ಎಲ್ಲರಿಗಾಗಿ ಪ್ರಾರ‍್ತಿಸೋಣ
ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಪ್ರಸ್ತುತದ ಅನಿವಾರ್‍ಯ ಆಗಿದೆ. ಮಹಾಮಾರಿ ಕೊರೊನಾಗೆ ಬಡವ-ಬಲ್ಲಿದ, ಜಾತಿ-ಮತ ಎಂಬ ಯಾವುದೇ ಬೇದ ಬಾವ ಇಲ್ಲ. ಕೈಯಲ್ಲಿ ಕಾಸಿಲ್ಲದೆ ಪರದಾಡುವ ಆರ‍್ತಿಕ ಸಂಕಶ್ಟ ಹೊಂದಿರುವ ಜನರು ಒಂದು ಕಡೆಯಾದರೆ, ಎಶ್ಟೇ ಕರ‍್ಚಾದರೂ ಪರವಾಗಿಲ್ಲ ಹೇಗಾದರೂ ಜೀವ ಉಳಿಸಿ ಎಂದು ಗೋಳಿಡುವ ವರ‍್ಗ ಇನ್ನೊಂದು ಕಡೆ. ಕೊರೊನಾ ಎರಡನೆಯ ಅಲೆಯು ಇಡೀ ವಿಶ್ವವನ್ನೇ ಮತ್ತಶ್ಟು ನರಕದ ಕೂಪಕ್ಕೆ ತಳ್ಳಿದೆ. ಎಲ್ಲಿ ನೋಡಿದರೂ ಸಾವು-ನೋವು. ಸಾಮಾನ್ಯವಾಗಿ, ಎಲ್ಲೋ ದೂರದಲ್ಲಿ ನೋವು ಅನುಬವಿಸುವವರನ್ನು ನೋಡಿ ಮರುಕಪಡದ ನಮ್ಮ ಮನಸ್ಸಿಗೆ; ಅದೇ ಸಾವು-ನೋವು ನಮ್ಮ ಆತ್ಮೀಯರಿಗೆ, ಸ್ನೇಹಿತರ ಬಳಗಕ್ಕೆ, ನಮಗೆ ತಿಳಿದವರಿಗೆ, ಕುಟುಂಬದ ಸದಸ್ಯರುಗಳಿಗೆ ಬಂದಾಗ ಅದರ ನೋವಿನ ಅರಿವಾಗುವುದು.
ನಾವೆಲ್ಲರೂ ಸಮಾಜದ ಅವಿಬಾಜ್ಯ ಅಂಗವಾಗಿದ್ದೇವೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದಕ್ಕೂ ನಾವು ಹಕ್ಕುದಾರರೆಂದು ತಿಳಿದು ಪರಸ್ಪರ ಸಹಬಾಳ್ವೆ ನಡೆಸಬೇಕಿರುವ ನಾವಿಂದು ಮಾನವೀಯತೆಯನ್ನು ಮರೆತಿದ್ದೇವೆ. ಮಾನವನ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ಆಗಿದೆ. ದಿನಕ್ಕೆ ಇಂತಹ ನೂರು ಉದಾಹರಣೆಗಳನ್ನು ಹಲವು ಮಾದ್ಯಮಗಳಲ್ಲಿ ಕಾಣುತ್ತಿದ್ದೇವೆ. ಜೀವನ ಇಶ್ಟೇನಾ ಎಂಬ ಜಿಜ್ನಾಸೆ ಉಂಟಾಗುತ್ತಿದೆ. ನಾವು ಇರುವ ತನಕವೇ ನಮಗೆ ಬೆಲೆ, ಹೋದ ಮೇಲೆ ನಾಲ್ಕು ದಿನ ನೆನೆದಾರು ಅಶ್ಟೇ! ದೈರ‍್ಯ ನಮ್ಮ ಎದೆಗೂಡಲ್ಲಿ ಮನೆ ಮಾಡಬೇಕಾದ ಸಂದರ‍್ಬದಲ್ಲಿ, ಬಯ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತಿದೆ. ಅಪ್ಪಿತಪ್ಪಿ ನಮಗೆ ಇಂತಹ ಸ್ತಿತಿ ಬಂದರೆ ನಮ್ಮನ್ನು ಹೇಗೆ ಕಾಪಾಡಿಕೊಳ್ಳುವುದು ಅತವಾ ನಮ್ಮ ಸಹಾಯಕ್ಕೆ ಯಾರೂ ಬರುವರು ಎಂಬ ಪ್ರಶ್ನೆಗಳ ಸುರಿಮಳೆ ಮನಸ್ಸಿನಲ್ಲಿ ಮೂಡತೊಡಗಿದೆ. ಆದರೆ ಇಂತಹ ಸಂದರ‍್ಬಗಳಲ್ಲಿ ಮಾನವರಾದ ನಾವು ಮಾನವೀಯತೆಯನ್ನು ಮತ್ತಶ್ಟು ವ್ಯಕ್ತಪಡಿಸುವ, ದ್ರುಡೀಕರಿಸುವ ಕೆಲಸವಾಗಬೇಕಿದೆ. ಎಲ್ಲವನ್ನು ತಿಳಿದ ಮಾನವನು ಮಾನವೀಯತೆಯಲ್ಲಿ ಹಿಂದುಳಿದರೆ ಹೇಗೆ? ಚಂದ್ರನ ಮೇಲೆ ಕಾಲಿಟ್ಟಿದ್ದೇವೆ ಎಂದು ಬೀಗುವ ನಾವು, ಕೋವಿಡ್ ಬಂದರೆ ಪಕ್ಕದ ಮನೆಯವರನ್ನು ಕೂಡ ಮಾತನಾಡಿಸುವುದಿಲ್ಲ! ನಿಜವಾದ ಮಾನವೀಯತೆಯನ್ನು ತೋರ‍್ಪಡಿಸುವ ಕಾಲ ಎಂದರೆ ಇಂತಹ ಸಂಕಶ್ಟದ ಕಾಲವೇ ಹೌದು. ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ ನಾವು ಈ ಕೆಳಕಂಡ ಕೆಲಸಗಳನ್ನು ಮಾಡಬಹುದು.
ಪ್ರಾತಮಿಕ ಆರೋಗ್ಯ ರಕ್ಶಣೆಯೊಂದಿಗೆ ಮಾನಸಿಕ ಆರೋಗ್ಯ ಸೇವೆಗಳ ಅವಶ್ಯಕತೆ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ. ನಾವು ಕೋವಿಡ್-19 ನಿಂದ ಬಾದಿತರಾದ ವ್ಯಕ್ತಿಗಳು ಮತ್ತು ಕುಟುಂಬಗಳೊಂದಿಗೆ ವಿವಿದ ಹಂತಗಳಲ್ಲಿ ಎದುರಾಗಬಹುದಾದ ಬಿಕ್ಕಟ್ಟಿನ ಕುರಿತು ಸಮಾಲೋಚನೆ ನಡೆಸಿ ಬೆಂಬಲವನ್ನು ಒದಗಿಸುವುದು ಮುಕ್ಯವಾಗಿದೆ. ಉದ್ಯೋಗ ಕಳೆದುಕೊಂಡ ವ್ಯಕ್ತಿಗಳನ್ನು, ಆರೋಗ್ಯ ವಿಬಾಗದ ಕಾರ‍್ಮಿಕರು, ಹಿರಿಯ ನಾಗರೀಕರು, ವಿಕಲಚೇತನ ವ್ಯಕ್ತಿಗಳನ್ನು ಸಂಪರ‍್ಕಿಸಿ, ಆಪ್ತ ಸಮಾಲೋಚನೆ ಮೂಲಕ ಅವರಿಗೆ ದೈರ‍್ಯ ತುಂಬಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಬರವಸೆ ಮತ್ತು ಆಶ್ವಾಸನೆಯನ್ನು ನೀಡಬೇಕು. ಮಾನಸಿಕ ಆರೋಗ್ಯ ತೀರಾ ಹದಗೆಟ್ಟಿರುವ ಹಾಗೂ ಮೂಲಬೂತ ಆರೋಗ್ಯ ಸೇವೆಗಳ ಲಬ್ಯತೆ ಇಲ್ಲದಿರುವವರಿಗೆ ಕ್ಲಿನಿಕಲ್ ಸೌಲಬ್ಯಗಳು ತಲುಪುವಂತೆ ಮಾಡಲು ಡಿಜಿಟಲ್ ವ್ಯವಸ್ತೆಯ ಮೂಲಕ ಸಹಾಯ ಮಾಡಬಹುದು. ಜನರಿಗೆ ಹೇಗೆ ಹಾಗೂ ಎಲ್ಲಿ ಸಹಾಯವನ್ನು ಪಡೆದುಕೊಳ್ಳಬೇಕು ಎಂಬ ವಿಶಯವನ್ನುತಿಳಿಸಲು ಹಾಗೂ ಕೋವಿಡ್ ವಿರುದ್ದ ಹೋರಾಡುವ ಶಕ್ತಿಯನ್ನು ಹೆಚ್ಚಿಸಲು ಸಾಮಾಜಿಕ ಸಜ್ಜುಗೊಳಿಸುವಿಕೆ ಮತ್ತು ಸಂವಹನ ಕಾರ‍್ಯತಂತ್ರಗಳ ಮೂಲಕ, ಅವರಿಗೆ ಬೇಕಾದ ಮಾಹಿತಿಗಳನ್ನು ಒದಗಿಸಿಕೊಟ್ಟರೆ ಅದಕ್ಕಿಂತ ದೊಡ್ಡ ಸಹಾಯ ಮತ್ತೊಂದಿಲ್ಲ.
ಕೋವಿಡ್-19 ಸಮಾಜದ ಮೇಲೆ ದೀರ‍್ಗಕಾಲದ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮವನ್ನು ಬೀರಲಿದೆ ಎಂಬುದು ಸ್ಪಶ್ಟವಾಗಿದೆ. ಇದಕ್ಕಾಗಿ ಸಮುದಾಯ ಆದಾರಿತ ರೋಗ ನಿರೋದಕ ಶಕ್ತಿ ಹಾಗೂ ಮಾನಸಿಕ ಸ್ತೈರ‍್ಯವನ್ನು ಹೆಚ್ಚಿಸುವ ಪ್ರಯತ್ನಗಳು ನಿರಂತರ ಸಾಗಬೇಕಾಗಿದೆ. ಬೆಳಗ್ಗೆ ಇದ್ದವರು ಮದ್ಯಾಹ್ನ ಇರುವ ಕಾತ್ರಿ ಇಲ್ಲ. ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುತ್ತಿದೆ. ಆಯುಶ್ಯ ಎಂದರೆ ನೀರ ಮೇಲಿನ ಗುಳ್ಳೆ ಅನ್ನುವ ಕಟುಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಮನಸ್ತಾಪ, ದ್ವೇಶ, ಕೋಪ ಏನೇ ಇದ್ದರೂ ಅದೆಲ್ಲವನ್ನು ಮರೆತು ಮತ್ತೆ ಒಟ್ಟಾಗೋಣ. ಮನಸು ಸ್ವಚ್ಚಗೊಳಿಸಿಕೊಳ್ಳೋಣ. ಕುಟುಂಬ ಕಲಹ ಉಂಟಾಗದಂತೆ ಎಚ್ಚರ ವಹಿಸೋಣ. ನಾವು ಬೇರೆಯವರಿಗಾಗಿ ಮಾಡುವ ಪ್ರತಿಯೊಂದು ಒಳಿತು ನಮ್ಮ ಇಹಲೋಕದ ಒಳಿತಿನ ಪಟ್ಟಿಯಲ್ಲಿ ಅಚ್ಚಾಗುವುದು. ದೇಶದ ಹಾಗೂ ಪ್ರಪಂಚದ ಎಲ್ಲೆಡೆ ವ್ಯಾಪಿಸಿ ತನ್ನ ಕೆನ್ನಾಲಿಗೆಯ ಮೂಲಕ ಜನತೆಯ ಮಾರಣ ಹೋಮಕ್ಕೆ ಕಾರಣವಾದ ಕೋವಿಡ್ ರೋಗ ನಶಿಸಿಹೋಗಿ, ಜನತೆ ನೆಮ್ಮದಿ ಹಾಗೂ ಆರೋಗ್ಯಪೂರ‍್ಣ ಬದುಕು ನಡೆಸುವಂತೆ ಆಗಲಿ. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ನಮ್ಮ ಆತ್ಮೀಯರೊಂದಿಗೆ ನಿಲ್ಲೋಣ, ದೈರ‍್ಯ ತುಂಬೋಣ. ಎಲ್ಲಾ ರೀತಿಯ ಸಹಾಯವನ್ನು ಎಲ್ಲರೂ ಮಾಡಲು ಆಗುವುದಿಲ್ಲ, ಆದರೆ ಯಾರಿಗೆ ಯಾವುದನ್ನು ಮಾಡಲು ಸಾದ್ಯವೋ ಅಶ್ಟನ್ನು ಮಾಡಿದರೆ ಸಾಕು. ಯಾವುದೇ ರೀತಿಯ ಆರ‍್ತಿಕ ಸಹಾಯ ಮಾಡಲು ಸಾದ್ಯವಿಲ್ಲದಿದ್ದರೂ ನಮ್ಮವರಿಗಾಗಿ ಅವರ ಆರೋಗ್ಯಕ್ಕಾಗಿ ಒಂದಶ್ಟು ಪ್ರಾರ‍್ತನೆ ಮಾಡಿದರೆ ಅಶ್ಟೇ ಸಾಕು. ಇತರರಿಗಾಗಿ ಪ್ರಾರ‍್ತಿಸಲು ನಮಗೆ ಯಾವುದೇ ಕಾಸು-ಕರಿಮಣಿ ಬೇಕಾಗಿಲ್ಲ. ಒಳ್ಳೆಯ ಮನಸ್ಸಿದ್ದರೆ ನಾವು ಮತ್ತೊಬ್ಬರಿಗೆ ಪ್ರಾರ‍್ತಿಸಿದರೆ ಇನ್ಯಾರೋ ನಮಗಾಗಿ ಪ್ರಾರ‍್ತಿಸುತ್ತಾರೆ.
“ಸರ್ವೇ ಜನಾಃ ಸುಖಿನೋ ಭವಂತು” ಎಂಬ ಮನೋಬಾವವನ್ನು ಬೆಳೆಸಿಕೊಳ್ಳುವ ಮೂಲಕ ಕೋವಿಡ್ಅನ್ನು ಗೆಲ್ಲುವ ದಿಕ್ಕಿನೆಡೆ ಹೆಜ್ಜೆ ಇಡೋಣ.
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು