ಕುವೆಂಪು ಕವನಗಳ ಓದು – 16ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಮೋಹ

( ಬಂಗಾಳಿ ಕವಿ ರವೀಂದ್ರನಾತ ಟಾಗೋರ್ ಅವರ ಕವನದ ಅನುವಾದ. ಇವರ ಕಾಲ: ಕ್ರಿ.ಶ.1861-1941. )

ನಿಡುಸುಯ್ದು ನದಿಯ ಈ ದಡ ಹೇಳಿತತಿ ನೊಂದು
“ಬಲ್ಲೆ ಸುಖವೆಲ್ಲ ಆ ದಡದೊಳಿದೆ” ಎಂದು
ಆ ದಡವೊ ಬಿಸುಸುಯ್ದು ನಿಡು ನುಡಿಯಿತೆದೆ ಬೆಂದು
“ಸುಖವಿದ್ದರೆಲ್ಲ ಆ ದಡದೊಳಿದೆ” ಎಂದು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದ ಯಾವುದಾದರೊಂದು  ಹಂತದಲ್ಲಿ  ತನ್ನ ಬದುಕಿನ ರೀತಿನೀತಿಗಳನ್ನು ಮತ್ತು ಆಗುಹೋಗುಗಳನ್ನು  ಮತ್ತೊಬ್ಬರ ಬದುಕಿನೊಡನೆ ಹೋಲಿಸಿ ನೋಡಿಕೊಂಡು, ತನ್ನ ಬದುಕಿನಲ್ಲಿ ತಾನು ಕಾಣದ  ಒಲವು ನಲಿವು ನೆಮ್ಮದಿಯು ಅವರ ಬದುಕಿನಲ್ಲಿ ಇದೆಯೆಂದು  ಪರಿತಪಿಸುವ ಬಗೆಯನ್ನು ಈ ಕವನದಲ್ಲಿ ನದಿಯೊಂದರ ಎರಡು ದಡಗಳ ಮಾತಿನ ಕಲ್ಪನೆಯ ರೂಪಕದ ಮೂಲಕ ಚಿತ್ರಿಸಲಾಗಿದೆ.

( ಮೋಹ=ತಪ್ಪು ತಿಳುವಳಿಕೆ;  ನಿಡಿದು+ಸುಯ್=ನಿಡುಸುಯ್; ನಿಡಿದು=ಉದ್ದವಾದುದು/ನೀಳವಾದುದು; ಸುಯ್=ಉಸಿರು; ನಿಡುಸುಯ್=ಜೀವನದಲ್ಲಿ ನಿರಾಶೆ, ಸಂಕಟ ಮತ್ತು ಬಹು ಬಗೆಯ ವೇದನೆಗೆ ಗುರಿಯಾಗಿ ವ್ಯಕ್ತಿಯು ನರಳುವಾಗ  ಬಿಡುವ ನಿಟ್ಟುಸಿರು; ನದಿ=ಹೊಳೆ/ತೊರೆ; ದಡ=ತೀರ/ದಂಡೆ/ಅಂಚು; ಈ ದಡ=ನದಿಯ ಒಂದು ಪಕ್ಕದಲ್ಲಿರುವ ದಡ; ಆ ದಡ=ನದಿಯ ಮತ್ತೊಂದು ಪಕ್ಕದಲ್ಲಿರುವ ದಡ;  ಹೇಳಿತು+ಅತಿ; ಹೇಳು=ನುಡಿ; ಅತಿ=ಹೆಚ್ಚು; ನೊಂದು=ಸಂಕಟಪಡುತ್ತ;

ಬಲ್=ತಿಳಿ/ಅರಿ; ಬಲ್ಲೆ=ತಿಳಿದಿದ್ದೇನೆ/ಅರಿತಿದ್ದೇನೆ;ಸುಖ+ಎಲ್ಲ; ಸುಖ=ಒಲವು,ನಲಿವು,ನೆಮ್ಮದಿಯಿಂದ ಕೂಡಿದ ಬದುಕು; ದಡ+ಒಳ್+ಇದೆ; ಒಳ್=ಅಲ್ಲಿ; ದಡದೊಳ್=ದಡದಲ್ಲಿ;

ಬಿಸಿದು+ಸುಯ್; ಬಿಸಿದು=ಬಿಸಿಯಾದ/ಬೆಚ್ಚನೆಯ;  ಬಿಸುಸುಯ್=ಸಂಕಟದಿಂದ ನೋಯುತ್ತಿರುವಾಗ ವ್ಯಕ್ತಿಯಿಂದ ಹೊರಹೊಮ್ಮುವ ಬಿಸಿಯುಸಿರು; ನುಡಿಯಿತು+ಎದೆ; ನಿಡು ನುಡಿಯಿತು=ವಿವರವಾಗಿ ಹೇಳಿತು; ಎದೆ=ಮನಸ್ಸು; ಎದೆ ಬೆಂದು=ಮನಸ್ಸು ಸಂಕಟದಿಂದ ಬೇಯುತ್ತ; ಸುಖ+ಇದ್ದರೆ+ಎಲ್ಲ;

“ ಸುಖವೆಲ್ಲ ಆ ದಡದೊಳಿದೆ / ಸುಖವಿದ್ದರೆಲ್ಲ ಆ ದಡದೊಳಿದೆ ”=ಇದೊಂದು ರೂಪಕವಾಗಿ ಬಳಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಹೊಂದಿರುವುದಕ್ಕಿಂತ ಹೆಚ್ಚಾಗಿ ತನ್ನಲ್ಲಿ ಇಲ್ಲದ್ದನ್ನೇ ಕುರಿತು ಚಿಂತಿಸುವುದರಿಂದ, ಮತ್ತೊಬ್ಬನತ್ತ ಬೆರಳುಮಾಡಿ ತೋರಿಸುತ್ತಾ,  ಅವನು ಪರಿಪೂರ‍್ಣವಾದ  ರೀತಿಯಲ್ಲಿ  ಒಲವು ನಲಿವು ನೆಮ್ಮದಿಯ ಬದುಕನ್ನು  ಹೊಂದಿದ್ದಾನೆ ಎಂಬ ತಪ್ಪುಗ್ರಹಿಕೆಯಿಂದ ನರಳುತ್ತಿರುತ್ತಾನೆ.

ಈ ಬಗೆಯ ತಪ್ಪುಗ್ರಹಿಕೆಯು ಎಲ್ಲ ವ್ಯಕ್ತಿಗಳಲ್ಲಿಯೂ ತುಸು ಹೆಚ್ಚು ಕಡಿಮೆ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ ಎಂಬ ಸಾಮಾಜಿಕ ವಾಸ್ತವವನ್ನು ಈ ರೂಪಕ ಸೂಚಿಸುತ್ತಿದೆ.

(ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಗಿರಿಧರ says:

    ಒಳ್ಳೆಯ ದು. ಹೊನಲಿನ ಈ ಕೆ ಲ ಸ ಗ್ರೇಟ್.

ಅನಿಸಿಕೆ ಬರೆಯಿರಿ: