ಕಡಲೆಪುರಿಯನ್ನು ದಾರಿಯುದ್ದಕ್ಕೂ ಚೆಲ್ಲುತ್ತಾರೆ. ಮನುಶ್ಯ ಸತ್ತಾಗ ಯಾರು ಜೊತೆಗೆ ಬರದಿದ್ದರೂ ಕೊನೇ ಪಕ್ಶ ದಾನ್ಯವಾದರೂ ಸಮಾದಿಯ ತನಕ ಬರುವುದಲ್ಲದೆ ಮನುಶ್ಯನೊಂದಿಗೆ ಮಣ್ಣಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಲೆಪುರಿ ಎಲ್ಲರ ಕೈಗೆಟಕುವ, ಪೌಶ್ಟಿಕವಾಗಿ ಎಲ್ಲರ ಮೈಮನ ತುಂಬುವ ಒಂದೊಳ್ಳೆ ಆಹಾರ ಪದಾರ್ತ.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು