ಕಾರೇಡಿ ಸಾರು
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಕಾರೇಡಿ – 1/2 ಕಿಲೋ
- ಈರುಳ್ಳಿ – 2 (ಚಿಕ್ಕ ಗಾತ್ರ)
- ಅರಿಶಿಣ – 1/2 ಚಮಚ
- ಹಸಿ ಮೆಣಸಿನ ಕಾಯಿ – 1 (ಒಗ್ಗರೆಣೆಗೆ)
- ಬೆಳ್ಳುಳ್ಳಿ – 10 -12 ಎಸಳು
- ಕಾಳುಮೆಣಸು – 10-12
- ಉಪ್ಪು – ರುಚಿಗೆ ತಕ್ಕಶ್ಟು
- ಕೊತ್ತಂಬರಿ ಬೀಜದ ಪುಡಿ(ದನಿಯಾ) – 2 ಚಮಚ
- ಕಾರದ ಪುಡಿ – 3-4 ಚಮಚ
- ಕಾಯಿ – 1/4 ಹೊಳಕೆ
- ಎಣ್ಣೆ – 4-5 ಚಮಚ
- ವಾಟೆ ಹುಳಿ – ರುಚಿಗೆ ತಕ್ಕಶ್ಟು
- ಹುಣಸೆ ಹಣ್ಣು – ರುಚಿಗೆ ತಕ್ಕಶ್ಟು
ಮಾಡುವ ಬಗೆ:
ಮೊದಲಿಗೆ ಒಂದು ಹೆಂಚು ಅತವಾ ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1.5 ಹೆಚ್ಚಿದ ಈರುಳ್ಳಿ, ಕಾಳಮೆಣಸು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ ಇದರ ಜೊತೆಗೆ ಕಾರದ ಪುಡಿ, ಕೊತ್ತಂಬರಿ ಬೀಜದ ಪುಡಿ, ವಾಟೆಹುಳಿ, ಹುಣಸೆ ಹಣ್ಣು, ಕಾಯಿ ತುರಿ ಮತ್ತು ಅರಿಶಿಣವನ್ನು ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಏಡಿ ಸಾರಿನ ಗಸಿ ದಪ್ಪನಾಗಿ ಮಾಡಿದರೆ ಚೆನ್ನ, ಹಾಗಾಗಿ ಕಾಲು ಬಾಗ ಕಾಯಿ ಹೊಳಕೆ ಹಾಕಬಹುದು.
ಏಡಿಗಳನ್ನುಸೋಸಿ ತೊಳೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಒಂದು ಪಾತ್ರೆಗೆ 4 ಚಮಚ ಎಣ್ಣೆ, 1/2 ಈರುಳ್ಳಿ, ಒಂದು ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಟ್ಟುಕೊಳ್ಳಿ. ಈಗ ಏಡಿಗಳನ್ನು ಒಗ್ಗರಣೆಗೆ ಹಾಕಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ 10-15 ನಿಮಿಶ ಬೇಯಿಸಿಕೊಳ್ಳಿ. ಆಮೇಲೆ ಮಿಕ್ಸಿಯಲ್ಲಿ ಮಾಡಿದ ಮಸಾಲೆ ಜೊತೆಗೆ ಸ್ವಲ್ಪ ನೀರು ಹಾಕಿ 10-15 ನಿಮಿಶ ಕುದಿಯಲು ಬಿಟ್ಟು ಇಳಿಸಿ. ಈಗ ಬಿಸಿ ಬಿಸಿ ಏಡಿ ಸಾರು ತಯಾರಾಗಿದೆ. ಇದನ್ನು ಅಕ್ಕಿ ರೊಟ್ಟಿ, ಅನ್ನ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು