ಕೆಂಪು ಹರಿವೆ ಸೊಪ್ಪಿನ ಚಟ್ನಿ
– ಸವಿತಾ.
ಬೇಕಾಗುವ ಸಾಮಾನುಗಳು
- ಕೆಂಪು ಹರಿವೆ ಸೊಪ್ಪು – 1/2 ಕಟ್ಟು
- ಈರುಳ್ಳಿ – 1
- ಎಣ್ಣೆ – 4 ಚಮಚ
- ಕರಿಬೇವು ಎಲೆ – 8
- ಬೆಳ್ಳುಳ್ಳಿ ಎಸಳು – 4
- ಇಂಗು – 1/4 ಚಮಚ
- ಜೀರಿಗೆ – 1/2 ಚಮಚ
- ಸಾಸಿವೆ – 1/2 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಹಸಿ ಮೆಣಸಿನಕಾಯಿ – 3
- ಒಣ ಮೆಣಸಿನಕಾಯಿ – 2
- ಹಸಿ ಶುಂಟಿ – 1/4 ಇಂಚು
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಕಡಲೇ ಬೇಳೆ – 1/2 ಚಮಚ
- ಉದ್ದಿನ ಬೇಳೆ – 1/2 ಚಮಚ
- ಅರಿಶಿಣ ಪುಡಿ – 1/4 ಚಮಚ
- ಹಸಿ ಕೊಬ್ಬರಿ ತುರಿ – 1/2 ಲೋಟ
- ಬೆಲ್ಲದ ಪುಡಿ – 1/2 ಅತವಾ 1 ಚಮಚ
- ಹುಣಸೆ ಹಣ್ಣು – 1/2 ನಿಂಬೆ ಹಣ್ಣಿನಶ್ಟು
ಮಾಡುವ ಬಗೆ
ಕೆಂಪು ಹರಿವೆ ಸೊಪ್ಪು ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ ಈರುಳ್ಳಿ ಕತ್ತರಿಸಿ ಇಟ್ಟುಕೊಳ್ಳಿ. ಮುಕ್ಕಾಲು ಲೋಟ ನೀರು ಕುದಿಸಿ ಅದರಲ್ಲಿ ಸೊಪ್ಪು, ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹತ್ತು ನಿಮಿಶ ಬೇಯಿಸಿ ಆರಲು ಬಿಡಿ. ಕೊಬ್ಬರಿ ತುರಿದು, ಆರಿದ ನಂತರ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ ಮತ್ತು ಹುಣಸೆ ಹಣ್ಣು ನೆನೆ ಹಾಕಿ ರಸ ತೆಗೆದು ಇಟ್ಟುಕೊಳ್ಳಿ. ನಾಲ್ಕು ಚಮಚ ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ, ಸಾಸಿವೆ ಹಾಕಿ. ಇಂಗು ಮತ್ತು ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ. ಜೀರಿಗೆ, ಹಸಿ ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಮಾಡಿ ಹಾಕಿ. ಕರಿಬೇವು ಸ್ವಲ್ಪ ಹಾಕಿ ನಂತರ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು, ಅರಿಶಿಣ ನಂತರ ರುಬ್ಬಿದ ಸೊಪ್ಪು, ಹುಣಸೇ ರಸ, ಬೆಲ್ಲ ಹಾಕಿ ಚೆನ್ನಾಗಿ ತಿರುಗಿಸಿ ಇಳಿಸಿ. ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಇದ್ದರೆ ಹಾಕಿ. ಈಗ ಕೆಂಪು ಹರಿವೆ ಸೊಪ್ಪಿನ ಚಟ್ನಿ ಸವಿಯಲು ಸಿದ್ದ. (ಹಸಿರು ಹರಿವೆ ಸೊಪ್ಪು ಬಳಸಿಯೂ ಇದೇ ರೀತಿ ಮಾಡಬಹುದು) ಅನ್ನ ಚಪಾತಿ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು