ಚಲದಂಕಮಲ್ಲ ಸುನಿಲ್ ಜೋಶಿ

– ರಾಮಚಂದ್ರ ಮಹಾರುದ್ರಪ್ಪ.

Sunil Joshi, ಸುನಿಲ್ ಜೋಶಿ

ತೀರಾ ಇತ್ತೀಚಿನವರೆಗೂ ದೊಡ್ಡ ನಗರಗಳಲ್ಲಿದ್ದರಶ್ಟೇ ಬಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಅವಕಾಶ ಎಂಬಂತಹ ವಾತಾವರಣವಿತ್ತು. ಆದರೆ ಕ್ರಿಕೆಟ್ ಕಲಿಕೆಗೆ ಬೇಕಾದ ಯಾವೊಂದು ಮೂಲಬೂತ ವ್ಯವಸ್ತೆ ಕೂಡ ಇಲ್ಲದ ಕರ‍್ನಾಟಕದ ಗದಗ್ ನಂತಹ ಸಣ್ಣ ಊರಿನಿಂದ 90ರ ದಶಕದಲ್ಲೇ ಕನ್ನಡದ ಪ್ರತಿಬೆಯೊಂದು ಅಂತರಾಶ್ಟ್ರೀಯ ಮಟ್ಟದಲ್ಲಿ ಬಾರತ ತಂಡವನ್ನು ಪ್ರತಿನಿದಿಸಿ, ಕ್ರಿಕೆಟ್ ಜಗತ್ತಿನ ಗಮನ ಸೆಳೆದದ್ದು ಪವಾಡವೇ ಸರಿ. ಎಳವೆಯಿಂದಲೇ ಹಲವಾರು ವರುಶಗಳ ಕಾಲ ಮುಂಜಾನೆ 3:30 ಗಂಟೆಗೆ ಗದಗ್ ನಿಂದ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲು ಹಿಡಿದು 60 ಕಿಲೋಮೀಟರ್ ಪ್ರಯಾಣದ ಬಳಿಕ ಹುಬ್ಬಳ್ಳಿ ತಲುಪಿ, ಅಲ್ಲಿ ಎರಡು ಗಂಟೆಗಳ ಕಾಲ ಕ್ರಿಕೆಟ್ ಅಬ್ಯಾಸ ಮಾಡಿ ಮತ್ತೆ ಗದಗ್ ಗೆ ಮರಳಿ ಸಮಯಕ್ಕೆ ಶಾಲೆಗೆ ಹಾಜರಾಗಿ, “ಮನಸ್ಸಿದ್ದರೆ ಮಾರ‍್ಗ” ಎಂಬುದನ್ನ ಅಕ್ಶರಶಹ ನಿರೂಪಿಸಿದ ಪ್ರತಿಬೆಯೇ ಕರ‍್ನಾಟಕದ ಮೇರು ಎಡಗೈ ಸ್ಪಿನ್ನರ್ ಹಾಗೂ ಎಡಗೈ ಬ್ಯಾಟ್ಸ್ಮನ್ ಸುನಿಲ್ ಬಂಡಾಚಾರ‍್ಯ ಜೋಶಿ.

ಗದಗಿನಲ್ಲಿ ಚಿಗುರೊಡೆಯಿತು ಕ್ರಿಕೆಟ್ ಕನಸು

ಜೂನ್ 6, 1970 ರಂದು ಸುನಿಲ್ ಜೋಶಿ ಗದಗ್ ನಲ್ಲಿ ಹುಟ್ಟಿದರು. ಅವರ ತಂದೆ ಬಂಡಾಚಾರ‍್ಯ ಜೋಶಿ ಪುಟ್ಬಾಲ್ ಪ್ರಿಯರಾಗಿದ್ದರಿಂದ ಆಟೋಟಗಳ ಬಗ್ಗೆ ಮನೆಯಲ್ಲಿ ಎಳವೆಯಿಂದಲೇ ಸುನಿಲ್ ಜೋಶಿ ಅವರಿಗೆ ಬೇಕಾದ ಪ್ರೋತ್ಸಾಹ ದೊರಕಿತು. ಸುನಿಲ್ ರ ಅಣ್ಣ ಅಶೋಕ್ ಜೋಶಿಯವರು ತಮ್ಮನಿಗೆ ಎಡಗೈ ಸ್ಪಿನ್ ಚಳಕವನ್ನು ಆಯ್ದುಕೊಳ್ಳುವಂತೆ ಉತ್ತೇಜಿಸಿದರು. ಮೊದಲಿಗೆ ಹುಬ್ಬಳ್ಳಿಯ ಅಕೈ ಇಂಡಸ್ಟ್ರೀಸ್ ತಂಡ ಜೋಶಿಯವರ ಕ್ರಿಕೆಟ್ ಬೆಳವಣಿಗೆಗೆ ನೀರೆರೆಯಿತು. ದಾರವಾಡ ವಲಯದ ಅತ್ಯುತ್ತಮ ಆಟಗಾರನಾಗಿ ಜೋಶಿ ರೂಪುಗೊಂಡರು. ಅಲ್ಲಿಂದ ಮೊದಲ ಬಾರಿಗೆ ಕರ‍್ನಾಟಕ ಕಿರಿಯರ ತಂಡಕ್ಕೆ ಆಯ್ಕೆಯಾದರು. ಆ ವೇಳೆ ಪಂದ್ಯವೊಂದರಲ್ಲಿ ಜೋಶಿಯವರ ಆಟ ಕಂಡು, ಆಗಿನ ಕರ‍್ನಾಟಕದ ನಾಯಕ ಸಯ್ಯದ್ ಕಿರ‍್ಮಾನಿ ಈ ಹುಡುಗನ ಬೆಳವಣಿಗೆ ಬಗ್ಗೆ ಹೆಚ್ಚು ಗಮನ ಕೊಡಿ ಎಂದು ರಾಜ್ಯ ಕ್ರಿಕೆಟ್ ಸಂಸ್ತೆಗೆ ಕಿವಿಮಾತು ಹೇಳುತ್ತಾರೆ. 1985 ರಿಂದ 1987 ರ ವರೆಗೂ ಜೋಶಿ ಕರ‍್ನಾಟಕ ಸ್ಕೂಲ್ಸ್ ತಂಡದ ಪರ ಕೂಚ್-ಬೆಹಾರ್ ಟ್ರೋಪಿಯಲ್ಲೂ ತಮ್ಮ ಸ್ಪಿನ್ ಬೌಲಿಂಗ್ ನಿಂದ ಪ್ರಬಾವ ಬೀರುತ್ತಾರೆ. ಕಾಲೇಜ್ ಕಲಿಕೆಯ ವೇಳೆ ಅವರ ಕಲಿಸುಗರಾದ ಎಸ್.ಎಲ್. ಗುಳೇಗುಡ್ಡ ಅವರು ಜೋಶಿ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡುತ್ತಾರೆ. ಒಮ್ಮೆ ಎಸ್.ಎ.ಎಸ್. ಟೂರ‍್ನಿ ವೇಳೆ ದಾರವಾಡ ವಲಯದ ಜೋಶಿ ಅವರ ಆಲ್ ರೌಂಡ್ ಆಟ ಕಂಡು ವಿ.ಜಗನ್ನಾತ್ ಅವರು ಮಲ್ಲೇಶ್ವರಮ್ ಜಿಮ್‌ಕಾನಾ ತಂಡಕ್ಕೆ ಸೇರುವಂತೆ ಮನವೊಲಿಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ಆಗ ಬೆಂಗಳೂರಿನಲ್ಲಿ ಜೋಶಿ ಅವರಿಗೆ ತಂಗಲು ಮನೆ ಇಲ್ಲದ ಕಾರಣ ಜಗನ್ನಾತ್ ಅವರೇ ತಮ್ಮ ಮನೆಯಲ್ಲಿ ಜಾಗ ನೀಡಿ, ಅವರ ಮುಂದಿನ ಬೆಳವಣಿಗೆಗೆ ಬೇಕಾದ ಬೆಂಬಲ ನೀಡುತ್ತಾರೆ. ಗದಗಿನ ಹುಡುಗನ ಗೆಲುವಿನ ನಾಗಾಲೋಟ ಬೆಂಗಳೂರಿನಲ್ಲೂ ಮುಂದುವರೆಯುತ್ತದೆ. ಮಲ್ಲೇಶ್ವರಮ್ ಜಿಮ್‌ಕಾನಾ ತಂಡದ ಪರವಾಗಿ ನಿರಂತರ ಆಲ್ ರೌಂಡ್ ಪ್ರದರ‍್ಶನದಿಂದ ಪಂದ್ಯಗಳನ್ನು ಗೆಲ್ಲಿಸಿ, ತಂಡದ ನಾಯಕ ಅಶೋಕ್ ಆನಂದ್ ರಿಂದ ಕೂಡ ಜೋಶಿ ಮೆಚ್ಚುಗೆ ಗಳಿಸುತ್ತಾರೆ. ಹೀಗೇ ಪ್ರತಿ ವರುಶ ಬ್ಯಾಟ್ ಹಾಗೂ ಬಾಲ್ ನಿಂದ ಬೆಂಗಳೂರು ವಲಯದಲ್ಲಿ ಸದ್ದು ಮಾಡಿದ ಜೋಶಿ ಕರ‍್ನಾಟಕ ತಂಡದ ಹೊಸ್ತಿಲಿಗೆ ಬಂದು ನಿಲ್ಲುತ್ತಾರೆ.

ರಣಜಿ ಪಾದಾರ‍್ಪಣೆ

ಸುನಿಲ್ ಜೋಶಿ 1992/93 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಹೈದರಾಬಾದ್ ಎದುರು ಹುಬ್ಬಳ್ಳಿಯಲ್ಲಿ ಕಿರ‍್ಮಾನಿ ನಾಯಕತ್ವದಲ್ಲಿ ಕರ‍್ನಾಟಕದ ಪರ ತಮ್ಮ ಹೆತ್ತವರು ಹಾಗೂ ಆಪ್ತರ ಮುಂದೆ ಚೊಚ್ಚಲ ರಣಜಿ ಪಂದ್ಯ ಆಡಿದರು. ಅನುಬವಿ ಸ್ಪಿನ್ನರ್ ರಗುರಾಮ್ ಬಟ್ ಗಾಯದಿಂದ ಹೊರಗುಳಿದಿದ್ದರಿಂದ ಜೋಶಿ ಆಡುವ ಅವಕಾಶ ಪಡೆಯುತ್ತಾರೆ. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ 502 ಗಳಿಸಿತು. ಜೋಶಿ ಔಟಾಗದೆ 83 ರನ್ ಗಳಿಸಿ ಇನ್ನೊಂದೆಡೆಯಿಂದ ಬೆಂಬಲವಿಲ್ಲದೆ ಶತಕ ವಂಚಿತರಾಗುತ್ತಾರೆ. ಎರಡನೇ ದಿನ ಒಂದು ಓವರ್ ಕೂಡ ಅವರು ಬೌಲ್ ಮಾಡುತ್ತಾರೆ. ಆದರೆ ಬಾಬ್ರಿ ಮಸೀದಿ ಗಲಾಟೆಯಿಂದ ಈ ಪಂದ್ಯ ಅಲ್ಲಿಗೆ ಕೊನೆಗೊಳ್ಳುತ್ತದೆ. ತಮ್ಮ ಬೌಲಿಂಗ್ ಚಳಕವನ್ನು ತವರಿನ ನೋಡುಗರ ಮುಂದೆ ತೋರಿಸಲು ಕಾತರರಾಗಿದ್ದ ಜೋಶಿ ಅವರಿಗೆ ನಿರಾಸೆ ಉಂಟಾಗುತ್ತದೆ. ಆದರೆ ಮುಂದಿನ ತಮಿಳುನಾಡು ಎದುರಿನ ಪಂದ್ಯದಲ್ಲಿ ಬಾರತದ ಮಾಜಿ ನಾಯಕ ಕ್ರಿಶ್ಣಮಾಚಾರಿ ಶ್ರೀಕಾಂತ್ ರನ್ನು ಔಟ್ ಮಾಡಿ, ತಮ್ಮ ಮೊದಲ ದರ‍್ಜೆ ವಿಕೆಟ್ ಗಳ ಕಾತೆಯನ್ನು ತೆರೆಯುತ್ತಾರೆ. 1993/94 ರ ರಣಜಿ ಕ್ವಾರ‍್ಟರ್ ಪೈನಲ್ ನಲ್ಲಿ ಬಲಿಶ್ಟ ಬಾಂಬೆ ಎದುರು ಬ್ಯಾಟಿಂಗ್ ನಲ್ಲಿ ಶತಕ (118) ಹಾಗೂ ಬೌಲಿಂಗ್ ನಲ್ಲಿ 5 ವಿಕೆಟ್ (5/29) ಪಡೆದು ಆಲ್ ರೌಂಡ್ ಸಾದನೆ ಮಾಡುತ್ತಾರೆ. ಆಗ ಬಾಂಬೆಯ ನಾಯಕ ರವಿ ಶಾಸ್ತ್ರಿ ಜೋಶಿರಿಗೆ “ನೀವು ಬಾರತದ ಪರ ಆಡದಿದ್ದರೆ ನನಗೆ ಬಹಳ ನಿರಾಸೆಯಾಗುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಲ್ಲಿಂದ ತಮ್ಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಚಳಕಗಳನ್ನು ಇನ್ನಶ್ಟು ಸುದಾರಿಸಿಕೊಂಡು 1995/96 ರ ರಣಜಿ ಟೂರ‍್ನಿಯಲ್ಲಿ ಅದ್ವಿತೀಯ ಆಲ್ ರೌಂಡ್ ಸಾದನೆ ಮಾಡಿ, ಕರ‍್ನಾಟಕದ ಮಡಿಲಿಗೆ 13 ವರುಶಗಳ ಬಳಿಕ ರಣಜಿ ಕಿರೀಟ ಹಾಕುವಲ್ಲಿ ಮುಕ್ಯ ಪಾತ್ರ ವಹಿಸುತ್ತಾರೆ. 66 ರ ಸರಾಸರಿಯಲ್ಲಿ 529 ರನ್ ಗಳಿಸುವುದರೊಟ್ಟಿಗೆ 16 ರ ಸರಾಸರಿಯಲ್ಲಿ 52 ವಿಕೆಟ್ ಗಳನ್ನು ಪಡೆದು ದೇಸೀ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸುತ್ತಾರೆ. ಆ ಬಳಿಕ ದಕ್ಶಿಣ ವಲಯದ ಪರವಾಗಿ, ಪೂರ‍್ವ ವಲಯದ ಎದುರು ದುಲೀಪ್ ಟ್ರೋಪಿಯಲ್ಲಿ(3/29; 5/26) ಮಿಂಚಿದ ಜೋಶಿ ಬಾರತ ತಂಡದ ಕದ ತಟ್ಟಲಾರಂಬಿಸುತ್ತಾರೆ. ಕಡೆಗೆ 1996 ರ ಇಂಗ್ಲೆಂಡ್ ಪ್ರವಾಸಕ್ಕೆ ಆಲ್ರೌಂಡರ್ ಸುನಿಲ್ ಜೋಶಿ ಬಾರತ ತಂಡದಲ್ಲಿ ಎಡೆ ಪಡೆಯುತ್ತಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗದಗಿನ ಜನರ ಹರ‍್ಶೋದ್ಗಾರ ಮುಗಿಲು ಮುಟ್ಟುತ್ತದೆ. ತಮ್ಮ ಊರಿನ ಮಗನ ಸಾದನೆಯನ್ನು ಕೊಂಡಾಡುತ್ತಾ ಹೆಗಲ ಮೇಲೆ ಹೊತ್ತು ಊರು ತುಂಬಾ ಮೆರವಣಿಗೆ ಮಾಡಿ ಸಂತಸ ಪಡುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ಇಂಗ್ಲೆಂಡ್ ಎದುರು 1996 ಜೂನ್ ನಲ್ಲಿ ಬರ‍್ಮಿಂಗ್‌ಹ್ಯಾಮ್ ನಲ್ಲಿ ಜೋಶಿ ತಮ್ಮ ಮೊದಲ ಟೆಸ್ಟ್ ಆಡಿದರು. ಬ್ಯಾಟಿಂಗ್‌ನಲ್ಲಿ ಎರಡೂ ಇನ್ನಿಂಗ್ಸ್ ನಿಂದ ಒಟ್ಟು 24 ರನ್ ಗಳಿಸಿ ನಿರಾಸೆ ಮೂಡಿಸಿದರೆ, ದುರದ್ರುಶ್ಟವಶಾತ್ ಗಾಯಗೊಂಡು ಒಂದೂ ಓವರ್ ಬೌಲ್ ಮಾಡದೆ ತವರಿಗೆ ಹಿಂದಿರುಗಬೇಕಾಗುತ್ತದೆ. ಮೂರು ತಿಂಗಳ ಬಳಿಕ ಚೇತರಿಸಿಕೊಂಡು ಸೆಪ್ಟೆಂಬರ್ ನಲ್ಲಿ ಜಿಂಬಾಬ್ವೆ ಎದುರು ಕೊಲಂಬೊನಲ್ಲಿ (2/37) ಒಳ್ಳೆಯ ಪ್ರದರ‍್ಶನದಿಂದ ಒಂದು ದಿನದ ಕ್ರಿಕೆಟ್ ಅನ್ನು ಮೊದಲು ಮಾಡುತ್ತಾರೆ. ಅಲ್ಲಿಂದ 1997 ರ ವೆಸ್ಟ್ ಇಂಡೀಸ್ ಪ್ರವಾಸದ ವರೆಗೂ ಎರಡೂ ಬಗೆಯ ಕ್ರಿಕೆಟ್ ಆಡಿದರೂ ಜೋಶಿರಿಂದ ಹೇಳಿಕೊಳ್ಳುವಂತಹ ಆಟ ಬರುವುದಿಲ್ಲ. ಹಾಗಾಗಿ 1997 ರಲ್ಲಿ ಅವರನ್ನು ಬಾರತ ತಂಡದಿಂದ ಕೈಬಿಡಲಾಗುತ್ತದೆ. ಆ ಹೊತ್ತಿಗೆ ತಮ್ಮ ಬೌಲಿಂಗ್ ಕುಂದುಗಳನ್ನು ಸರಿಮಾಡಿಕೊಳ್ಳಲು ದಿಗ್ಗಜ ಎಡಗೈ ಸ್ಪಿನ್ನರ್ ಬಿಶನ್‌ಸಿಂಗ್ ಬೇಡಿ ಮೊರೆ ಹೋಗುತ್ತಾರೆ. ಬೇಡಿ ಗರಡಿಯಲ್ಲಿ ಹೆಚ್ಚು ಪ್ಲೈಟ್ ನೀಡುವ ಚಳಕವನ್ನು ಮೊನಚು ಮಾಡಿಕೊಂಡು, ಆರ‍್ಮ್ ಬಾಲ್ ನಂತಹ ಎಸೆತಗಳನ್ನೂ ರೂಡಿ ಮಾಡಿಕೊಂಡು ಜೋಶಿ ಬೌಲಿಂಗ್ ನಲ್ಲಿ ಇನ್ನಶ್ಟು ಪಕ್ವವಾಗುತ್ತಾರೆ. ಬಳಿಕ ದೇಸೀ ಕ್ರಿಕೆಟ್ ನ ಪ್ರದರ‍್ಶನದ ಬಲದ ಮೇಲೆ 1998 ರಲ್ಲಿ ಮತ್ತೊಮ್ಮೆ ಜೋಶಿ ಬಾರತ ತಂಡಕ್ಕೆ ಮರಳುತ್ತಾರೆ. ನಂತರ 1999 ರ ವಿಶ್ವಕಪ್ ತಂಡದಲ್ಲಿ ಕೂದಲೆಳೆಯಲ್ಲಿ ಅವರಿಗೆ ಸ್ತಾನ ತಪ್ಪುತ್ತದೆ. ಆದರೂ ನಿರಾಸೆಗೊಳ್ಳದೆ ಅವರು ತಮ್ಮ ಆಟ ಮುಂದುವರೆಸುತ್ತಾರೆ. 1999 ರಲ್ಲಿ ನೈರೋಬಿಯಲ್ಲಿ ನಡೆದ ಎಲ್.ಜಿ ಕಪ್ ನಲ್ಲಿ ಬಲಾಡ್ಯ ದಕ್ಶಿಣ ಆಪ್ರಿಕಾ ಎದುರು 10 ಓವರ್ ಗಳಲ್ಲಿ 6 ಮೇಡಿನ್ ಮಾಡಿ ಕೇವಲ 6 ರನ್ ನೀಡಿ 5 ವಿಕೆಟ್ ಪಡೆಯುತ್ತಾರೆ. ಅವರ ವ್ರುತ್ತಿಬದುಕಿನ ಈ ಸೊಗಸಾದ ಪ್ರದರ‍್ಶನವನ್ನು ವಿಸ್ಡೆನ್ ತನ್ನ ಶ್ರೇಶ್ಟ ಬೌಲಿಂಗ್ ಸ್ಪೆಲ್ ಪಟ್ಟಿಗೆ ಸೇರಿಸಿ ಗೌರವಿಸುತ್ತದೆ. ನ್ಯೂಜಿಲ್ಯಾಂಡ್ ಎದುರು ಅದೇ ವರುಶ ಗೌಹಾಟಿಯಲ್ಲಿ ನಡೆದ ಒಂದು ದಿನದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ಔಟಾಗದೆ 3 ಸಿಕ್ಸರ್, 2 ಬೌಂಡರಿ ಒಟ್ಟಿಗೆ 61 ರನ್ ಸಿಡಿಸಿ ಮೊದಲ ಅರ‍್ದ ಶತಕ ದಾಕಲಿಸುತ್ತಾರೆ. 2000 ದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿದ್ದ ಬಾಂಗ್ಲಾದೇಶ ಬರೋಬ್ಬರಿ 400 ರನ್ ಗಳಿಸಿ ಬಾರತವನ್ನು 190/5 ಕ್ಕೆ ಸಿಲುಕಿಸಿ ಪಂದ್ಯವನ್ನು ಗೆಲ್ಲುವ ಕನಸು ಕಾಣುತ್ತಿರುತ್ತದೆ. ಆಗ ನಾಯಕ ಗಂಗೂಲಿರೊಂದಿಗೆ ಜೋಶಿ 167 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ದಕ್ಕಿಸಿ ಕೊಡುತ್ತಾರೆ. ತಾಳ್ಮೆಯ ಆಟವಾಡಿದ ಕನ್ನಡಿಗ ಜೋಶಿ ಬಾರತದ ಪರ ಅತ್ಯದಿಕ 92 ರನ್ ಗಳಿಸುತ್ತಾರೆ. ಬೌಲಿಂಗ್ ನಲ್ಲೂ (5/142; 3/27) ಮಿಂಚಿ ಟೆಸ್ಟ್ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಾರೆ. ಕ್ರಿಕೆಟ್ ಪಂಡಿತರೆಲ್ಲಾ “ಈಗ ಜೋಶಿ ತಮ್ಮ ಆಟದ ಉತ್ತುಂಗ ತಲುಪಿದ್ದಾರೆ. ಅವರೀಗ ಪರಿಪೂರ‍್ಣ ಆಲ್ರೌಂಡರ್‌” ಎಂದೆಲ್ಲಾ ಹೊಗಳಿದರೂ ಈ ಪಂದ್ಯದ ಬಳಿಕ ಅವರಿಗೆ ಕೇವಲ 2 ಟೆಸ್ಟ್ ಹಾಗೂ 4 ಒಂದು ದಿನದ ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ. ಯುವಕರ ಬೆನ್ನಿಗೆ ನಿಂತಿದ್ದ ಗಂಗೂಲಿ ಜೋಶಿರ ಅನುಬವನ್ನು ಕಡೆಗಣಿಸುತ್ತಾರೆ. 2001 ರಲ್ಲಿ ಜೋಶಿ ಅವರನ್ನು ಮತ್ತೊಮ್ಮೆ ತಂಡದಿಂದ ಹೊರಗಿಡಲಾಗುತ್ತದೆ. ಬಳಿಕ 2002 ರಲ್ಲಿ ಬಾರತ ತಂಡದ ಆಯ್ಕೆಗಾಗಿ ನಡೆದ 50 ಓವರ್ ಗಳ ಚಾಲೆಂಜರ್‌ ದೇಸೀ ಟೂರ‍್ನಿ ವೇಳೆ ಗಂಗೂಲಿ ಮುಂದಾಳ್ತನದ ಇಂಡಿಯಾ ಸೀನಿಯರ‍್ಸ್ ತಂಡದಲ್ಲಿ ಜೋಶಿ ಸ್ತಾನ ಪಡೆದರೂ ಅವರಿಗೆ ಪಂದ್ಯವೊಂದರಲ್ಲಿ ಮೊದಲ ಓವರ್ ಪಂದ್ಯದ 49 ನೇ ಓವರ್ ನಲ್ಲಿ ನೀಡಲಾಗುತ್ತದೆ. ಇದನ್ನು ಗಮನಿಸಿದನೇರುಲಿಗರು ಅಚ್ಚರಿಗೊಂಡು ನಾಯಕನ ತಂತ್ರವನ್ನು ಟೀಕಿಸುತ್ತಾರೆ. ಜೋಶಿರಂತ ಅನುಬವಿಗೆ ಬೌಲಿಂಗ್ ನೀಡದ್ದಿದರೆ ಹೇಗೆ ಎಂದು ಅಸಮಾದಾನದಿಂದ ತಮ್ಮ ಅನಿಸಿಕೆ ಹೊರಹಾಕುತ್ತಾರೆ. ಆ ವೇಳೆಗಾಗಲೇ ಬಾರತದ ನಾಯಕ ಗಂಗೂಲಿರಿಗೆ ಜೋಶಿ ಅವರ ಅಳವಿನಲ್ಲಿ ನಂಬಿಕೆ ಇಲ್ಲ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಅಲ್ಲಿಗೆ ಬಾರತ ತಂಡಕ್ಕೆ ಮರಳುವ ಅವರ ಕನಸು ಹಾಗೆಯೇ ಉಳಿದು ಅವರ ಅಂತರಾಶ್ಟ್ರೀಯ ಕ್ರಿಕೆಟ್ ಬದುಕು ಕೊನೆಗೊಳ್ಳುತ್ತದೆ. ಸುನಿಲ್ ಜೋಶಿ ಬಾರತದ ಪರ ಒಟ್ಟು 15 ಟೆಸ್ಟ್ ಆಡಿ 35 ರ ಸರಾಸರಿಯಲ್ಲಿ 41 ವಿಕೆಟ್ ಹಾಗೂ 21 ರ ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. 69 ಒಂದು ದಿನದ ಪಂದ್ಯಗಳನ್ನಾಡಿ 36 ರ ಸರಾಸರಿಯಲ್ಲಿ 69 ವಿಕೆಟ್ ಹಾಗೂ 17 ರ ಸರಾಸರಿಯಲ್ಲಿ 584 ರನ್ ಗಳಿಸಿದ್ದಾರೆ.

ಕರ‍್ನಾಟಕದ ದಿಗ್ಗಜ ಆಟಗಾರ ಸುನಿಲ್ ಜೋಶಿ

ಅಂತರಾಶ್ಟ್ರೀಯ ಮಟ್ಟದಲ್ಲಿ ಹೆಚ್ಚು ಯಶಸ್ಸು ಕಾಣದ್ದಿದ್ದರೂ ಕರ‍್ನಾಟಕದ ಮಟ್ಟಿಗೆ ಜೋಶಿ ಒಬ್ಬ ದಿಗ್ಗಜ ಆಟಗಾರ. ರಾಜ್ಯ ತಂಡಕ್ಕೆ ಅವರ ಕೊಡುಗೆ ಅಪಾರ. ಒಟ್ಟು ಮೂರು ರಣಜಿ ಟ್ರೋಪಿ ಹಾಗೂ ಒಂದು ಇರಾನಿ ಕಪ್ ಗೆದ್ದಿದ್ದಾರೆ. ಇವುಗಳಲ್ಲಿ 1998/99 ರ ರಣಜಿ ಟೂರ‍್ನಿ ಅವರ ಮುಂದಾಳ್ತನದಲ್ಲಿ ಗೆದ್ದದ್ದು ವಿಶೇಶ. ಕರ‍್ನಾಟಕದ ಪರ ರಣಜಿ ಟೂರ‍್ನಿಯಲ್ಲಿ ಅತ್ಯದಿಕ ವಿಕೆಟ್ (437) ಸಾದನೆ ಮಾಡಿದ್ದ ದಿಗ್ಗಜ ಚಂದ್ರಶೇಕರರ ದಾಕಲೆಯನ್ನು ಜೋಶಿ (479) ಮುರಿದರು. 18 ವರ‍್ಶಗಳ ಕಾಲ ಒಟ್ಟು 160 ಮೊದಲ ದರ‍್ಜೆ ಪಂದ್ಯಗಳಲ್ಲಿ 5 ಬಾರಿ ಪಂದ್ಯದಲ್ಲಿ ಹತ್ತು ವಿಕೆಟ್ ಹಾಗು 31 ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಸಾದನೆಯೊಂದಿಗೆ 615 ವಿಕೆಟ್ ಗಳನ್ನು ಪಡೆದರೆ, 4 ಶತಕ ಹಾಗೂ 26 ಅರ‍್ದಶತಕಗಳ ನೆರವಿನಿಂದ 5,129 ರನ್ ಗಳಿಸಿರುವುದು ಅವರ ಆಲ್ ರೌಂಡ್ ಆಟಕ್ಕೆ ಎತ್ತುಗೆ. ದೇಸೀ ಕ್ರಿಕೆಟ್ ನಲ್ಲಿ ಕನಿಶ್ಟ 4,000 ರನ್ ಹಾಗು 400 ವಿಕೆಟ್ ಸಾದನೆ ಮಾಡಿದ ಏಕೈಕ ಆಟಗಾರ ಸುನಿಲ್ ಜೋಶಿ ಎಂದರೆ ಅವರೆಂತಹ ದಿಗ್ಗಜ ಆಟಗಾರ ಎಂದು ತಿಳಿಯುತ್ತದೆ. 2010/11 ರ ರಣಜಿ ರುತುವಿನಲ್ಲೂ ದಣಿವರಿಯದ 41 ರ ಹರೆಯದ ಜೋಶಿ 32 ವಿಕೆಟ್ ಗಳನ್ನು ಪಡೆದರೂ ಕೆ.ಪಿ. ಅಪ್ಪಣ್ಣ ರಂತಹ ಯುವ ಬೌಲರ್ ಗೆ ಅಡ್ಡಗಾಲು ಹಾಕುವುದು ತರವಲ್ಲ ಎಂದು ಎಲ್ಲಾ ಬಗೆಯ ಆಟದಿಂದ ದೂರ ಸರಿದರು. ಅಲ್ಲಿಗೆ ಕರ‍್ನಾಟಕ ಸ್ಪಿನ್ ಇತಿಹಾಸದ ಒಂದು ಬವ್ಯ ಪರಂಪರೆ ಕೊನೆಗೊಂಡಿತು. ಅವರ ಕೊಡುಗೆಯನ್ನು ಗಮನಿಸಿ ಕರ‍್ನಾಟಕ ರಾಜ್ಯ ಸರ‍್ಕಾರ ಅವರಿಗೆ ಪ್ರತಿಶ್ಟಿತ ಏಕಲವ್ಯ ಪ್ರಶಸ್ತಿನೀಡಿ ಗೌರವಿಸಿದೆ. ಕರ‍್ನಾಟಕದ ಹೊರತಾಗಿ ಜೋಶಿ ಐಪಿಎಲ್ ಹಾಗೂ ಕೆಪಿಎಲ್ ನಲ್ಲೂ ಆಡಿದ್ದಾರೆ. ಇಂಗ್ಲೆಂಡ್ ನ ಕೌಂಟಿ ಬೆಡ್ಪೋರ‍್ಡ್ಶೈರ್ ಹಾಗೂ ಅಲ್ಲಿನ ಇನ್ನಿತರ ಲೀಗ್ ಗಳಲ್ಲಿಯೂ ಜೋಶಿ ತಮ್ಮ ಚಳಕ ಪ್ರದರ‍್ಶಿಸಿ ಸೈ ಎನಿಸಿಕೊಂಡಿದ್ದಾರೆ.

