ಮಸ್ತ್ ಮಜ್ಜಿಗೆ

– ಸಂಜೀವ್ ಹೆಚ್. ಎಸ್.

 ಮಜ್ಜಿಗೆ

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಪ್ರಾಚೀನ ಗಾದೆ. ಈಗ ಹೇಳಿಕೇಳಿ ಮೊದಲೇ ಬೇಸಿಗೆಕಾಲ ಆಗಿರುವುದರಿಂದ, ದೇಹಕ್ಕೆ ತಂಪೆರೆಯಲು ಯಾವುದಾದರೂ ಪೇಯ ಬೇಕು. ಊಟ ಜೀರ‍್ಣವಾಗದೆ ಹೋದರೆ, ಅಜೀರ‍್ಣದ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಈ ಸಮಸ್ಯೆಗೆ ಮಜ್ಜಿಗೆ ಪರಿಹಾರ ಒದಗಿಸುತ್ತದೆ. ಯಾವುದೇ ಸಬೆ-ಸಮಾರಂಬ ಅತವಾ ಪಾರ‍್ಟಿಗಳಲ್ಲಿ ಹೆಚ್ಚಿಗೆ ಊಟ ಹೊಟ್ಟೆಗೆ ಸೇರಿದರೆ ಕೊನೆಯಲ್ಲಿ ಅದಕ್ಕೆ ಪರಿಹಾರ ಸಿಗುವುದು ಒಂದು ಲೋಟ ಮಜ್ಜಿಗೆಯಿಂದ‌!

ಮಜ್ಜಿಗೆ, ಇದರ ಬಗ್ಗೆ ತಿಳಿಯದವರಿಲ್ಲ. ಬಾರತೀಯ ಊಟದಲ್ಲಿ ಮಜ್ಜಿಗೆ ಕೊನೆಯ ಗಟ್ಟ, Last But Not Least ಎನ್ನುವಂತೆ. ಯಾವ ಗಟ್ಟವಾದರೇನು, ಅದರ ಪಾತ್ರ ಮತ್ತು ಮಹತ್ವ ಮುಕ್ಯ ಅಲ್ಲವೇ? ತಿಂದದ್ದೆಲ್ಲವೂ ಜೀರ‍್ಣವಾಗಿ ಹೊಟ್ಟೆಗೆ ಹಿತವಾಗಿ, ಬಾಯಿಗೆ ಒಳಿತಾಗಿ, ಹಲ್ಲುನೋವಿಗೆ ಉತ್ತೇಜನ ಸಿಗದಂತೆ ಮಜ್ಜಿಗೆಯನ್ನು‌ ಬಳಸುವ ಕಲೆಯನ್ನು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟಿದ್ದಾರೆ. ಊಟವಾದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೆ ಆಗ ಹೊಟ್ಟೆ ಉಬ್ಬರ, ತೇಗು, ಬಾಯಿಯಲ್ಲಿ ನೀರು ಬರುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ತಿನ್ನುವ ಆಹಾರದಲ್ಲಿ ಕಾರ, ಸಿಹಿ, ಉಪ್ಪು, ಜಿಡ್ಡಿನ ಅಂಶಗಳಿರುವ ಕಾರಣ ಇವುಗಳೆಲ್ಲ ಸುಲಬವಾಗಿ ಅರಗಲೆಂಬ ಉದ್ದೇಶದಿಂದ ಊಟದ ಕೊನೆಯಲ್ಲಿ `ಮಜ್ಜಿಗೆ ಅನ್ನ’ದ ಸೂತ್ರವನ್ನು ಅಳವಡಿಸಲಾಗಿದೆ ಅತವಾ ಕುಡಿಯಲು ಹೇಳಲಾಗಿದೆ. ಮಜ್ಜಿಗೆಯು, ಆಹಾರದಲ್ಲಿ ಸೇರಿರಬಹುದಾದ ವಿಶದ ದುಶ್ಪರಿಣಾಮವನ್ನು ನಿವಾರಿಸಲು ಸಮರ‍್ತವಾಗಿದೆ ಎಂದು ಆಯುರ‍್ವೇದ ವೈದ್ಯ ಶಾಸ್ತ್ರ ಪ್ರತಿಪಾದಿಸುತ್ತದೆ. ಹೀಗಾಗಿ ದಕ್ಶಿಣ ಬಾರತೀಯರ ಊಟ ಸಿಹಿ, ತಂಬುಳಿಯಿಂದ ಆರಂಬವಾಗಿ, ಮಜ್ಜಿಗೆ ಸೇವನೆಯೊಂದಿಗೆ ಮುಕ್ತಾಯವಾಗುತ್ತದೆ. ಆದರೆ ಬದಲಾದ ಆಹಾರ ಪದ್ದತಿಯಲ್ಲಿ ಸಿಹಿಯನ್ನು ಕೊನೆಗೆ ಸೇವಿಸುವ ಅಬ್ಯಾಸವನ್ನು ಜನ ಮಾಡಿಕೊಂಡಿದ್ದಾರೆ.

ಮಜ್ಜಿಗೆಯ ಉಪಯೋಗಗಳು

ಮಜ್ಜಿಗೆಯನ್ನು ಊಟದಲ್ಲಿ ಹಾಗೂ ಕುಡಿಯಲಿಕ್ಕೆ ದಿನಪೂರ‍್ತಿ ಉಪಯೋಗ ಮಾಡಬಹುದು. ಊಟದ ನಂತರ ಹಾಗೂ ದಿನದ ಬೇರೆ ಬೇರೆ ವೇಳೆಯಲ್ಲಿ ದಾರಾಳವಾಗಿ ನೀರು ಮಜ್ಜಿಗೆ ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿದ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಸಿಯಂ ಮತ್ತು ಕಿಣ್ವಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಇದರ ಪರಿಣಾಮವಾಗಿ ದೇಹದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ಮಜ್ಜಿಗೆಯಲ್ಲಿ ಕಂಡುಬರುವ ರೈಬೋಪ್ಲೇವಿನ್ ವಿಟಮಿನ್ ದೇಹದ ಯಕ್ರುತ್ (liver) ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಮಜ್ಜಿಗೆ ಮಾಡುವ ಪ್ರಕ್ರಿಯೆಯಲ್ಲಿ ಮೊಸರನ್ನು ಕಡೆದಾಗ ಮೊಸರಿನಲ್ಲಿರುವ ಕೊಬ್ಬಿನಾಂಶ ಸಣ್ಣ ಸಣ್ಣ ಕೊಬ್ಬಿನ ಕಣಗಳಾಗಿ ಬೇರ‍್ಪಡುತ್ತದೆ. ಹಾಗಾಗಿ ಮಜ್ಜಿಗೆಯು ದೇಹದಲ್ಲಿ ಉಶ್ಣಾಂಶವನ್ನು ಹೆಚ್ಚು ಮಾಡದೆ ತಂಪನ್ನು ನೀಡುತ್ತದೆ. ಪ್ರಕ್ರುತಿಯ ವಿಸ್ಮಯ ಹೇಗಿದೆ ನೋಡಿ! ಮೊಸರು ದೇಹದಲ್ಲಿ ಉಶ್ಣಾಂಶವನ್ನು ಹೆಚ್ಚು ಮಾಡಿದರೆ, ಅದೇ ಮೊಸರಿನಿಂದಾದ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ. ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ ಸೂಕ್ಶ್ಮಜೀವಿಗಳಿರುವ ಕಾರಣ ಅದು ನಮ್ಮ ದೇಹಕ್ಕೆ ಒಳ್ಳೆಯ ಪದಾರ‍್ತವಾಗಿದೆ. ಹೊಟ್ಟೆ ಮತ್ತು ಚರ‍್ಮಕ್ಕೆ ತಂಪನ್ನುಂಟುಮಾಡುತ್ತದೆ.

ಇಂದಿನ ಕಲಬೆರಕೆ ಯುಗದಲ್ಲಿ ನಾವು ತಿನ್ನುವ ಆಹಾರ ಪದಾರ‍್ತಗಳು ಅನೇಕ ವಿದವಾದ ರಾಸಾಯನಿಕಗಳಿಂದ ತುಂಬಿ, ರಾಸಾಯನಿಕ ಗೊಬ್ಬರಗಳಿಂದ ಉತ್ಪತ್ತಿಯಾಗಿ, ಕ್ರಿಮಿನಾಶಕಗಳಿಂದ ಪ್ರಚುರಗೊಂಡು ಆರೋಗ್ಯ ಕ್ಶೀಣಿಸಲು, ಜೀರ‍್ಣಾಂಗ ಸಂಬಂದಿ ರೋಗಗಳು ಹೆಚ್ಚಲು ಕಾರಣವಾಗಿವೆ. ದೇಹದಲ್ಲಿ ಜಿಡ್ಡಿನ ಅಂಶ ಹೆಚ್ಚಾದಂತೆ ಬೊಜ್ಜು ಬೆಳೆಯುತ್ತದೆ. ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಶೇಕರವಾಗಿ ಹ್ರುದ್ರೋಗ, ರಕ್ತದ ಒತ್ತಡ ಮೊದಲಾದ ಮಾರಕ ರೋಗಗಳು ದಾಳಿಯಿಡಲು ಆರಂಬಿಸುತ್ತವೆ. ಮಜ್ಜಿಗೆ ಸೇವನೆಯು ಕೊಬ್ಬಿನ ಅಂಶವನ್ನು ನಿಯಂತ್ರಿಸಲು ಅಮ್ರುತ ಸಮಾನವಾಗಿ ಕೆಲಸ ಮಾಡುತ್ತದೆ. ಇದಲ್ಲದೆ ಅಮೀಬಿಯಾ ಸಿಸ್, ಕರುಳಿನ ಹುಣ್ಣು ಮುಂತಾದ ರೋಗಗಳಿಗೆ ಮಜ್ಜಿಗೆ ಸೇವನೆ ಉತ್ತಮ ಔಶದವಾಗಿದೆ. ಮೂಲವ್ಯಾದಿ, ಅತಿಸಾರ, ಬಾಯಿ ಹುಣ್ಣು ಮುಂತಾದವುಗಳಲ್ಲಿ ಮಜ್ಜಿಗೆಯ ದಾರಾಳವಾದ ಉಪಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

‘ಚರಕ ಸಂಹಿತೆ’ ಮಜ್ಜಿಗೆ ಕುರಿತು ಹೀಗೆ ಹೇಳುತ್ತದೆ. ಮಜ್ಜಿಗೆಯು ಮಾನವನ ರೋಗಗಳಿಗೆ ಕಾರಣವಾದ ವಾತ, ಪಿತ್ತ, ಕಪ ದೋಶಗಳನ್ನು ನಾಶಮಾಡಿ ಆರೋಗ್ಯ ರಕ್ಶಣೆ ಮಾಡುತ್ತದೆ. ಹಸಿವೆಯನ್ನು ಹೆಚ್ಚು ಮಾಡುವುದಲ್ಲದೆ, ತಿಂದ ಆಹಾರ ಪಚನವಾಗುವಂತೆ ಮಾಡುತ್ತದೆ. ಆ ಮೂಲಕ ರಕ್ತ, ಮಾಂಸಗಳನ್ನು ವ್ರುದ್ದಿಗೊಳಿಸುತ್ತದೆ. ಹಾಗಾಗಿ ಬಲಕಾರಕ, ಮೂಲವ್ಯಾದಿ ರೋಗಗಳಿಗೆ ಮಜ್ಜಿಗೆ ಒಂದು ದಿವ್ಯ ಔಶದಿಯಾಗಿದೆ.

ಸುರಾನಂ ಅಮೃತಂ ಪ್ರಧಾನಂ |
ತಥಾ ನರಾಣಾಂ, ಭುವಿ ತಕ್ರಂ ಮಾಹುಃ ||

ಎಂದು ಆಯುರ‍್ವೇದ ವೈದ್ಯ ಶಾಸ್ತ್ರ ಗ್ರಂತಗಳು, ಇದರ ಅಮ್ರುತಮಯ ಗುಣವನ್ನು ಹಾಡಿ, ಹೊಗಳಿವೆ. ಪಂಚಾಮ್ರುತಗಳಲ್ಲಿ ಮಜ್ಜಿಗೆಯ ಪೂರ‍್ವ ರೂಪಗಳಾದ ಹಾಲು, ಮೊಸರು, ಉತ್ತರ ರೂಪವಾದ ತುಪ್ಪವೂ ಸೇರಿಹೋಗಿದೆ. ಪಂಚಾಮ್ರುತಗಳಲ್ಲಿ ಗುಪ್ತಗುಳದ ಮಜ್ಜಿಗೆ ಆರೋಗ್ಯವರ‍್ದನೆಯ ನೆಲೆ ಎಂಬುದು ಆಯುರ‍್ವೇದ ಶಾಸ್ತ್ರಕಾರಕ ಮತವಾಗಿದೆ.

ಮಜ್ಜಿಗೆ ಮಾಡುವ ಮತ್ತು ಬಳಸುವ ಬಗೆ

ಮಜ್ಜಿಗೆ ಆರೋಗ್ಯ ರಕ್ಶಿಸಲು ಮಹತ್ವದ ಪಾತ್ರ ವಹಿಸುತ್ತದೆಯಾದರೂ ಶುದ್ದ ಮಜ್ಜಿಗೆಯಾಗಿ ಬಳಸುವ ವಿದಾನದಲ್ಲಿ ಹೆಚ್ಚಿನವರು ಎಡವಿದ್ದಾರೆ. ನಾಗರಿಕತೆ ಬೆಳೆದಂತೆಲ್ಲ ಬದುಕು ಸಂಕೀರ‍್ಣವಾಗಿ ಅವಸರದ ಪ್ರವ್ರುತ್ತಿ ಬೆಳೆಸಿಕೊಳ್ಳುತ್ತಿರುವ ನಾಗರಿಕರಿಗೆ ಮೊಸರು ಕಡೆದು ಬೆಣ್ಣೆ ತೆಗೆಯಲು, ಶುದ್ದ ಮಜ್ಜಿಗೆ ಮಾಡಲು ಹೊತ್ತು ಇಲ್ಲ! ಮೊಸರಿಗೆ ನೀರು ಬೆರೆಸಿ, ಕಲಸಿಬಿಟ್ಟರೆ ಮಜ್ಜಿಗೆ ಸಿದ್ದ ಎನ್ನುವಂತಾಗಿದೆ. ಇಂತ ಮಜ್ಜಿಗೆಯಿಂದ ಆರೋಗ್ಯಕ್ಕೆ ಲಾಬವಾಗುವುದು ಅಶ್ಟಕ್ಕಶ್ಟೆ. ಮಜ್ಜಿಗೆ ಮಾಡುವವಿದಾನ ಸುಲಬ, ಸರಿಯಾದ ಪದ್ದತಿಯಲ್ಲಿ ತಯಾರಿಸಿದ ಮಜ್ಜಿಗೆ ಉತ್ತಮವಾದದ್ದಾಗಿದೆ. ಸಣ್ಣ ಉರಿಯಲ್ಲಿ ಕಾಯಿಸಿದ ಹಾಲನ್ನು ಉಗುರು ಬೆಚ್ಚಗಿರುವಾಗ ಹೆಪ್ಪು (ಸ್ವಲ್ಪ ಹುಳಿಮಜ್ಜಿಗೆ) ಹಾಕಿ 6 ರಿಂದ 8 ಗಂಟೆಗಳ ಕಾಲ ಬಿಟ್ಟರೆ ಮೊಸರು ಸಿದ್ದ. ಅದಕ್ಕೆ 1:4 ಪ್ರಮಾಣದಲ್ಲಿ ನೀರು ಬೆರಸಿ ಕಡೆದು, ನಂತರ ಬಂದ ಬೆಣ್ಣೆಯನ್ನು ತೆಗೆದು ಅದಕ್ಕೆ ಮತ್ತೆ ಸಾಕಶ್ಟು ನೀರು ಬೆರೆಸಿ ಉಪಯೋಗಿಸುವ ಮಜ್ಜಿಗೆ ಅಮ್ರುತ ಸಮಾನ. ಬೇರೆ ರೀತಿಯಲ್ಲಿ ತಯಾರಿಸಿದ ಮಜ್ಜಿಗೆಯ ಉಪಯೋಗದಿಂದಾಗಿ ಬೂಲೋಕದ ಅಮ್ರುತ ಅನೇಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಹಿಂದೆ ಬಿದ್ದಿದೆ.

ಎಳೆಯರಿಂದ ಹಿರಿಯರೆಲ್ಲರಿಗೂ ಮಜ್ಜಿಗೆ ಉಪಯೋಗಿಸಲು ಯೋಗ್ಯವಾಗಿದ್ದು, ದಿನನಿತ್ಯದ ಆಹಾರದಲ್ಲಿ‌ ನಿಯಮಿತವಾಗಿ ಬಳಸುತ್ತಾ ಬಂದರೆ ಆರೋಗ್ಯ, ಆಯಸ್ಸು ದೊರೆಯುವುದು.

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: