ಶಾಶ್ವತ ಜ್ವಾಲೆಯ ಜಲಪಾತ

– ಕೆ.ವಿ. ಶಶಿದರ.

flame falls

ನ್ಯೂಯಾರ‍್ಕ್ ರಾಜ್ಯದ ಬಪೆಲೋದ ದಕ್ಶಿಣ ಬಾಗದಲ್ಲಿ ಚೆಸ್ಟ್‌ನೆಟ್ ಕೌಂಟಿ ಪಾರ‍್ಕ್ ಇದೆ. ಇಲ್ಲಿ ಒಂದು ಸಣ್ಣ ಜಲಪಾತವಿದೆ. ಇದು ನೋಡುಗರಿಗೆ ಅತ್ಯಂತ ಸುಂದರವಾದ ನೈಸರ‍್ಗಿಕ ಜಲಪಾತ. ಇಶ್ಟೇ ಆಗಿದ್ದಲ್ಲಿ, ವಿಶ್ವದಲ್ಲಿನ ಹಲವು ಸಣ್ಣ ಪುಟ್ಟ ಜಲಪಾತಗಳಲ್ಲಿ ಇದೂ ಒಂದಾಗಿರುತ್ತಿತ್ತು. ಆದರೆ ಈ ಜಲಪಾತದ ಮರೆಯೊಲ್ಲೊಂದು ವಿಶೇಶತೆ ಇದೆ. ಅದೇ ಶಾಶ್ವತ ಜ್ವಾಲೆ.

ವಿಶ್ವದಲ್ಲಿ ಇಂತಹ ಅನೇಕ ಶಾಶ್ವತ ಜ್ವಾಲೆಗಳಿವೆ. ಆದರೆ ಈ ನಿರ‍್ದಿಶ್ಟ ಜ್ವಾಲೆಯ ಬೌಗೋಳಿಕ ಪ್ರಕ್ರಿಯೆಯನ್ನು ವಿವರಿಸಲು ವಿಜ್ನಾನ ಸೋತಿರುವುದು ಇದು ವಿಶ್ವವಿಕ್ಯಾತವಾಗಲು ಕಾರಣ. ಸಾಮಾನ್ಯವಾಗಿ ಬಂಡೆಗಳ ಸೀಳುಗಳಿಂದ ಹೊರಸೂಸುವ ಅನಿಲಗಳು ಇಂತಹ ಶಾಶ್ವತ ಜ್ವಾಲೆಗಳು ನಿರಂತರವಾಗಿ ಉರಿಯಲು ಮೂಲ ಕಾರಣ. ಇಂಡಿಯಾನ ವಿಶ್ವವಿದ್ಯಾಲಯ ನಡೆಸಿದ ಅದ್ಯಯನದಂತೆ ‘ಇಲ್ಲಿನ ಮೇಲಿನ ಪದರದ ಕೆಳಬಾಗದಲ್ಲಿ ಉಶ್ಣತೆ 2120 ಸೆಲ್ಶಿಯಸ್‍ವರೆಗೂ ಇರುತ್ತದೆ. ಇದರಿಂದಾಗಿ ಅಲ್ಲಿ ಶೇಕರಣೆಯಾಗಿರುವ ಅನಿಲಗಳು ಹಿಗ್ಗಿ, ಬಂಡೆಗಳ ಸಂದಿನಿಂದ ಹೊರ ಬರುವಾಗ, ಹೆಚ್ಚು ಒತ್ತಡದಲ್ಲಿ ಬರುವುದರಿಂದ, ಇಲ್ಲಿ ಜ್ವಾಲೆ ಮೂವತ್ತು ಇಂಚುಗಳಶ್ಟು ಎತ್ತರಕ್ಕೆ ಚಿಮ್ಮುತ್ತದೆ’. ಈ ಜ್ವಾಲೆ ನಿರಂತರವಾಗಿ ಉರಿಯಲು ದಿನವೊಂದಕ್ಕೆ ಎರಡು ಪೌಂಡ್‍ನಶ್ಟು ಅನಿಲ ಬಳಸುತ್ತದೆ. ಈ ಅದ್ಯಯನವು ಜ್ವಾಲೆಗೆ ಬೇಕಿರುವ ಮೀತೇನ್ ಮಿಶ್ರಿತ ಅನಿಲ 400 ಮೀಟರ್ ಆಳದಿಂದ ಹೊರ ಬರುತ್ತದೆ ಎಂದು ಅಂದಾಜಿಸಿದೆ. ಇಲ್ಲಿನ ಅನಿಲವನ್ನು ವಿಶ್ಲೇಶಿಸಿದಾಗ ಅದರಲ್ಲಿ ಮೀತೇನ್ ಅತಿ ಹೆಚ್ಚು ಸಾಂದ್ರತೆಯಲ್ಲಿದ್ದು ಇದರೊಡನೆ ಅಲ್ಪ ಪ್ರಮಾಣದಲ್ಲಿ ಈತೇನ್ ಮತ್ತು ಪ್ರೋಪೇನ್ ಸಹ ಇರುವುದಾಗಿ ಕಂಡುಬಂದಿದೆ. ಇಂತಹ ಮೇಲ್ಮೈನಲ್ಲಿ ಬೇರೆಡೆ ದೊರಕಿರುವ ಅನಿಲಗಳಲ್ಲಿ ಇಶ್ಟು ಸಾಂದ್ರತೆಯ ಮೀತೇನ್ ಬೇರೆಲ್ಲೂ ಇಲ್ಲ. ಇದರಿಂದಾಗಿ ಇಲ್ಲಿನ ಜ್ವಾಲೆ ಶಾಶ್ವತವಾಗಿದೆ.

ಇಲ್ಲಿನ ದಂತಕತೆಗಳ ಪ್ರಕಾರ ನೂರಾರು ವರ‍್ಶಗಳ ಹಿಂದೆ ಸ್ತಳೀಯ ಅಮೇರಿಕನ್ನರು ಜಲಪಾತದ ಮರೆಯಲ್ಲಿರುವ ಈ ಜ್ವಾಲೆಯನ್ನು ಹೊತ್ತಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕಾವುದೇ ದಾಕಲಾತಿಗಳಿಲ್ಲ. ಉರಿಯುವ ಬೆಂಕಿಯು ಮೀತೇನ್ ಅನಿಲವನ್ನು ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ‍್ತಿಸುತ್ತದೆ, ಇದು ಮೀತೇನ್‍ಗಿಂತ ವಾತಾವರಣದಲ್ಲಿ ಇಪ್ಪತ್ತು ಪಟ್ಟು ಕಡಿಮೆ ಉಶ್ಣವನ್ನು ಹೊಂದುವ ಕಾರಣ ಬೆಂಕಿ ಹತ್ತಿ ಉರಿಯುವ ಅವಗಡದ ಸಂಬವವನ್ನು ಅತ್ಯಲ್ಪಕ್ಕೆ ಇಳಿಸಿದೆ. ಈ ಎಲ್ಲಾ ಕಾರಣದಿಂದ ಈ ಶಾಶ್ವತ ಜಲಪಾತವು ವಾರ‍್ಶಿಕ ಅನೇಕ ಪ್ರವಾಸಿಗರನ್ನು ಆಕರ‍್ಶಿಸುತ್ತದೆ. ಅತ್ತೆ ಸೊಸೆಯರಂತೆ, ಇಲ್ಲಿ ಬೆಂಕಿ ಮತ್ತು ನೀರು ಸಾಮರಸ್ಯದಿಂದಿವೆ!!!

(ಚಿತ್ರ ಸೆಲೆ: wiki)

(ಮಾಹಿತಿ ಸೆಲೆ: dailymail.co.ukworldatlas.commybestplace.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: