ನೇರಳೆ – ಬಲು ಉಪಯೋಗಿ ಹಣ್ಣು

– ಸಂಜೀವ್ ಹೆಚ್. ಎಸ್.

ಕಾಡುಹಣ್ಣುಗಳ ಹಿಂದೆ ಬಾಲ್ಯದ ನೆನಪು ಮತ್ತು ಆ ಕಾಲಗಟ್ಟದ ಕಾಡುವ ಗಟನೆಗಳು ನನ್ನಲ್ಲಿ ಇನ್ನೂ ಅಡಗಿವೆ. ಈ ಹಣ್ಣುಗಳನ್ನು ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಬವಗಳನ್ನು ಕಾಣಬಹುದು. ಬೇಸಿಗೆ ಬಂತೆಂದರೆ ಸರದಿ ಸಾಲಾಗಿ ಪ್ರಕ್ರುತಿದತ್ತವಾಗಿ ಸಿಗುವ ಹಣ್ಣುಗಳನ್ನು ತಿನ್ನುವುದು ಒಂದು ಒಳ್ಳೆಯ ಅನುಬವ ನೀಡುತಿತ್ತು. ದ್ರಾಕ್ಶಿಯಿಂದ ಶುರುವಾಗುವ ಹಣ್ಣಿನ ಪಟ್ಟಿ ಕಲ್ಲಂಗಡಿ, ಕರ‍್ಬೂಜ, ಮಾವು, ಹಲಸು, ಅನನಾಸು, ಸೀಬೇಕಾಯಿ ಹೀಗೆ ಎಲ್ಲಾ ದಾಟಿ ಕೊನೆಯಲ್ಲಿ ಬಂದು ನಿಲ್ಲುವುದು ನೇರಳೆಹಣ್ಣಿನಲ್ಲಿ! ಆಡುಬಾಶೆಯಲ್ಲಿ ನೀರಲಹಣ್ಣು ಎಂದೇ ಪರಿಚಿತವಾಗಿರುವ ನೇರಳೆಹಣ್ಣು ಒಗರು, ಸಿಹಿ ಮಿಶ್ರಿತವಾದ ಹಣ್ಣಾಗಿದ್ದು, ತಿಂದರೆ ನಾಲಿಗೆಯೆಲ್ಲ ನೇರಳೆ ಬಣ್ಣಕ್ಕೆ ತಿರುಗತ್ತದೆ. ಜೂನ್ ತಿಂಗಳು ಈ ಹಣ್ಣಿಗೆ ಸುಗ್ಗಿ ಕಾಲವಾಗಿದೆ. ನಮ್ಮೂರ ಮಕ್ಕಳಿಗೆಲ್ಲ ಶಾಲೆ ಆರಂಬಗೊಂಡಂತೆ ನೇರಳೆಹಣ್ಣಿನ ಅರಸುವಿಕೆ ಮತ್ತು ಸೇವನೆ, ಪಟ್ಯಕ್ಕಂಟಿಕೊಂಡೇ ಸಾಗುವ ಬದುಕಿನ ಬೆಸುಗೆಯಾಗಿದೆ. ನೇರಳೆ, ಬೇಸಿಗೆಯಿಂದ ಹಿಡಿದು ಜೂನ್‌-ಜುಲೈವರೆಗೆ ಹಣ್ಣು ಕೊಡುವ ಮರವಾಗಿದೆ. ಮೊದಲೆಲ್ಲ ರಸ್ತೆ ಬದಿಯ ಮರಗಳಲ್ಲಿ ದಂಡಿಯಾಗಿ ಸಿಗುತ್ತಿದ್ದ ಈ ಹಣ್ಣು ಈಗ ಮಾರುಕಟ್ಟೆಯ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಪುರಾಣದ ಪ್ರಕಾರವೂ ನೇರಳೆಗೆ ಪ್ರಾಮುಕ್ಯವಿದ್ದು, ಶ್ರೀರಾಮ ವನವಾಸದಲ್ಲಿದ್ದಾಗ ನೇರಳೆಹಣ್ಣು ಸೇವಿಸಿಯೇ ಅದೆಶ್ಟೋ ಕಾಲ ಜೀವಿಸಿದ್ದ ಎಂದು ಹೇಳಲಾಗುತ್ತದೆ. ಬಾರತಕ್ಕೆ, ಜಂಬೂ ದ್ವೀಪ ಎನ್ನಲು ಕಾರಣವೂ ಜಂಬೂ ನೇರಳೆಯೇ ಅನ್ನುವ ನಂಬಿಕೆಯಿದೆ. ಇಂತಿಪ್ಪ ನೇರಳೆಹಣ್ಣಿನ ಸೇವನೆಯು ಹಲವಾರು ರೋಗಗಳಿಗೆ ರಾಮಬಾಣವೂ ಹೌದು.

ನೇರಳೆಹಣ್ಣು ಸ್ವಲ್ಪ ಹುಳಿಯಾಗಿ, ಒಗರೊಗರಾಗಿ ಇರುವುದರಿಂದ ಹೆಚ್ಚಿನ ಜನರು ಇದನ್ನು ತಿನ್ನಲು ಬಯಸುವುದಿಲ್ಲ. ಆದರೆ ಇದರಲ್ಲಿ ಇರುವಂತಹ ಪೋಶಕಾಂಶಗಳ ಬಗ್ಗೆ ತಿಳಿದುಕೊಂಡರೆ, ನೇರಳೆಹಣ್ಣನ್ನು ಸೇವಿಸಲು ಇಶ್ಟ ಪಡದವರೂ ತಿನ್ನುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ಬಾರತದಲ್ಲಿ ಹೆಚ್ಚಾಗಿ ಬೆಳೆಯುವಂತಹ ನೇರಳೆಹಣ್ಣು ಪೋಶಕಾಂಶಗಳ ಆಗರವಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಉಪಕಾರಿ. ಇದರಲ್ಲಿ ಮದುಮೇಹ, ಕ್ಯಾನ್ಸರ್, ಹ್ರುದಯಾಗಾತ, ಸಂದಿವಾತ, ಹೊಟ್ಟೆಯ ಕಾಯಿಲೆಗಳಾಗಿರುವ ಬೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳಿವೆ.

ನೇರಳೆಹಣ್ಣಿನ ಉಪಯೋಗಗಳು

ನೇರಳೆಯು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು. ನೇರಳೆಯ ಬೀಜಗಳನ್ನು ಒಣಗಿಸಿ ಮತ್ತು ಅದನ್ನು ಹುಡಿ ಮಾಡಿಕೊಂಡು ವಿವಿದ ಆಯುರ‍್ವೇದ ಔಶದಿಗಳಲ್ಲಿ ಬಳಕೆ ಮಾಡಲಾಗುತ್ತದೆ. ನೇರಳೆ ಬೀಜದಲ್ಲಿ ಇರುವಂತಹ ಹೈಪೊಗ್ಲೈಸೆಮಿಕ್ ಗುಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳಿದ್ದು, ದೇಹದಲ್ಲಿನ ಇನ್ಸುಲಿನ್ ಮಟ್ಟ ಹೆಚ್ಚಿಸಲು ನೆರವಾಗುವುದು ಮತ್ತು ರಕ್ತಕ್ಕೆ ಬಿಡುಗಡೆಯಾಗುವ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು.

ರಕ್ತಹೀನತೆಯಿಂದ ಬಳಲುವಂತಹ ಜನರು ನೇರಳೆಯನ್ನು ಆಹಾರ ಕ್ರಮದಲ್ಲಿ ಸೇರಿಸುವುದು ಒಂದು ಉತ್ತಮ  ಆಯ್ಕೆಯಾಗಿದೆ. ಇದರಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತವನ್ನು ಶುದ್ದೀಕರಿಸುತ್ತದೆ. ನೇರಳೆ ಬೀಜಗಳು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿಯಾಗಿವೆ. ‘ಏಶ್ಯನ್ ಸ್ಪೆಸಿಪಕ್ ಜರ‍್ನಲ್ ಆಪ್ ಟ್ರೊಪಿಕಲ್ ಬಯೋಮೆಡಿಸಿನ್‍‍’ನಲ್ಲಿ ಪ್ರಕಟಗೊಂಡಿರುವ ಅದ್ಯಯನವೊಂದರ ಪ್ರಕಾರ ನಿಯಮಿತವಾಗಿ ನೇರಳೆಹಣ್ಣು ಸೇವನೆ ಮಾಡುವಂತಹ ವ್ಯಕ್ತಿಗಳಲ್ಲಿ ರಕ್ತದೊತ್ತಡದ ಮಟ್ಟವು 34.6% ಕಡಿಮೆಯಾಗಿರುವುದು ಕಂಡುಬಂದಿದೆ. ಕರುಳಿನಲ್ಲಿ ಕಾಣಿಸಿಕೊಳ್ಳುವಂತಹ ಅಲ್ಸರ್‍‍ನ ಸಮಸ್ಯೆಯನ್ನು ನೇರಳೆ ಬೀಜಗಳಿಂದ ನಿವಾರಣೆ ಮಾಡುಬಹುದು. ‘ಕ್ಯಾಂಡಿಡಾ ಅಲ್ಬಿಕನ್’ ಎನ್ನುವ ಯೀಸ್ಟ್ ಸೋಂಕಿನಿಂದ ಉಂಟಾಗುವಂತಹ ಜನನೇಂದ್ರಿಯದ ತೊಂದರೆಗೂ ಇದು ಪರಿಣಾಮಕಾರಿಯಾಗಿದೆ. ಹೊಟ್ಟೆ ಸೆಳೆತ ಮತ್ತು ಬೇದಿಯಿಂದಾಗಿ ನಿರ‍್ಜಲೀಕರಣ ಉಂಟಾಗಿ ಸಾವು ಸಂಬವಿಸಬಹುದು. ಇದನ್ನು ನೇರಳೆಹಣ್ಣಿನ ಸೇವನೆಯಿಂದ ತಡೆಯಬಹುದು ಹಾಗೂ ಸೋಂಕಿನಿಂದಾಗಿ ಆಗುವಂತಹ ಬೇದಿಗೆ ಕೂಡ ಇದು ತುಂಬಾ ಪರಿಣಾಮಕಾರಿಯಾಗಿರುವುದು. ನೇರಳೆಹಣ್ಣಿನಲ್ಲಿ ಇರುವಂತಹ ಆಂಟೈಆಕ್ಸಿಡೆಂಟ್(Antioxidant)  ದೇಹದಲ್ಲಿ ಇರುವಂತಹ ಪ್ರೀ ರ‍್ಯಾಡಿಕಲ್ಸ್ ಅನ್ನು ಹೊರಗೆ ಹಾಕುವುದು ಮತ್ತು ದೇಹವನ್ನು ನೈಸರ‍್ಗಿಕ ವಿದಾನದಿಂದ ಶುಚಿಗೊಳಿಸುವುದು. ಇದು ನಮ್ಮ ದೇಹದ ಪ್ರತಿರೋದಕ ವ್ಯವಸ್ತೆಗೆ ನೆರವಾಗುವುದು.

ಪ್ರಾಯಶಹ ಈ ಎಲ್ಲಾ ಗುಣಗಳನ್ನು ಹೊಂದಿರುವುದರಿಂದಲೋ ಏನೋ ನಮ್ಮ ಹಿರಿಯರು “ನೇರಳೆ ತಿಂದವ ನಿರೋಗಿ” ಎನ್ನುವುದು. ಒಂದೆರಡು ದಶಕಗಳ ಹಿಂದೆ ನೇರಳೆ ಇಶ್ಟೊಂದು ಮಾರಾಟದ ಹಣ್ಣಾಗಿರಲಿಲ್ಲ. ಹಿಂದೆಲ್ಲಾ ಬುಟ್ಟಿಯಲ್ಲಿ ತಂದು ಪುಟ್ಟ “ಪಾವು” ಎಂಬಳತೆಯಲ್ಲಿ ಈ ಹಣ್ಣನ್ನು ಮಾರುತಿದ್ದರು. ಆಗ ಒಂದೆರಡು ಹಣ್ಣುಗಳನ್ನು ತಿಂದು ಬಾಯೆಲ್ಲಾ ನೇರಳೆಯಾಗಿಸಿ ನಲಿದಿದ್ದೆಲ್ಲಾ ಇನ್ನೂ ನೆನಪಿದೆ (ಆ ನೇರಳೆಹಣ್ಣುಗಳ ರುಚಿಯೇ ಬೇರೆನೇ ಇತ್ತು!). ಹಾಗೇ, ತಿನ್ನುವುದಕ್ಕೆ ಮಾತ್ರವಲ್ಲದೆ, ಪಾನಕ, ಜಾಮ್, ವೈನ್ ಮತ್ತು ಔಶದಗಳ ತಯಾರಿಕೆಯಲ್ಲೂ ಇಂಡಿಯನ್ ಬ್ಲಾಕ್ ಬೆರ‍್ರಿ ಅತವಾ ನೇರಳೆಯ ಬಳಕೆಯು ಸಹಜವಾಗಿದೆ. ಇತ್ತೀಚೆಗೆ ಈ ಹಣ್ಣುಗಳ ವಹಿವಾಟು ಜೋರಾಗಿ ಕಾಣಬರುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ಹಣ್ಣಿನಲ್ಲಿರುವ ಸಕ್ಕರೆಯ ಹಾಗೂ ಟ್ಯಾನಿನ್‍‍ಗಳ ಹದವಾದ ಮಿಶ್ರಣ. ಇದರ ಜೊತೆಗೆ ಮತ್ತಿತರ ಹಲವು ರಾಸಾಯನಿಕ ಕಾರಣದಿಂದಾಗಿ ಹಣ್ಣಿನ ಔಶದಿಯ ಗುಣವು ಸೇರಿ ಇದರ ಮೌಲ್ಯವನ್ನು ಹೆಚ್ಚಿಸಿದೆ. ಹಣ್ಣಿನ ವರ‍್ಣತಂತುವಿನಲ್ಲಿರುವ ವಿಶಿಶ್ಟವಾದ ಅಂತೊಸಯಾನಿನ್ಗಳಿಂದಾಗಿ ಹಣ್ಣಿಗೆ ಆಕರ‍್ಶಕ ಬಣ್ಣ ಬಂದಿದೆ. ಇದೇ ಬಣ್ಣದ ಪಾನಕ/ರಸವು ಅದರ ಪೋಶಕಾಂಶಗಳ ಮತ್ತು ಔಶದೀಯ ಗುಣಗಳಿಂದಾಗಿ ಜನಪ್ರಿಯವಾಗಿದೆ. ಇತ್ತೀಚಿಗಿನ ಆರೋಗ್ಯದ ಸಂಗತಿಗಳ ಜನಪ್ರಿಯತೆಯಲ್ಲಿ ನೇರಳೆಯು ಮತ್ತೆ ಮುನ್ನೆಲೆಗೆ ಬಂದಿದೆ ಎಂದರೆ ತಪ್ಪಾಗಲಾರದು.

( ಚಿತ್ರಸೆಲೆ: pixabay.com

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *