ಯುರೋಪ್ ಸುತ್ತಾಟ-ಶಾಪ್ಬರ‍್ಗ್ ಪರ‍್ವತ
– ಕೆ.ವಿ.ಶಶಿದರ.
ಆಸ್ಟ್ರಿಯಾದ ಸಾಲ್ಜ್ಕಮ್ಮರ‍್ಗಟ್ ಪರ‍್ವತ ಶ್ರೇಣಿಯಲ್ಲಿರುವ ಶಾಪ್ಬರ‍್ಗ್ ಪರ‍್ವತವು ಪ್ರವಾಸಿಗರ ಆಕರ‍್ಶಕ ತಾಣವಾಗಿದೆ. ಈ ಅದ್ಬುತ ಪರ‍್ವತ ರಚನೆಯಲ್ಲಿ ಹಿಮದಿಂದ ಆವ್ರುತವಾದ ಎತ್ತರದ ಶಿಕರಗಳು, ಕಿರಿದಾದ ಕಮರಿಗಳು, ಸಣ್ಣ ಸಣ್ಣ ತೊರೆಗಳು, ಎಳೆ ಎಳೆಯ ಜಲಪಾತಗಳು ಮತ್ತು ಆಳವಾದ ಕಣಿವೆಗಳು ಎಲ್ಲಾ ಚಿತ್ತಾಕರ‍್ಶಕವಾಗಿವೆ. ಶಾಪ್ಬರ‍್ಗ್ ಪರ‍್ವತವು 1783 ಮೀಟರ್ ಎತ್ತರವಿದ್ದು, ಇದು ಸುಣ್ಣದ ಕಲ್ಲಿನಿಂದ ಆಗಿರುವ ಸಾಲ್ಜ್ಕಮ್ಮರ‍್ಗಟ್ ಪರ‍್ವತ ಶ್ರೇಣಿಯ ಒಂದು ಬಾಗವಾಗಿದೆ. ಈ ಪರ‍್ವತ ಶ್ರೇಣಿಯಿಂದ 28 ಕಿಲೋಮೀಟರರ್ ದೂರದಲ್ಲಿ ಸಾಲ್ಜ್ ಬರ‍್ಗ್ ಎಂಬ ನಗರವಿದೆ. ಶಾಪ್ಬರ‍್ಗ್ ಪರ‍್ವತವು, ಸಾಲ್ಜಬರ‍್ಗ್ ಮತ್ತು ಮೇಲಿನ ಆಸ್ಟ್ರಿಯಾ ರಾಜ್ಯದ ಗಡಿ ಬಾಗದಲ್ಲಿದೆ.
ಶಾಪ್ಬರ‍್ಗ್ ಪರ‍್ವತವು ಸಮುದ್ರದ ಬಂಡೆಗಳನ್ನು ಒಳಗೊಂಡಿದೆ. ಇದು ಮೆಸೊಜೊಯಿಕ್ ಯುಗದಲ್ಲಿ ಹೊರಹೊಮ್ಮಿತು ಎಂದು ಅಂದಾಜಿಸಲಾಗಿದೆ. ಜುರಾಸಿಕ್ ಅವದಿಯ ಸುಣ್ಣದ ಕಲ್ಲು ಹಾಗೂ ಅಲ್ಲಲ್ಲಿ ಕಡಲ ಪಳೆಯುಳಿಕೆಗಳ ಕುರುಹುಗಳು ಇದರಲ್ಲಿ ಕಂಡು ಬಂದಿವೆ. ಈ ಪರ‍್ವತದ ಕುತೂಹಲ ಕೆರಳಿಸುವ ಆಸಕ್ತಿದಾಯಕ ಆಕಾರವು, ಮೂರು ಸರೋವರಗಳಿಂದ ಆವ್ರುತವಾಗಿದೆ. ಉತ್ತರ ಬಾಗದಲ್ಲಿ ವೋಲ್ಗ್ಯಾಂಗ್ಸಿ, ಮಾಂಡ್ಸೀ ಮತ್ತು ಅಟ್ಟರ‍್ಸಿ ಇವೆ. ಉತ್ತರ ಬಾಗಕ್ಕೆ ಹೋಲಿಸಿದರೆ ದಕ್ಶಿಣ ಬಾಗದಲ್ಲಿ ಪರ‍್ವತದ ಬದಿಯು ನಿರ‍್ದಿಶ್ಟವಾಗಿ ಕಡಿದಾಗಿಲ್ಲ. ಉತ್ತರ ಬಾಗ ಬಹಳ ಕಡಿದಾಗಿದೆ. ಈ ವಿಶಿಶ್ಟವಾದ ಕಡಿದಾದ ಇಳಿಜಾರು ಗೋಡೆ, ಇತರೆ ಪರ‍್ವತಗಳಿಗಿಂತ ಬಿನ್ನವಾಗಿ ಸುಲಬದಲ್ಲಿ ಗುರುತಿಸುವಂತೆ ಮಾಡಿದೆ.
ವೋಲ್ಗ್ಯಾಂಗ್ಸಿ ಸರೋವರದ ಸಮೀಪದಲ್ಲಿರುವ ಸುಂದರವಾದ ಪಟ್ಟಣ ಸೇಂಟ್ ವೋಲ್ಫ್ ಗ್ಯಾಂಗ್ ಇಮ್ ಸಾಲ್ಜ್ಕಮ್ಮರ‍್ಗಟ್ . ಇಲ್ಲಿಂದ ಶಾಪ್ಬರ‍್ಗ್ ತಲುಪಲು ಸುಲಬ ಹಾದಿಯಿದೆ. ಪ್ರವಾಸಿಗಳು ಮೇಲಕ್ಕೆ ಹೋಗಲು ಕಾಲು ದಾರಿಗಳಿವೆ. ಚಾರಣ ಇಶ್ಟಪಡುವವರು ಈ ಕಾಲು ದಾರಿಯನ್ನು ಬಳಸಬಹುದು. ಶಿಕರವನ್ನು ತಲುಪಲು ಅತ್ಯಂತ ಆರಾಮದಾಯಕ ಮಾರ‍್ಗವೆಂದರೆ ಪಟ್ಟಣದಿಂದ ಇರುವ ರೈಲುಮಾರ‍್ಗವಾಗಿದೆ. 19ನೇ ಶತಮಾನದ ಕೊನೆಯಲ್ಲಿ ನಿರ‍್ಮಿತವಾದ ಈ ರೈಲು ಮಾರ‍್ಗ 1893ರಿಂದಲೂ ಕಾರ‍್ಯ ನಿರ‍್ವಹಿಸುತ್ತಿದೆ. ಇದು 5.85 ಕಿಲೋಮೀಟರ್ ಉದ್ದವಿದ್ದು, ಇದರ ತಳದ ಬದಿಯಲ್ಲಿ ಸೇಂಟ್ ವೋಲ್ಫ್ ಗ್ಯಾಂಗ್ ಶಾಪ್ಬೆರ‍್ಗ್ಬಾನ್ ಸ್ಟೇಶನ್ ಇದ್ದು, ಶಾಪ್ಬರ‍್ಗ್ ಸ್ಟ್ರೀಟ್ ಮೇಲಿನ ನಿಲ್ದಾಣವಾಗಿದೆ. ಈ ರೈಲ್ವೇ ಹಾದಿ ಆರಂಬವಾದಾಗ ಬಳಸುತ್ತಿದ್ದ ಇಂಜಿನ್ಗಳನ್ನೇ ಈಗಲೂ ಬಳಸಲಾಗುತ್ತಿದೆ. ಇದೊಂದು ವಿಸ್ಮಯವೇ ಹೌದು. 5.85 ಕಿಲೋಮೀಟರ‍್ಗಳ ಈ ಹಾದಿಯ ರೈಲು ಪ್ರಯಾಣಕ್ಕೆ ಮೂವತ್ತೈದು ನಿಮಿಶಗಳು ಸಮಯ ಬೇಕಾಗುತ್ತದೆ.
ಸಾರಿಗೆ ವ್ಯವಸ್ತೆ ಮತ್ತು ಸುತ್ತಲಿನ ನೋಟ
ಈ ರೈಲು ಹಾದಿಯ ಮದ್ಯದಲ್ಲಿ ಶಾಪ್ಬರ‍್ಗ್ ನಿಲ್ದಾಣವಿದೆ. ಪ್ರವಾಸಿಗರು ಈ ನಿಲ್ದಾಣದಲ್ಲಿ ಇಳಿದು ತಮ್ಮದೇ ಕಾಲುದಾರಿಯಲ್ಲಿ ಸಹ ಹೋಗಬಹುದು. ಈ ಮಾರ‍್ಗ ಹಸಿರು ಇಳಿಜಾರಿನ ಮೂಲಕ ಹಾದು ಹೋಗುವುದರಿಂದ ಪಕ್ರುತಿ ಸೌಂದರ‍್ಯ ಸವಿಯುವ ಮನಸುಗಳಿಗೆ ಆಹ್ಲಾದದಾಯಕ ಪ್ರಯಾಣವಾಗಿರುತ್ತದೆ. ಪೈನ್ ಮರಗಳಿಂದ ಆವ್ರುತವಾದ ಈ ಹಾದಿಯ ಪಯಣ ಕಣ್ಣಿಗೆ ಹಬ್ಬ, ಸದಾ ನೆನಪಿನಲ್ಲಿ ಉಳಿಯುವಂತಹುದಾಗಿದೆ. ಶಾಪ್ಬರ‍್ಗ್ ಸ್ಟ್ರೀಟ್ನಲ್ಲಿ ರಾತ್ರಿ ತಂಗಲು ಹೋಟೆಲ್ ಮತ್ತು ಕಾಟೇಜ್ ವ್ಯವಸ್ತೆ ಸಹ ಇದೆ ಅತವಾ ರೈಲನ್ನು ಬಳಕೆ ಮಾಡಿಕೊಂಡು ಶಾಪ್ಬರ‍್ಗ್ ತಲುಪಬಹುದು. ಮಕ್ಕಳಿಂದ ಹಿಡಿದು, ವಯೋವ್ರುದ್ದರವರೆಗೂ ಎಲ್ಲಾ ವಯಸ್ಸಿನ ಕುಟುಂಬ ಸದಸ್ಯರೊಡನೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸ್ತಳವಿದಾಗಿದೆ. 1783 ಮೀಟರ್ ಎತ್ತರದಲ್ಲಿರುವ ಶಾಪ್ಬರ‍್ಗ್ ಶಿಕರದಿಂದ ವೀಕ್ಶಣೆ ನಿಜಕ್ಕೂ ಚೆತೋಹಾರಿ ಹಾಗೂ ಮನೋಲ್ಲಾಸಕಾರಿಯಾಗಿದೆ. ಕಾಲ್ಪನಿಕ ಕತೆಗಳಲ್ಲಿ ವರ‍್ಣಿಸಿರುವ ವೈಡೂರ‍್ಯದ ಸರೋವರಗಳಂತೆ ಇಲ್ಲಿನ ಸರೋವರಗಳು ಕಂಡುಬರುತ್ತವೆ. ಪೈನ್ ಕಾಡುಗಳಿಂದ ಆವ್ರುತವಾಗಿರುವ ಸ್ತಳೀಯ ಬೆಟ್ಟಗಳು, ಕಣಿವೆಗಳು, ನದಿ ತೀರಗಳು, ಅದರ ಸುತ್ತಮುತ್ತಲಿರುವ ಹಳ್ಳಿಗಳು ಮತ್ತು ಆಲ್ಪೈನ್ ಶ್ರುಂಗ ಶಿಕರಗಳ ಆಕರ‍್ಶಕ ನೋಟವನ್ನು ಇಲ್ಲಿ ಕಾಣಬಹುದು.
(ಚಿತ್ರ ಮತ್ತು ಮಾಹಿತಿ ಸೆಲೆ: infoglobe.cz , pixabay.com )
ಮಾಹಿತಿ ಚೆನ್ನಾಗಿದೆ