ಯುವ ಪೀಳಿಗೆಗೊಂದು ಕಿವಿಮಾತು
ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟ ಹದಿಹರೆಯದ ಯುವಕ ಯುವತಿಯರಿಗೆ ಪಾದ ನೆಲ ಸ್ಪರ‍್ಶಿಸದೆ ಗಾಳಿಯಲ್ಲಿ ತೇಲುವ ಅನುಬವವಾಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಅತ್ಯುತ್ಸಾಹ ಮತ್ತು ಕುತೂಹಲ. ಯೌವ್ವನಕ್ಕೆ ಕಾಲಿಡುವ ಪ್ರತಿ ಹೆಣ್ಣಿರಲಿ, ಗಂಡಿರಲಿ ಅವರ ದೇಹ ರಚನೆಯಲ್ಲಿ ಬದಲಾವಣೆಯಾಗುತ್ತದೆ, ದ್ವನಿಯಲ್ಲಿ ಗಡುಸುತನ ಬರುತ್ತದೆ. ಸಹಜ ಕುತೂಹಲಗಳಿಗೆ ಮನಸ್ಸು ತೆರೆದುಕೊಳ್ಳುತ್ತದೆ. ಪರಸ್ಪರ ಗಂಡು ಹೆಣ್ಣು ದೇಹದ ಆಕರ‍್ಶಣೆಗೆ, ಸೌಂದರ‍್ಯಕ್ಕೆ ಮಾರು ಹೋಗುತ್ತಾರೆ. ಅದೇನೋ ತವಕ, ಹುಡುಗಾಟಗಳು! ಮನಸ್ಸು “ನಿಂತಲ್ಲಿ ನಿಲ್ಲಂಗಿಲ್ಲ…. ಕುಂತಲ್ಲಿ ಕೂರಂಗಿಲ್ಲ” ಎನ್ನುವಂತೆ ಈ ವಯಸ್ಸಲ್ಲಿ ಪ್ರೀತಿ ಪ್ರೇಮದ ಆಕರ‍್ಶಣೆಗೆ ಒಳಗಾಗುವುದು ಸಹಜ. ಕೆಲವೊಮ್ಮೆ ತಮ್ಮ ಪ್ರೀತಿ ಪ್ರೇಮದ ಪರಿಬಾಶೆಯಲ್ಲಿ ಮಿತಿ ಮೀರಿದ ಮನಸ್ಸುಗಳು ಮಾತನಾಡಲು ಶುರುವಿಟ್ಟುಕೊಂಡಾಗ ಪೋಶಕರಿಗೆ, ಹಿರಿಯರಿಗೆ ಕಗ್ಗಂಟಾಗಿ ತೋರುತ್ತಾರೆ.
ವಯೋಮಾನದ ಸಹಜ ಕುತೂಹಲಗಳಿಗೆ ಸ್ವಲ್ಪ ಸ್ಪಂದನೆ ಇರಲಿ. ಯೌವ್ವನದ ಜೀವನಕ್ಕೆ ಹುಡುಗಾಟ ಲವಲವಿಕೆ ಇರಲಿ. ಆದರೆ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಮನೋ ಸ್ತಿಮಿತದೊಂದಿಗೆ ಕುತೂಹಲ, ಹುಡುಗಾಟಗಳು ಒಂದು ಮಿತಿಯಲ್ಲಿ ಇರಬೇಕು. ಅತಿಯಾದರೆ ಅಮ್ರುತವೂ ವಿಶವಾಗುತ್ತದೆ. ಹದಿಹರೆಯದ ಮನಸ್ಸು ಹೇಗೆ ಹುಡುಗಾಟಗಳಿಗೆ ತೆರೆದುಕೊಳ್ಳುತ್ತದೋ ಹಾಗೇಯೇ ಜವಾಬ್ದಾರಿಗಳನ್ನು ಅರಿತಿರಬೇಕು. ಈ ವಯಸ್ಸಿನಲ್ಲಿ ವಿದ್ಯಾರ‍್ಜನೆ ಒಂದು ಪ್ರಮುಕ ಗಟ್ಟ. ಕೇವಲ ಪ್ರೀತಿ ಪ್ರೇಮಗಳ ಹುಚ್ಚಾಟದ ಅಲೆಯಲ್ಲಿ ಕೊಚ್ಚಿ ಹೋಗಿ, ತಮ್ಮ ಬವಿಶ್ಯತ್ತಿಗೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳಬಾರದು. ವಯೋ ಸಹಜ ಹುಡುಗಾಟಗಳನ್ನು ಒಂದು ಇತಿಮಿತಿಯಲ್ಲಿ ಇರಿಸಿಕೊಂಡು ನಮ್ಮ ಬವಿಶ್ಯವನ್ನು ಕಟ್ಟಿಕೊಡುವ ಓದಿನ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ‍್ಜನೆ ಮುಂದಿನ ಉಜ್ವಲ ಬವಿಶ್ಯತ್ತಿಗೆ ತಳಪಾಯ.
ಕೆಲವು ಹದಿಹರೆಯದ ಯುವಕ ಯುವತಿಯರು ಅಂಕೆಯಿಲ್ಲದೆ ಮೆರೆಯುತ್ತ ದುಶ್ಚಟಗಳ ದಾಸರಾಗುವುದು, ಅಪರಾದ ಲೋಕಕ್ಕೂ ಕಾಲಿಡುವುದು ಅವರ ತಪ್ಪು ಹೆಜ್ಜೆಗಳಿಂದಲೇ. ಇವರ ತಂದೆತಾಯಿ, ಪೋಶಕರು ಮಕ್ಕಳ ಬವ್ಯ ಬವಿಶ್ಯತ್ತಿಗೆ ಮೇಣದ ಬತ್ತಿಯಂತೆ ಉರಿದು ಮಕ್ಕಳಿಗೆ ಎಲ್ಲಾ ರೀತಿಯಲ್ಲಿ ನೆರವಾಗುತ್ತಿರುತ್ತಾರೆ. ಅವರ ಅಂತಿಮ ಗುರಿ ಒಂದೇ. ನಮ್ಮ ಮಗ/ಮಗಳು ಚೆನ್ನಾಗಿ ಓದಿ ಮಾಡಿ ಒಂದು ಉನ್ನತ ಜೀವನಕ್ಕೆ ಕಾಲಿಡಲಿ. ಇದರಿಂದ ಮಕ್ಕಳಿಗೂ ಸಾಕಿ ಸಲುಹಿದ ತಂದೆ-ತಾಯಿ, ಪೋಶಕರಿಗೂ ಒಂದು ಸಾರ‍್ತಕ ಮನೋಬಾವ ಉಂಟಾಗುತ್ತದೆ.
ಆದರೆ ಕೆಲವು ಮಕ್ಕಳು ಸಂಗದಿಂದ ಸನ್ಯಾಸಿ ಕೆಟ್ಟ ಎನ್ನುವ ಹಾಗೆ ಕೆಟ್ಟ ಜೊತೆಗಾರರಿಂದ ದೂಮಪಾನ, ಮದ್ಯಪಾನ, ಜೂಜು, ಮಾದಕ ದ್ರವ್ಯಗಳ ಸೇವನೆಯಂತಹ ವ್ಯಸನಗಳಿಗೆ ಬಲಿಯಾಗಿ, ತಂದೆ ತಾಯಿಯ ಹಣದ ಜೊತೆಗೆ ಅವರ ಮಾನ-ಮರ‍್ಯಾದೆ ಗೌರವಗಳನ್ನು ಮಣ್ಣು ಪಾಲು ಮಾಡಿ ಬಿಡುತ್ತಾರೆ. ಇಂತಹ ವ್ಯಸನದಿಂದ ಹೊರಬರದೆ ಹೋದರೆ ಮಾನಸಿಕ ಕಿನ್ನತೆಗೊಳಗಾಗಿ ಒಂದೊಮ್ಮೆ ಆತ್ಮಹತ್ಯೆಯಂತಹ ಅಪರಾದಗಳಿಗೆ ಶರಣಾಗಿ ಬಿಡುವ ಅಪಾಯವಿದೆ.
ತಂದೆ ತಾಯಿಯಾದವರು ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳ ಮೇಲೆ ಯಾವಾಗಲೂ ಕಣ್ಣಿಟ್ಟಿರಬೇಕು. ಆಗಾಗ್ಗೆ ಶಾಲಾ ಚಟುವಟಿಕೆ, ಓದಿನ ಬಗ್ಗೆ ಶಾಲೆಗಳಿಂದ ಮಾಹಿತಿ ಪಡೆಯುತ್ತಿರಬೇಕು. ಅವರ ಸ್ನೇಹಿತರು ಎಂತಹ ಗುಣ ಸ್ವಬಾವದವರು ಎಂಬುದರ ಬಗ್ಗೆ ಆಗಾಗ ಅವಲೋಕನ ಇರಬೇಕು. ಮಕ್ಕಳು ಅಂಕೆ ಮೀರಿ ವರ‍್ತಿಸುತಿದ್ದರೆ, ಅಸಹಜ ನಡುವಳಿಕೆಗಳು ಕಂಡರೆ ಸರಿಯಾದ ಸಮಯಕ್ಕೆ ಸೂಕ್ತ ಸಲಹೆ, ಮಾರ‍್ಗದರ‍್ಶನ, ತಿದ್ದುವಿಕೆ, ಬುದ್ದಿವಾದ ಬೇಕಾಗುತ್ತದೆ. ಇದರಿಂದಲೂ ಕೆಲವು ಮಕ್ಕಳು ಹದಿಹರೆಯದ ಹುಚ್ಚಾಟದಿಂದ ಸರಿದಾರಿಗೆ ಬರದಿದ್ದರೆ ಮಾನಸಿಕ ತಜ್ನರಿಂದ ಸೂಕ್ತ ಸಲಹೆ ಮಾರ‍್ಗದರ‍್ಶನ ಅವಶ್ಯಕವಾಗುತ್ತದೆ.
ಒಟ್ಟಾರೆಯಾಗಿ ಹದಿಹರೆಯದ ಮಕ್ಕಳು ತಮ್ಮ ಇತಿ-ಮಿತಿ ಮೀರಿ ನಡೆಯದೆ, ಒಳ್ಳೆಯ ಸ್ನೇಹಿತರು, ಒಳ್ಳೆಯ ಆಲೋಚನೆ, ಉತ್ತಮ ಅಬಿರುಚಿ, ಹವ್ಯಾಸ ರೂಡಿಸಿಕೊಂಡು ಉತ್ತಮ ಗುರಿ ಸಾದನೆಯೊಂದಿಗೆ ಮುಂದೆ ಸಾಗಬೇಕು. ಇದರ ಜೊತೆಗೆ ಪೋಶಕರ, ಹಿರಿಯರ ಸೂಕ್ತ ಸಲಹೆ ಮಾರ‍್ಗದರ‍್ಶನದಲ್ಲಿ ನಡೆಯಬೇಕು. ಇದರಿಂದ ಬವಿಶ್ಯ ಉಜ್ವಲವಾಗಿ ಅರಳಿ ಅದರ ಕಂಪು ಇಡಿ ವಿಶ್ವಕ್ಕೆ ಪಸರಿಸುತ್ತದೆ. ಮಕ್ಕಳು ದೇಶಕ್ಕೆ ಆಸ್ತಿಯಾಗಿ ಬೆಳೆಯುತ್ತಾರೆ.
(ಚಿತ್ರ ಸೆಲೆ: flickr.com)
ಇತ್ತೀಚಿನ ಅನಿಸಿಕೆಗಳು