ನಿವ್ರುತ್ತಿ ನಂತರದ ಬದುಕು

2012 ರಿಂದ ನಾನಾ ದೇಸೀ ಹಾಗು ಅಂತರಾಶ್ಟ್ರೀಯ ತಂಡಗಳ ಕೋಚ್ ಆಗಿ ಸುನಿಲ್ ಜೋಶಿ ಯುವ ಆಟಗಾರರಿಗೆ ಮಾರ‍್ಗದರ‍್ಶಕರಾಗಿದ್ದಾರೆ. ರಣಜಿ ಟೂರ‍್ನಿಯಲ್ಲಿ ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಮ್ ಹಾಗೂ ಉತ್ತರಪ್ರದೇಶದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಬಲಾಡ್ಯ ಮುಂಬೈ ತಂಡದ ಎದುರು 2014/15 ರಲ್ಲಿ ಐತಿಹಾಸಿಕ ರಣಜಿ ಪಂದ್ಯ ಗೆದ್ದದ್ದು ಜೋಶಿ ಅವರ ಮಾರ‍್ಗದರ‍್ಶನದಲ್ಲಿ ಎಂಬುದು ಗಮನಿಸಬೇಕಾದ ಅಂಶ. ಆ ಬಳಿಕ ಕೆಲಕಾಲ ಅಮೆರಿಕಾ ತಂಡದ ಮುಕ್ಯಕೋಚ್ ಆಗಿ ಹಾಗೂ ಓಮನ್ ಹಾಗೂ ಬಾಂಗ್ಲಾದೇಶ ತಂಡದ ಸ್ಪಿನ್ ಕೋಚ್ ಆಗಿಯೂ ಸಹ ಜೋಶಿ ದುಡಿದಿದ್ದಾರೆ. ಸ್ಟಾರ್ ಸ್ಪೋರ‍್ಟ್ಸ್ ಕನ್ನಡದಲ್ಲಿ ನೇರುಲಿಗರಾಗಿ ಕೂಡ ಕೆಲಸ ಮಾಡಿದ್ದಾರೆ. ನಂತರ ಒಂದು ವರ‍್ಶ ಬಿಸಿಸಿಐ ನ ಮುಕ್ಯ ಆಯ್ಕೆಗಾರನಾಗಿ ಅವದಿ ಪೂರೈಸಿದ ಮೇಲೆ ಪ್ರಸ್ತುತ ಬಾರತ ತಂಡದ ಆಯ್ಕೆಮಂಡಳಿಯ ಸದಸ್ಯರಾಗಿ ಜೋಶಿ ಕ್ರಿಕೆಟ್ ನೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿದ್ದಾರೆ.

ಸುನಿಲ್ ಜೋಶಿರವರ ಕ್ರಿಕೆಟ್ ಸಾದನೆಯನ್ನು ನೋಡಿದರೆ ಚಲವಿದ್ದರೆ ಏನನ್ನಾದರೂ ಸಾದಿಸಬಹುದು ಎಂದು ತಿಳಿಯುತ್ತದೆ. ಅಂತರಾಶ್ಟ್ರೀಯ ಮಟ್ಟದಲ್ಲಿ ಕೊಂಚ ಬೆಂಬಲ ದೊರಕಿದ್ದರೆ ಅಲ್ಲೂ ದೇಸೀ ಕ್ರಿಕೆಟ್ ನ ಸಾದನೆಯನ್ನು ಮಾಡುತ್ತಿದ್ದರೇನೋ ಎಂದನಿಸದೇ ಇರದು. ಸಣ್ಣ ಊರಿನಲ್ಲಿದ್ದು ಕ್ರಿಕೆಟ್ ಕನಸು ಕಾಣುವವರಿಗೆ ಜೋಶಿ ಬಹುದೊಡ್ಡ ಮಾದರಿ. ಬಾರತ ತಂಡಕ್ಕೆ ಕುಂಬ್ಳೆ ಎಶ್ಟು ಮುಕ್ಯವಾಗಿದ್ದರೋ ಕರ‍್ನಾಟಕ ತಂಡಕ್ಕೆ ಜೋಶಿ ಅಶ್ಟೇ ಮುಕ್ಯವಾಗಿದ್ದರು ಎಂಬುದು ದಿಟ. 90 ರ ದಶಕದ ರಾಜ್ಯ ತಂಡದ ಸುವರ‍್ಣಯುಗದಲ್ಲಿ ಆಡಿ ಹಲವಾರು ಟೂರ‍್ನಿಗಳನ್ನು ಗೆದ್ದು ಅಂತರಾಶ್ಟ್ರೀಯ ಮಟ್ಟಕ್ಕೇರಿದ ಗದಗಿನ ಪ್ರತಿಬೆ ಜೋಶಿ ನಿಜಕ್ಕೂ ದಿಗ್ಗಜ ಆಟಗಾರ. ಸೌಮ್ಯಸ್ವಬಾವದ ಈ ಕನ್ನಡಿಗನಿಗೆ ಸಿಗಬೇಕಾದ ಗೌರವ, ಮನ್ನಣೆ ಎಲ್ಲಾ ವಲಯಗಳಲ್ಲಿ ಸಿಗಲಿ ಎಂಬುವುದೇ ಪ್ರತಿಯೊಬ್ಬ ಕ್ರಿಕೆಟ್ ಅಬಿಮಾನಿಯ ಹೆಬ್ಬಯಕೆ.

(ಚಿತ್ರ ಸೆಲೆ: timesnownews.com, cricbuzz.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. M S Thippanna Jamadagni says:

  ಲೇಖನ ಅದ್ಭುತವಾಗಿದೆ.
  ಈ ಮೂಲಕ ಜೋಷಿಯವರ ಎಲ್ಲಾ ಸಾಧನೆಯ ವಿವರ ನೀಡಿದ್ದೀರಿ.
  ಬಿಸಿಸಿಐ ಸಹ ಈ ಲೇಖನವನ್ನು ಗಮನಿಸಿದಲ್ಲಿ
  ಜೋಷಿಯವರ ಸಾಧನೆಗೆ ಒಂದು ಅರ್ಥ ಸಿಗುತ್ತದೆ.
  ಧನ್ಯವಾದಗಳು.

ಅನಿಸಿಕೆ ಬರೆಯಿರಿ: