ಎಲ್ಲ ಕಾಲಕ್ಕೂ ಸಲ್ಲುವ ಸೈಕಲ್
ಸೈಕಲ್ ಸವಾರಿಯೆಂದರೆ ಅದೇ ಒಂದು ರಾಜ ಟೀವಿ. ಹೊಗೆ ಉಗುಳದ, ಪೆಟ್ರೋಲ್ ಡೀಸೆಲ್ಲಿನ ಹಂಗಿಲ್ಲದ ಸರ‍್ವಕಾಲಕ್ಕೂ ಸಲ್ಲುವ ಪರಿಸರ ಪ್ರೇಮಿ ವಾಹನ ಸೈಕಲ್.
ನಾವು ಸುಮಾರು ಏಳೆಂಟು ವರ‍್ಶದವರಿರುವಾಗ ಸೈಕಲ್ ಹೊಡೆಯಲು ಕಲಿಯುವ ಉಮೇದು. ನಮ್ಮ ಮನೆಗೆ ಯಾರಾದರೂ ನೆಂಟರಿಶ್ಟರು ಸೈಕಲ್ ಏರಿ ಬಂದರೆ ಅವರು ಮನೆಯೊಳಗೆ ಮಾತಾನಾಡುವುದರಲ್ಲಿ ಮಗ್ನರಾದಾಗ, ನಾನು, ನನ್ನ ಸೋದರಮಾವನ ಮಗ ಸುರೇಶ ಮೆತ್ತಗೆ ಸೈಕಲ್ ದೂಡಿಕೊಂಡು ಹೋಗಿ, ಒಳ ಪೆಡಲು ಹೊಡೆಯುವ ಸಾಹಸ ಮಾಡುತಿದ್ದವು. ನಮ್ಮ ಮನೆಯ ಬಳಿಯ ಇಳಿಜಾರಿನಿಂದ ಸೈಕಲ್ ಹತ್ತಿ ಹೊಡೆಯುವ ಸಾಹಸ ಮಾಡಿ ಎಶ್ಟೋ ಸಾರಿ ಕೈಕಾಲಿಗೆ ಗಾಯ ಮಾಡಿಕೊಂಡಿದ್ದೆವು. ಕೆಲವೊಮ್ಮೆ ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮಾವಿನ ಮರಕ್ಕೆ ಗುದ್ದಿ ಸೈಕಲ್ಲಿನ ಶೇಪ್ ತೆಗೆದಿದ್ದೆವು. ಆಗ ಎಶ್ಟೋ ಬಾರಿ ಅಪ್ಪ ಅಮ್ಮನಿಂದ ಬೈಗುಳ ಏಟು ಬಿದ್ದಿದ್ದೂ ಇದೆ.
ಸ್ವಲ್ಪ ಸ್ವಲ್ಪ ಸೈಕಲ್ಲಿನ ಒಳ ಪೆಡಲು ತುಳಿಯುವ ಬ್ಯಾಲೆನ್ಸ್ ಸಿಕ್ಕಾಗ, ಮಾಮೂ ಸೈಕಲ್ ಶಾಪಿನಿಂದ ಗಂಟೆಗೆ ಇಪ್ಪತ್ತೈದು ಪೈಸೆ ಬಾಡಿಗೆಯಂತೆ ಸೈಕಲ್ ತಂದು ಸೈಕಲ್ ಸೀಟು ಏರಿ ತುಳಿಯುವ ಸಾಹಸ ಮಾಡತೊಡಗಿದೆವು. ಆಟದ ಮೈದಾನದಲ್ಲಿ ನಾನು ಸೈಕಲ್ ಏರಿದಂತೆ ಸುರೇಶ ಹಿಂದಿನಿಂದ ಬ್ಯಾಲೆನ್ಸ್ ತಪ್ಪಿ ಬೀಳದಂತೆ ಸೀಟು ಹ್ಯಾಂಡಲ್ ಹಿಡಿದುಕೊಳ್ಳುತಿದ್ದ. ಕೆಲವೊಮ್ಮೆ ಬ್ಯಾಲೆನ್ಸ್ ಆಗದೆ ಸುರೇಶನ ಕಡೆಗೆ ಸೈಕಲ್ ವಾಲಿ ಇಬ್ಬರೂ ಸೇರಿ ಬಿದ್ದು ಮೈ ಕೈ ಎಲ್ಲ ಮಣ್ಣು ಮಾಡಿಕೊಂಡಿದ್ದು ಇದೆ. ಹಂಗೂ ಹಿಂಗೂ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಸೈಕಲ್ ಹೊಡೆಯಲು ಕಲಿತಾಗ ನಮಗೆ ರಾಜ ಟೀವಿ ಬಂದಿತ್ತು.
ಸಕಾಲಕ್ಕೆ ಸೈಕಲ್ ಹೊಡೆಯಲು ಕಲಿತಿದ್ದು ಬಾಳಲ್ಲಿ ನಮಗೆ ದೊಡ್ಡ ಪರಿವರ‍್ತನೆ ತಂದಿತ್ತು. ನಮ್ಮ ಮನೆಯಲ್ಲಿಯೇ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಕೊಂಡಾಗ ನಮ್ಮ ಮನೆಗೂ ಪೇಟೆಗೂ ಇದ್ದ ಮೂರು ಮೈಲಿ ಅಂತರ ಕಡಿಮೆ ಆದಂತಿತ್ತು ಮತ್ತು ಸಮಯ ಬಹಳ ಉಳಿಸಿತ್ತು. ಜೊತೆಗೆ ಸೈಕಲ್ ಹೊಡೆಯುವ ನಮಗೆ ಗೊತ್ತಿಲ್ಲದೆಯೇ ದೇಹಕ್ಕೆ ವ್ಯಾಯಮ ಮಾಡಿಸಿ ನಮಗೆ ಎಲ್ಲಿಯೂ ಹೆಚ್ಚು ಬೊಜ್ಜು ಬೆಳೆಯದಂತೆ ರಕ್ಶಿಸಿತ್ತು. ಊಟ ಚೆನ್ನಾಗಿ ಕತ್ತರಿಸಿ ಪಚನ ಕ್ರಿಯೆಗೂ ಸೈಕಲ್ ಸವಾರಿ ನಮಗೆ ಸಹಕಾರಿಯಾಗಿತ್ತು. ಒಟ್ಟಾರೆ ಸೈಕಲ್ ನಮ್ಮ ಆರೋಗ್ಯ ರಕ್ಶಕನಾಗಿ ನಮ್ಮ ಸಮಯ ಉಳಿಸಲೂ ಕೆಲಸ ನಿರ‍್ವಹಿಸಿದ್ದರಿಂದ ನಮ್ಮ ಸೈಕಲ್ ನಮಗೆ ಆಪ್ತ ಮಿತ್ರನೂ, ಆಪತ್ಬಾಂದವನೂ ಆಗಿದ್ದು ನಮಗೆ ಹೆಮ್ಮೆ ತರುತ್ತಿತ್ತು.
ನಾವು ಶಾಲೆಗೆ ಹೋಗುತಿದ್ದ ದಿನಗಳಲ್ಲಿ ನಮ್ಮೂರಿನ ಸಾರ‍್ವಜನಿಕ ಗ್ರೌಂಡಿನಲ್ಲಿ ಸೈಕಲ್ ಸರ‍್ಕಸ್ ನವರು ಟಿಕಾಣಿ ಹೂಡಿ ತರಾವರಿ ಮನರಂಜನೆ ಕೊಡುತಿದ್ದರು. ಒಬ್ಬನಂತೂ ಸರ‍್ಕಸ್ ಟಿಕಾಣಿ ಹೂಡಿದ ಅಶ್ಟೂ ದಿನ ನೆಲಕ್ಕೆ ಕಾಲೂರದೆ ಸೈಕಲ್ ಮೇಲೆ ವ್ರತ ಮಾಡುವವರಂತೆ ನಿಂತಿರುತ್ತಿದ್ದ. ಅವನ ವ್ರತದ ದಿನಗಳಲ್ಲಿ ಅನ್ನ ಆಹಾರ ನೀರು ಸೇವನೆ ನಿದ್ರೆ ಎಲ್ಲ ಸೈಕಲ್ ಮೇಲೆಯೇ. ಸಾಯಂಕಾಲವಾಗುತಿದ್ದಂತೆ ಸೈಕಲ್ ಮೇಲೆ ತರಾವರಿ ಸರ‍್ಕಸ್ ಮಾಡುತ್ತ, ಹೊಟ್ಟೆಯಿಂದ ಟ್ಯೂಬ್ ಲೈಟ್ ಒಡೆಯುವ ಆ ವ್ಯಕ್ತಿ ನಮಗೆ ದೊಡ್ಡ ಹೀರೋನಂತೆ ಕಾಣುತಿದ್ದ. ಆ ಸೈಕಲ್ಲಿಗೆ ಬ್ರೇಕು ಇಲ್ಲ ಮಡ್ಗಾರ‍್ಡ್ ಇಲ್ಲ. ಎರಡು ಚಕ್ರ, ಚಾಸಿ ಬಿಟ್ಟರೆ ಬೇರೇನು ಇಲ್ಲದ ಸರ‍್ಕಸ್ಸಿನವನ ಸೈಕಲ್ ಮನುಶ್ಯನ ಅಸ್ತಿಪಂಜರದಂತೆ ಕಾಣುತ್ತಿತ್ತು. ಅಂದು ಇಂತಹ ಬಡಪಾಯಿಗಳ ಹೊಟ್ಟೆ ಹೊರೆವ ಸಾದನವಾಗಿದ್ದ ಸೈಕಲ್ಲಿನ ಸಾರ‍್ತಕತೆ ಎದ್ದು ಕಾಣುತ್ತದೆ. ಇದೇ ಸೈಕಲ್ ಕಾಡಿನಿಂದ ಕಟ್ಟಿಗೆ ತಂದು ಮಾರುವವರಿಂದ ಹಿಡಿದು ತರಕಾರಿ, ಮೀನು, ಬೊಂಬಾಯಿ ಮಿಟಾಯಿ, ಬಲೂನು ಮುಂತಾದ ವಸ್ತುಗಳನ್ನು ಮಾರುವವರ ಅನದಿಕ್ರುತ ಅಂಗಡಿಯಂತಾಗಿ ವಾಣಿಜ್ಯದ ಅಬಿವ್ರುದ್ದಿಯಲ್ಲೂ ಸೈಕಲ್ ತನ್ನ ಪಾತ್ರ ಮೆರೆದಿದೆ.
ಇಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಲೀಟರಿಗೆ 100 ರೂಪಾಯಿ ಗಡಿ ದಾಟಲು ಹವಣಿಸುತ್ತಿರುವ ಸಂದರ‍್ಬದಲ್ಲಿ ಕೆಲವು ರಾಜಕಾರಣಿಗಳು, ಸೆಲೆಬ್ರಿಟಿಗಳು ಸೈಕಲ್ ಮೇಲೆ ಸವಾರಿ ಮಾಡುವ ಪೋಸ್ ಮಾದ್ಯಮಗಳಿಗೆ ನೀಡುತ್ತ ರಾಜಕೀಯಕ್ಕೂ ಬಳಸಿಕೊಳ್ಳುತಿದ್ದಾರೆ. ಒಂದೂಮ್ಮೆ ಬೂಮಿಯಲ್ಲಿ ಪೆಟ್ರೋಲ್ ಬರಿದಾಗಿ, ಮಳೆಯ ಕೊರತೆಯಿಂದ ನೀರಿಗೂ ತತ್ವಾರವಾಗಿ ಹೋದರೆ ಉಳ್ಳವರೂ ಸೈಕಲ್ ಕೊಂಡು ಓಡಾಡುವ ಪರಿಸ್ತಿತಿ ಬರಬಹುದು. ಆದರೆ ಸೈಕಲ್ ಎಂತಹದ್ದೆ ಐಶಾರಾಮಿಯಾಗಲಿ ಕೊಂಡವನು ಏದುಸಿರು ಬಿಟ್ಟು ತುಳಿಯಲೇಬೇಕು. ಅಕಸ್ಮಾತ್ ಸಿರಿವಂತರಿಗೆ ತುಳಿಯುವುದು ತ್ರಾಸದಾಯಕವೆಂದೆನಿಸಿದರೆ, ಸೈಕಲ್ ರಿಕ್ಶಾ ಮಾದರಿಯ ಸೈಕಲ್ ಕೊಂಡು ಕಾರಿಗೆ ಡ್ರೈವರನನ್ನು ನೇಮಿಸಿಕೊಳ್ಳುವಂತೆ ಪೆಡಲು ತುಳಿಯುವವನನ್ನು ನೇಮಿಸಿಕೊಂಡು ತಾವು ಕುಳಿತು ಹೋಗಬೇಕಾಗುತ್ತದೆಯೇನೋ!
ಒಟ್ಟಾರೆಯಾಗಿ ಸೈಕಲ್ ಎಂದರೇನೆ ಅದೊಂದು ಅದ್ಬುತ ಪ್ರಯಾಣದ ಸಾದನ. ಅತಿಯಾದ ಬೆಲೆ ತೆರಬೇಕಾಗಿಲ್ಲ, ಇದಕ್ಕೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ, ಹಾಗಾಗಿ ಪೆಟ್ರೋಲ್ ಡೀಸೆಲ್ ಎಶ್ಟೇ ದುಬಾರಿಯಾದರೂ ಸೈಕಲ್ಲಿಗೆ ಅದರ ಹಂಗಿಲ್ಲ. ವಿದ್ಯುತ್ತಿನ ಅಗತ್ಯವಿಲ್ಲ. ಅತಿಯಾದ ರಿಪೇರಿ ಮತ್ತಿತರ ಕರ‍್ಚುಗಳ ಕಿರಿಕಿರಿಯಿಲ್ಲ. ಓಡಿಸಲು ಲೈಸೆನ್ಸ್ ಬೇಕಾಗಿಲ್ಲ, ರಿಜಿಸ್ಟ್ರೇಶನ್, ಇನ್ಸೂರೆನ್ಸ್ ಅಗತ್ಯವಿಲ್ಲ. ಹೆಲ್ಮೆಟ್, ಎಮಿಶನ್ ಸರ‍್ಟಿಪಿಕೇಟಿನ ಅವಶ್ಯಕತೆಯೂ ಇಲ್ಲದೆ ಹೊಗೆ ಮುಕ್ತ, ಪರಿಸರ ಪ್ರೇಮಿ ಸೈಕಲ್ ಸರ‍್ವ ಕಾಲಕ್ಕೂ ಸಲ್ಲುವಂತಹದ್ದು.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು