ಜೀಬ್ರಾ – ಬೆರಗುಗೊಳಿಸುವ ಬಣ್ಣಗಳ ಪ್ರಾಣಿ

– .

ಜೀಬ್ರಾ

ಜೀಬ್ರಾ ಇದು ಕತ್ತೆ, ಕುದುರೆಯಂತೆ ಈಕ್ವಸ್ ಕುಲಕ್ಕೆ ಸೇರಿದ ಪ್ರಾಣಿಯಾಗಿದೆ. ಇದರ ಮೈ ಮೇಲಿನ ಪಟ್ಟೆಗಳೇ ಇದರ ವಿಶೇಶತೆಯಾಗಿದ್ದು, ಒಂದರ ನಂತರ ಮತ್ತೊಂದು ಜೋಡಿಸಿದಂತೆ ಕಾಣುತ್ತದೆ. ದ್ರುಶ್ಟಿಸಿ ನೋಡಿದರೆ, ಬಿಳಿಯ ಬಣ್ಣದ ಮೇಲೆ ಕಪ್ಪು ಪಟ್ಟೆಯೋ, ಇಲ್ಲ ಕಪ್ಪು ಬಣ್ಣದ ಮೇಲೆ ಬಿಳಿ ಪಟ್ಟೆಯೋ ಎಂಬ ಬಿಡಿಸಲಾರದ ಒಗಟು ಮುಂದಾಗುತ್ತದೆ. ಒಟ್ಟಿನಲ್ಲಿ ಈ ಪಟ್ಟೆಯಿಂದಾಗಿ ಜೀಬ್ರಾ, ಪ್ರಾಣಿ ಸಾಮ್ರಾಜ್ಯದಲ್ಲಿ ಗಮನಾರ‍್ಹವಾದ ಆಕರ‍್ಶಕ ಮತ್ತು ವ್ಯತಿರಿಕ್ತ ಬಣ್ಣಗಳ ಸಂಯೋಜನೆಯಿಂದ ಕೂಡಿರುವುದು ನಿರ‍್ವಿವಾದ.

ಜೀಬ್ರಾ ಮೈ ಬಣ್ಣ ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಜೀಬ್ರಾಗೇನಾದರೂ ಉಪಯೋಗವಿದೆಯೇ? ಎಂದು ಕಾರಣಗಳನ್ನು ಹುಡುಕುತ್ತಾ ಹೋದ ವಿಜ್ನಾನಿಗಳು, ವರ‍್ಶಗಳ ಕಾಲದ ಚಿಂತನೆಯಿಂದ ಅನೇಕ ಸಿದ್ದಾಂತಗಳನ್ನು ಮಂಡಿಸಿದ್ದಾರೆ. ಅದರಲ್ಲಿ ಒಂದು ಸಿದ್ದಾಂತವು, ಈ ಬಣ್ಣದ ಪಟ್ಟೆಗಳು, ಪರ‍್ವತ ಶ್ರೇಣಿಗಳಲ್ಲಿ ಮರೆಯಾಗಲು ಸಹಾಯಕಾರಿಯಾಗಿವೆ ಎನ್ನುತ್ತದೆ. ಆದರೆ ಹುಲ್ಲುಗಾವಲಿನಲ್ಲಿ ಅವುಗಳ ಇರುವಿಕೆ ಸ್ಪಶ್ಟವಾಗಿ ಗೋಚರಿಸುತ್ತವೆ. “ಜೀಬ್ರಾಗಳು ಬಿಳಿ ಕಪ್ಪು ಪಟ್ಟಿಯ ಪೈಜಾಮಾ ದರಿಸಿದ ಕುದುರೆಗಳು” ಎಂದು ತಮಾಶೆಗಾಗಿ ಮಕ್ಕಳಿಗೆ ಕತೆ ಹೇಳಲಾಗುತ್ತದೆಯಾದರೂ, ಆಪ್ರಿಕನ್ ಜನಾಂಗದ ದಂತ ಕತೆಯೊಂದು; ಜೀಬ್ರಾ ಆಪ್ರಿಕಾದ ಬಬೂನ್ ಜೊತೆ ಬೆಂಕಿಯಲ್ಲಿ ಹಾರುವ ಸವಾಲು ಹಾಕಿ ಹಾರಿದಾಗ, ಚರ‍್ಮ ಸುಟ್ಟು ಈ ಕಪ್ಪು-ಬಿಳಿ ಪಟ್ಟೆಗಳು ಮೂಡಿಬಂದವು ಎನ್ನುತ್ತದೆ.

ವೈಜ್ನಾನಿಕ ದ್ರುಶ್ಟಿಕೋನದಿಂದ ಗಮನಿಸಿದಲ್ಲಿ ಜೀಬ್ರಾ ಮೇಲಿನ ಪಟ್ಟೆಗಳು, ಪರಬಕ್ಶಕದಿಂದ ತಪ್ಪಿಸಿಕೊಳ್ಳಲು ಸಹಕಾರಿ ಎಂದೆನ್ನಲಾಗಿದೆ. ದೂರದಿಂದ, ಪರಬಕ್ಶಕ ಪ್ರಾಣಿಗಳಿಗೆ ಜೀಬ್ರಾ ಮೈಮೇಲಿನ ಪಟ್ಟೆ ಎರಡು ರೀತಿಯಲ್ಲಿ, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಕಾಣುವುದರಿಂದ ಇದು ಒಂದೇ ಪ್ರಾಣಿಯೋ ಅತವಾ ಎರಡೋ ಎಂಬ ಅನುಮಾನ ಹುಟ್ಟುವ ಕಾರಣ, ಜೀಬ್ರಾಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ದೊರೆಯುತ್ತದೆ. ಜೀಬ್ರಾ ಮೇಲಿನ ಪಟ್ಟೆಗಳು ತಲೆ, ಕುತ್ತಿಗೆ ಮತ್ತು ಬುಜಗಳ ಕಡೆ ಕಿರಿದಾಗುತ್ತಾ ಹೋಗುತ್ತವೆ. ಪ್ರುಶ್ಟ ಬಾಗದಲ್ಲಿ ದೊಡ್ಡದಾಗಿ ಕಂಡು ಬರುವುದರಿಂದ ವಿರೂಪ ಚಿತ್ರವೊಂದು ಪರಬಕ್ಶಕನಿಗೆ ರವಾನೆಯಾಗುತ್ತದೆ. ಪರಬಕ್ಶಕನಿಗೆ ಜೀಬ್ರಾ ಇರುವ ದೂರ, ಅದರ ಗಾತ್ರ ಹಾಗೂ ದಿಕ್ಕನ್ನು ನಿರ‍್ಣಯಿಸಲು ಕಶ್ಟವಾಗುತ್ತದೆ. ಹಾಗಾದರೆ  ಪರಬಕ್ಶಕರಿಂದ ತನ್ನನ್ನು ತಾನು ಸಂರಕ್ಶಿಸಿಕೊಳ್ಳಲು ಜೀಬ್ರಾಗಳ ದೇಹದ ಮೇಲಿನ ಪಟ್ಟೆ ದೈವದತ್ತವಾಗಿ ಬಂದಿರುವ ಕೊಡುಗೆಯೇ? ಹೌದು ಎನ್ನುತ್ತವೆ ಹಲವು ಅದ್ಯಯನಗಳು. ಜೀಬ್ರಾ ತನ್ನ ದೇಹದ ಮೇಲಿನ ಪಟ್ಟೆಯಿಂದ ರಾತ್ರಿಯ ವೇಳೆಯಲ್ಲಿ ಒಂದನ್ನು, ಮತ್ತೊಂದು ಅನುಸರಿಸಲು ಹಾಗೂ ದೂಳು ಎದ್ದ ಸಂದರ‍್ಬದಲ್ಲಿ ಗುರುತಿಸಲು ಸಹ ಸಹಾಯಕ ಎಂಬುದು ನಿರ‍್ವಿವಾದವಾಗಿದೆ.

ಹಾಗಾದರೆ ಜೀಬ್ರಾ ಮೇಲಿನ ಪಟ್ಟೆಗಳು, ಅವುಗಳ ಹುಟ್ಟಿನಿಂದಲೇ ಇದೆಯೇ? ಎಂಬ ಪ್ರಶ್ನೆ ಕಾಡುವುದು ಸಹಜ. ಹಲವು ವೈಜ್ನಾನಿಕ ವರದಿಗಳು, ಜೀಬ್ರಾ ಮೈಮೇಲಿನ ಪಟ್ಟೆಗಳು ಕಾಲಕ್ರಮೇಣ ಅಬಿವ್ರುದ್ದಿ ಹೊಂದಿವೆ ಎನ್ನುತ್ತವೆ. ಒಂದು ಅದ್ಯಯನದ ಪ್ರಕಾರ, ಆಪ್ರಿಕಾ ಕಂಡದ ಕಾಡುಗಳಲ್ಲಿನ ರಕ್ತ ಹೀರುವ ಟ್ಸೆಟ್ಸೆ ನೊಣ ಇರುವ ಪ್ರದೇಶಗಳಲ್ಲಿ ಸುರಕ್ಶಿತವಾಗಿರಲು, ಈ ಪಟ್ಟೆಗಳು ರೂಪುಗೊಂಡವು ಎನ್ನಲಾಗಿದೆ . ಇದೊಂದು ಆಸಕ್ತಿದಾಯಕ ವಿಕಸನೀಯ ಕಲ್ಪನೆ. ಟ್ಸೆಟ್ಸೆ ನೊಣಗಳು ದೇಹದ ದೊಡ್ಡ ಮೇಲ್ಮೈಗಳನ್ನು ಗುರಿಯಾಗಿಸಿ ರಕ್ತ ಹೀರುತ್ತದೆ. ತನ್ನ ದೇಹದ ಮೇಲಿನ ಪಟ್ಟೆಗಳ ಕಾರಣ ಜೀಬ್ರಾ, ಈ ಮಾರಣಾಂತಿಕ ಕೀಟದಿಂದ, ಅವಸಾನಕ್ಕೆ ಹೋಗುವುದರಿಂದ ಪಾರಾಗಿ, ಆಪ್ರಿಕಾದ ಕಾಡುಗಳಲ್ಲಿ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರಲು ಸಾದ್ಯವಾಯಿತು ಎಂದು ತಿಳಿದುಬಂದಿದೆ.

ಇಡೀ ಪ್ರಪಂಚದಲ್ಲಿ ಜೀಬ್ರಾದಶ್ಟು ಪ್ರಸಿದ್ದ ಪ್ರಾಣಿ ಯಾವುದೂ ಇಲ್ಲ ಎಂಬುದು ನನ್ನ ಅಬಿಮತ. ಏಕೆಂದರೆ, ದೊಡ್ಡ ದೊಡ್ಡ ನಗರಗಳಲ್ಲಿ ಅತ್ಯಂತ ವಾಹನ ನಿಬಿಡ ಸಂಚಾರವಿರುವ ರಸ್ತೆಯನ್ನು, ಪಾದಚಾರಿಗಳು ದಾಟಲು ಉಪಯೋಗಿಸುವುದೇ ‘ಜೀಬ್ರಾ ಕ್ರಾಸಿಂಗ್’! ಜೀಬ್ರಾ ದೇಹದ ಮೇಲಿನ ಕಪ್ಪು ಬಿಳಿ ಪಟ್ಟೆಯಂತಹ ಪಟ್ಟೆಯನ್ನು ರಸ್ತೆಯ ಮೇಲೆ ಹಾಕಿರುತ್ತಾರೆ. ಇದು ವಾಹನ ಚಲಾಯಿಸುವ ಚಾಲಕರ ದ್ರುಶ್ಟಿಯನ್ನು ಬಹು ಬೇಗನೆ ಸೆಳೆಯುತ್ತದೆ ಎಂಬ ಕಾರಣಕ್ಕೆ! ಮತ್ತು ಮೇಲೆ ಪರಬಕ್ಶಕರಿಂದ ತಪ್ಪಿಸಿಕೊಳ್ಳಲು ಈ ಪಟ್ಟೆಯಿದೆ ಎಂದು ವಿವರಿಸಿದ್ದಕ್ಕೂ, ಜೀಬ್ರಾ ಕ್ರಾಸಿಂಗ್ ಹಾಕುವ ಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆಯಲ್ಲವೇ? ಇದೊಂದು ಯೋಚಿಸಬೇಕಾದ ವಿಶಯವೂ ಆಗಬಹುದು.

ಕೊನೆಯದಾಗಿ ಕಾಡಿನಲ್ಲಿ ಯಾರಿಗೆ ತಾಕತ್ತಿರುತ್ತದೆಯೋ ಅದು ಮಾತ್ರ ಬದುಕುಳಿಯಲು ಸಾದ್ಯ. ವಿವಿದ ಪ್ರಾಣಿಗಳು ಬದಕುಳಿಯಲು ಅನೇಕ ತಂತ್ರಗಳನ್ನು, ರೂಪಗಳನ್ನು, ಆಕಾರಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಕೆಲವು ಪ್ರಾಣಿಗಳಲ್ಲಿ ಶಸ್ತ್ರಗಳಿವೆ, ಅವೇ ಕೊಂಬುಗಳು. ಜೀಬ್ರಾದಂತಹ ಪ್ರಾಣಿಗಳಿಗೆ ಅದರ ಮೈಮೇಲಿನ ಪಟ್ಟೆಯೇ ಶಸ್ತ್ರವಾಗಿದೆ. ಇಂತ ಬೆರೆಗುಗೊಳಿಸುವ ಬಣ್ಣದ ವಿನ್ಯಾಸದಿಂದ ಅದು ತನ್ನ ರಕ್ಶಣೆಯನ್ನು ತಾನೇ ಮಾಡಿಕೊಳ್ಳುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ:  bbc.com , gondwana-collection.com , flickr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks